ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಂಧರಾಜ ಹೂ ಕೃಷಿಯಲ್ಲಿ ಖುಷಿ ಕಂಡ ರೈತ ಮಧು: ಖರ್ಚು ಕಡಿಮೆ, ನಿರಂತರ ಆದಾಯ

Last Updated 24 ನವೆಂಬರ್ 2021, 4:48 IST
ಅಕ್ಷರ ಗಾತ್ರ

ಅಜ್ಜಂಪುರ: ತಾಲ್ಲೂಕಿನ ಕಲ್ಲಾಪುರ ಗ್ರಾಮದ ಕೃಷಿಕ ಮಧು ಅವರು ಕಡಿಮೆ ಬಂಡವಾಳ ಬಯಸುವ ‘ಸುಗಂಧರಾಜ’ ಹೂವಿನ ಕೃಷಿ ಮಾಡುತ್ತಿದ್ದಾರೆ. ಈಗ ಪ್ರತಿದಿನ ಹೂವಿನ ಕೊಯಿಲು ನಡೆಸುತ್ತಾರೆ. ನಿತ್ಯವೂ ಆದಾಯ ಗಳಿಸುತ್ತಿದ್ದಾರೆ.

ಅರ್ಧ ಎಕರೆಯಲ್ಲಿ ಸುಗಂಧರಾಜ ಕೃಷಿ ಮಾಡಿದ್ದಾರೆ. ಒಂದೂವರೆ ಅಡಿ ಅಗಲ, ಒಂದಡಿ ಉದ್ದ ಸಾಲು ಮಾಡಿದ್ದಾರೆ. ಸುಮಾರು 5,200 ಹೂವಿನ ಗಡ್ಡೆ ನಾಟಿ ಮಾಡಿದ್ದಾರೆ. ಪ್ರತಿ ಸಾಲಿಗೂ ನೀರು ಹರಿಯುವಂತೆ ಪೈಪ್ ಲೈನ್ ಮಾಡಿದ್ದಾರೆ.

‘ಪ್ರತಿ ತಿಂಗಳು ಹಬ್ಬಗಳು ಇರುತ್ತವೆ. ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಜಾತ್ರಾ ಮಹೋತ್ಸವಗಳು-ಮದುವೆ ಸಮಾರಂಭಗಳು ಜರಗುತ್ತವೆ. ರಾಜಕೀಯ ಸಭೆಗಳು ನಡೆಯುತ್ತವೆ. ಅದಕ್ಕೆಲ್ಲ ಹೂ ಕೊಂಡೊಯ್ಯತ್ತಾರೆ. ಹಾಗಾಗಿ, ಹೂವಿಗೆ ಬೇಡಿಕೆ ಇದ್ದೇ ಇರುತ್ತದೆ’ ಎನ್ನುತ್ತಾರೆ ಮಧು.

‘ಆರು ವರ್ಷಗಳಿಂದ ಹೂ ಕೃಷಿ ನಡೆಸುತ್ತಿದ್ದೇನೆ. ಅರ್ಧ ಎಕರೆಯಲ್ಲಿ ನಿತ್ಯ 8-10 ಕೆ.ಜಿ. ಹೂ ಬೆಳೆಯುತ್ತೇನೆ. ಮಾರುಕಟ್ಟೆ ಸಮಸ್ಯೆ ಇಲ್ಲ. ಅಜ್ಜಂಪುರದ ಹೂ ಮಾರಾಟಗಾರರಿಗೆ ಹೂ ಮಾರಾಟ ಮಾಡುತ್ತೇನೆ. ಪ್ರತಿ ದಿನ ₹ 480-₹ 600 ಗಳಿಸುತ್ತೇನೆ. ತಿಂಗಳಿಗೆ ಕನಿಷ್ಠ ₹ 15,000 ಹಣ ಕೈಸೇರುತ್ತಿದೆ ಎನ್ನುತ್ತಾರೆ ಅವರು.

‘ಒಂದು ಬಾರಿ ಖರ್ಚು ಮಾಡಿ ಬೆಳೆ ಮಾಡಿದರೆ, ಮೂರು ವರ್ಷ ಸಸಿ ಹಸಿರಾಗಿರುತ್ತವೆ. ಹೂ ನೀಡುತ್ತವೆ. ರಾಸಾಯನಿಕ ಗೊಬ್ಬರ-ಔಷಧದ ಅಗತ್ಯವಿಲ್ಲ. ಕೊಟ್ಟಿಗೆ ಗೊಬ್ಬರ, ಕುರಿಗೊಬ್ಬರ ಹಾಕಬೇಕು. ಸಾಧಾರಣ ಪ್ರಮಾಣದ ನೀರು ಪೂರೈಸಬೇಕು. ಹೆಚ್ಚು ವೆಚ್ಚ ಮಾಡಬೇಕಿಲ್ಲ. ಅರ್ಧ ಎಕರೆಯನ್ನು ಒಬ್ಬರೇ ನಿರ್ವಹಿಸಬಹುದು. ಹದಿನೈದು ದಿನಕ್ಕೊಮ್ಮೆ ಕಳೆ ತೆಗೆಯಬೇಕು. ನಿತ್ಯ ಒಂದೂವರೆ ತಾಸು ಹೂ- ಕೊಯಿಲು ಮಾಡಬೇಕು. ಹೆಚ್ಚಿನ ಕೆಲಸವಿಲ್ಲ. ಕೂಲಿಯಾಳಿನ ಅಗತ್ಯವಿಲ್ಲ. ಇದರಿಂದಾಗಿ ಖರ್ಚು ಕಡಿಮೆ’ ಎನ್ನುತ್ತಾರೆ ಅವರು.

‘ಹೂ ಕೃಷಿಯತ್ತ ರೈತರು ಮುಖ ಮಾಡಬೇಕು. ಒಂದೇ ಬೆಳೆ ಮಾಡಿ, ಕೈಸುಟ್ಟುಕೊಳ್ಳುವ ಬದಲಿಗೆ, ಕೃಷಿಯಲ್ಲಿ ಹೊಸತನ ಕಂಡುಕೊಳ್ಳಬೇಕು. ಈ ದಿಸೆಯಲ್ಲಿ ನಾನು ಯಶಸ್ವಿಯಾಗಿದ್ದೇನೆ. ಕೃಷಿಕರು, ವಿಭಿನ್ನ ಬೆಳೆಯತ್ತ ಹೊರಳಬೇಕು’ ಎಂಬುದು ಅವರ ಮನವಿ.

ಮಧು ಅವರಿಗೆ ಇಲಾಖೆಯಿಂದ ಎರೆಹುಳು ಗೊಬ್ಬರ ತಯಾರಿಕೆ ಘಟಕ, ಕೃಷಿ ಹೊಂಡ ಮತ್ತು ಬದು ನಿರ್ಮಿಸಲು ಸಹಕಾರ ನೀಡಲಾಗಿದೆ. ಹೂವು ಬೆಳೆಯಲು ಮಾರ್ಗದರ್ಶನ ಮತ್ತು ಮಾಹಿತಿ ನೀಡಲಾಗಿದೆ. ಅವರ ಕೃಷಿ ಮಾದರಿಯಾಗಿದೆ ಎಂದು ಹೇಳುತ್ತಾರೆ ಅಜ್ಜಂಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಭರತ್‌.

‘ಮಿಶ್ರ ಬೆಳೆಯಾಗಿ ಹೂ ಕೃಷಿ’
‘ತೆಂಗಿನ ಮರದ ನಡುವೆ ಮಿಶ್ರ ಬೆಳೆಯಾಗಿ ಹೂ ಕೃಷಿ ನಡೆಸಿದ್ದೇನೆ. ಅರ್ಧ ವಾರ್ಷಿಕ, ವಾರ್ಷಿಕವಾಗಿ ತೆಂಗಿನ ಆದಾಯ ಬಂದರೆ, ಸುಗಂಧರಾಜ ಹೂ ನಿತ್ಯವೂ ಹಣ ನೀಡುತ್ತಿದೆ. ಯಾರ ಮುಂದೆಯೂ ಕೈಚಾಚದಂತಾಗಿದೆ. ಮನೆ ನಿರ್ವಹಣೆ ಸುಲಭವಾಗಿದೆ. ದೊಡ್ಡ ಮಟ್ಟದಲ್ಲಿ ಹೂ ಕೃಷಿ ಕೈಗೊಂಡರೆ, ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಸಾಂಪ್ರದಾಯಿಕ ಬೆಳೆಯ ನಡುವೆ ಹೂವಿನ ಕೃಷಿ ಮಾಡಬಹುದಾಗಿದೆ’ ಎನ್ನುತ್ತಾರೆ ಮಧು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT