ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 80ರಷ್ಟು ಬಿತ್ತನೆ ಪೂರ್ಣ

ಕಲಘಟಗಿಯಲ್ಲಿ ಗರಿಷ್ಠ, ನವಲಗುಂದದಲ್ಲಿ ಕನಿಷ್ಠ ಬಿತ್ತನೆ; ರಸಗೊಬ್ಬರಕ್ಕಿಲ್ಲ ಕೊರತೆ
Last Updated 13 ಜುಲೈ 2020, 6:04 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಮಳೆ ರೈತರಿಗೆ ವರದಾನವಾಗಿದೆ. ಜಿಲ್ಲೆಯಲ್ಲಿ ಈವರೆಗೂ ಶೇಕಡ 80ರಷ್ಟು ಬಿತ್ತನೆ ಪೂರ್ಣಗೊಂಡಿದೆ.

ಕೃಷಿ ಇಲಾಖೆಯ ಜುಲೈ 6ರ ವರೆಗಿನ ಅಂಕಿ ಅಂಶಗಳ ಪ್ರಕಾರ, ಬಿತ್ತನೆಯಲ್ಲಿ ಜಿಲ್ಲೆಯಲ್ಲಿಯೇ ಕಲಘಟಗಿ ತಾಲ್ಲೂಕು ಅಗ್ರಸ್ಥಾನದಲ್ಲಿದೆ. ನವಲಗುಂದ ತಾಲ್ಲೂಕಿನಲ್ಲಿ ಅತಿ ಕಡಿಮೆ ಅಂದರೆ ಶೇ 53ರಷ್ಟು ಪ್ರದೇಶದಲ್ಲಿ ಬಿತ್ತನೆ ನಡೆದಿದೆ.

ಕಲಘಟಗಿ, ಧಾರವಾಡ ಹಾಗೂ ಕುಂದಗೋಳ ತಾಲ್ಲೂಕಿನಲ್ಲಿ ಶೇಕಡ 90ಕ್ಕೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ, 44,376 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದೆ. 35,976 ಹೆಕ್ಟೇರ್‌ ಹತ್ತಿ, 35,442 ಹೆಕ್ಟೇರ್‌ ಸೋಯಾಬಿನ್, 33,925 ಹೆಕ್ಟೇರ್‌ ಗೋವಿನಜೋಳ, 18,857 ಹೆಕ್ಟೇರ್‌ ಶೇಂಗಾ, 10,722 ಹೆಕ್ಟೇರ್‌ ಭತ್ತ ಬೆಳೆಯಲಾಗಿದೆ.

ನಾಲ್ಕು ಪಟ್ಟು ಹೆಚ್ಚಳ: ಈ ಬಾರಿ ಜಿಲ್ಲೆಯಲ್ಲಿ ನಿರೀಕ್ಷೆಗೂ ಅಧಿಕ ಪ್ರದೇಶದಲ್ಲಿ ಉದ್ದು ಬಿತ್ತನೆ ನಡೆದಿದೆ. 1,591 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. ಒಟ್ಟು 5,398 ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು ಬಿತ್ತನೆ ನಡೆದಿದೆ. ಧಾರವಾಡ ತಾಲ್ಲೂಕಿನಲ್ಲಿ 936 ಹೆಕ್ಟೇರ್‌ನಲ್ಲಿ ಉದ್ದು ಬಿತ್ತನೆ ಗುರಿಯಿತ್ತು. ಆದರೆ, ಅದಕ್ಕೂ ನಾಲ್ಕು ಪಟ್ಟು ಹೆಚ್ಚು ಅಂದರೆ, 4,633 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಡೆದಿದೆ.

ರಸಗೊಬ್ಬರಕ್ಕಿಲ್ಲ ಕೊರತೆ: ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರಕ್ಕೆ ಕೊರತೆ ಇಲ್ಲ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ತಿಳಿಸಿದರು.

ಜಿಲ್ಲೆಗೆ ಜೂನ್‌ ತಿಂಗಳಲ್ಲಿ 12,166 ಮೆಟ್ರಿಕ್‌ ಟನ್‌ ಯೂರಿಯಾ, 7,343 ಮೆಟ್ರಿಕ್‌ ಟನ್‌ ಡಿಎಪಿ, 1,550 ಮೆಟ್ರಿಕ್‌ ಟನ್‌ಎಂಒಪಿ ಹಾಗೂ 5,769 ಮೆಟ್ರಿಕ್‌ ಟನ್‌ ಎನ್‌ಪಿಕೆ ರಸಗೊಬ್ಬರ ಪೂರೈಕೆಯಾಗಿದೆ. ಜಿಲ್ಲೆಗೆ 27,174 ಮೆಟ್ರಿಕ್‌ ಟನ್‌ ರಸಗೊಬ್ಬರ ಅಗತ್ಯವಿತ್ತು. ಈ ಪೈಕಿ, 26,826 ಮೆಟ್ರಿಕ್‌ ಟನ್‌ ರಸಗೊಬ್ಬರ ಪೂರೈಕೆಯಾಗಿದೆ. ಎಂಒಪಿಯು ಬಫರ್‌ ಸ್ಟಾಕ್‌ ಇದ್ದ ಕಾರಣ ಸ್ವಲ್ಪ ಕಡಿಮೆ ತರಿಸಲಾಗಿತ್ತು ಎಂದು ಹೇಳಿದರು.

‘ಜುಲೈ ತಿಂಗಳಲ್ಲಿ, ಯೂರಿಯಾ 5 ಸಾವಿರ ಮೆಟ್ರಿಕ್‌ ಟನ್, ಡಿ.ಎ.ಪಿ 2,700 ಮೆಟ್ರಿಕ್‌ ಟನ್‌, ಎಂಒಪಿ 1,100 ಹಾಗೂ ಎನ್‌ಪಿಕೆ 3,900 ಮೆಟ್ರಿಕ್‌ ಟನ್‌ ಬೇಡಿಕೆ ಇದೆ. ಅದರಲ್ಲಿ 1,200 ಮೆಟ್ರಿಕ್‌ ಟನ್‌ ಯೂರಿಯಾ ಪೂರೈಕೆಯಾಗಿದೆ. ರೈತರು ರಸಗೊಬ್ಬರ ಕೊಳ್ಳುವಾಗ ನಿರ್ದಿಷ್ಟ ಬ್ರಾಂಡ್‌ಗಳಿಗೆ ಜೋತು ಬೀಳಬಾರದು’ ಎಂದು ಅವರು ಮನವಿ
ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT