ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲ್ಲಿ ಬೇಕಾ ನೆಲ್ಲಿ.. ಬನಾರಸ್‌ ನೆಲ್ಲಿ..!

Last Updated 3 ಜುಲೈ 2020, 6:09 IST
ಅಕ್ಷರ ಗಾತ್ರ

ಬೆಳಿಗ್ಗೆ 7.30ರ ಸಮಯ. ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್ ಮೆಸೇಜ್‌ ಬಂದಂತೆ ಶಬ್ಧವಾಯ್ತು. ತೆಗೆದು ನೋಡಿದರೆ,ಅದು ಗೆಳೆಯ ಕೇಶವಮೂರ್ತಿ ಕಳುಹಿಸಿದ ಮೆಸೇಜ್‌. ಅದರಲ್ಲಿ ‘ನಂಜನಗೂಡು ಸಮೀಪದ ಚಂದ್ರು ಅವರ ಜಮೀನಿಲ್ಲಿ ಮೂರು ಟನ್‌ ಬೆಟ್ಟದನೆಲ್ಲಿ ಇದೆ. ಯಾರಾದರೂ ಖರೀದಿ ಮಾಡುವ ಆಸಕ್ತಿ ಇದ್ದರೆ, ಸಂಪರ್ಕಿಸಲು ತಿಳಿಸಿ‘ ಅಂತ ಮಾಹಿತಿ ಇತ್ತು. ಜತೆಗೆ ಸಂಪರ್ಕಕ್ಕೆ ಫೋನ್ ನಂಬರ್ ಕೊಟ್ಟಿದ್ದರು.

‘ಮೂರು ಟನ್‌ ಬೆಟ್ಟದ ನೆಲ್ಲಿ ಕಾಯಿ ಇದೆ‘ ಅಂತ ಓದಿದ ಕೂಡಲೇ, ಮನಸ್ಸು ನಮ್ಮೂರಿನ ಗುಡ್ಡದತ್ತ ಓಡಿತು. ಬೆಟ್ಟದಿಂದ ಕಾಡು ನೆಲ್ಲಿಕಾಯಿಗಳನ್ನು ಸೀಮೆಂಟ್ ಚೀಲಕ್ಕೆ ತುಂಬಿಕೊಂಡು ಬಂದಿದ್ದು ನೆನಪಾಯಿತು. ರಂಗನಗುಡ್ಡದಿಂದ ತಂದ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ಹದವಾದ ನೆರಳಲ್ಲಿ ಒಣಗಿಸಿ, ನಂತರ ಹೆಚ್ಚಿ, ಉಪ್ಪು ತುಂಬಿದ ಜಾಡಿಗಳಿಗೆ ಭರ್ತಿ ಮಾಡಿ, ಮುಚ್ಚಳಕ್ಕೆ ಬಟ್ಟೆ ಹೊದಿಸಿ ಗಂಟು ಹಾಕಿಡುತ್ತಿದ್ದ ಪ್ರಕ್ರಿಯೆ ಜ್ಞಾಪಕಕ್ಕೆ ಬಂತು.

ಅದು ಕಾಡು ನೆಲ್ಲಿಯ ಕತೆ ಬಿಡಿ. ಆದರೆ ಚಂದ್ರು ಅವರತಮ್ಮ ಜಮೀನಿನಲ್ಲಿರುವುದು ಬನಾರಸ್‌ ತಳಿಯ ನೆಲ್ಲಿ. ಅಂದ ಹಾಗೆ ನೆಲ್ಲಿಯಲ್ಲೂ ಎರಡು ತಳಿಗಳು ಜನಪ್ರಿಯವಾಗಿವೆ. ಒಂದು ರಾಮದುರ್ಗ ನೆಲ್ಲಿ. ಇನ್ನೊಂದು ಬನಾರಸ್ ತಳಿಯ ನೆಲ್ಲಿ. ರಾಮದುರ್ಗ ನೆಲ್ಲಿ ಗಾತ್ರದಲ್ಲಿ ಸಣ್ಣದು. ಗುಣದಲ್ಲಿ ಹಿರಿಯದು. ಬನಾರಸ್‌ ನೆಲ್ಲಿಕಾಯಿ ಗಾತ್ರ ತುಸು ದಪ್ಪ. ಗಾಜಿನ ದಪ್ಪ ಗೋಲಿಯಷ್ಟು ಗಾತ್ರವಾಗಿರುತ್ತವೆ.

ಇಷ್ಟೆಲ್ಲ ಕಥೆ ನೆನಪಿಸಿಕೊಂಡು, ಅಂದ ಹಾಗೆ, ಚಂದ್ರು ಅವರ ನಂಬರ್ ತಗೊಂಡು, ಕರೆ ಮಾಡಿದೆ. ಅವರು ಫೋನ್‌ಗೆ ಸಿಕ್ಕರು. ‘ಈ ಬಾರಿ ಮೂರು ಟನ್ನಿನಷ್ಟು ಬನಾರಸ್‌ ತಳಿಯ ನೆಲ್ಲಿಕಾಯಿ ಬೆಳೆದಿದ್ದೇವೆ. ಕೊರೊನಾದಿಂದ ಮಾರ್ಕೆಟ್ ಸಿಗ್ಲಿಲ್ಲ. ಹಾಗೂ ಹೀಗೂ ಸ್ವಲ್ಪ ಮಾರಾಟ ಮಾಡಿದ್ದೇವೆ. ಆದರೂ ಸ್ವಲ್ಪ ಮಾರಾಟ ಮಾಡಿದ್ದೇವೆ‘ ಎಂದರು. ಸದ್ಯ ಅವರ ಬಳಿ ಎರಡು ಟನ್ನಿನಷ್ಟು ನೆಲ್ಲಿಕಾಯಿ ಉಳಿದುಕೊಂಡಿದೆ‘ ಎಂದರು.

ನಂಜನಗೂಡು ಸಮೀಪ

ಬನ್ನೂರು ಸಮೀಪದ ದಾಸೇಗೌಡನ ಕೊಪ್ಪಲಿನ ಚಂದ್ರು, ಕೃಷಿ ಪದವೀಧರ. ಊರಿನ ಸಮೀಪ ಎರಡು ಎಕರೆ ಜಮೀನಿದೆ. ನಾಲೆ ನೀರು ಆಧಾರಿತವಾಗಿ ಕಬ್ಬು, ಭತ್ತ ಬೆಳೆಯುತ್ತಾರೆ. ಅವರ ಅಣ್ಣಂದಿರು ಆ ಜಮೀನಿನ ಉಸ್ತುವಾರಿ ನೋಡಿಕೊಳ್ಳುತ್ತಾರೆ. ದಶಕ ದಿಂದೀಚೆಗೆ ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಸಮೀಪದ ಕಣೆನೂರಿನಲ್ಲಿ 6 ಎಕರೆ ಜಮೀನು ಖರೀದಿಸಿದ್ದಾರೆ. ಅದೇ ಜಮೀನಿನಲ್ಲೇ ನೆಲ್ಲಿ, ಸಪೋಟ, ಬಾಳೆ, ಕಬ್ಬು, ಹತ್ತಿ ಬೆಳೆಯುತ್ತಿದ್ದಾರೆ. ಆರಂಭದ ನಾಲ್ಕೈದು ವರ್ಷ ಇಲ್ಲಿ ಮಳೆಯಾಧಾರಿತವಾಗಿ ಕೃಷಿ ಮಾಡುತ್ತಿದ್ದರು. ಮೊದಲು ಸಪೋಟ, ನೆಲ್ಲಿ, ಆಹಾರ ಧಾನ್ಯಗಳನ್ನು ಬೆಳೆಯುತ್ತಿದ್ದರು. ನಂತರ ಎರಡು ಕೊಳವೆಬಾವಿ ಹಾಕಿಸಿ, ಅದರಿಂದ ಹತ್ತಿ, ಬಾಳೆ ಜತೆಗೆ, ಈ ಹಣ್ಣಿನ ಗಿಡಗಳನ್ನೂ ಬೆಳೆಸುತ್ತಿ ದ್ದಾರೆ. ಈಗ 2 ಸಾವಿರ ಪುಟ್ಟ ಬಾಳೆ ಹಾಕಿರುವ ಜಾಗದಲ್ಲಿ ಮೊದಲು ಹತ್ತಿ ಹಾಕಿದ್ದರು. ಈಗ ಡ್ರಿಪ್‌ ಮಾಡಿ ಕಬ್ಬು ಹಾಕುವ ಯೋಚನೆ ಇದೆ.

ಬೊಂಬಾಟ್‌ ಬನಾರಸ್‌

ಜಮೀನು ಖರೀದಿಸಿದ ಆರಂಭದಲ್ಲೇ ತಿಪಟೂರು ಸಮೀಪದ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಬನಾರಸ್‌ ತಳಿಯ ಬೆಟ್ಟದ ನೆಲ್ಲಿ ಗಿಡಗಳನ್ನು ತಂದು ನಾಟಿ ಮಾಡಿದ್ದಾರೆ. ಅದರ ಜತೆಗೆ ಸಪೋಟ ಗಿಡಗನ್ನೂ ಹಾಕಿದ್ದಾರೆ. ಈಗ್ಗೆ ನಾಲ್ಕೈದು ವರ್ಷಗಳಿಂದ ಎರಡೂ ಫಲ ಕೊಡಲಾರಂಭಿಸಿವೆ.

ನೆಲ್ಲಿ, ಸಪೋಟಕ್ಕೆ ಯಾವುದೇ ರಸಗೊಬ್ಬರ ಕೊಟ್ಟಿಲ್ಲ. ಈ ಹಣ್ಣಿನ ಬೆಳೆ ನಡುವಿನ ಜಾಗದಲ್ಲಿ ಮನೆಗೆ ಬೇಕಾಗುವ ಅವರೆ, ಉದ್ದು, ಹೆಸರು, ಹುರುಳಿಯಂತಹ ಧಾನ್ಯಗಳನ್ನು ಬೆಳೆದುಕೊಳ್ಳುತ್ತಾರೆ. ಹೀಗಾಗಿ, ನೆಲ್ಲಿ–ಸಪೋಟ ಹಣ್ಣಿನ ಗಿಡಗಳು ಸೊಂಪಾಗಿ ಬೆಳೆದು ಫಲನೀಡುತ್ತಿವೆ.

ಮೂರು ಟನ್ ಇಳುವರಿ..

ನಾಟಿ ಮಾಡಿದ ಮೂರು ವರ್ಷಕ್ಕೆ ನೆಲ್ಲಿ ಫಸಲು ಬಿಡಲಾರಂಭಿಸಿತು. ಆರಂಭದಲ್ಲಿ ಅರ್ಧಕ್ಕರ್ಧ ಗಿಡಗಳು ಫಸಲು ಕೊಡುತ್ತಿರಲಿಲ್ಲ. ಹಾಗಾಗಿ ಬಂದಷ್ಟೇ ಫಸಲನ್ನು ಚಿಲ್ಲರೆಯಾಗಿ ಮಾರಾಟ ಮಾಡಿದ್ದಾರೆ. ಈಗ್ಗೆ ಮೂರು ವರ್ಷಗಳಿಂದ ಸರಾಸರಿ 500 ಕೆ.ಜಿಯಷ್ಟು ಮಜಬೂತಾದ ನೆಲ್ಲಿ ಸಿಗುತ್ತಿತ್ತು. ಈ ವರ್ಷ 45 ಗಿಡಗಳೂ ಫಸಲು ಕೊಟ್ಟಿವೆ. 3 ಟನ್ ಇಳುವರಿ ಸಿಕ್ಕಿದೆ. ಆದರೆ, ಮಾರ್ಕೆಟ್‌ ಇಲ್ಲ, ರೇಟೂ ಕಡಿಮೆ.

‘ಮೈಸೂರಿನ ಆರ್‌ಎಂಸಿ ಯಾರ್ಡ್‌, ನಂಜನಗೂಡಿನ ಎರಡು ಆಯುರ್ವೇದ ಔಷಧ ತಯಾರಿಕಾ ಕಾರ್ಖಾನೆಗಳಿಗೆ ಪ್ರತಿ ವರ್ಷ ನೆಲ್ಲಿ ಮಾರಾಟ ಮಾಡುತ್ತಿದ್ದೆವು. ಕೇರಳದವರು ಕೆ.ಜಿ.ಗೆ ₹50 ರಿಂದ ₹60 ಬೆಲೆ ಕೊಟ್ಟು ಖರೀದಿಸುತ್ತಿದ್ದರು. ಈ ವರ್ಷ ₹35ರ ಹಾಗೆ ಕೊಟ್ಟಿದ್ದೇವೆ‘ ಎಂದರು ಚಂದ್ರು.

ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಕದೇ ಸ್ವಾಭಾವಿಕವಾಗಿಯೇ ಬೆಳೆದ ಒಂದು ಟನ್ನಿನಷ್ಟು ಬನಾರಸ್ ನೆಲ್ಲಿಕಾಯಿಗಳಿವೆ.ಆಸಕ್ತರು ಚಂದ್ರು ಅವರ ದೂರವಾಣಿ ಸಂಖ್ಯೆ:9611062038 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT