ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಂದ್ರ ಬೆಲೆ ಕುಸಿತ‌; ಬೆಳೆಗಾರ ಕಂಗಾಲು

ಕೇರಳದಲ್ಲಿ ಬೇಡಿಕೆ ಇಲ್ಲ, ಕೆಜಿಗೆ ₹6–₹8, ಸಂಕ್ರಾಂತಿ ನಂತರ ಇಳಿದ ಧಾರಣೆ
Last Updated 17 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ಸಂಕ್ರಾಂತಿ ಹಬ್ಬದ ಬಳಿಕ ನೇಂದ್ರ ಬಾಳೆಯ ಬೆಲೆ ಗಣನೀಯವಾಗಿ ಕುಸಿದಿದ್ದು, ಬೆಳೆಗಾರರು ನಷ್ಟ ಎದುರಿಸುವ ಆತಂಕದಲ್ಲಿದ್ದಾರೆ.

ಚಿಪ್ಸ್‌ ಮಾಡಲು ಮಾತ್ರ ಹೆಚ್ಚಾಗಿ ಬಳಸುವ ನೇಂದ್ರ ಬಾಳೆಗೆಕೇರಳ ಹಾಗೂ ದಕ್ಷಿಣ ಕನ್ನಡದಲ್ಲಿ ಮಾತ್ರ ಬೇಡಿಕೆ ಇದ್ದು, ಜನವರಿ ಮಧ್ಯಭಾಗದಿಂದೀಚೆಗೆ ಬೇಡಿಕೆ ಕುಸಿದಿದ್ದು, ವ್ಯಾಪಾರಿಗಳು ರೈತರಿಂದ ಕೆಜಿಗೆ ₹6–₹8ಗೆ ಖರೀದಿಸುತ್ತಿದ್ದಾರೆ.

ಜಿಲ್ಲೆಯ ಗುಂಡ್ಲುಪೇಟೆ, ಚಾಮರಾಜನಗರ ಹಾಗೂ ಕೊಳ್ಳೇಗಾಲ ತಾಲ್ಲೂಕುಗಳಲ್ಲಿ ನೇಂದ್ರ ಬಾಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಎಕರೆಗೆ 12ರಿಂದ 16 ಟನ್‌ವರೆಗೂ ಫಸಲು ಬರುತ್ತದೆ. ವ್ಯಾಪಾರಿಗಳು, ದಲ್ಲಾಳಿಗಳು ನೇರವಾಗಿ ರೈತರ ಮನೆಗೆ ಬಂದೂ ಕಟಾವು ಮಾಡಿ ಬಾಳೆಗೊನೆ ತೆಗೆದುಕೊಂಡು ಹೋಗುತ್ತಾರೆ.

‘ಬೇಡಿಕೆ ಇರುವ ಸಂದರ್ಭದಲ್ಲಿ ಒಂದು ಕೆ.ಜಿ ನೇಂದ್ರ ಬೆಲೆ ₹35ರಿಂದ ₹40ವರೆಗೂ ಹೋಗಿದ್ದಿದೆ. ಉಳಿದ ಸಮಯದಲ್ಲಿ ಸರಾಸರಿ ₹18ರಿಂದ ₹20ರವರೆಗೂ ಬೆಲೆ ಇರುತ್ತದೆ. ಸಂಕ್ರಾಂತಿವರೆಗೂ ₹18–₹20ವರೆಗೆ ಬೆಲೆ ಇತ್ತು. ನಂತರ ಏಕಾಏಕಿ ಕಡಿಮೆಯಾಗಿದೆ. ಖರೀದಿಸಲು ವ್ಯಾಪಾರಿಗಳೇ ಬರುತ್ತಿಲ್ಲ. ಕೆಜಿಗೆ ₹6–₹7ಗೆ ಕೇಳುತ್ತಿದ್ದಾರೆ. ಅಷ್ಟಕ್ಕೆ ಮಾರಿದರೆ ನಮಗೇನೂ ಸಿಗುವುದಿಲ್ಲ’ ಎಂದು ಕೊಳ್ಳೇಗಾಲದ ಬೆಳೆಗಾರ ಲಿಂಗರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಐದು ಎಕರೆಯಲ್ಲಿ ನೇಂದ್ರ ಬೆಳೆದಿದ್ದೆ. ಸಾಮಾನ್ಯವಾಗಿ ಈ ಬಾಳೆಗೆ ಉತ್ತಮ ಬೆಲೆ ಇರುತ್ತದೆ. ₹20ಕ್ಕಿಂತ ಕಡಿಮೆಯಾಗುವುದಿಲ್ಲ. ಇಷ್ಟು ದರ ಇದ್ದರೆ ನಷ್ಟ ಆಗುವುದಿಲ್ಲ. ಇಷ್ಟೊಂದು ಪ್ರಮಾಣದಲ್ಲಿ ಬೆಲೆ ಕುಸಿದಿರುವುದು ಇದೇ ಮೊದಲು. ಲಾಭ ಇಲ್ಲದಿರುವುದರಿಂದ ಕಟಾವು ಮಾಡುವುದಕ್ಕೆ ಹೋಗಿಲ್ಲ’ ಎಂದು ಅವರು ಹೇಳಿದರು.

‘ಎರಡು ಎಕರೆಯಲ್ಲಿ ನೇಂದ್ರ ಹಾಕಿದ್ದೇನೆ.ತಿಂಗಳ ಹಿಂದೆ ಕೆಜಿಗೆ ₹18–₹20ರ ಬೆಲೆಯಲ್ಲಿ ಮಾರಾಟ ಮಾಡಿದ್ದೆ. ಈಗ ಬೇಡಿಕೆ ಕಡಿಮೆ ಇರುವುದರಿಂದ ವ್ಯಾಪಾರಿಗಳೇ ಬರುತ್ತಿಲ್ಲ. ಕೊಡುತ್ತಿದ್ದರೂ ಕಡಿಮೆ ಬೆಲೆಗೆ ಕೊಡುವ ಪರಿಸ್ಥಿತಿ ಇದೆ. ಈ ಬೆಲೆಗೆ ಮಾರಿದರೆ ಮಾಡಿದ ವೆಚ್ಚವೂ ಬರುವುದಿಲ್ಲ’ ಎಂದು ಚಾಮರಾಜನಗರ ತಾಲ್ಲೂಕಿನ ತಮ್ಮಡಹಳ್ಳಿ ರವಿಶಂಕರ್‌ ಅವರು ಮಾಹಿತಿ ನೀಡಿದರು.

ವ್ಯಾಪಾರಿಗಳು ಹೇಳುವುದೇನು?: ನೇಂದ್ರ ಬಾಳೆಯನ್ನು ಚಿಪ್ಸ್‌ ಮಾಡಲು ಹಾಗೂ ಹಣ್ಣಿಗೆ ಮಾತ್ರ ಬಳಸಲಾಗುತ್ತದೆ. ಕೇರಳದಲ್ಲಿ ಮಾತ್ರ ಇದಕ್ಕೆ ಬೇಡಿಕೆ (ರಾಜ್ಯದಲ್ಲಿ ದಕ್ಷಿಣ ಕನ್ನಡದಲ್ಲಿ ಇದೆ). ಹಾಗಾಗಿ, ಬೆಳೆಯು ಕೇರಳ ಮಾರುಕಟ್ಟೆಯನ್ನು ಅವಲಂಬಿಸಿದೆ. ಸ್ಥಳೀಯ ರೈತರಿಂದ ಖರೀದಿಸುವ ದಲ್ಲಾಳಿಗಳು ಹಾಗೂ ವ್ಯಾಪಾರಿಗಳು ಕೇರಳದಲ್ಲಿ ಮಾರಾಟ ಮಾಡುತ್ತಾರೆ.

‘ಕೇರಳದಲ್ಲಿ ಬೇಡಿಕೆ ಕುಸಿದಿದೆ. ಉತ್ಪಾದನೆ ಹೆಚ್ಚಾಗಿರುವುದು ಒಂದು ಕಾರಣವಾದರೆ, ಈ ಅವಧಿಯಲ್ಲಿ ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆಯೂ ಕಡಿಮೆ. ಹೀಗಾಗಿ ಮಾರುಕಟ್ಟೆಯಲ್ಲಿ ನೇಂದ್ರ ಬಾಳೆಗೆ ಬೇಡಿಕೆ ಇಲ್ಲ’ ಎಂದು ಹೇಳುತ್ತಾರೆ ವ್ಯಾಪಾರಿಗಳು.

ರೈತರಿಂದ ಖರೀದಿಸುವ ವ್ಯಾಪಾರಿಗಳು, ಕೆಜಿಗೆ ₹7ರಿಂದ ₹10 ಹೆಚ್ಚು ಬೆಲೆಗೆ ಕೇರಳದಲ್ಲಿ ಮಾರಾಟ ಮಾಡುತ್ತಾರೆ. ಇದರಲ್ಲಿ ಕಟಾವು, ಸಾಗಣೆ ವೆಚ್ಚ ಎಲ್ಲವೂ ಸೇರಿರುತ್ತದೆ. ಮೂಲದಲ್ಲೇ ಬೆಲೆ ಇಲ್ಲದಿರುವುದರಿಂದ ಖರೀದಿಗೆ ಅವರು ಕೂಡ ಹಿಂದೇಟು ಹಾಕುತ್ತಿದ್ದಾರೆ.

‘ಎಲ್ಲ ಕಡೆಗಳಲ್ಲೂ ರೈತರು ನೇಂದ್ರವನ್ನೇ ಬೆಳೆದಿದ್ದಾರೆ. ಇದರಿಂದ ಉತ್ಪಾದನೆ ಹೆಚ್ಚಿದ್ದು, ಮಾರುಕಟ್ಟೆಗೆ ಭಾರಿ ಪ್ರಮಾಣದಲ್ಲಿ ಬಾಳೆ ಬರುತ್ತಿದೆ. ಈಗ ಏಲಕ್ಕಿ, ಪಚ್ಚೆ ಬಾಳೆಗೆ ಬೇಡಿಕೆ ಇದೆ. ಆದರೆ ಸರಕೇ ಇಲ್ಲ. ಹೆಚ್ಚು ಬೆಲೆ ಸಿಗುತ್ತದೆ ಎಂದು ಎಲ್ಲ ರೈತರು ನೇಂದ್ರ ಬೆಳೆದ ಪರಿಣಾಮ ಇದು’ ಎಂದು ತಾಲ್ಲೂಕಿನ ನಾಗವಳ್ಳಿಯ ಬೆಳೆಗಾರ ಹಾಗೂ ಉದ್ಯಮಿ ನಾಸಿರ್‌ ಅವರು ‘ಪ್ರಜಾವಾಣಿ’ಗೆ ವಿವರಿಸಿದರು.

ಏಲಕ್ಕಿ, ಪಚ್ಚೆ ಬಾಳೆಗೆ ಬೇಡಿಕೆ

ಹಾಗೆ ನೋಡಿದರೆ, ಏಲಕ್ಕಿ ಮತ್ತು ಪಚ್ಚೆ ಬಾಳೆಗೆ ಉತ್ತಮ ಬೆಲೆಯಿ‌ದೆ. ವ್ಯಾಪಾರಿಗಳು ಏಲಕ್ಕಿ ಬಾಳೆಗೆ ಕೆಜಿಗೆ ₹35ರಿಂದ ₹38ರವರೆಗೂ ನೀಡಿ ಬೆಳೆಗಾರರಿಂದ ಖರೀದಿಸುತ್ತಿದ್ದಾರೆ. ಕಾಯಿ ಪಚ್ಚೆ ಬಾಳೆಗೆ ₹12–₹14ರವರೆಗೆ ಬೆಲೆ ಇದೆ.

‘ನೇಂದ್ರಕ್ಕೆ ಹೋಲಿಸಿದರೆ ಏಲಕ್ಕಿ, ಪಚ್ಚೆ ಬಾಳೆಯಿಂದ ರೈತರಿಗೆ ನಷ್ಟ ಇಲ್ಲ. ಒಂದೆರಡು ತಿಂಗಳ ಹಿಂದೆ ಏಲಕ್ಕಿ ಬಾಳೆ ಬೆಲೆ ಕಡಿಮೆಯಾಗಿತ್ತು. ಈಗ ಸುಧಾರಿಸಿದೆ’ ಎಂದು ಲಿಂಗರಾಜು ಹೇಳಿದರು.

ತರಕಾರಿಗೂ ಇಲ್ಲ ಬೆಲೆ

ಟೊಮೆಟೊ, ಸೌತೆಕಾಯಿ, ಮಂಗಳೂರು ಸೌತೆ, ಬೀಟ್‌ರೂಟ್‌, ಮೆಣಸಿನಕಾಯಿ ಸೇರಿದಂತೆ ಹಲವು ತರಕಾರಿಗಳಿಗೆ ಬೇಡಿಕೆಯೇ ಇಲ್ಲ. ಮಂಗಳೂರ ಸೌತೆ ಬೆಳೆದಿರುವ ರೈತರು ಕಟಾವು ಮಾಡದೆ ಹಾಗೆಯೇ ಬಿಟ್ಟಿದ್ದಾರೆ.

‘ಕೆಜಿ ಟೊಮೆಟೊಗೆ ₹4ರಿಂದ ₹5, ಮೆಣಸಿನಕಾಯಿ ₹10, ಸೌತೆಕಾಯಿ ಒಂದಕ್ಕೆ –0.75 ಪೈಸೆಯಿಂದ ₹1, ಮಂಗಳೂರು ಸೌತೆ 60 ಕೆ.ಜಿಯ ಒಂದು ಮೂಟೆಗೆ ₹100, ಬೀಟ್‌ ರೂಟ್‌ಗೆ ಕೆ.ಜಿಗೆ ₹3 ಇದೆ’ ಎಂದು ರವಿಶಂಕರ್‌ ಮಾಹಿತಿ ನೀಡಿದರು.

ಈ ಬೆಲೆಗೆ ಮಾರಾಟ ಮಾಡಿದರೆ, ರೈತರಿಗೆ ಸಿಗುವ ಲಾಭವಾದರೂ ಏನು ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT