ಶುಕ್ರವಾರ, ಏಪ್ರಿಲ್ 10, 2020
19 °C
ಕೃಷಿಕರ ಗಮನಸೆಳೆದ ಭಿನ್ನ ತಳಿಯ ಕೋಳಿಗಳು l ಅಸೀಲ್‌ ತಳಿ ನಾಟಿಕೋಳಿಗೆ ಭಾರಿ ಬೇಡಿಕೆ

ಕಾವೇರಿ: ಇದು ನದಿಯಲ್ಲ, ಕೋಳಿ!

ವಿಜಯಕುಮಾರ್ ಎಸ್.ಕೆ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಾಟಿಕೋಳಿಗಳನ್ನು ಹೋಲುವ ‘ಕಾವೇರಿ’, ‘ಅಸೀಲ್’ ಮಿಶ್ರ ತಳಿಗಳು ಸೇರಿದಂತೆ ಕೋಳಿಗಳ ಲೋಕವೊಂದು ಕೃಷಿ ಮೇಳದಲ್ಲಿ ತೆರೆದುಕೊಂಡಿದೆ.

ಕೇಂದ್ರೀಯ ಕೋಳಿ ಅಭಿವೃದ್ಧಿ ಸಂಸ್ಥೆ ಮತ್ತು ತರಬೇತಿ ಕೇಂದ್ರವು ತೆರೆದಿರುವ ಮಳಿಗೆಯಲ್ಲಿ ಭಿನ್ನ ತಳಿಗಳ ನಾಟಿಕೋಳಿಗಳು, ಬಾತುಕೋಳಿಗಳಿವೆ. ಇವುಗಳನ್ನು ನೋಡಲು ಮತ್ತು ಮಾಹಿತಿ ಪಡೆಯಲು ಜನ ಮುಗಿ ಬಿದ್ದಿದ್ದರು.

1 ಸಾವಿರ ಮರಿಗಳನ್ನು ಮೂರು ತಿಂಗಳು ಸಾಕಾಣಿಕೆ ಮಾಡಿದರೆ ₹1 ಲಕ್ಷ ಸಂಪಾದನೆ ಮಾಡಬಹುದಾದ ಸುಲಭ ವಿಧಾನವನ್ನು ಸಂಸ್ಥೆಯ ಅಧಿಕಾರಿಗಳು ರೈತರಿಗೆ ಮನವರಿಕೆ ಮಾಡಿಕೊಟ್ಟರು.

‘ಒಂದು ದಿನದ ಮರಿಯನ್ನು ರೈತರು ನಮ್ಮಿಂದ ಖರೀದಿ ಮಾಡಬಹುದು. ರಾಗಿ, ಜೋಳ, ಗೋಧಿ ನುಚ್ಚು, ಹಿಂಡಿ ಸೇರಿದಂತೆ ಅಷ್ಟೇನು ದುಬಾರಿಯಲ್ಲದ ಆಹಾರವನ್ನು ನೀಡಬಹುದು. ಒಂದು ಕೋಳಿಯನ್ನು ಮೂರು ತಿಂಗಳು ಸಾಕಾಣಿಕೆ ಮಾಡಲು ಅಂದಾಜು ₹ 150 ವೆಚ್ಚವಾಗಲಿದೆ’ ಎಂದು ಕೇಂದ್ರದ ನಿರ್ದೇಶಕ ಡಾ. ಮಹೇಶ್ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ನಾಟಿ ಜಾತಿಯ ಈ ಕೋಳಿಗಳಿಗೆ ಬೇರೆ ಕೋಳಿಗಳಂತೆ ರೋಗಗಳು ಬರುವುದು ಕಡಿಮೆ. ಕೊಕ್ಕರೆ ರೋಗ ಮತ್ತು ಜಂತುಹುಳು ನಾಶಕ್ಕೆ ಚುಚ್ಚುಮದ್ದು ಕೊಡಿಸಿದರೆ ಸಾಕು. ಬೇರೆ ಆರೈಕೆ ಬೇಕಾಗುವುದಿಲ್ಲ. ಮೂರು ತಿಂಗಳಲ್ಲಿ ಒಂದು ಕೋಳಿ ಕನಿಷ್ಠ ₹250ಕ್ಕೆ ಮಾರಾಟವಾಗುತ್ತದೆ. ಸಾವಿರ ಕೋಳಿಗೆ ₹1 ಲಕ್ಷ ಸಂಪಾದನೆಯಾಗುತ್ತದೆ’ ಎಂದು ವಿವರಿಸಿದರು.

‘ಹೆಸರಘಟ್ಟದಲ್ಲಿರುವ ಕೋಳಿ ಅಭಿವೃದ್ಧಿ ಸಂಸ್ಥೆಯಲ್ಲಿ 20 ಸಾವಿರಕ್ಕೂ ಹೆಚ್ಚು ಕೋಳಿ ಮರಿಗಳಿವೆ. ಒಬ್ಬ ರೈತರಿಗೆ 500 ಮರಿಗಳನ್ನು ಮಾತ್ರ ವಿತರಿಸಲಾಗುತ್ತದೆ. ಮರಿ ಖರೀದಿಸಿದ ರೈತರಿಗೆ ಸಾಕಾಣಿಕೆ ಕುರಿತಂತೆ ಅಗತ್ಯ ತರಬೇತಿಯನ್ನೂ ನೀಡಲಾಗುತ್ತದೆ’ ಎಂದು ಅವರು ಹೇಳಿದರು.

ಅಸೀಲ್‌ ಮಿಶ್ರ ತಳಿಗೆ ಬೇಡಿಕೆ: ‘ಸಂಸ್ಥೆಯಲ್ಲಿ ಮೂರು ವಿವಿಧ ತಳಿಗಳಿದ್ದು, ಇದರಲ್ಲಿ ಅಸೀಲ್ ಮಿಶ್ರ ತಳಿಗೆ ಭಾರಿ ಬೇಡಿಕೆ ಇದೆ’ ಎಂದು ಡಾ. ಮಹೇಶ್ ತಿಳಿಸಿದರು.

‘ಈ ತಳಿಯ ಕೋಳಿಯನ್ನು ಮಾಂಸಕ್ಕಾಗಿ ಬೆಳೆಸಲಾಗುತ್ತದೆ. ಕಾವೇರಿ ಮತ್ತು ಕಳಿಂಗ ಬ್ರೌನ್ ಎಂಬ ತಳಿಗಳೂ ಇವೆ. ಇವುಗಳನ್ನು ಮೊಟ್ಟೆಗಾಗಿ ಮಾತ್ರ ಸಾಕಾಣಿಕೆ ಮಾಡಲಾಗುತ್ತದೆ’ ಎಂದು ವಿವರಿಸಿದರು.

ಬಾತುಕೋಳಿ: ‘ಕಾಕಿ ಕ್ಯಾಂಪ್ ಬೆಲ್ ಎಂಬ ಮೊಟ್ಟೆ ತಳಿಯ ಮತ್ತು ವೈಟ್ ಪೆಕಿನ್‌ ಎಂಬ ಮಾಂಸದ ತಳಿಯ ಬಾತುಕೋಳಿಗಳ ಸಾಕಾಣಿಕೆಗೂ ಉತ್ತೇಜನ ನೀಡಲಾಗುತ್ತಿದೆ. ಬ್ರಾಡ್ ಬ್ರೆಸ್ಟೆಡ್ ಬ್ರಾಂಜ್ ಮತ್ತು ಬ್ರಾಡ್ ಬೆಸ್ಟೆಡ್ ಲಾರ್ಜ್ ವ್ಹೈಟ್ ಎಂಬ ಟರ್ಕಿ ಕೋಳಿಯ ತಳಿಗಳನ್ನು ಸಂಸ್ಥೆಯಿಂದ ರೈತರಿಗೆ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.

ಬೆಣ್ಣೆ ತಿನ್ನುವ ‘ಲವ–ಕುಶ’

ಮಂಡ್ಯ ಜಿಲ್ಲೆಯ ಕಲ್ಲಹಳ್ಳಿಯ ಪಟೇಲ್ ಶಿವರಾಮೇಗೌಡ ಅವರು ಕಟ್ಟಿರುವ ₹3.50 ಲಕ್ಷ ಬೆಲೆಯ ಜೋಡೆತ್ತುಗಳು ಇಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಜನರನ್ನು ಆಕರ್ಷಿಸಿದವು.

ಪ್ರತಿವರ್ಷ ಕೃಷಿಮೇಳಕ್ಕೆ ಜೋಡೆತ್ತುಗಳೊಂದಿಗೆ ಬರುವ ಶಿವರಾಮೇಗೌಡರು, ಈ ಬಾರಿಯೂ ಲವ–ಕುಶ ಎಂದು ಹೆಸರಿಡಲಾದ ಜೋಡಿ ಎತ್ತುಗಳನ್ನು ಕರೆತಂದಿದ್ದಾರೆ. ಈ ಎತ್ತುಗಳಿಗೆ ಪ್ರತಿನಿತ್ಯ ಒಂದು ಕೆ.ಜಿ ಬೆಣ್ಣೆ, ಹಾಲು, ಅಕ್ಕಿನುಚ್ಚು, ಹುರುಳಿಕಾಳು ಮತ್ತು ಬೂಸಾ ತಿನ್ನಿಸಲಾಗುತ್ತದೆ. ಅದಲ್ಲದೇ ದಿನವಿಡಿ ರಾಗಿ ಒಣಹುಲ್ಲನ್ನು ನೀಡಲಾಗುತ್ತದೆ ಎಂದು ಹೇಳಿದರು.

‘ಜೋಡೆತ್ತುಗಳೊಂದಿಗೆ ದನಗಳ ಜಾತ್ರೆಗೆ ಹೋಗುವುದು, ಪ್ರತಿವರ್ಷವೂ ಹೊಸ ಜೋಡಿಗಳೊಂದಿಗೆ ಕೃಷಿ ಮೇಳಕ್ಕೆ ಬರುವುದು ಹವ್ಯಾಸ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು