ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಹಣ್ಣುಗಳ ರಾಜ’ ಮಾವಿನ ಪುರ ಪ್ರವೇಶ

ಮಾವು ಪ್ರಿಯರಿಗೆ ಹಬ್ಬ: ವ್ಯಾಪಾರಿಗಳಿಗೆ ಬಿಡುವಿಲ್ಲದ ದುಡಿಮೆ
Last Updated 15 ಮೇ 2022, 19:30 IST
ಅಕ್ಷರ ಗಾತ್ರ

ಕೋಲಾರ: ಹಣ್ಣುಗಳ ರಾಜನ ಪುರ ಪ್ರವೇಶವಾಗಿದ್ದು, ನಗರದ ಮಾರುಕಟ್ಟೆಗಳಲ್ಲಿ ಈಗ ಮಾವಿನ ಹವಾ ಭರ್ಜರಿಯಾಗಿದೆ. ರಸ್ತೆ ಬದಿಯ ಅಂಗಡಿಗಳಿಗೆ ರಾಶಿ ರಾಶಿಯಾಗಿ ಬಂದಿಳಿದಿರುವ ಮಾವು ಹಣ್ಣುಗಳು ಗ್ರಾಹಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ.

ಹಾಲು ಗಲ್ಲದ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುವ ಹಾಗೂ ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ. ರಸ್ತೆ ಬದಿಯ ಮಾವು ಹಣ್ಣಿನ ಅಂಗಡಿಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದು, ಮಾವು ಪ್ರಿಯರಿಗೆ ಹಬ್ಬವೋ ಹಬ್ಬ.

ಟಿ.ಚನ್ನಯ್ಯ ರಂಗಮಂದಿರ ರಸ್ತೆ, ಎಂ.ಜಿ.ರಸ್ತೆ, ಕ್ಲಾಕ್‌ ಟವರ್‌, ಟೇಕಲ್‌ ರಸ್ತೆ, ಅಮ್ಮವಾರಿಪೇಟೆ ವೃತ್ತ, ಮಾರುಕಟ್ಟೆ ಹೀಗೆ ಕಣ್ಣು ಹಾಯಿಸಿದಲ್ಲೆಲ್ಲಾ ಮಾವಿನ ಖದರ್. ಗಲ್ಲಿ-ಗಲ್ಲಿಯಲ್ಲೂ ಈಗ ತಳ್ಳು ಗಾಡಿಗಳಲ್ಲಿ ಮಾವಿನದೇ ಕಾರುಬಾರು.

ಪ್ರತಿ ವರ್ಷ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮಾವಿನ ಋತು ಆರಂಭವಾಗುತ್ತದೆ. ಮೇ ತಿಂಗಳಿಂದ ಜುಲೈವರೆಗೆ ಮಾವಿನ ಸುಗ್ಗಿ ಮುಂದುವರಿಯುತ್ತದೆ. 3 ತಿಂಗಳ ಕಾಲ ಮಾವು ವ್ಯಾಪಾರಿಗಳಿಗೆ ಬಿಡುವಿಲ್ಲದ ದುಡಿಮೆ. ಈ ಅವಧಿಯಲ್ಲಿ ರಸ್ತೆ ಬದಿಯಲ್ಲಿ ಮಾವು ಹಣ್ಣಿನ ಅಂಗಡಿಗಳು ತಲೆ ಎತ್ತುವುದು ರೂಢಿ. ಹೆದ್ದಾರಿ ಅಕ್ಕಪಕ್ಕ, ಸರ್ವಿಸ್‌ ರಸ್ತೆ, ಹೆಚ್ಚಿನ ಜನಸಂದಣಿ ಇರುವ ರಸ್ತೆಗಳು, ಮಾರುಕಟ್ಟೆ ಹಾಗೂ ಸರ್ಕಾರಿ ಕಚೇರಿಗಳ ಅಕ್ಕಪಕ್ಕದ ರಸ್ತೆಗಳು ಮಾವಿನ ಮಾರಾಟಕ್ಕೆ ಪ್ರಶಸ್ತ ಸ್ಥಳಗಳು.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಮಾವು ಬೆಳೆಗೆ ಏಷ್ಯಾ ಖಂಡದಲ್ಲೇ ಹೆಸರುವಾಸಿ. ಈ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಬಾರಿ ಶ್ರೀನಿವಾಸಪುರದ ಜತೆಗೆ ರಾಮನಗರ, ಮೈಸೂರು, ತಮಿಳುನಾಡು, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದಿಂದ ಪ್ರತಿನಿತ್ಯ ಲೋಡ್‌ಗಟ್ಟಲೇ ಹಣ್ಣುಗಳನ್ನು ನಗರಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ.

ಕೈ ಸುಡುವ ಬೆಲೆ: ಮಾವಿನಲ್ಲಿ ಆಲ್ಫಾನ್ಸೊ, ಬಂಗನಪಲ್ಲಿ, ಕೇಸರ್, ಸೆಂಧೂರ, ದಶಹರಿ, ಮಲ್ಲಿಕಾ, ತೋತಾಪುರಿ, ರಾಜ್‌ಗಿರಾ, ಮಲಗೋವಾ, ಬೆನೆಶಿಯಾ, ನೀಲಂ, ಸಕ್ಕರೆ ಗುತ್ತಿ, ರಸಪುರಿ, ಬಾದಾಮಿ ತಳಿಯ ಹಣ್ಣುಗಳಿವೆ. ಬಾದಾಮಿ ಮತ್ತು ರಸಪುರಿ ತಳಿಯ ಹಣ್ಣುಗಳು ನೋಡಲು ಆಕರ್ಷಕ ಹಾಗೂ ತಿನ್ನಲು ರುಚಿಕರ. ಆದರೆ, ಬೆಲೆ ತುಸು ಹೆಚ್ಚು.

ತೋತಾಪುರಿ ಹಣ್ಣುಗಳ ಬೆಲೆ ಕಡಿಮೆ ಇದ್ದರೂ ರುಚಿಯ ಕಾರಣಕ್ಕೆ ಜನ ರಸಪುರಿ ಮತ್ತು ಬಾದಾಮಿ ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ತೋತಾಪುರಿ ಹಣ್ಣುಗಳನ್ನು ಹೆಚ್ಚಾಗಿ ಜ್ಯೂಸ್‌ಗೆ ಬಳಸಲಾಗುತ್ತದೆ. ಸಕ್ಕರೆ ಗುತ್ತಿ ತಳಿಯ ಹಣ್ಣುಗಳು ಗಾತ್ರದಲ್ಲಿ ಚಿಕ್ಕದಾದರೂ ಹೆಚ್ಚು ರುಚಿಕರ.

ನಗರದ ಮಾರುಕಟ್ಟೆಯಲ್ಲಿ ಸದ್ಯ ರಸಪುರಿ ಹಣ್ಣಿನ ಬೆಲೆ ಕೆ.ಜಿಗೆ ₹ 80, ಬಾದಾಮಿ ₹ 100, ರಾಜ್‌ಗಿರಾ 60, ಮಲಗೋವಾ ₹ 130, ಸಕ್ಕರೆ ಗುತ್ತಿ ₹ 120, ಬೆನೆಶಿಯಾ ₹ 110, ಮಲ್ಲಿಕ ₹ 70 ಇದೆ. ಇತರೆ ತಳಿಯ ಹಣ್ಣುಗಳು ಅಲ್ಲೊಂದು ಇಲ್ಲೊಂದು ಅಂಗಡಿಯಲ್ಲಿ ವಿರಳವಾಗಿವೆ. ಹಣ್ಣಿನ ಗುಣಮಟ್ಟ, ಗಾತ್ರ ಹಾಗೂ ತಳಿಯ ಮೇಲೆ ಬೆಲೆ ವ್ಯತ್ಯಾಸವಾಗುತ್ತದೆ. ಬೆಲೆ ಕೇಳಿದರೆ ಗ್ರಾಹಕರ ಮುಖ ಬಾಡುತ್ತದೆ, ಬೆಲೆ ಕೈ ಸುಡುವಂತಿದೆ. ಹಾಗಂತ ವರ್ಷದ ಅತಿಥಿಯನ್ನು ಬಿಡುವುದುಂಟೆ. ಬೆಲೆ ದುಬಾರಿಯಾದರೂ ಮಾವು ಪ್ರಿಯರು ಹಣ್ಣು ಖರೀದಿಸಿ ಸವಿಯುತ್ತಿದ್ದಾರೆ.

ಆರೋಗ್ಯಕ್ಕೆ ಒಳ್ಳೆಯದು: ಮಾವಿನ ಹಣ್ಣಿನ ಸ್ವಾದವೇ ಅಂತಹದ್ದು. ದೊಡ್ಡವರಿರಲಿ, ಚಿಕ್ಕವರಿರಲಿ, ಹಣ್ಣಿನ ಹೋಳು ಬಾಯಿಗೆ ಬಿದ್ದರೆ ಸಾಕು ಲಾಲಾರಸ ಗ್ರಂಥಿಗಳು ತಾವಾಗೇ ಅರಳುತ್ತವೆ. ಆನಂದಮಯ ರಸಾನುಭೂತಿಗೆ ವಯಸ್ಸು ಅಡ್ಡಿಯಾಗದು. ಮಾವಿನ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು.

ಈ ಹಣ್ಣಿನ ಸೇವನೆಯು ಜೀರ್ಣ ಕ್ರಿಯೆಗೆ ಪೂರಕ. ಅಜೀರ್ಣ ಸಮಸ್ಯೆಯಿಂದ ಬಳಲುವವರು ಮಾವಿನ ಹಣ್ಣು ತಿನ್ನುವುದು ಒಳ್ಳೆಯದು. ಈ ಹಣ್ಣಿನಲ್ಲಿ ನಾರಿನಂಶ ಮತ್ತು ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕೊಬ್ಬಿನಾಂಶ ಕಡಿಮೆ ಮಾಡಲು ಸಹಕಾರಿಯಾಗಿದೆ.

ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಅಂಶವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಕ್ಯಾನ್ಸರ್ ಕಾಯಿಲೆ ಮತ್ತು ಹೃದಯ ಸಂಬಂಧಿ ಸಮಸ್ಯೆ ನಿಯಂತ್ರಣದಲ್ಲಿಡಲು ಮಾವು ಸಹಕಾರಿ ಎಂದು ವೈದ್ಯರು ಹೇಳುತ್ತಾರೆ.

ಖರೀದಿಯಲ್ಲಿ ಎಚ್ಚರವಿರಲಿ: ಗ್ರಾಹಕರು ಮಾವು ಹಣ್ಣು ಖರೀದಿಸುವಾಗ ಆಕರ್ಷಣೆಗೆ ಮಾರು ಹೋಗಿ ಎಚ್ಚರ ತಪ್ಪಿದರೆ ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಬೇಕಾಗುತ್ತದೆ. ಕೆಲ ವ್ಯಾಪಾರಿಗಳು ಲಾಭದಾಸೆಗೆ ಮತ್ತು ಗ್ರಾಹಕರನ್ನು ಸೆಳೆಯಲು ಕ್ಯಾಲ್ಸಿಯಂ ಕಾರ್ಬೈಡ್‌ ಎಂಬ ವಿಷಕಾರಿ ರಾಸಾಯನಿಕ ಬಳಸಿ ಅವಧಿಗೂ ಮುನ್ನವೇ ಮಾವಿನ ಕಾಯಿಗಳನ್ನು ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಾರೆ.

ಈ ಹಣ್ಣುಗಳು ನೋಡಲು ಆಕರ್ಷಕವಾಗಿದ್ದು, ಗ್ರಾಹಕರನ್ನು ನೋಟದಲ್ಲೇ ಸೆಳೆಯುತ್ತವೆ. ಆದರೆ, ನೈಸರ್ಗಿಕವಾಗಿ ಮಾಗಿದ ಹಣ್ಣುಗಳಿಗೆ ಹೋಲಿಸಿದರೆ ಇವು ಹೆಚ್ಚು ರುಚಿಕರವಲ್ಲ. ಪೂರ್ಣ ಪ್ರಮಾಣದಲ್ಲಿ ಮಾಗದ ಈ ಹಣ್ಣುಗಳಲ್ಲಿ ಹುಳಿ ಅಂಶ ಹೆಚ್ಚಿರುತ್ತದೆ. ಜತೆಗೆ ಈ ಹಣ್ಣುಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಮತ್ತು ಬಾಳಿಕೆ ಅವಧಿ ತುಂಬಾ ಕಡಿಮೆ. ಈ ಹಣ್ಣುಗಳನ್ನು ಸೇವಿಸಿದರೆ ಕಾಯಿಲೆ ಬೀಳುವುದು ನಿಶ್ಚಿತ. ಆದ ಕಾರಣ ಗ್ರಾಹಕರು ಹಣ್ಣು ಖರೀದಿಸುವಾಗ ಎಚ್ಚರ ವಹಿಸುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT