ಮಂಗಳವಾರ, ಜನವರಿ 21, 2020
19 °C
300 ರೈತರಿಂದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ: ಜೀವಾಮೃತ ಬಳಕೆ

ನೈಸರ್ಗಿಕ ಕೃಷಿಯತ್ತ ಮುಂಗನಾಳ ರೈತರು

ಮನ್ಮಥಪ್ಪ ಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಔರಾದ್: ತಾಲ್ಲೂಕಿನ ಮುಂಗನಾಳ ಗ್ರಾಮದ ರೈತರು ಔಷಧ ಮತ್ತು ರಾಸಾಯನಿಕ ಗೊಬ್ಬರ ಬಳಕೆಯಿಂದ ಹೊರ ಬಂದು ನೈಸರ್ಗಿಕ ಕೃಷಿಯತ್ತ ಒಲವು ತೋರಿದ್ದಾರೆ.

ರೈತ ಗೋವಿಂದ ಇಂಗಳೆ, ವೀರಪ್ಪ ಮುದಾಳೆ ಅವರ ತಂಡವೊಂದು ತಾವು ಹಾಗೂ ತಮ್ಮ ಜತೆಗಿರುವ ರೈತರನ್ನು ನೈಸರ್ಗಿಕ ಕೃಷಿಯತ್ತ ಕರೆತರಲು ಪ್ರಯತ್ನ ನಡೆಸಿದ್ದಾರೆ. ಇವರ ಈ ಮಹತ್ವಾಕಾಂಕ್ಷೆ ಕಾರ್ಯಕ್ಕೆ ಕೃಷಿ ಇಲಾಖೆ ಬೆನ್ನೆಲುಬಾಗಿ ನಿಂತ ಪರಿಣಾಮ ತಾಲ್ಲೂಕಿನ 300 ರೈತರು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮೊದಲ ಹಂತದಲ್ಲಿ ಮುಂಗನಾಳ ಗ್ರಾಮದ 10 ಜನ ರೈತರು ತಲಾ 1 ಎಕರೆ ಜಮೀನಿನಲ್ಲಿ ನೈಸರ್ಗಿಕ ಕೃಷಿ ಆರಂಭಿಸಿದ್ದಾರೆ. ಆಯ್ದ ಈ ಜಮೀನಿನಲ್ಲಿ ರೈತರು ಸಂಪೂರ್ಣವಾಗಿ ಕ್ರಿಮಿನಾಶಕ ಮತ್ತು ರಾಸಾಯನಿಕ ಗೊಬ್ಬರ ಬಳಕೆ ನಿಷೇಧ ಮಾಡಿದ್ದಾರೆ. ಆ ಜಾಗದಲ್ಲಿ ಜೀವಾಮೃತ ತಯಾರಿಸಿ ಬಳಸುತ್ತಿದ್ದಾರೆ. ಕೃಷಿ ಇಲಾಖೆ ಈ ಕಾರ್ಯಕ್ಕೆ ಉತ್ತೇಜನ ನೀಡುತ್ತಿದೆ. ಇದರಿಂದ ರೈತರಲ್ಲೂ ಒಂದಿಷ್ಟು ಉತ್ಸಾಹ ಮೂಡಿದೆ.

‘ಈ ವರ್ಷ ನನ್ನ ಒಂದು ಎಕರೆ ಜಮೀನನ್ನು ನೈಸರ್ಗಿಕ ಕೃಷಿಗೆ ಒಳಪಡಿಸಿದ್ದೇನೆ. 200 ಲೀಟರ್ ನೀರಿನಲ್ಲಿ 10 ಕೆ.ಜಿ.ಆಕಳ ಸಗಣಿ, 10 ಲೀಟರ್ ಗೋಮೂತ್ರ, 2 ಕೆಜಿ ಬೆಲ್ಲ, 2 ಕೆಜಿ ಕಡಲೆ ಹಿಟ್ಟು, ಒಂದು ಹಿಡಿ ಹೊಲದ ಮಣ್ಣು ಇವೆಲ್ಲವನ್ನೂ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದ್ದೇನೆ. ಏಳು ದಿನಗಳ ನಂತರ ಅದು ಜೀವಾಮೃತವಾಗಿ ಮಾರ್ಪಟ್ಟಿದೆ. ಅದನ್ನು ಎರಡು ವಾರಕ್ಕೊಮ್ಮೆ ಭೂಮಿಗೆ ಹರಿಬಿಡುತ್ತಿದ್ದೇನೆ’ ಎಂದು ಮುಂಗನಾಳ ರೈತ ವೀರಪ್ಪ ಮುದಾಳೆ ಜೀವಾಮೃತ ತಯಾರಿಸುವ ವಿಧಾನದ ಕು ರಿತು ತಿಳಿಸಿದರು.

'ಈ ಜೀವಾಮೃತ ಸಿಂಪರಣೆಯಿಂದ ಆರಂಭದ ವರ್ಷದಲ್ಲಿ ಸ್ವಲ್ಪ ಇಳುವರಿ ಕಡಿಮೆಯಾದರೂ ಭೂಮಿ ಫಲವತ್ತತೆ ಹೆಚ್ಚುತ್ತದೆ. ಜತೆಗೆ ನಮಗೆ ಶುದ್ಧ ಆಹಾರ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ರೈತರು ಕನಿಷ್ಠ ಎರಡು ಎಕರೆ ಪ್ರದೇಶವನ್ನು ನೈಸರ್ಗಿಕ ಕೃಷಿಗೆ ಒಳಪಡಿಸಬೇಕು’ ಎಂದು ಸಲಹೆ ನೀಡುತ್ತಾರೆ.

‘ಔರಾದ್, ದಾಬಕಾ, ಚಿಂತಾಕಿ ಸೇರಿದಂತೆ 300 ರೈತರು ನೈಸರ್ಗಿಕ ಕೃಷಿ ಕುರಿತು ಒಲವು ಹೊಂದಿದ್ದಾರೆ. ಇದರಿಂದಾಗುವ ಪ್ರಯೋಜನದ ಬಗ್ಗೆ ಅವರೆಲ್ಲರಿಗೂ ಈಗ ಮನವರಿಕೆಯಾಗಿದೆ. ಸರ್ಕಾರ ಈ ವಿಷಯದಲ್ಲಿ ಹೆಚ್ಚಿನ ಕಾಳಜಿವಹಿಸಿ ನೆರವಿಗೆ ಬಂದರೆ ಸಾಕಷ್ಟು ರೈತರು ರಾಸಾಯನಿಕ ಗೊಬ್ಬರ ಬಳಕೆಯಿಂದ ಹಂತ ಹಂತವಾಗಿ ಹಿಂದೆ ಸರಿಯಲಿದ್ದಾರೆ’ ಎಂದು ಸಾವಯವ ಕೃಷಿಕ ಗೋವಿಂದ ಇಂಗಳೆ ಹೇಳುತ್ತಾರೆ.

‘ನೈಸರ್ಗಿಕ ಕೃಷಿಯಲ್ಲಿ ಅನೇಕ ವಿಧಾನಗಳಿವೆ. ಕೃಷಿ ವಿಜ್ಞಾನಿಗಳ ತಂಡದಿಂದ ಇವುಗಳ ಕುರಿತು ರೈತರಿಗೆ ಸಮಗ್ರವಾಗಿ ತಿಳವಳಿಕೆ ನೀಡಲಾಗಿದೆ. ಇದಕ್ಕಾಗಿ ಸಹಾಯಧನ ಕೂಡ ನೀಡಲಾಗುತ್ತಿದೆ’ ಎಂದು ಕೃಷಿ ತಾಂತ್ರಿಕ ಅಧಿಕಾರಿ ಶರಣಕುಮಾರ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)