ಗುರುವಾರ , ನವೆಂಬರ್ 26, 2020
20 °C
ಮಾಜಿ ಶಾಸಕರ ಮಗಳು- ಖ್ಯಾತ ವಕೀಲರ ಮಗ; ಹಳ್ಳಿಯೇ ಇವರ ಒಲವು, ಬದುಕೇ ಕೃಷಿ ವಿಶ್ವವಿದ್ಯಾಲಯ

PV Web Exclusive: ಹೇಮಾವತಿ ತಟದಲ್ಲಿ ಹೋರಾಟಗಾರ ದಂಪತಿಯ ಬದುಕು!

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

Prajavani

ಅವರು ನಾಗಮಂಗಲದ ಮಾಜಿ ಶಾಸಕ ಕೆ.ಸಿಂಗಾರಿಗೌಡರ ಪುತ್ರಿ. ಇವರು, ಮಂಡ್ಯದಲ್ಲಿ ಖ್ಯಾತ ವಕೀಲರಾಗಿದ್ದ ಕೆ.ರಾಮೇಗೌಡರ ಮಗ. ಪತಿ–ಪತ್ನಿಯಾದ ಇವರಿಬ್ಬರು ಅಪ್ಪಟ ಹಸಿರು ಪ್ರೇಮಿಗಳು. ಪ್ರಕೃತಿ, ಪ್ರಾಣಿ–ಪಕ್ಷಿಗಳ ಆರಾಧಕರು. ದೊಡ್ಡ ಕುಟುಂಬ ಹಿನ್ನೆಲೆಯಿದ್ದರೂ ಹೆಜ್ಜೆ ಇಟ್ಟಿದ್ದು ಹಳ್ಳಿಯ ಕಡೆಗೆ. ನಗರ ಜೀವನದಿಂದ ದೂರಾಗಿ ಕೃಷಿಯನ್ನರಸಿ ಹೊರಟ ಈ ದಂಪತಿ, ಸರಳತೆಯ ಸಾಕಾರಮೂರ್ತಿಗಳು. ನಿಸರ್ಗದ ಮಡಿಲಲ್ಲಿ ಅರಳಿದ ಇವರ ಬದುಕಿಗೆ ಮಣ್ಣೆಂಬುದು ಹೊನ್ನಿಗೆ ಸಮ.

ಹಸು, ಕುರಿ, ಕೋಳಿಗಳ ಸಾಂಗತ್ಯ ಬೆಳೆಸಿಕೊಂಡ ಈ ಜೋಡಿಗೆ ಮನೆ ಮುಂದೆ ಹರಿಯುವ ನದಿಯ ಜುಳುಜುಳು ನಾದವೇ ಪ್ರಣಯಗೀತೆ. ಸುತ್ತಲಿನ ಮರ, ಗಿಡ, ಬಳ್ಳಿಗಳಲ್ಲಿ ಗಿಜಿಗುಡುವ ಪಕ್ಷಿಗಳ ದನಿಯೇ ಹೃದಯ ತಟ್ಟುವ ಒಲವಿನ ಹಾಡು. ತೆಂಗಿನ ತೋಟ, ಮಾವಿನ ತೋಪು, ನೇರಳೆ, ಬಾಗೆ, ಹೊಂಗೆ, ಮುತ್ತುಗ, ನೀಲಗಿರಿ, ಹತ್ತಿ ಮರಗಳ ಜೊತೆಯಲ್ಲೇ ಬೆಳೆದ ಇವರ ಬದುಕಿನ ಉದ್ದೇಶ ಮರದಷ್ಟೇ ಎತ್ತರ, ವಿಶಾಲ. ಕೃಷಿಯ ಜೊತೆ ಜೊತೆಯಲ್ಲೇ ರೈತ ಹೋರಾಟವೂ ಮೈಗೂಡಿದ ಕಾರಣ ಈ ದಂಪತಿಯ ಜೀವನ ಸಂಪೂರ್ಣ ನೋವು–ನಲಿವಿನ ಹೊನಲು!


ಟರ್ಕಿ  ಕೋಳಿಗಳ ಜತೆ ನಂದಿನಿ ಜಯರಾಂ

 

ಅವರು ಬೇರಾರೂ ಅಲ್ಲ, ರೈತಸಂಘ ರಾಜ್ಯ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ನಂದಿನಿ ಜಯರಾಂ ಹಾಗೂ ಹಿರಿಯ ರೈತ ಮುಖಂಡ ಜಯರಾಂ ದಂಪತಿ. ಮಂಡ್ಯ ಜಿಲ್ಲೆ, ಕೆ.ಆರ್‌.ಪೇಟೆ ತಾಲ್ಲೂಕಿನ ಚಿಕ್ಕಮಂದಗೆರೆ ಗ್ರಾಮದ ಹೊರವಲಯಲ್ಲಿ ಹೇಮಾವತಿ ನದಿ ತಟದ ಒಂಟಿ ಮನೆಯಲ್ಲಿ ಅರಳಿರುವ ಇವರ ಬದುಕು ಒಂದು ಕೃಷಿ ವಿಶ್ವವಿದ್ಯಾಲಯ.

ಹೇಮಾವತಿ ನದಿಗೆ ಕೆಲವೇ ಮೀಟರ್‌ ದೂರದಲ್ಲಿ ನಂದಿನಿ–ಜಯರಾಂ ಅವರ ಮನೆ ಇದೆ. ಕಿಕ್ಕೇರಿಯಿಂದ ಮಂದಗೆರೆ, ಅಲ್ಲಿಂದ ಬೇವಿನಹಳ್ಳಿ, ನಂತರ ಚಿಕ್ಕಮಂದಗೆರೆ ದಾಟಿ ಕಲ್ಲುಮಣ್ಣಿನ ಹಾದಿ ಹಿಡಿದು ಮುಂದೆ ಸಾಗಬೇಕು. ‘ನಂದಿನಿ ಜಯರಾಂ ಅವರ ಮನೆ ಎಲ್ಲಿದೆ’ ಎಂದು ಕೇಳುತ್ತಲೇ ಮುನ್ನಡೆದರೆ ರೈತರು ‘ಜಯರಾಮಣ್ಣನ ಮನೆಯೇ’ ಎಂದು ನಗು ನಗುತ್ತಾ, ಪ್ರೀತಿಯಿಂದ ದಾರಿ ತೋರಿಸುತ್ತಾರೆ. ಕೆಲವರು ತಕ್ಷಣವೇ ಜಯರಾಂ ಅವರಿಗೆ ಕರೆ ಮಾಡಿ ‘ನಿಮ್ಮ ಮನೆಗೆ ನೆಂಟರು ಬಂದಿದ್ದಾರೆ, ದಾರಿ ತೋರಿಸಿದ್ದೇನೆ’ ಎಂದು ತಿಳಿಸುತ್ತಾರೆ.

ಮನೆಯ ಹತ್ತಿರಕ್ಕೆ ಸಾಗುತ್ತಿದ್ದಂತೆ ಹೇಮೆಯ ಜುಳುಜುಳ ನಾದ ಕಿವಿಗಡಚುತ್ತದೆ. ಮನೆಯ ಮುಂದಕ್ಕೆ ತೆರಳುತ್ತಿದ್ದಂತೆ ಟರ್ಕಿ ಕೋಳಿ ಡರ್ರನೆ ಶಬ್ದ ಮಾಡಿ ಸ್ವಾಗತ ಕೋರುತ್ತದೆ. ನಾಟಿಕೋಳಿ ಮರಿಗಳು ತಾಯಿ ಕೋಳಿಯ ಹಿಂದೆ ಕೊಕ್‌ ಕೊಕ್‌ ಎನ್ನುತ್ತಾ ದೂರ ಸಾಗುತ್ತವೆ. ಮನೆಯಂಗಳದ ಗುಡಿಸಲಿನಲ್ಲಿ ನಿಂತಿರುವ ಕಬ್ಬಿಣ, ಮರದ ಗಾಡಿ, ಟೈರ್‌ ಗಾಡಿ, ಟ್ರಾಕ್ಟರ್‌, ಕಾವೇರಿ ತಾಯಿಯ ಸಿಮೆಂಟ್‌ ಪ್ರತಿಮೆ, ಮೊಸಳೆಯ ಪ್ರತಿಮೆಗಳು ಗಮನ ಸೆಳೆಯುತ್ತವೆ. ದೊಡ್ಡ ಡಿಶ್‌ ಛತ್ರಿಯನ್ನು ನೋಡುತ್ತಿದ್ದರೆ ದಶಕದ ಹಿಂದೆ ಯಾವುದೋ ಮಲೆನಾಡಿನ ಮನೆಗೆ ತೆರಳಿದಂತಾಗುತ್ತದೆ.

ಸಮ್ಮೋಹಕ ಕಡುಗೆಂಪು ಬಣ್ಣದ ಆ ಮನೆ, ಮಣ್ಣನ್ನು ಪ್ರತಿಬಿಂಬಿಸುತ್ತದೆ. ಬಾಚಿ ತಬ್ಬುವಷ್ಟು ದಪ್ಪದಾದ ಮಣ್ಣಿನ ಗೋಡೆಗಳು, ಗ್ರಾಮೀಣ ಬದುಕನ್ನು ದರ್ಶನ ಮಾಡಿಸುವ ಕಂಬಗಳು, ಸುತ್ತಲೂ ತೂಗು ಹಾಕಿರುವ ಸೀಮೆಎಣ್ಣೆ ಲಾಟೀನುಗಳು, ಮನೆಯ ಕೆನಾಪಿಯಲ್ಲಿ ಅಳವಡಿಸಿರುವ ರಬ್ಬರ್‌ ಟೈರ್‌ಗಳು, ತೆಂಗಿನಮರದ ತುಂಡಿನ ಕುರ್ಚಿಗಳು ಮನಸೂರೆಗೊಳ್ಳುತ್ತವೆ. ತೆಂಗು, ಅಡಿಕೆ ತೋಟದ ನಡುವೆ ಮಧ್ಯಾಹ್ನದ ಹೊತ್ತಲೂ ಹಸಿರುಗವಿದ ಮುಸ್ಸಂಜೆಯ ವಾತಾವರಣ ಮನಸ್ಸನ್ನು ಮುದಗೊಳಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಂದಿನಿ–ಜಯರಾಂ ಅವರ ಪ್ರೀತಿ ತುಂಬಿದ ಮಾತುಗಳು ಆನಂದ ಸ್ಫುರಿಸುತ್ತವೆ.

ಜೀವಾಮೃತ ಕೃಷಿ: ಅದು 36 ಎಕರೆ ಜಮೀನಿನ ಪ್ರದೇಶ.  ಜಯರಾಂ ಅವರ ತಂದೆ ರಾಮೇಗೌಡರು ಬಹಳ ಮುಂದಾಲೋಚನೆಯಿಂದ ಖರೀದಿ ಮಾಡಿದ್ದ ಆಯಕಟ್ಟಿನ ಜಾಗ. 1,100 ತೆಂಗಿನ ಮರ, 3,500 ಅಡಿಕೆ ಮರಗಳ ತೋಟ. ತೋಟದಲ್ಲಿ ಮೆಣಸು, ಚಕ್ಕೆ ಮುಂತಾದ ವಾಣಿಜ್ಯ ಬೆಳೆ ಬೆಳೆಯುತ್ತಾರೆ. 2 ಎಕರೆಯಲ್ಲಿ ಬಾಳೆ ಗಿಡಗಳಿವೆ. ಜೊತೆಗೆ ಹಲಸು, ಹುಣಸೆ, ರುದ್ರಾಕ್ಷಿ, ಮಾವಿನ ಮರಗಳಿವೆ. ಹೇಮಾವತಿ ನದಿಯಿಂದ ನೀರು ಪಡೆಯಲು ಒಂದು ಆಕ್ವಡೆಟ್‌ ನಿರ್ಮಾಣ ಮಾಡಿಕೊಳ್ಳಲಾಗಿದೆ. ಐದಾರು ಪಂಪ್‌ಸೆಟ್‌ಗಳಿವೆ.

ಜಯರಾಂ ದಂಪತಿ ಕೈಗೊಂಡಿರುವ ಕೃಷಿ ವಿಭಿನ್ನ ಹಾಗೂ ಅಪರೂಪವಾದ ಕೃಷಿ ಪದ್ಧತಿ. ಸುಭಾಷ್‌ ಪಾಳೇಕರ್‌ ಅವರ ಜೀವಾಮೃತ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಅವರು ತೋಟವನ್ನು ಎಂದಿಗೂ ಉಳುಮೆ ಮಾಡುವುದಿಲ್ಲ. ಮರದಿಂದ ಬೀಳುವ ಗರಿಯನ್ನು ಎತ್ತುವುದಿಲ್ಲ. ತೋಟದಲ್ಲಿ ಬೆಳೆದು ನಿಂತಿರುವ ಗಿಡ, ಗಂಟಿಗಳು, ತೆಂಗಿನ ಗರಿಗಳನ್ನು ಅಲ್ಲೇ ಕೊಳೆಸುತ್ತಾರೆ. ಎರೆಹುಳುಗಳ ಉತ್ಪತ್ತಿಗೆ ಶುದ್ಧ ವಾತಾವರಣ ಸೃಷ್ಟಿಸುತ್ತಾರೆ. ಇದರಿಂದಾಗಿ ತೋಟ ಹಸಿರು ಮೀರಿ ಕಪ್ಪಾದಂತೆ ಕಾಣುತ್ತದೆ. ಹೊಲ, ತೋಟಕ್ಕೆ ಅವರೆಂದಿಗೂ ರಾಸಾಯನಿಕ ಗೊಬ್ಬರ ಸೋಕಿಸಿಲ್ಲ.

ತೆಂಗು ಮತ್ತು ಅಡಿಕೆ ಕುಟುಂಬದ ಆರ್ಥಿಕ ಶಕ್ತಿಯಾಗಿವೆ. ಮಂಡ್ಯ, ಹಾಸನ ಜಿಲ್ಲೆಯ ವ್ಯಾಪಾರಿಗಳು ಇವರ ತೋಟಕ್ಕೇ ಬಂದು ತೆಂಗಿನ ಕಾಯಿ, ಅಡಿಕೆ ಖರೀದಿ ಮಾಡುತ್ತಾರೆ. ಮನೆಯಿಂದ ಕೇವಲ ಒಂದು ಕಿ.ಮೀ ಅಂತರದಲ್ಲೇ ಹಾಸನ ಜಿಲ್ಲೆ ಆರಂಭಗೊಳ್ಳುತ್ತದೆ. ಹೊಳೇನರಸೀಪುರ, ಚನ್ನರಾಯಪಟ್ಟಣ, ಕೆ.ಆರ್‌.ಪೇಟೆ ಮಾರುಕಟ್ಟೆಗೆ ತೆಂಗಿನಕಾಯಿ, ಅಡಿಕೆ ಸರಬರಾಜಾಗುತ್ತದೆ.

ಮನೆಗೆ ಅವಶ್ಯವಿರುವ ತೊಗರಿ, ಅವರೆ, ಹುರುಳಿ ಕಾಳು, ಎಣ್ಣೆ ಕಾಳುಗಳನ್ನು ಜಮೀನಿನಲ್ಲೇ ಬೆಳೆದುಕೊಳ್ಳುತ್ತಾರೆ. ಮನೆಯಲ್ಲೇ ಕೊಬ್ಬರಿ ದೊರೆಯುವ ಕಾರಣ ಅಡುಗೆಗೆ ಅವಶ್ಯವಿರುವ ಎಣ್ಣೆಯನ್ನು ತಾವೇ ಉತ್ಪಾದನೆ ಮಾಡಿಕೊಳ್ಳುತ್ತಾರೆ. ಮಾರುಕಟ್ಟೆಯಿಂದ ಕೊಳ್ಳುವ ವಸ್ತುಗಳು ಬಹಳ ಕಡಿಮೆ. ಸಕ್ಕರೆ ಬಳಕೆ ಸಂಪೂರ್ಣ ನಿಷಿದ್ಧ. ಇವರ ಮನೆಯಲ್ಲಿ ಸಿಗುವ ಸಾವಯವ ಬೆಲ್ಲದ ಕಾಫಿ ರುಚಿ ಸದಾ ನಾಲಗೆ ಮೇಲೆ ಉಳಿಯುತ್ತದೆ. ಇನ್ಸುಲಿನ್‌ ಗಿಡ ಸೇರಿ ಹಲವು ವೈದ್ಯಕೀಯ ಗುಣವುಳ್ಳ ಸಸ್ಯ ಸಂಕುಲ ಇಲ್ಲಿವೆ.

ಮನೆಯ ಪಕ್ಕದಲ್ಲಿ ಕುರಿ ಸಾಕಣೆಗಾಗಿ ಹಾಗೂ ಕೆಲಸಗಾರರ ವಾಸಕ್ಕೆ ಪ್ರತ್ಯೇಕ ಮನೆಗಳಿವೆ. 54 ಕುರಿ ಸಾಕಣೆ ಮಾಡಿದ್ದಾರೆ. 15 ಕೋಳಿಗಳಿವೆ, 2 ನಾಟಿ ಹಸುಗಳಿವೆ, 2 ಗಿರ್‌ ತಳಿಯ ಹಸುಗಳಿವೆ. ಟರ್ಕಿಕೋಳಿ, ಬೆಂಕಿ ಕೋಳಿಗಳನ್ನು ಸಾಕಣೆ ಮಾಡಿದ್ದಾರೆ. ನಾಟಿ ಹಸುವಿನ ಹಾಲು, ಬೆಣ್ಣೆ, ತುಪ್ಪದ ಸವಿ ಮನೆಯಲ್ಲಿ ಸದಾ ಇರುತ್ತದೆ. ಗೋಬರ್‌ ಗ್ಯಾಸ್‌ ಮನೆಯ ಆವರಣದಲ್ಲೇ ತಯಾರಾಗುತ್ತದೆ. ದೀಪಗಳು ಸೂರ್ಯಶಕ್ತಿಯಿಂದ ಬೆಳಗುತ್ತವೆ.

ಪಕ್ಷಿಕಾಶಿ: ಇನ್ನೊಂದು ವಿಶೇಷವೆಂದರೆ ನದಿಗೆ ಹೊಂದಿಕೊಂಡಂತಿರುವ ಸರ್ಕಾರಿ ಭೂಮಿಯಲ್ಲಿ ನಂದಿನಿ – ಜಯರಾಂ ದಂಪತಿ ಹತ್ತಾರು ಜಾತಿಯ ಮರ, ಗಿಡ ಬೆಳೆಸಿದ್ದಾರೆ. ಹಲವೆಡೆ ನದಿ ತಟದ ಜಾಗ ಒತ್ತುವರಿಗೆ ಒಳಗಾಗಿದ್ದೇ ಹೆಚ್ಚು, ಆದರೆ ಇಲ್ಲಿ ನದಿ ತಟದಲ್ಲಿ ಅರಣ್ಯವನ್ನೇ ನಿರ್ಮಾಣ ಮಾಡಿದ್ದಾರೆ. ಈ ಸುಂದರ ಜಾಗ 70–80 ಜಾತಿಯ ಪಕ್ಷಿಗಳಿಗೆ ಆಶ್ರಯ ತಾಣವಾಗಿದ್ದು ಪಕ್ಷಿ ಕಾಶಿಯೇ ನಿರ್ಮಾಣಗೊಂಡಿದೆ. ಇಡೀ ಆವರಣ ಪ್ಲಾಸ್ಟಿಕ್‌ ಮುಕ್ತವಾಗಿದ್ದು ಪ್ರವಾಸಿ ತಾಣದಂತೆ ಭಾಸವಾಗುತ್ತದೆ.

ಹೋರಾಟದ ಬದುಕು: ಜಯರಾಂ ಅವರು ಬಿಎಸ್‌ಸಿ ಕೃಷಿ ಪದವಿ, ಸ್ನಾತಕೋತ್ತರ ಡಿಪ್ಲೊಮಾ ಪದವಿ ಪೂರೈಸಿದ್ದರೂ ಕೃಷಿಯನ್ನೇ ಪ್ರಧಾನ ಉದ್ಯೋಗ ಮಾಡಿಕೊಂಡರು. ಮುಂದಾಳು ಹೋರಾಟಗಾರನಾಗಿ ಗುರುತಿಸಿಕೊಂಡಿದ್ದ ಅವರು ರೈತಸಂಘದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ರಾಜ್ಯ ಸಮಿತಿ ಮುಖಂಡರಾಗಿ ಕೆಲಸ ಮಾಡಿದ್ದಾರೆ. ಸದ್ಯ, ಹಿರಿಯ ನಾಯಕರಾಗಿ ಹೋರಾಟಗಾರರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ವಾರದಲ್ಲಿ 5 ದಿನ ಚಳವಳಿಯಲ್ಲೇ ಇರುತ್ತಿದ್ದ ಅವರು ಬಳ್ಳಾರಿ ಜೈಲು ಸೇರಿದಂತೆ ವಿವಿಧೆಡೆ ಸೆರೆಮನೆ ವಾಸ ಅನುಭವಿಸಿದ್ದಾರೆ. ಪತಿಯ ಹೋರಾಟದ ಬದುಕಿನಿಂದಾಗಿ ಪತ್ನಿ ನಂದಿನಿ, ‘ಬದುಕಿಗಾಗಿ ಹೋರಾಟ’ ಮಾಡಿದ್ದಾರೆ. ಇಬ್ಬರು ಗಂಡು ಮಕ್ಕಳ ಜೊತೆ, ಒಂಟಿಮನೆಯಲ್ಲಿ, ಭಯದ ಬೀಡಿನಲ್ಲಿ ಬದುಕು ಕಟ್ಟಿದ್ದಾರೆ. ಸಾರ್ಥಕ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದಾರೆ.

‘ಹೋರಾಟದ ಜೀವನದಲ್ಲಿ ಓಡಾಟ ಸಾಮಾನ್ಯವಾಗಿತ್ತು. ಆಗ ಪತ್ನಿ ನಂದಿನಿ ಮಕ್ಕಳನ್ನು ಬೆಳೆಸುವ ಜೊತೆಗೆ ಸಸ್ಯಸಂಕುಲವನ್ನೂ ಬೆಳೆಸಿ ಕೃಷಿ ಬದುಕು ಕಟ್ಟಿಕೊಟ್ಟರು. ಅವರ ಕನಸಿನಂತೆಯೇ ತೋಟ ರೂಪಗೊಂಡಿದೆ. ಮನೆಗೆ ಬೇಕಾಗುವ ಪದಾರ್ಥಗಳನ್ನು ನಮ್ಮ ತೋಟದಲ್ಲೇ ಬೆಳೆದುಕೊಳ್ಳುತ್ತೇವೆ. ಅಗತ್ಯ ವಸ್ತುಗಳನ್ನು ಕೊಳ್ಳಲು ನಗರ, ಪಟ್ಟಣಗಳಿಗೆ ಹೋಗಬೇಕಾಗಿಲ್ಲ. ಈ ಕೋವಿಡ್‌ ಲಾಕ್‌ಡೌನ್‌ ಅವಧಿ ನಮಗೆ ತಿಳಿಯಲೇ ಇಲ್ಲ’ ಎಂದು ಜಯರಾಂ ಹೇಳಿದರು.

19 ದೇಶಗಳ ಪ್ರವಾಸ: ಮಕ್ಕಳು ಕೈಗೆ ಬಂದ ನಂತರ ನಂದಿನಿ ಅವರು ಕೂಡ ಪತಿಯ ಹಾದಿಯಲ್ಲೇ ಹೋರಾಟದ ಹೆಜ್ಜೆ ಹಾಕಿದರು. ಬಿ.ಎ ಪದವೀಧರೆಯಾಗಿ, ರಾಜ್ಯಮಟ್ಟದ ಚರ್ಚಾಪಟುವಾಗಿ ಕಾಲೇಜು ದಿನಗಳಲ್ಲೇ ಗುರುತಿಸಿಕೊಂಡಿದ್ದ ಅವರು ಪ್ರೊ.ನಂಜುಂಡಸ್ವಾಮಿ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಅದರಂತೆ ರೈತ ಸಂಘದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದರು. ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆಯಾಗಿಯೂ ದುಡಿದರು.

ಹಲವು ಭಾಷೆಗಳಲ್ಲಿ ಹಿಡಿತ ಹೊಂದಿರುವ ನಂದಿನಿ ಅವರು, 19 ದೇಶಗಳ ಪ್ರವಾಸ ಮಾಡಿ ರೈತರ ವಿಚಾರಗಳ ಕುರಿತು, ಸಾವಯವ, ಜೀವಾಮೃತ ಕೃಷಿ ಬಗ್ಗೆ, ಪರಿಸರ ಅಸಮತೋಲನ ಮುಂತಾದ ವಿಚಾರಗಳ ಬಗ್ಗೆ ಪ್ರಬಂಧ ಮಂಡನೆ ಮಾಡಿದ್ದಾರೆ, ಭಾಷಣ ಮಾಡಿದ್ದಾರೆ. ದುಡಿಯುವ ವರ್ಗಗಳ ಅಂತರರಾಷ್ಟ್ರೀಯ ಸಂಘಟನೆಯಾಗಿರುವ ‘ವಯಾ ಕಾಂಪಾಸಿನಾ’ ಸಂಘಟನೆಯ ಜೊತೆ ಗುರುತಿಸಿಕೊಂಡು ವಿವಿಧ ದೇಶಗಳಲ್ಲಿ ಭಾರತದ ರೈತ ಕುಲವನ್ನು ಪ್ರತಿನಿಧಿಸಿದ್ದಾರೆ. ಆರ್ಥಿಕ ವಿಚಾರಗಳ ಮಂಡನೆ, ಅನ್ಯಭಾಷಿಗ ರೈತ ಮುಖಂಡರ ಭಾಷಣಗಳನ್ನು ಕನ್ನಡಕ್ಕೆ ಭಾಷಾಂತರ ಮಾಡುವಲ್ಲಿ ಪರಿಣತಿ ಪಡೆದಿದ್ದಾರೆ.

ಎಷ್ಟೇ ದೊಡ್ಡ ಸ್ಥಾನಕ್ಕೇರಿದ್ದರೂ ಹೇಮಾವತಿ ನದಿ ತಟದಲ್ಲಿ ಸಾಮಾನ್ಯ ರೈತರಾಗಿ ದುಡಿಯುವ ಇವರು ಅಪ್ಪಟ ಮಣ್ಣಿನ ಮಕ್ಕಳು. ಮನೆಯ ಸುತ್ತಲೂ ಈಗಲೂ ಚಿರತೆಗಳ ಹಾವಳಿ ಹೆಚ್ಚಾಗಿದೆ. ಅಲ್ಲಿ ನಾಯಿಗಳನ್ನು ಸಾಕಣೆ ಮಾಡಿದರೆ ಚಿರತೆ ಬಾಯಿಗೆ ಬಲಿಯಾಗುತ್ತವೆ. ಇಂತಹ ಭಯದ ನಡುವೆಯೂ ಜಾನುವಾರುಗಳನ್ನು ಸಾಕಣೆ ಮಾಡಿರುವುದು ಸವಾಲೇ ಸರಿ. ರಾತ್ರಿಯಿಡೀ ದೀಪ ಉರಿಸುತ್ತಾ ಕುರಿ, ಕೋಳಿ, ಹಸುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದುಕೊಂಡಿದ್ದಾರೆ. ಭಯದ ನಡುವೆಯೂ ತಮ್ಮ ಕೃಷಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ತಮ್ಮ ಒಟ್ಟಾರೆ ಜ್ಞಾನವನ್ನು ಸುಸ್ಥಿರ ಬದುಕಿಗೆ ಮೀಸಲಿಟ್ಟಿರುವ ಈ ದಂಪತಿ ಸರಳಾತಿಸರಳವಾಗಿ ಬದುಕುತ್ತಿದ್ದಾರೆ. ಕೆ.ಆರ್‌.ಪೇಟೆ ಪಟ್ಟಣದಲ್ಲಿ ನೈಸರ್ಗಿಕ ಸಹಕಾರ ಸಂಘ ಸ್ಥಾಪಿಸಿ ಸಾವಯವ ಉತ್ಪನ್ನಗಳ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ನಂದಿನಿ–ಜಯರಾಂ ಅವರ ಹಿರಿಯ ಮಗ ಜೆ.ಅಚಲೇಶ್‌ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದು ಸ್ಪೇನ್‌ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಕಿರಿಯ ಮಗ ಜೆ.ಮನು ತೇಜಸ್ವಿ, ಯೋಧನಾಗಿ ದೇಶ ಸೇವೆ ಮಾಡುತ್ತಿದ್ದಾರೆ. ಸಿಆರ್‌ಪಿಎಫ್‌ ಅಸಿಸ್ಟಂಟ್‌ ಕಮಾಂಡೆಂಟ್‌ ಆಗಿ ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು