ಭಾನುವಾರ, ಏಪ್ರಿಲ್ 5, 2020
19 °C

ಮಲಬಾರ್‌ ಮಲ್ಲಿಗೆಯ ಪರಿಮಳ

ಧರ್ಮಾನಂದ ಶಿರ್ವ Updated:

ಅಕ್ಷರ ಗಾತ್ರ : | |

Prajavani

ಉಡುಪಿ ಜಿಲ್ಲೆ ಶಿರ್ವ ಗ್ರಾಮದ ಮಂಚಕಲ್‌ನಿಂದ ಬೆಳ್ಮಣ್ಣು ರಸ್ತೆಯಲ್ಲಿ ನಡುವೆ ಸೂಡ ಗ್ರಾಮಕ್ಕೆ ಹೊರಳುವ ಹಾದಿಯಲ್ಲಿ ಒಂದು ಕಿ.ಮೀ. ಸಾಗಿದರೆ ರಿಚರ್ಡ್ ಅಶೋಕ್ ಕ್ಯಾಸ್ಟಲಿನೊ – ವಿದ್ಯಾ ದಂಪತಿ ಮನೆ ಇದೆ. ಮನೆಯ ಮಗ್ಗುಲಲ್ಲಿ ಸುಮಾರು ಹದಿನೈದು ಸೆಂಟ್ಸ್ ಜಾಗದಲ್ಲಿ ವಿವಿಧ ಬಗೆಯ ಮಲ್ಲಿಗೆ ಗಿಡಗಳನ್ನು ಬೆಳೆದಿದ್ದಾರೆ. ಆ ಮಲ್ಲಿಗೆ ಹೂವುಗಳ ಸಮೂಹದಲ್ಲಿ ಒಂದು ತಾಕಿನಲ್ಲಿ ಬೆಳೆದಿದ್ದ ಮಲ್ಲಿಗೆ ತಳಿ ನನ್ನನ್ನು ಬಹು ಆಕರ್ಷಿಸಿತು. 

ಆ ಮಲ್ಲಿಗೆ ಹೆಸರು ‘ಏಂಜಲ್‌ವಿಂಗ್‌’. ಇದು ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಷಯ ತಜ್ಞ ಚೈತನ್ಯ ಅವರು ಹೇಳಿದ್ದು. ಸ್ಥಳೀಯವಾಗಿ ‘ಮಲಬಾರ್‌ ಮಲ್ಲಿಗೆ’ ಎನ್ನುತ್ತಾರೆ. ರಿಚರ್ಡ್‌ ಅಶೋಕ್‌–ವಿದ್ಯಾ ದಂಪತಿ, ಈ ಹೊಸ ತಳಿಯ 50 ಗಿಡಗಳನ್ನು ಬೆಳೆದಿದ್ದಾರೆ. ಮಲ್ಲಿಗೆಯ ಗಿಡಗಳಿಗಿಂತ ಇದರ ಟೊಂಗೆಗಳು ಗಟ್ಟಿ. ಎಲೆಗಳು ಗಾಢ ಹಸಿರು, ಬೇರೆ ಮಲ್ಲಿಗೆ ಗಿಡಗಳ ಎಲೆಗಿಂತ ತುಸು ದೊಡ್ದದಿದ್ದು ದಪ್ಪವಿದೆ. ನಾನು ಭೇಟಿ ನೀಡುವ ವೇಳೆಗೆ ಪ್ರತಿ ಗಿಡಗಳ ರೆಂಬೆಯ ಕೊನೆಯಲ್ಲಿ ಗೊಂಚಲು ತುಂಬ ತಿಳಿಗುಲಾಬಿ ಬಣ್ಣದ ಮಲ್ಲಿಗೆಯ ಮೊಗ್ಗುಗಳು ಇಣುಕುತ್ತಿದ್ದವು. ಬಣ್ಣದಲ್ಲಿ ಜಾಜಿಯನ್ನು ಹೋಲುತ್ತಿದ್ದರೂ ಗಾತ್ರ ಮತ್ತು ಪರಿಮಳದಲ್ಲಿ ಭಿನ್ನವಾಗಿದ್ದವು.

ಸಾಮಾನ್ಯವಾಗಿ ಆ ಭಾಗದಲ್ಲಿ ಶಂಕರಪುರ ಮಲ್ಲಿಗೆಯನ್ನೇ ಹೆಚ್ಚು ಬೆಳೆಯುತ್ತಾರೆ. ಇದರ ನಡುವೆ ಈ ದಂಪತಿ ಮೂರು ವರ್ಷಗಳಿಂದ ಈ ತಳಿ ಬೆಳೆಸುತ್ತಿದ್ದಾರೆ. ಸದ್ಯಕ್ಕೆ ಈ ಭಾಗದಲ್ಲಿ ಇನ್ನೂ ಯಾರೂ ಈ ತಳಿ ಬೆಳೆದಂತೆ ಕಾಣುತ್ತಿಲ್ಲ.


ಹೀಗಿದೆ ಮಲಬಾರ್ ಮಲ್ಲಿಗೆ ಹೂವು

‘ಶಂಕರಪುರ ಮಲ್ಲಿಗೆ ಸಸಿ ತರಲು ನರ್ಸರಿಗೆ ಹೋದೆವು. ಅಲ್ಲಿ, ಮಲಬಾರ್ ತಳಿ ಮಲ್ಲಿಗೆಯ ವಿಶೇಷತೆ ಕೇಳಿದ ನಂತರ, ಆ ಸಸಿಗಳನ್ನು ಮನೆಗೆ ತಂದೆವು’ –ಹೊಸ ತಳಿ ಜತೆಗೆ ಬೆಸೆದುಕೊಂಡ ನಂಟನ್ನು ವಿದ್ಯಾ ಉಲ್ಲೇಖಿಸಿದರು. ಸಸಿಗಳನ್ನು ನಾಟಿ ಮಾಡಿದ ಎರಡು ತಿಂಗಳಲ್ಲಿ ಮೊಗ್ಗು ಬಿಡಲು ಆರಂಭಿಸಿದವು. ಮೊಗ್ಗುಗಳ ಗಾತ್ರ, ಬಣ್ಣ, ಇಳುವರಿ ಪ್ರಮಾಣದಲ್ಲಿ ಶಂಕರಪುರ ಮಲ್ಲಿಗೆಯನ್ನು ಮೀರಿಸುವಂತಿತ್ತು.  ಹೀಗಾಗಿ, ಮತ್ತೊಂದಿಷ್ಟು ಗಿಡಗಳನ್ನು ತಂದು ನೆಟ್ಟರು. ‘ಸದ್ಯ ನಮ್ಮ ಮನೆ ಅಂಗಳದಲ್ಲಿ ಒಂದು ವರ್ಷದಿಂದ ಹಿಡಿದು ಮೂರು ವರ್ಷಗಳಷ್ಟು ವಯಸ್ಸಿನ ಮಲ್ಲಿಗೆ ಗಿಡಗಳಿವೆ’ ಎಂದು ಮಲ್ಲಿಗೆ ತೋಟ ವಿಸ್ತರಿಸಿದ ಬಗೆಯನ್ನು ವಿವರಿಸಿದರು ವಿದ್ಯಾ.

ಇವು ಶಂಕರಪುರ ಮಲ್ಲಿಗೆ ಗಿಡಗಳಷ್ಟು ನಾಜೂಕಾಗಿಲ್ಲ. ಅದರಷ್ಟು ಆರೈಕೆಯೂ ಬೇಕಿಲ್ಲ. ಆದರೆ ಹೆಚ್ಚಿಗೆ ನೀರನ್ನು ಬೇಡುತ್ತದೆ. ಹಾಗಾಗಿ ಗಿಡದ ಬುಡದಲ್ಲಿ ತೇವ ಆರದಂತೆ ನೋಡಿಕೊಳ್ಳಬೇಕು. ಮರಳು ಮಿಶ್ರಿತ ಕೆಂಪುಮಣ್ಣಿನಲ್ಲಿ ಇದು ಸೊಂಪಾಗಿ ಬೆಳೆಯುತ್ತದೆ. ಗಿಡದಿಂದ ಗಿಡಕ್ಕೆ ಐದು ಅಡಿಗಳ ಅಂತರವಿರಬೇಕು. ಹದಿನೈದು ದಿನಗಳಿಗೊಮ್ಮೆ ಸೆಗಣಿ ನೀರು, ಸಾವಯವ ಗೊಬ್ಬರ ಮತ್ತು ವರ್ಷಕ್ಕೆರಡು ಬಾರಿ ಹಟ್ಟಿ ಗೊಬ್ಬರ ಸಾಕು. ಇದು ನೀರು ಹೆಚ್ಚು ಕೇಳುವ ಬೆಳೆ. ಹೀಗಾಗಿ ಗಿಡದ ಬುಡದಲ್ಲಿ ತೇವ ಆರದಂತೆ ನೋಡಿಕೊಳ್ಳಬೇಕು. ಈ ತಳಿಯ ಮಲ್ಲಿಗೆ ಗಿಡಗಳಿಗೆ ಬಿಳಿನೊಣ ಮತ್ತು ಮೊಗ್ಗು ಕೊರೆಯುವ ಹುಳಗಳ ಬಾಧೆ ಕಾಣಿಸುವುದುಂಟು. ಅದಕ್ಕೆ ಎಕೋ ಮತ್ತು ಎಕಲಕ್ಸ್ ಕ್ರಿಮಿನಾಶಕವನ್ನು ಕಡಿಮೆ ಪ್ರಮಾಣದಲ್ಲಿ ಸಿಂಪಡಿಸಿದರೆ ಸಾಕು ಎನ್ನುತ್ತಾರೆ ದಂಪತಿ.

‘ನಮ್ಮ ಕೊಳವೆಬಾವಿಯ ನೀರು ಮಲ್ಲಿಗೆ ಕೃಷಿಗೆ ಸಾಕಾಗುತ್ತದೆ. ಗಿಡಗಳ ಬುಡಗಳಿಗೆ ನಿಯಮಿತವಾಗಿ ನೀರು ಹನಿಸುತ್ತಾ ತೇವ ಕಾಪಾಡುತ್ತೇವೆ. ಅದೇ ರೀತಿ ಮಳೆಗಾಲದಲ್ಲಿ ಗಿಡದ ಬುಡದಲ್ಲಿ ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳುತ್ತೇವೆ. ಅದಕ್ಕಾಗಿ ಹೆಚ್ಚಾದ ನೀರು ಹರಿದು ಹೋಗಲು ಬಸಿಗಾಲುವೆ ಮಾಡಿದ್ದೇವೆ’ ಎಂದು ಸಣ್ಣ ಸಣ್ಣ ವಿವರಗಳನ್ನೂ ಎಳೆ ಎಳೆಯಾಗಿ ವಿವರಿಸಿದರು ರಿಚರ್ಡ್‌ ಅಶೋಕ್. ಇವರ ಮಲ್ಲಿಗೆ ತೋಟದಲ್ಲಿ ಮಲಬಾರ್ ಮಲ್ಲಿಗೆಯ ಜತೆಗೆ ಭಟ್ಕಳ್ ಮಲ್ಲಿಗೆ, ಶಂಕರಪುರ ಮಲ್ಲಿಗೆ, ಸೂಜಿಮಲ್ಲಿಗೆ, ಮೈಸೂರುಮಲ್ಲಿಗೆ, ಜಾಜಿ, ಶ್ರೀಲಂಕಾಮಲ್ಲಿಗೆ, ಕಾಕಡ ಜಾತಿಯ ಮಲ್ಲಿಗೆಯ ತಳಿಗಳೂ ಹೂ ಬಿಡುತ್ತಿವೆ.  


ಮಲಬಾರ್ ಮಲ್ಲಿಗೆ ಹಾರ ಕಟ್ಟುತ್ತಿರುವುದು

‘ಸದ್ಯಕ್ಕೆ ಇಳುವರಿ ಪರವಾಗಿಲ್ಲ’
ಮಲಬಾರ್ ಮಲ್ಲಿಗೆಯ ಇಳುವರಿ ಬೇರೆ ಜಾತಿಯ ಮಲ್ಲಿಗೆ ಇಳುವರಿಗಿಂತ ಹೆಚ್ಚು. ಗಿಡದ ತುದಿಯಲ್ಲಿರುವ ಗೊಂಚಲು ಮೊಗ್ಗುಗಳನ್ನು ಗಮನಿಸಿದರೆ ಈ ಮಾತು ನಿಜ ಎನಿಸುತ್ತದೆ. ಇವರ ಮನೆಯಲ್ಲಿರುವ 50 ಗಿಡಗಳಿಂದ ಸುಮಾರು 45 ಚೆಂಡು ಹೂವನ್ನು ಇವರು ಮಾರಾಟ ಮಾಡುತ್ತಾರೆ. ಒಂದು ‘ಚೆಂಡು’ ಅಂದರೆ 800 ಮೊಗ್ಗುಗಳ ಮಾಲೆ. ಇಂತಹ ನಾಲ್ಕು ಚೆಂಡುಗಳು ಸೇರಿ ಒಂದು ‘ಅಟ್ಟಿ’ ಆಗುತ್ತದೆ. ಹೂವಿನ ಬೆಲೆ ಅಟ್ಟಿಯ ಲೆಕ್ಕದಲ್ಲಿ ಹೇಳುತ್ತಾರೆ.

ಶಂಕರಪುರ ಮಲ್ಲಿಗೆಯ ನಿತ್ಯ ಬೇಡಿಕೆ, ಹಬ್ಬ, ಶುಭಕಾರ್ಯಗಳ ಆಧಾರದ ಮೇಲೆ ದರ, ಮಾರುಕಟ್ಟೆ ನಿಗದಿಯಾಗುತ್ತದೆ. ಆದರೆ ಮಲಬಾರ್ ಮಲ್ಲಿಗೆ ಈ ಕ್ಷೇತ್ರಕ್ಕೆ ಹೊಸ ತಳಿಯಾಗಿರುವುದರಿಂದ ಅಷ್ಟೆಲ್ಲ ಬೆಲೆ ಸಿಗುವುದಿಲ್ಲ. ಬೇಡಿಕೆಯೂ ಕಡಿಮೆ. ಆದರೆ, ರಿಚರ್ಡ್‌ ಅಶೋಕ್ ಅವರು ವರ್ಷದ ಜೂನ್‌ನಿಂದ ಡಿಸೆಂಬರ್‌ವರೆಗೆ ಜಾಜಿ ಮಲ್ಲಿಗೆಯ ಬೆಲೆಯಲ್ಲಿ ಈ ಹೂವು ಮಾರಾಟ ಮಾಡುತ್ತಿದ್ದಾರೆ. ಇನ್ನು ಆರು ತಿಂಗಳು ನಿತ್ಯ ಮಾರುಕಟ್ಟೆಯಲ್ಲಿ ಎಷ್ಟು ದರ ಸಿಗುತ್ತದೋ ಅಷ್ಟಕ್ಕೇ ಮಾರಾಟ. ‘ಮಲಬಾರ್ ಮಲ್ಲಿಗೆಯು ಒಂದು ಅಟ್ಟಿಗೆ ₹250 ಲೆಕ್ಕದಲ್ಲಿ ನಿತ್ಯ ಸುಮಾರು ₹2800 ಹೂವು ಮಾರಾಟವಾಗುತ್ತಿದೆ’ ಎನ್ನುತ್ತಾರೆ ಈ ದಂಪತಿ. ‘ಎಲ್ಲ ಖರ್ಚು ತೆಗೆದು ಲೆಕ್ಕ ಹಾಕಿದರೂ ಐವತ್ತು ಗಿಡಗಳಿಂದ ಒಂದು ಸಂಸಾರವನ್ನು ಅಚ್ಚುಕಟ್ಟಾಗಿ ನಡೆಸಬಹುದು’ ಎಂದು ಹೇಳುವಾಗ ಅವರ ಮಾತಿನಲ್ಲಿ ಖುಷಿಯಿದ್ದದ್ದನ್ನು ಕಂಡೆ.

ಮೊದಲು ಐವತ್ತು ಮೊಗ್ಗುಗಳಿಂದ ಹಿಡಿದು ಇತ್ತೀಚಿನವರೆಗೆ ಎಲ್ಲವನ್ನೂ ‘ಹೂವಿನ ಕಟ್ಟೆ’ಗೆ ಮಾರಾಟ ಮಾಡುತ್ತಿದ್ದರು. ಈಗ ಮನೆಯ ಸಮೀಪ ದಿಂದ ಓಡಾಡುವ ಬಸ್ಸಿನ ಮೂಲಕ ದೂರದ ಕಿನ್ನಿಗೋಳಿಗೆ ಕಳುಹಿಸುತ್ತಾರೆ. ಬೆಳಿಗ್ಗೆ  ಹತ್ತು ಗಂಟೆಗೆ ಮೊದಲ ಕಂತು ರವಾನೆಯಾದರೆ ಉಳಿದಿದ್ದನ್ನು 12 ಗಂಟೆಗೆ ಕಳುಹಿಸುತ್ತಾರೆ. ಹೀಗೆ ಮಾರಾಟದ ಚಿಂತೆ ಅವರನ್ನು ಇದುವರೆಗೆ ಕಾಡಿಲ್ಲ. ವ್ಯವಹಾರವೆಲ್ಲ ನಗದಿನಲ್ಲಿ ನಡೆಯುವುದರಿಂದ ಯಾವುದೇ ಕಿರಿಕಿರಿಯಿಲ್ಲ. 

ಇನ್ನು ಮೊಗ್ಗು ಬಿಡಿಸಲು, ಮಾಲೆ ಕಟ್ಟಲು ಐದಾರು ಮಂದಿ ಕಾರ್ಮಿಕರಿದ್ದಾರೆ. ಬಿಡಿಸಿದ ಮೊಗ್ಗುಗಳನ್ನು ಹತ್ತಿರದ ಮನೆಗಳಿಗೆ ಕಳುಹಿಸಿ ಅವರಿಂದ ಮಾಲೆಯನ್ನು ಕಟ್ಟಿಸುತ್ತಾರೆ. ಹೀಗೆ ಮಾಲೆ ಕಟ್ಟುವವರಿಗೆ ಒಂದು ಚೆಂಡಿಗೆ ₹10 ದಿನಗೂಲಿಯೂ ಸಿಗುತ್ತದೆ. ಸ್ವಂತ ಕೃಷಿಯ ಜೊತೆಗೆ ಸುತ್ತಲಿನ ಕೆಲವರಿಗೆ ದುಡಿಯುವ ಅವಕಾಶವನ್ನೂ ಇದು ಕಲ್ಪಿಸಿದೆ. ಮಲಬಾರ್ ಮಲ್ಲಿಗೆ ತಳಿ ಕುರಿತ ಮಾಹಿತಿಗಾಗಿ ಸಂಪರ್ಕ ಸಂಖ್ಯೆ – 9481970967.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು