ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಆಧುನಿಕತೆಯ ಫಲ: ಕೃಷಿ ಕುಟುಂಬಕ್ಕೆ ಸಿಗುತ್ತಿಲ್ಲ ಹೆಣ್ಣು

Last Updated 14 ಸೆಪ್ಟೆಂಬರ್ 2020, 9:04 IST
ಅಕ್ಷರ ಗಾತ್ರ

‘ನನ್ನ ಮಗ ಯಾವ ಸಾಫ್ಟ್‌ವೇರ್ ಎಂಜಿನಿಯರ್‌ಗೂ ಕಡಿಮೆ ಇಲ್ಲ. ವರ್ಷಕ್ಕೆ ಏನಿಲ್ಲ ಅಂದರೂ ₹10 ಲಕ್ಷದಿಂದ ₹15 ಲಕ್ಷ ಸಂಪಾದಿಸುತ್ತಾನೆ. ₹50 ಲಕ್ಷ ಖರ್ಚು ಮಾಡಿ ಮನೆ ಕಟ್ಟಿಸಿದ್ದಾನೆ. ಆದರೆ, ರೈತ ಎಂಬ‌ ಏಕೈಕ ಕಾರಣದಿಂದ ಹೆಣ್ಣು ಕೊಡಲು ಪೋಷಕರು ಹಿಂದುಮುಂದು ನೋಡುತ್ತಾರೆ. ಕೃಷಿ ಮಾಡುವುದೇ ತಪ್ಪಾ? ಯುವಕರು ಕೃಷಿಯನ್ನು ತೊರೆದರೆ ದೇಶದ ಪರಿಸ್ಥಿತಿ ಏನಾಗಬಹುದು...’

ಇದು ಬಹುತೇಕ ರೈತಾಪಿ ಸಮುದಾಯವನ್ನು ಕಾಡುತ್ತಿರುವ ಆತಂಕ. ಹೆಣ್ಣು ಸಿಗುತ್ತಿಲ್ಲ ಎಂಬ ನೋವು ಒಂದೆಡೆಯಾದರೆ, ಕೃಷಿ ಕ್ಷೇತ್ರದ ಭವಿಷ್ಯದ ಕುರಿತು ಆತಂಕ ಅವರ ಮನಸ್ಸಿನಲ್ಲಿದೆ.

ಕೃಷಿಯನ್ನು ನಂಬಿರುವ ಅನೇಕ ಯುವ ರೈತರದ್ದೂ ಇದೇ ಪರಿಸ್ಥಿತಿ. ಕಡಿಮೆ ಸಂಬಳವಿದ್ದರೂ ಪರವಾಗಿಲ್ಲ, ಅಳಿಯ ಆದವನು ನಗರದಲ್ಲೇ ದುಡಿಯುತ್ತಿರಬೇಕು,‌‌ ಮಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಪೋಷಕರ ಬಯಕೆ. ತಾವು ರೈತರಾದರೂ ತಮ್ಮ ಹೆಣ್ಣು ಮಕ್ಕಳನ್ನು ರೈತನಿಗೆ ಕೊಡಲು ಮನಸ್ಸು ಮಾಡುವವರ ಸಂಖ್ಯೆಯೂ ವಿರಳವಾಗಿದೆ ಎಂಬುದು ಬಹುತೇಕ ರೈತಾಪಿ ಕುಟುಂಬಿಕರನ್ನು ಮಾತನಾಡಿಸಿದಾಗ ಕೇಳಿಬಂದ ವಿಷಾದದ ಮಾತು.

ನಾಲ್ಕೆಕರೆ ತೋಟದಲ್ಲಿ ಟೊಮೆಟೊ, ಆಲೂಗಡ್ಡೆ, ಬೀನ್ಸ್, ಹಾಗಲಕಾಯಿ ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆದು, ಲಕ್ಷಾಂತರ ರೂ. ಆದಾಯವೂ ಬರುತ್ತಿದೆ. ಲಾಕ್‌ಡೌನ್ ಬಳಿಕ ಈಗ ಒಳ್ಳೆಯ ಬೆಲೆಯೂ ಇರುವುದರಿಂದ ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾರೆ ರೈತರು.ಹಾಗಂತ ಎಲ್ಲ ಬೆಳೆಗಳಲ್ಲೂ ಲಾಭವೇನೂ ಸಿಗುತ್ತಿಲ್ಲ ಎಂಬುದು ದಿಟವಾದರೂ, ಕೃಷಿಕ ವರ್ಗಕ್ಕೆ ಉತ್ತಮ ಮಟ್ಟದ ಜೀವನ ಸಾಗಿಸಿಕೊಂಡು ಹೋಗಲು ಯಾವುದೇ ಸಮಸ್ಯೆಯಂತೂ ಆಗುವುದಿಲ್ಲ.

‘ರೈತ ಎಂದರೆ ಕೇವಲವಾಗಿ ನೋಡುತ್ತಾರೆ’

‘ನಮ್ಮ ಕಾಲದಲ್ಲಿ ಕೃಷಿ ಕುಟುಂಬದವರಿಗೆ, ಅದರಲ್ಲೂ ಕೂಡು ಕುಟುಂಬಗಳಿಗೆ ಹೆಣ್ಣು ಕೊಡಲು ಮುಂದೆ ಬರುತ್ತಿದ್ದರು. ಆದರೆ, ಈಗ ರೈತ ಅಂದರೆ ಕೇವಲವಾಗಿ ನೋಡುತ್ತಾರೆ. ಕಾಲ ಸಿಕ್ಕಾಪಟ್ಟೆ ಬದಲಾಗಿದೆ. ಬಿಸಿಲಿನಲ್ಲಿ ಮೈ ಬಗ್ಗಿಸಿ ಕೆಲಸ ಮಾಡಲು ಬಹುತೇಕರು ಮನಸ್ಸು ಮಾಡುತ್ತಿಲ್ಲ. ರೈತನಿಗೆ ಮಗಳನ್ನು ಕೊಟ್ಟರೆ ತೋಟದಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದು ತಂದೆ- ತಾಯಿಗಳೇ ಯೋಚಿಸುತ್ತಾರೆ. ಇದು ತಪ್ಪಲ್ಲ. ಆದರೆ, ಪರಿಸ್ಥಿತಿ ಹೇಗೇ ಸಾಗುತ್ತಿದ್ದರೆ, ಕೃಷಿಯಲ್ಲಿ ಆಸಕ್ತಿ ಇರುವ‌ ಯುವಕರು ಈ ಕ್ಷೇತ್ರವನ್ನು ಬಿಟ್ಟು ಬೇರೆ ಕೆಲಸ ಹಿಡಿಯುತ್ತಾರೆ. ಮುಂದೆ ವ್ಯವಸಾಯ ಮಾಡುವವರ ಸಂಖ್ಯೆ ಕಡಿಮೆಯಾದರೆ, ಆಹಾರ‌ಧಾನ್ಯಗಳನ್ನು ಬೆಳೆಯುವವರು ಯಾರು? ಅನ್ನಾಹಾರಗಳು ಇಲ್ಲದೆ ಜನ ಕಷ್ಟ ಪಡುವ ದಿನಗಳು ದೂರವಿಲ್ಲ. ಈ ಬಗ್ಗೆ ಸರ್ಕಾರಗಳು, ಸಮಾಜದ ಜನ ಯೋಚಿಸಬೇಕಿದೆ ಎಂಬುದು ರೈತರ ಅಭಿಪ್ರಾಯ.

'ಚಿನ್ನ'ವಾದ ಟೊಮೆಟೊ

ಕೊರೊನಾ ಸೋಂಕು ಎಲ್ಲ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಕೃಷಿಯನ್ನೇ ಅವಲಂಬಿಸಿರುವ ರೈತರು ಲಾಕ್ ಡೌನ್ ಘೋಷಣೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಬೆಳೆದ ಫಸಲಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದರು. ಆದರೆ, ಈಗ ತರಕಾರಿಗಳ ಬೆಲೆ ಅದರಲ್ಲೂ ಟೊಮೆಟೊ ದರ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ ರೈತರಲ್ಲಿ ಹರ್ಷ ಮೂಡಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಟೊಮೆಟೊ ಬೆಳೆಯುವ ಕೋಲಾರ ಜಿಲ್ಲೆಯ ರೈತರ ಪಾಲಿಗಂತೂ ಈಗ ಶುಕ್ರದೆಸೆ. ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಪ್ರತಿದಿನ ಸಾವಿರಾರು ಬಾಕ್ಸ್ ಟೊಮೆಟೊ ಬರುತ್ತಿದೆ. 20 ಕೆ.ಜಿ. ಬಾಕ್ಸ್ 800 ರೂಪಾಯಿಯಿಂದ 900 ರೂಪಾಯಿವರೆಗೂ ಮಾರಾಟವಾಗುತ್ತಿದೆ. ಈಗ ಟೊಮೆಟೊ ಬೆಳೆದಿರುವವರು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT