ಗುರುವಾರ , ಜನವರಿ 28, 2021
18 °C
ಹಿರಿಯ ಜೀವದ ಕನಸಿಗೆ ಜೀವತುಂಬಿದ ಯುವಕರು

PV Web Exclusive: ಹಡೀಲು ಜಮೀನಿನಲ್ಲಿ ಹಸಿರು ಹಾಸು

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಊರಿನಲ್ಲಿ ಪಾಳುಬಿದ್ದ ಗದ್ದೆಗಳು ಮತ್ತೆ ಹಸಿರಾಗಬೇಕು, ಹಸಿರು ಹಾಸು ಯುವಕರ ಮನದಲ್ಲಿ ಕೃಷಿಯ ಕಿಚ್ಚು ಹಚ್ಚಬೇಕು ಎಂದು ಹಿರಿಯ ಜೀವವೊಂದು ಹಲವು ವರ್ಷಗಳಿಂದ ಕಾಣುತ್ತಿದ್ದ ಕನಸು ನಿಜವಾಗಿದೆ. ಅವರ ಈ ಕನಸಿಗೆ ಜೀವ ತುಂಬುವ ಸಂದರ್ಭ ಒದಗಿಸಿದ್ದು ಕೋವಿಡ್–19 ಮತ್ತು ಲಾಕ್‌ಡೌನ್.

ಮಂಗಳೂರು ಬಜ್ಪೆ ಸಮೀಪದ ಊರು ಎಕ್ಕಾರು. ಇಲ್ಲಿ 300ಕ್ಕೂ ಹೆಚ್ಚು ಮನೆಗಳಿವೆ. ಇವರಲ್ಲಿ ಶೇ 80ರಷ್ಟು ನಿವಾಸಿಗಳು ಕೃಷಿಕರು, ಅಡಿಕೆ–ತೆಂಗಿನ ತೋಟ, ಭತ್ತದ ಗದ್ದೆ ಹೊಂದಿರುವವರು. ಕೃಷಿ ಕ್ಷೇತ್ರಕ್ಕೆ ಬಹುದೊಡ್ಡ ಹೊಡೆತ ಕೊಟ್ಟಿರುವ ಕೃಷಿ ಕಾರ್ಮಿಕರ ಕೊರತೆ ಸಮಸ್ಯೆಯಿಂದ ಈ ಊರು ಕೂಡ ಹೊರತಾಗಿಲ್ಲ. ಅಡಿಕೆ–ತೆಂಗಿನ ತೋಟ ನಿಭಾಯಿಸುವಲ್ಲಿ ಹೈರಾಣಾದ ಇವರು ಭತ್ತದ ಉಳುಮೆಯನ್ನು ಕ್ರಮೇಣ ನಿಲ್ಲಿಸಿದರು. ಗದ್ದೆಗಳು ಪಾಳುಬಿದ್ದವು. ಕಣ್ಣಿಗೆ ರಾಚುವಷ್ಟು ಹಡೀಲು ಭೂಮಿಗಳು ಊರನ್ನು ವ್ಯಾಪಿಸುತ್ತ ಹೋದವು. ಇದನ್ನು ಕಂಡು ಸದಾ ನೊಂದುಕೊಳ್ಳುತ್ತಿದ್ದವರು ಹಿರಿಯರಾದ ಸದಾಶಿವ ಶೆಟ್ಟಿ ಅವರು.

ಅವಕಾಶ ದೊರೆತಾಗಲೆಲ್ಲ ಯುವಕರಿಗೆ ಕೃಷಿ ಕಿವಿಮಾತು ಹೇಳುತ್ತಿದ್ದರು. ಆದರೆ, ವೃತ್ತಿಯ ಒತ್ತಡ, ಬಿಡುವಿಲ್ಲದ ಚಟುವಟಿಕೆಯಿಂದಾಗಿ ಯುವಕರು ಅವರ ಮಾತನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಳೆದ ಮಾರ್ಚ್‌ ವೇಳೆಗೆ ಕೋವಿಡ್–19 ಸಾಂಕ್ರಾಮಿಕ ಕಾಯಿಲೆಯ ಕಾರಣಕ್ಕೆ ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾದಾಗ, ಯುವಕರು ಊರಿನಲ್ಲೇ ಬಾಕಿಯಾದರು. ಹೊರ ಊರಿನಲ್ಲಿ ಉದ್ಯೋಗದಲ್ಲಿದ್ದವರು ಊರಿಗೆ ಮರಳಿದರು. ಇದೇ ಸಂದರ್ಭವನ್ನು ಸದ್ಬಳಕೆ ಮಾಡಿಕೊಂಡ ಸದಾಶಿವ ಶೆಟ್ಟರು, ಹಡೀಲು ಭೂಮಿಯಲ್ಲಿ ಉಳುಮೆ ಮಾಡುವ ಪ್ರಸ್ತಾಪ ಮುಂದಿಟ್ಟರು.

ಜಂಜಾಟದಿಂದ ಮುಕ್ತರಾಗಿದ್ದ ಯುವಕರಿಗೆ ಅವರ ಆಶಯ ಮನದಟ್ಟಾಯಿತು. ಇದರ ಫಲವಾಗಿ, ಸದಾಶಿವ ಶೆಟ್ಟರ ಕನಸು ‘ಸಿರಿಕುರಲ್ ರೈತ ಉತ್ಪಾದಕ ಕಂಪನಿ’ಯಾಗಿ ಚಿಗುರೊಡೆಯತೊಡಗಿದೆ.

‘ನಮ್ಮದು ಕೃಷಿಕರು ಪ್ರಧಾನವಾಗಿರುವ ಊರು. ಕೃಷಿ ಕಾರ್ಮಿಕರ ಕೊರತೆ, ಕೂಲಿ ದರದಲ್ಲಿ ಹೆಚ್ಚಳ, ಕಟಾವು ಮಾಡಲು ದುಬಾರಿ ಬಾಡಿಗೆಯ ಯಂತ್ರ ಹೀಗೆ ಹತ್ತು ಹಲವಾರು ಕಾರಣಗಳಿಂದ ಭತ್ತ ಬೆಳೆಯುವವರು ಕಡಿಮೆಯಾಗಿ, ಹಡೀಲು (ತುಳುವಿನಲ್ಲಿ ಪಡೀಲು) ಭೂಮಿ ಹೆಚ್ಚಾಗಿತ್ತು. ಈಗ ಸದಾಶಿವ ಶೆಟ್ಟರ ಉತ್ಸಾಹ ಯುವಕರಿಗೆ ಪ್ರೇರಣೆ ಒದಗಿಸಿದೆ. ಆರಂಭದಲ್ಲಿ ಆಯ್ಕೆ ಮಾಡಿಕೊಂಡಿದ್ದು ಮಧ್ಯ ಗ್ರಾಮ. ಅಲ್ಲಿ ಶ್ರೀಧರ ಶೆಟ್ಟಿ, ಶಂಕರ ಶೆಟ್ಟಿ ಅವರ ಜೊತೆ ಚರ್ಚಿಸಿ, 25 ಎಕರೆ ಪಡೀಲು ಭೂಮಿಯಲ್ಲಿ ಭತ್ತ ನಾಟಿ ಮಾಡಿದೆವು. ಗದ್ದೆಯಲ್ಲಿ ಬಂದ ಒಳ್ಳೆಯ ಫಸಲು ನಮ್ಮ ಆತ್ಮವಿಶ್ವಾಸವನ್ನು ಗಟ್ಟಿಗೊಳಿಸಿದೆ. ಯುವಕರ ಉತ್ಸಾಹ ಇಮ್ಮಡಿಸಿದೆ’ ಎನ್ನುತ್ತಾರೆ ತಂಡದ ಸದಸ್ಯರಲ್ಲೊಬ್ಬರಾಗಿರುವ, ಹವ್ಯಾಸಿ ನಿರೂಪಕ ನಿತೇಶ್ ಶೆಟ್ಟಿ ಎಕ್ಕಾರು.


ಫಸಲು ತುಂಬಿ ನಿಂತ ಭತ್ತದ ಗದ್ದೆ

‘ಊರಿನಲ್ಲಿ ಯುವಜನರು ಬಹುಸಂಖ್ಯೆಯಲ್ಲಿದ್ದಾರೆ. ಬಹುತೇಕ ಎಲ್ಲರೂ ಉದ್ಯೋಗಿಗಳು. ಒಮ್ಮೆ ಉಳುಮೆ ಮಾಡಿದ ಅನುಭವವು, ನಮ್ಮಲ್ಲಿ ಪ್ರವೃತ್ತಿಯಾಗಿ ಕೃಷಿಯನ್ನು ಸ್ವೀಕರಿಸುವ ಮನಃಸ್ಥಿತಿಯನ್ನು ಮೂಡಿಸಿದೆ. ಗದ್ದೆಯಲ್ಲಿ ನಾಟಿ, ಕಟಾವು ಎಲ್ಲವನ್ನೂ ಹಬ್ಬವಾಗಿ ಸಂಭ್ರಮಿಸಿದೆವು. ಹಸಿರಿನ ನಡುವೆ ದೀಪ ಬೆಳಗಿ ದೀಪಾವಳಿ ಆಚರಿಸಿದೆವು. ಆಂಡ್ರಾಯ್ಡ್ ಬಳಕೆ ಗೊತ್ತಿಲ್ಲದ ಹಿರಿಯರಿಗೆ ಯುವಕರು ಮೊಬೈಲ್‌ನಲ್ಲಿ ಕೃಷಿ ಮಾಹಿತಿ ತಿಳಿದುಕೊಳ್ಳುವುದನ್ನು ಕಲಿಸುತ್ತಿದ್ದಾರೆ. ಸರ್ಕಾರದ ಕೃಷಿ ಸಂಬಂಧಿತ ಯೋಜನೆಗಳ ಬಗ್ಗೆ ಕೃಷಿಕರಿಗೆ ಸರಿಯಾದ ಮಾಹಿತಿ ನೀಡಲು ಪ್ರಯತ್ನಿಸುತ್ತಿದ್ದಾರೆ. ಅಕ್ಕಪಕ್ಕದ ಊರುಗಳಲ್ಲೂ ಇಂತಹ ಕೃಷಿ ತಂಡ ಕಟ್ಟುವ ಯೋಚನೆಯಲ್ಲಿದ್ದೇವೆ’ ಎಂದು ಯುವಕರ ತಂಡದ ಆಶಯವನ್ನು ಅವರು ಬಿಚ್ಚಿಟ್ಟರು.

‘ಸದ್ಯಕ್ಕೆ 50 ಎಕರೆ ದಾಟಿದೆ, 100 ಎಕರೆ ಹಡೀಲು ಭೂಮಿಯಲ್ಲಿ ಉಳುಮೆ ಶುರು ಮಾಡಬೇಕು ಎಂಬುದು ನನ್ನ ಗುರಿ. 300ರಷ್ಟು ಯುವಕರನ್ನು ಇದರಲ್ಲಿ ತೊಡಗಿಸುವ ಆಸೆಯಿದೆ. ಎಲ್ಲವೂ ಸುಸೂತ್ರವಾಗಿ ನಡೆಯಲು ದೇವರ ಕೃಪೆಯೂ ಬೇಕಲ್ಲ’ ಎನ್ನುತ್ತಲೇ ಮಾತಿಗಿಳಿದರು ಅದಮ್ಯ ಉತ್ಸಾಹಿ, ಹಿರಿಯರಾದ ಸದಾಶಿವ ಶೆಟ್ಟಿ.


ಯಂತ್ರದ ಮೂಲಕ ಗದ್ದೆಯಲ್ಲಿ ಭತ್ತದ ಕಟಾವು

‘ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆದಿದ್ದರು. ಜಿಲ್ಲೆಯಲ್ಲಿ ಯಾಕೆ ಭತ್ತದ ಬೆಳೆ ಕಡಿಮೆಯಾಗುತ್ತಿದೆ ಎಂಬ ವಿಚಾರ ಪ್ರಸ್ತಾಪವಾದಾಗ, ನಾನು ರೈತರ ಪರವಾಗಿ ಮಾತನಾಡಿದೆ. ರೈತರು ಕೃಷಿ ಮಾಡುವ ಸ್ಥಿತಿಯಲ್ಲಿ ಇಲ್ಲ. ಕೆಲಸ ಮಾಡುವ ಕೈಗಳು ಕಡಿಮೆಯಾಗಿವೆ. ಯಂತ್ರೋಪಕರಣಗಳ ಲಭ್ಯತೆ ಇಲ್ಲ. ಸರ್ಕಾರ ರೈತರ ಕಷ್ಟ ಅರಿತಾಗ ಮಾತ್ರ ವ್ಯವಸ್ಥೆಯಲ್ಲಿ ಪರಿವರ್ತನೆ ಸಾಧ್ಯ ಎಂಬುದು ನನ್ನ ವಾದವಾಗಿತ್ತು. ಇದು ಅಲ್ಲಿದ್ದ ಜನಪ್ರತಿನಿಧಿಗಳಿಗೆ ಮನವರಿಕೆಯಾಯಿತು. ಸಿರಿಕುರಲ್ ರೈತ ಉತ್ಪಾದಕ ಕಂಪನಿ ಕಟ್ಟಲು ಇದು ಮುನ್ನುಡಿಯಾಯಿತು. ಸರ್ಕಾರ, ಅಗತ್ಯ ಯಂತ್ರೋಪಕರಣ ಒದಗಿಸುವ ಭರವಸೆಯನ್ನು ನೀಡಿದೆ. ಕೃಷಿ ಯಂತ್ರೋಪಕರಣಗಳು ಬೇಗ ಸಿಗುವ ನಿರೀಕ್ಷೆಯಲ್ಲಿ ನಾವಿದ್ದೇವೆ’ ಎಂದು ಸದಾಶಿವ ಶೆಟ್ಟಿ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ರೈತರ ಆರ್ಥಿಕ ಸಬಲೀಕರಣ, ಮಧ್ಯವರ್ತಿಗಳ ಹಾವಳಿ ನಿಯಂತ್ರಣ, ಯಂತ್ರ ಆಧಾರಿತ ಆಧುನಿಕ ಕೃಷಿಯ ಸಮರ್ಪಕ ಅನುಷ್ಠಾನ, ಕೃಷಿ ಸಂಬಂಧಿತ ಸರ್ಕಾರದ ಎಲ್ಲ ಯೋಜನೆಗಳ ಸದ್ಬಳಕೆ, ನಾವು ಬೆಳೆದ ಅಕ್ಕಿಯನ್ನು ಬ್ರ್ಯಾಂಡ್ ಮಾಡಿ, ‘ನಮ್ಮಿಂದ ನಮಗಾಗಿ ನಮ್ಮ ಅನ್ನ’ ಘೋಷವಾಕ್ಯದ ಅಡಿಯಲ್ಲಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಪೂರೈಕೆ, ಭತ್ತ ಕೃಷಿ ಜೊತೆಗೆ ಜೇನು, ರೇಷ್ಮೆ ಕೃಷಿಯಲ್ಲಿ ಯುವಕರನ್ನು ತೊಡಗಿಸಲು ಯೋಚಿಸಲಾಗಿದೆ. ಸದ್ಯ ಬಾಲ್ಯಾವಸ್ಥೆಯಲ್ಲಿರುವ ಕಂಪನಿ, ಮುಂದೆ ಒಳ್ಳೆಯ ಯೋಜನೆಯನ್ನು ಹಾಕಿಕೊಳ್ಳುವ ಉದ್ದೇಶ ಹೊಂದಿದೆ’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು