ಬದುಕಿಗೆ ಸುವಾಸನೆ ನೀಡಿದ ಜಾಸ್ಮಿನ್‌, ಗುಲಾಬಿ

ಶುಕ್ರವಾರ, ಜೂನ್ 21, 2019
22 °C
ಅರ್ಧ ಎಕರೆ ಭೂಮಿಯಲ್ಲೇ ಸಾಧನೆ ಮಾಡಿದ ಹನುಮಂತಪ್ಪ

ಬದುಕಿಗೆ ಸುವಾಸನೆ ನೀಡಿದ ಜಾಸ್ಮಿನ್‌, ಗುಲಾಬಿ

Published:
Updated:
Prajavani

ದಾವಣಗೆರೆ: ಮನಸ್ಸಿದ್ದರೆ, ಅದಕ್ಕೆ ಸರಿಯಾದ ಲೆಕ್ಕಾಚಾರ ಇದ್ದರೆ ಅರ್ಧ ಎಕರೆ ಭೂಮಿಯಲ್ಲೂ ಕೃಷಿ ಮಾಡಿ ಆರಾಮದಾಯಕ ಬದುಕು ಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ ಕೊಂಡಜ್ಜಿ ಹನುಮಂತಪ್ಪ ಅವರ ಕೃಷಿ ಸಾಧನೆ.

ಮೂರು ದಶಕಗಳ ಕಾಲ ವಿವಿಧ ವಾಹನಗಳ ಚಾಲಕನಾಗಿ ಕೆಲಸ ಮಾಡಿದ್ದ ಹನುಮಂತಪ್ಪ 2009ರಲ್ಲಿ ಈ ವೃತ್ತಿ ಬಿಟ್ಟರು. ಹೆತ್ತವರ ಜಮೀನು ಪಾಲಾಗಿ ಇವರ ಪಾಲಿಗೆ ಅರ್ಧ ಎಕರೆ ಗದ್ದೆ ಸಿಕ್ಕಿತ್ತು. ಅದರಲ್ಲಿ ಐದು ವರ್ಷ ಮೆಕ್ಕೆಜೋಳ, ತರ್ಕಾರಿ ಮುಂತಾದವುಗಳನ್ನು ಮಾಡಿದರೂ ಹಾಕಿದ ಖರ್ಚಿಗೆ ಸರಿಯಾಗುತ್ತಿತ್ತು. ಒಂದೆರಡು ವರ್ಷ ಬೇರೆಯವರಿಗೆ ಕೃಷಿ ಮಾಡಲು ಬಿಟ್ಟಿದ್ದರು. ಯಾವುದೇ ಪ್ರಯೋಜನವಾಗಲಿಲ್ಲ. ಅರ್ಧ ಎಕರೆ ಇಟ್ಟುಕೊಂಡು ಸಾಂಪ್ರದಾಯಿಕ ಕೃಷಿಯಿಂದ ಜೀವನ ಸಾಗಿಸುವುದು ಕಷ್ಟ ಎಂದು ತಿಳಿದ ಹನುಮಂತಪ್ಪ ವಾಣಿಜ್ಯ ಬೆಳೆಯಾಗಿ ಹೂವು ಬೆಳೆಯಲು ನಿರ್ಧರಿಸಿದರು.

2014ರಲ್ಲಿ ಕಾಲು ಎಕರೆ (25 ಸೆಂಟ್ಸ್‌ ಅಥವಾ 10 ಗುಂಟೆ) ಜಾಗದಲ್ಲಿ ವೈಟ್‌ ಜಾಸ್ಮಿನ್‌ (ಕಾಕಡ) ಹಾಕಿದ್ದರು. 5X5 ಅಡಿ ಅಂತರದ ಹಾಗೆ 400 ಗಿಡ ನೆಟ್ಟಿದ್ದರು. ಒಂದು ವರ್ಷ ಕಳೆದ ಮೇಲೆ ಮೊಗ್ಗು ಮೂಡಿ ಹೂವು ಅರಳ ತೊಡಗಿತು. ಈಗ ಕಾಲು ಎಕರೆ ಪ್ರದೇಶದಲ್ಲಿ ವರ್ಷಕ್ಕೆ ₹ 2 ಲಕ್ಷ ಮೌಲ್ಯದ ಹೂವು ಸಿಗುತ್ತದೆ. ಅದರಲ್ಲಿ ಸುಮಾರು ₹ 70 ಸಾವಿರದಷ್ಟು ವೆಚ್ಚಕ್ಕೆ ಹೋಗುತ್ತದೆ.

ವೈಟ್‌ ಜಾಸ್ಮಿನ್‌ ಬೆಳೆಯುವುದು ಸುಲಭ. ₹ 2ಕ್ಕೆ ಒಂದು ಗಿಡವೂ ಸಿಗುತ್ತದೆ. ಒಮ್ಮೆ ಗಿಡ ಹಾಕಿದರೆ 25 ವರ್ಷ ಹೂವು ಕೊಡುತ್ತದೆ. ವರ್ಷದ ಆರೇಳು ತಿಂಗಳು ಹೂವು ಬರುತ್ತದೆ. ಅದರಲ್ಲೂ ನವೆಂಬರ್‌, ಡಿಸೆಂಬರ್‌ ಎರಡು ತಿಂಗಳು ಅತಿಯಾಗಿ ಹೂವು ಬರುತ್ತವೆ. ದಿನಕ್ಕೆ 25 ಕೆ.ಜಿ. ಸಿಗುತ್ತದೆ. ನಾಲ್ಕು ವರ್ಷಗಳಿಗೊಮ್ಮೆ ಕಟ್ಟಿಂಗ್‌ ಮಾಡಿದರೆ ಆಯಿತು. ಆದರೆ ಹೂವು ಕೊಯ್ಯಲು ಹೆಚ್ಚು ಕಾರ್ಮಿಕರು ಬೇಕಾಗುತ್ತಾರೆ. ಯಾಕೆಂದರೆ ಒಬ್ಬರಿಗೆ ಮೂರರಿಂದ ನಾಲ್ಕು ಕೆ.ಜಿ. ಹೂವು ಅಷ್ಟೇ ಕೊಯ್ಯಲು ಸಾಧ್ಯ. ಹೂವು ಒಂದು ದಿನ ಕೊಯ್ಯುವುದು ಬಾಕಿಯಾದರೆ ಮರುದಿನಕ್ಕೆ ಅವು ಪೂರ್ತಿ ಅರಳಿ ಬಿಡುತ್ತವೆ ಎನ್ನುತ್ತಾರೆ ಹನುಮಂತಪ್ಪ.

ಉಳಿದ ಕಾಲು ಎಕರೆ ಪ್ರದೇಶದಲ್ಲಿ ಕಳೆದ ವರ್ಷ ಸೆಪ್ಟೆಂಬರ್‌ 14ರಂದು ರೆಡ್‌ ಮೆರಾಬಲ್‌ ಜಾತಿಯ ಗುಲಾಬಿ ಹಾಕಿದ್ದಾರೆ. 4X4 ಅಡಿ ಅಂತರ ಇಟ್ಟುಕೊಂಡು 500 ಗಿಡ ನೆಟ್ಟಿದ್ದಾರೆ.

ಗುಲಾಬಿಗೆ ಆರಂಭದ ಖರ್ಚು ಜಾಸ್ತಿ. ಒಂದು ಗಿಡಕ್ಕೆ ₹ 22 ನೀಡಬೇಕು. ಹಾಗಾಗಿ ಅದಕ್ಕೆ ₹ 20 ಸಾವಿರಕ್ಕೂ ಅಧಿಕ ಖರ್ಚು ಮಾಡಬೇಕಾಗುತ್ತದೆ. ನೆಟ್ಟ ನಾಲ್ಕು ತಿಂಗಳಲ್ಲೇ ಹೂ ಬರಲು ಆರಂಭಗೊಳ್ಳುತ್ತದೆ. ಮೊದಲ ವರ್ಷ ಇಳುವರಿಯೂ ಕಡಿಮೆ ಇರುತ್ತದೆ. ಖರ್ಚು ತೂಗಿಸಲು ಸರಿಯಾಗುವಷ್ಟು ಮಾತ್ರ ಬರುತ್ತದೆ. ಆದರೆ ಎರಡನೇ ವರ್ಷದಿಂದ ಖರ್ಚು ಕಡಿಮೆ. ಆದಾಯ ಹೆಚ್ಚು ಎಂದು ಹನುಮಂತಪ್ಪ ಪ್ರಜಾವಾಣಿಗೆ ವಿವರಿಸಿದರು.

ಇದು ಜಾಸ್ಮಿನ್‌ನಂತೆ ವರ್ಷಕ್ಕೆ ಆರೇಳು ತಿಂಗಳು ಇರುವುದಲ್ಲ. ವರ್ಷ ಪೂರ್ತಿ ಬೆಳೆಯುತ್ತದೆ. ಜನವರಿಯಿಂದ ಜೂನ್‌ ವರೆಗೆ ಇಳುವರಿ ಕಡಿಮೆ. ಉಳಿದ ತಿಂಗಳುಗಳಲ್ಲಿ ಇಳುವರಿ ಹೆಚ್ಚಿರುತ್ತದೆ. ಅಲ್ಲದೇ ಕಾಲು ಎಕರೆ ಅಲ್ಲ, ಅರ್ಧ ಎಕರೆ ಇದ್ದರೂ ಒಬ್ಬರೇ ನಿರ್ವಹಣೆ ಮಾಡಲು ಸಾಧ್ಯ ಎನ್ನುತ್ತಾರೆ ಅವರು.

ಜಾಸ್ಮಿನ್‌ಗೆ ಕೆ.ಜಿ.ಗೆ ₹ 140, ಗುಲಾಬಿ ಕೆ.ಜಿ.ಗೆ ₹ 60 ಬೆಲೆ ನಿಗದಿ ಮಾಡಿ ಒಂದೇ ಅಂಗಡಿಯವರಿಗೆ ನೀಡುತ್ತಿದ್ದೇನೆ. ಇದರಿಂದ ಮಾರುಕಟ್ಟೆ ಏರುಪೇರು ಆದರೆ ನನಗೆ ತೊಂದರೆ ಆಗುವುದಿಲ್ಲ. ಹಬ್ಬ ಬಂದಾಗ ಅವರಿಗೆ ಸ್ವಲ್ಪ ಲಾಭ ಜಾಸ್ತಿಯಾಗುತ್ತದೆ. ಆದರೆ ರೈತರಿಗೆ ತಲೆ ಬಿಸಿ ಇರುವುದಿಲ್ಲ. ಒಂದು ವರ್ಷಕ್ಕೆ ಒಂದೇ ದರ ಇರುತ್ತದೆ ಎಂದು ಮಾರುಕಟ್ಟೆಯ ಬಗ್ಗೆ ವಿವರ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !