ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ - ಪಪ್ಪಾಯ ಜುಗಲ್ ಬಂದಿ

Last Updated 22 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಅಡಿಕೆ ಸಸಿ ನಾಟಿ ಮಾಡಿ, ಅದು ಫಸಲು ಕೊಡಲು ಆರೇಳು ವರ್ಷಗಳು ಬೇಕು. ಈ ಅವಧಿಯಲ್ಲಿ ತೋಟ ಖಾಲಿ ಬಿಡುವ ಬದಲು, ಅಡಿಕೆ ಮರಗಳ ನಡುವೆ ಅಂತರ ಬೆಳೆಯಾಗಿ ಕೆಲವರು ಬಾಳೆ, ಸೀತಾಫಲ, ಪೇರಲದಂತಹ ಹಣ್ಣಿನ ಗಿಡಗಳನ್ನು ಬೆಳೆಸುತ್ತಾರೆ. ಇನ್ನೂ ಕೆಲವರು ತರಕಾರಿ ಕೃಷಿ ಮಾಡುತ್ತಾರೆ. ಈ ಮೂಲಕ, ಅಡಿಕೆ ತೋಟದ ನಿರ್ವಹಣಾ ಖರ್ಚನ್ನು ಸರಿದೂಗಿಸಿಕೊಳ್ಳುತ್ತಾರೆ, ಕೆಲವರು ಆದಾಯವನ್ನೂ ಪಡೆಯುತ್ತಾರೆ. ಪರೋಕ್ಷವಾಗಿ ಅಡಿಕೆ ಸಸಿಗಳಿಗೆ ಪೂರಕ ಪೋಷಕಾಂಶವೂ ಸಿಕ್ಕಂತಾಗುತ್ತದೆ ಎಂಬ ನಂಬಿಕೆಯೂ ಇದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಕುಡಿಗೆರೆ ಗ್ರಾಮದ ರೈತ ನಾಗರಾಜ ದಾನಪ್ಪ ಗೌಡ ಕೂಡ ಇದೇ ವಿಧಾನ ಅನುಸರಿಸುತ್ತಾ, ಅಡಿಕೆ ಮರಗಳ ನಡುವೆ ಪಪ್ಪಾಯ ಗಿಡಗಳನ್ನು ನಾಟಿ ಮಾಡಿದ್ದಾರೆ. ಅಂತರ ಬೆಳೆಯಾಗಿ ಬೆಳೆದಿರುವ ಪಪ್ಪಾಯಿ ಗಿಡಗಳಲ್ಲಿ ಈಗ ಮುಡಿ ತುಂಬಾ ಕಾಯಿ ತುಂಬಿಕೊಂಡಿದೆ. ಎರಡು ವರ್ಷಗಳಿಂದ ಫಸಲು ಕೊಯ್ದು ಮಾರಾಟ ಮಾಡುತ್ತಿದ್ದಾರೆ.

ಒಂದು ಎಕರೆಯ ಕೃಷಿ

ಕುಡಿಗೆರೆ ಗ್ರಾಮದ ತಮ್ಮ ಮನೆಯ ಹಿಂಭಾಗದಲ್ಲಿರುವ ಒಂದು ಎಕರೆ ಖುಷ್ಕಿ ಜಮೀನಿನಲ್ಲಿ ಮೂರು ವರ್ಷಗಳ ಹಿಂದೆ (2015, ಜನವರಿ) ಅಡಿಕೆ ಸಸಿಗಳನ್ನು ನಾಟಿ ಮಾಡಿದರು. ಭೂಮಿ ಹದಗೊಳಿಸಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 9 ಅಡಿ ಅಂತರದಂತೆ, ಒಂದು ಎಕರೆಗೆ 470 ಅಡಿಕೆ ಸಸಿ ನಾಟಿ ಮಾಡಿದರು.

ಅಡಿಕೆ ಸಸಿಗಳಿಗೆ ಒಂದು ವರ್ಷ (2016,ಜನವರಿ) ತುಂಬಿತು. ಆ ಸಂದರ್ಭದಲ್ಲಿ ಸಸಿಗಳ ಸಾಲಿನ ನಡುವೆ 470 ಥೈವಾನ್ ತಳಿಯ ರೆಡ್‍ಲೇಡಿ ಪಪ್ಪಾಯ ಸಸಿಗಳನ್ನು ನಾಟಿ ಮಾಡಿದರು.

ಎರಡು ಬೋರ್‌ವೆಲ್‌ಗಳಿವೆ. ಎರಡರಲ್ಲೂ ಮೂರು ಇಂಚು ನೀರಿದೆ. ಇಡೀ ಒಂದು ಎಕರೆಗೆ ಡ್ರಿಪ್‌ ಅಳವಡಿಸಿದ್ದಾರೆ. ನಡುವೆ ದೊಡ್ಡ ಪೈಪ್‌ ಹಾಕಿ, ಪಪ್ಪಾಯ ಗಿಡಕ್ಕೆ ಒಂದು ಹಾಗೂ ಅಡಿಕೆ ಗಿಡಕ್ಕೆ ಒಂದು ಮೈಕ್ರೋ ಟ್ಯೂಬ್ ಹಾಕಿದ್ದಾರೆ. ಎರಡು ದಿನಕ್ಕೊಮ್ಮೆ ಬೆಳಿಗ್ಗೆ ಸಂಜೆ ನೀರು ಹನಿಸುತ್ತಾರೆ. ಹೀಗಾಗಿ ಪಪ್ಪಾಯ ಅಂತರ ಬೆಳೆ ಮಾಡಿದ್ದರಿಂದ, ಆ ಬೆಳೆಗೆ ನೀಡುವ ನೀರು, ಗೊಬ್ಬರದ ಆರೈಕೆ ಪರೋಕ್ಷವಾಗಿ ಅಡಿಕೆಗೂ ಸಿಕ್ಕಿದಂತಾಗುತ್ತದೆ ಎಂಬುದು ನಾಗರಾಜ ಅವರ ಲೆಕ್ಕಾಚಾರ.

ತಮ್ಮದೇ ನರ್ಸರಿಯ ಗಿಡ

ಹತ್ತು ಗ್ರಾಂ ಪಪ್ಪಾಯ ಬೀಜಕ್ಕೆ ರೂ 3250 ಬೆಲೆ. ಒಂದು ಪೊಟ್ಟಣ ಬೀಜ ತಂದು, ಮನೆಯ ಅಂಗಳದಲ್ಲೇ ಬೀಜದಿಂದ ನರ್ಸರಿ ಮಾಡಿಕೊಂಡರು. ಅಡಿಕೆ ಸಾಲಿನ ನಡುವೆ ಒಂದು ಅಡಿ ಆಳ ಒಂದು ಅಡಿ ಅಗಲದ ಚಚ್ಚೌಕದ ಗುಂಡಿ ಮಾಡಿದರು. ಅದರೊಳಗೆ ಹದವಾದ ಗೊಬ್ಬರ ಮಣ್ಣು ಮಿಶ್ರಮಾಡಿ ಸಸಿ ನಾಟಿ ಮಾಡಿದರು. ಗಿಡ ನೆಟ್ಟು ತಿಂಗಳ ನಂತರ ಪ್ರತಿ ಗಿಡಕ್ಕೆ 25 ಗ್ರಾಂನಷ್ಟು ಸಂಯುಕ್ತ ರಸಗೊಬ್ಬರ ಕೊಟ್ಟರು. ಜೊತೆಗೆ ಸಗಣಿಯನ್ನೂ ಸ್ಲರಿ ರೂಪ ಮಾಡಿ, ಪ್ರತಿ ಗಿಡಗಳ ಬುಡಕ್ಕೆ ಕೊಟ್ಟರು. ತಿಂಗಳಿಗೊಮ್ಮೆ ಮೇಲುಗೊಬ್ಬರವಾಗಿ ಪುನಃ ಕಾಂಪ್ಲೆಕ್ಸ್ ಗೊಬ್ಬರ ಕೊಟ್ಟುರು. ಜತೆಗೆ ಪಪ್ಪಾಯಿಯ ಕಾಂಡಕೊಳೆಯದಂತೆ ಎಚ್ಚರವಹಿಸಿದರು.

ಗಿಡ ನಾಟಿ ಮಾಡಿದ ಮೂರು ತಿಂಗಳ ಹೊತ್ತಿಗೆ ಪಪ್ಪಾಯ ಗಿಡಗಳು ಹೂವು ಬಿಟ್ಟು ಕಾಯಿ ಕಚ್ಚಲು (ಪೀಚು, ಮಿಡಿ) ಆರಂಭಿಸಿದವು. ಈ ವೇಳೆ ಗಿಡಗಳ ಬುಡಕ್ಕೆ ದ್ರವರೂಪದ ಸೆಗಣಿ ಕೊಡುವುದನ್ನು ಮುಂದುವರಿಸಿದರು. ಇದರ ಜತೆಗೆ, ಪ್ರತಿ 20 ದಿನಕ್ಕೆ ಒಮ್ಮೆಯಂತೆ ಮಿಡಿ ಮತ್ತು ಕಾಯಿಗೆ ಔಷಧ ಸಿಂಪಡಿಸಿದ್ದರು. 2016 ರ ಡಿಸೆಂಬರ್ ತಿಂಗಳಿಂದ ಪಪ್ಪಾಯಿ ಫಸಲು ಮಾರಾಟಕ್ಕೆ ಸಿದ್ಧವಾಯಿತು. ಒಂದೊಂದು ಕಾಯಿ 3 ಕೆ.ಜಿ ತೂಗುವಷ್ಟು ಫಸಲು ಸಮೃದ್ಧಿಯಾಗಿದೆ.

ಮಾರಾಟ-ವಹಿವಾಟು

ಎರಡು ವರ್ಷಗಳಿಂದ ಪಪ್ಪಾಯಿ ಫಸಲನ್ನು ಮಾರುಕಟ್ಟೆಗೆ ಹಾಕುತ್ತಿದ್ದಾರೆ. ಪ್ರತಿ ವಾರಕ್ಕೊಮ್ಮೆ ಫಸಲು ಕಟಾವು ಮಾಡುತ್ತಾರೆ. ಶಿವಮೊಗ್ಗ, ಭದ್ರಾವತಿ, ಶಿರಸಿ, ಸಾಗರ ಸುತ್ತಲಿನ ಭಾಗದಿಂದ ವ್ಯಾಪಾರಸ್ಥರೇ ಇವರ ತೋಟಕ್ಕೆ ಬಂದು, ಹಣ್ಣುಗಳನ್ನು ಖರೀದಿ ಮಾಡುತ್ತಾರೆ.

ಒಂದು ವಾರಕ್ಕೆ ಪ್ರತಿ ಗಿಡದಿಂದ ಸರಾಸರಿ 1 ಕಾಯಿ ಕಟಾವಿಗೆ ಸಿಗುತ್ತದೆ. ಅಂದರೆ ಸರಾಸರಿ ಒಂದು ಗಿಡದಿಂದ 3 ಕೆ.ಜಿ ಪಪ್ಪಾಯ ಮಾರಾಟಕ್ಕೆ ಸಿಗುತ್ತದೆ. 470 ಗಿಡದಿಂದ ವಾರಕ್ಕೆ ಸುಮಾರು 14 ಕ್ವಿಂಟಲ್ ನಷ್ಟು ಪಪ್ಪಾಯಿ ಮಾರಾಟಕ್ಕೆ ಲಭ್ಯ.

ಕೆ.ಜಿ ಪಪ್ಪಾಯಿ ದರ ಮಾರುಕಟ್ಟೆಯಲ್ಲಿ ₹ 8 ರಿಂದ ₹‌ 22ರವರೆಗೂ (ಸೀಸನ್ ಆಧರಿಸಿ) ಸಿಕ್ಕಿದೆ. ಸರಾಸರಿ ₹ 12 ಕ್ಕಿಂತ ಕಡಿಮೆಯಾಗಿಲ್ಲ. ಈ ಲೆಕ್ಕಾಚಾರದ ಪ್ರಕಾರ, ವಾರಕ್ಕೆ 14 ಕ್ವಿಂಟಾಲ್ ಪಪ್ಪಾಯಿಯಿಂದ ₹16,800, ತಿಂಗಳಿಗೆ ₹ 64 ಸಾವಿರ ವಹಿವಾಟಿನ ಲೆಕ್ಕ ಕೊಡುತ್ತಾರೆ ನಾಗರಾಜ್.

ಕೃಷಿ ನಿರ್ವಹಣೆ, ಗೊಬ್ಬರ, ಕಳೆ ನಿರ್ವಹಣೆ, ಕಟಾವಿನ ಕೂಲಿ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೆ ಬರುವ ಹಣದಲ್ಲಿ ಕಳೆದರೆ, ತಿಂಗಳಿಗೆ ಸರಾಸರಿ ರೂ 30 ಸಾವಿರ ಖರ್ಚು ಬರುತ್ತಿದೆ. ಉಳಿದಿದ್ದೆಲ್ಲ ಆದಾಯ ಎನ್ನುವುದು ಅವರ ಅಭಿಪ್ರಾಯ.

ಬೆಳೆಯುತ್ತಿರುವ ಅಡಿಕೆ ಗಿಡಗಳಿಗೆ ಈಗ ಮೂರು ವರ್ಷ. ಇವು ಇನ್ನಷ್ಟು ದೊಡ್ಡವಾಗಿ, ಕೆನಾಪಿ ಹರಡಿಕೊಳ್ಳಲು ಇನ್ನೂ ಒಂದು ವರ್ಷ ಬೇಕಾಗಬಹುದು. ಅಲ್ಲಿವರೆಗೂ ಪಪ್ಪಾಯ ಫಸಲು ಪಡೆಯಬಹುದು. ನಂತರ ಈ ಗಿಡಗಳ ಆಯಸ್ಸು ಮುಗಿಯುತ್ತದೆ. ಇಲ್ಲಿವರೆಗೂ ಪಪ್ಪಾಯಿ ಫಸಲಿಂದ ಬಂದ ಆದಾಯ ಅಡಿಕೆ ತೋಟ ನಿರ್ಮಾಣ ಮತ್ತು ನಿರ್ವಹಣೆಯ ಖರ್ಚಿಗಾಗಿದೆ.

ಅಡಿಕೆ ಅಂತರಬೆಳೆ ಪಪ್ಪಾಯ ಬೆಳೆಯುವ ಕುರಿತ ಹೆಚ್ಚಿನ ಮಾಹಿತಿಗಾಗಿ ನಾಗರಾಜ್ ಅವರ ಮೊಬೈಲ್ ಸಂಖ್ಯೆ 7259885056 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT