ಭಾನುವಾರ, ಏಪ್ರಿಲ್ 11, 2021
25 °C
ಉದ್ಯೋಗ ತೊರೆದು ಕೃಷಿ ನಡೆಸುತ್ತಿರುವ ಮೆಕ್ಯಾನಿಕಲ್ ಎಂಜಿನಿಯರ್

ಅಣಬೆ ಕೃಷಿ: ಮೆಕ್ಯಾನಿಕಲ್ ಎಂಜಿನಿಯರ್ ಕಿರಣ್‌ಗೆ ಬಲು ಖುಷಿ

ಬಾಲುಮಚ್ಚೇರಿ ಕಡೂರು Updated:

ಅಕ್ಷರ ಗಾತ್ರ : | |

ಕಡೂರು: ಪಟ್ಟಣದ ಸಮೀಪವಿರುವ ವಿ.ಎಲ್. ನಗರದ ಕಿರಣ್ ನಾಯ್ಕ ಓದಿದ್ದು ಮೆಕ್ಯಾನಿಕಲ್ ಎಂಜಿನಿಯರಿಂಗ್. ಕೈತುಂಬಾ ಸಂಬಳ ಪಡೆಯುವ ಅವಕಾಶಗಳು ಇದ್ದರೂ ಮನಸ್ಸು ತುಡಿಯುತ್ತಿದ್ದುದು ಹುಟ್ಟೂರಿನಲ್ಲಿ ಕೃಷಿಗೆ ಪೂರಕವಾಗಿ ಏನಾದರೂ ಮಾಡಬೇಕು ಎಂಬುದರ ಕಡೆಗೆ. ಆ ನಿಟ್ಟಿನಲ್ಲಿ ಚಿಂತನೆ ನಡೆಸಿದಾಗ ಇವರನ್ನು ಆಕರ್ಷಿಸಿದ್ದು ಅಣಬೆ ಕೃಷಿ. ಅದರಲ್ಲೇ ಬದುಕು ಕಟ್ಟಿಕೊಂಡ ಕಿರಣ್, ಅಣಬೆ ಕೃಷಿಯಲ್ಲಿ ಯಶಸ್ಸು ಪಡೆದು ಇತರರಿಗೆ ಮಾದರಿಯಾಗಿದ್ದಾರೆ.

 ಕಿರಣ್ ಮೊದಲು ಅಣಬೆ ಕೃಷಿಯ ಸಾಧಕ–ಬಾಧಕಗಳನ್ನು ಅಧ್ಯಯನ ಮಾಡಿದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇದ್ದ ಸ್ವಂತ ಜಾಗದಲ್ಲಿ 25×50 ಅಳತೆಯಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿ ಶೆಡ್ ನಿರ್ಮಿಸಿದರು. ಅಣಬೆ ಬೆಳೆಗೆ ಅಗತ್ಯವಾದ ಭತ್ತದ ಹುಲ್ಲು ಸಂಗ್ರಹಿಸಿ, ಶೆಡ್‌ನಲ್ಲಿ ವೈಜ್ಞಾನಿಕವಾಗಿ ಅಣಬೆ ಕೃಷಿ ಆರಂಭಿಸಿದರು.

 ಸಣ್ಣಮಟ್ಟದಲ್ಲಿ ಆರಂಭಿಸಿದ ಅಣಬೆ ಕೃಷಿ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಪ್ರತಿ ತಿಂಗಳಿಗೆ 40ರಿಂದ 50 ಕೆ‌.ಜಿ ಅಣಬೆ ಬೀಜ ತರಿಸುತ್ತಾರೆ. ವೈಟ್ ಓಯಿಸ್ಟರ್ (ಚಿಪ್ಪಣಬೆ) ಪ್ರಭೇದದ ಒಂದು ಕೆ.ಜಿ ಅಣಬೆ ಬೀಜಕ್ಕೆ ₹ 70ರಿಂದ 150 ದರವಿದೆ. ಒಂದು ಕೆ.ಜಿ. ಬೀಜದಲ್ಲಿ ಕನಿಷ್ಠ ಎಂಟು, ಗರಿಷ್ಠ 10 ಕೆ.ಜಿ ಹಸಿ ಅಣಬೆ ದೊರೆಯುತ್ತದೆ. ಕೊಯ್ದ ಅಣಬೆಗಳನ್ನು ಪೇಪರ್ ಬ್ಯಾಗ್‌ನಲ್ಲಿ ಪ್ಯಾಕ್ ಮಾಡಿ ಮಾರಾಟಕ್ಕೆ ಸಿದ್ಧಪಡಿಸುತ್ತಾರೆ. ಒಂದು ಕೆ.ಜಿ ಅಣಬೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ₹ 250 ಬೆಲೆಯಿದೆ. ಒಣಗಿಸಿದ ಅಣಬೆಗೆ ₹ 3000 ತನಕ ಬೆಲೆಯಿದೆ. ಹೊರ ಜಿಲ್ಲೆಗಳಿಗೆ ಮತ್ತು ಕೆಲ ಅರಬ್ ದೇಶಗಳಿಗೆ ಅಣಬೆ ರಫ್ತು ಮಾಡುತ್ತಿರುವ ಕಿರಣ್, ರೈತರು ಗುಣಮಟ್ಟದ ಅಣಬೆ ಬೆಳೆದರೆ, ಅವುಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಸಿ ದೊಡ್ಡ ಮಟ್ಟದಲ್ಲಿ ರಫ್ತು ಉದ್ಯಮ ನಡೆಸುವ  ಆಶಯ ಹೊಂದಿದ್ದಾರೆ.

ಅಣಬೆ ಬಹು ಪೌಷ್ಟಿಕ ಆಹಾರ. ರೈತರು ಇರುವಷ್ಟು ಜಾಗದಲ್ಲೇ ಈ ಕೃಷಿ ಮಾಡಿ, ಉಪ ಆದಾಯ ಪಡೆಯಬಹುದು. ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅಣಬೆ ಕೃಷಿ ಸುಲಭದ ದಾರಿ ಎನ್ನುವ ಕಿರಣ್ ನಾಯ್ಕ ಅವರ ಪತ್ನಿ ಯಶಸ್ವಿನಿ ಸಹ ಅಣಬೆ ಕೃಷಿಗೆ ಕೈಜೋಡಿಸಿದ್ದಾರೆ. ಅವರು ಸಹ ಮೆಕ್ಯಾನಿಕಲ್ ಡಿಪ್ಲೊಮಾ ಪದವೀಧರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು