ಶನಿವಾರ, ಜೂನ್ 25, 2022
20 °C
ಪಪ್ಪಾಯಿಯಲ್ಲಿ ಯಶಸ್ಸು ಕಂಡ ನಾಗನೂರದ ರೈತ ಲಕ್ಷ್ಮಣ

ಬೆಳೆ ಪ್ರಯೋಗದಿಂದ ಆದಾಯ: ಪಪ್ಪಾಯಿಯಲ್ಲಿ ಯಶಸ್ಸು ಕಂಡ ನಾಗನೂರದ ರೈತ

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ನಾಗನೂರದ ರೈತ ಲಕ್ಷ್ಮಣ ಸಕ್ರೆಪ್ಪಗೋಳ ‘ಥೈವಾನ್‌ ರೆಡ್‌ ಲೇಡಿ’ ತಳಿಯ ಪಪ್ಪಾಯಿ ಬೆಳೆದು ಲಾಭ ಕಂಡುಕೊಳ್ಳುತ್ತಿದ್ದಾರೆ.

ಕಬ್ಬು, ಗೋವಿನಜೋಳ, ಸದಕ, ಅರಿಸಿನ, ಬಾಳೆ, ಕಡಲೆ, ತರಕಾರಿ ಹೀಗೆ... ಮಿಶ್ರ ಬೇಸಾಯ ಮಾಡಿಕೊಂಡಿರುವ ಲಕ್ಷ್ಮಣ ಅವರಿಗೆ ಕೃಷಿಯಲ್ಲಿ ಏನಾದರೂ ಹೊಸ ಬೆಳೆ (ಪ್ರಯೋಗ) ಮಾಡಲು ಎಲ್ಲಿಲ್ಲದ ಖುಷಿ. 3 ವರ್ಷಗಳಿಂದ ಒಂದು ಎಕರೆಯಲ್ಲಿ ಥೈವಾನ್ ಪಪ್ಪಾಯಿ ತರು (ಸಸಿ) ನೆಟ್ಟಿದ್ದು 8 ತಿಂಗಳು ಕಳೆಯುತ್ತಿದ್ದಂತೆಯೇ ಗಿಡಗಳ ತುಂಬೆಲ್ಲಾ ಪಪ್ಪಾಯಿಗಳ ಗೊಂಚಲು ತುಂಬಿಕೊಂಡಿದೆ. ಒಂದೂವರೆ ಕೆ.ಜಿ.ಯಿಂದ 2 ಕೆ.ಜಿ. ತೂಗುವ ಪಪ್ಪಾಯಿ ಒಂದು ಗಿಡಕ್ಕೆ ಕನಿಷ್ಠ 50ರಿಂದ 70 ಪಪ್ಪಾಯಿಗಳ ಇಳುವರಿ ಇದೆ. 18 ತಿಂಗಳವರೆಗೆ ಪಪ್ಪಾಯಿ ಹಣ್ಣಿನ ನಿರಂತರ ಇಳುವರಿ ಇರುತ್ತದೆ ಎನ್ನುತ್ತಾರೆ ಲಕ್ಷ್ಮಣ.

‘ಬೆಂಗಳೂರಿನ ಖಾಸಗಿ ಕಂಪನಿಯಿಂದ ₹13ರಂತೆ ಪಪ್ಪಾಯಿಯ ತರು ತಂದಿದ್ದು, ಗಿಡದಿಂದ ಗಿಡಕ್ಕೆ 4 ಅಡಿ, ಸಾಲಿನಿಂದ– ಸಾಲಿಗೆ 8 ಅಡಿ ಅಂತರದಲ್ಲಿ ಸಾವಿರ ತರು ನಾಟಿ ಮಾಡಿದ್ದೇನೆ. ಎಂಟು ತಿಂಗಳಿಗೆ ಇಳುವರಿ ಚಾಲೂ ಆಗೈತ್ರೀ’ ಎಂದು ಲಕ್ಷ್ಮಣ ತಿಳಿಸಿದರು.

ಸಾವಯವ ಕೃಷಿ:

ಒಂದೂವರೆ ದಶಕದಿಂದ ತಮ್ಮ 12 ಎಕರೆ ಭೂಮಿಯಲ್ಲಿ ಸಾವಯವ ಕೃಷಿ ಅಳವಡಿಸಿಕೊಂಡಿರುವ ರೈತ ಲಕ್ಷ್ಮಣ ದ್ರವ ಜೀವಾಮೃತ, ಘನ ಜೀವಾಮೃತ, ಬೀಜಾಮೃತ, ಭೂಕೃಪಾಮೃತ, ಸಾರಜನಕ ಘಟಕ, ಕ್ರಿಮಿನಾಶಕ ಕಷಾಯ ಎಲ್ಲವನ್ನೂ ಶೂನ್ಯ ಬಂಡವಾಳದಿಂದ ಮಾಡಿಕೊಂಡಿದ್ದಾರೆ. ಕಸದಿಂದ ಗೊಬ್ಬರ ತಯಾರಿಸಿ ರಸ ಮಾಡುತ್ತಿದ್ದಾರೆ.

ಪಪ್ಪಾಯಿಗೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೆ ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿದ್ದಾರೆ. ಸಾವಯವಕ್ಕಾಗಿ 8 ದೇಸಿ ಆಕಳು, ಎಮ್ಮೆ ಸಾಕಿದ್ದು, ರೈತ ಲಕ್ಷ್ಮಣ ಅವರು ಹೈನುಗಾರಿಕೆಯನ್ನು ಇನ್ನೊಂದು ಉಪ ಆದಾಯ ಮಾಡಿಕೊಂಡಿದ್ದಾರೆ.

ಪಪ್ಪಾಯಿಯ ತರು ಖರೀದಿದಾಗಿ ₹13ಸಾವಿರದಿಂದ ₹15ಸಾವಿರ, ಕೂಲಿ ಖರ್ಚು ಸೇರಿದಂತೆ ಇತರ ಖರ್ಚು ಸೇರಿ ಎಕರೆಗೆ ₹20ಸಾವಿರದಿಂದ ₹25ಸಾವಿರ ಖರ್ಚಿದೆ. ವರ್ಷದಲ್ಲಿ ಎಕರೆಗೆ ಕನಿಷ್ಠ ₹3ರಿಂದ ₹4 ಲಕ್ಷದವರೆಗೆ ಆದಾಯ ಖಚಿತ’ ಎನ್ನುತ್ತಾರೆ ಲಕ್ಷ್ಮಣ.

ತೋಟಕ್ಕೆ ಬಂದು ಖರೀದಿಸುತ್ತಾರೆ:

‘ಹುಬ್ಬಳ್ಳಿಯ ಎಕ್ಸೆಲ್‌ ಕಂಪನಿಯವರು ತೋಟಕ್ಕೆ ಬಂದು ಕೆ.ಜಿ.ಗೆ ₹10ರಂತೆ ಖರೀದಿಸುತ್ತಾರೆ. ನಾವು ಕಟಾವು ಮಾಡಿಕೊಟ್ಟರೆ ಮುಗಿಯಿತು. ಸಾರಿಗೆ ಖರ್ಚು ಇಲ್ಲ. ಮಾರುಕಟ್ಟೆ ಮಾಡೋದು ತ್ರಾಸ ಇಲ್ಲರ್ರೀ’ ಎಂದು ತಿಳಿಸಿದರು.

‘ಔಷಧಿ ಗುಣ ಹೊಂದಿರುವ ಪಪ್ಪಾಯಿ ಆರೋಗ್ಯಕ್ಕೆ ಉತ್ತಮ ಹಣ್ಣು. ಬೇಸಿಗೆ, ಮಳೆಗಾಲ, ಚಳಿಗಾಲದಲ್ಲೂ ಬೇಡಿಕೆ ಇರುವ ಹಣ್ಣು ಆಗಿದ್ದರಿಂದ ಮಾರುಕಟ್ಟೆಗೆ ತೊಂದರೆ ಇಲ್ಲ’ ಎನ್ನುತ್ತಾರೆ ಲಕ್ಷ್ಮಣ ಅವರು.

ಮಿಶ್ರ ಬೆಳೆ ಆದಾಯ:

ಪಪ್ಪಾಯಿ ಗಿಡಗಳ ಮಧ್ಯದಲ್ಲಿ ಮಿಶ್ರವಾಗಿ ಚೆಂಡು ಹೂವು, ಮೆಂತೆ, ಸೌತೆ, ಕೋತಂಬರಿ ಬೆಳೆದು ವರ್ಷದಲ್ಲಿ ಮಿಶ್ರ ಬೆಳೆಯಿಂದ ₹50ರಿಂದ ₹1ಲಕ್ಷದವರೆಗೆ ಅದಾಯ ಮಾಡಿಕೊಳ್ಳುತ್ತಿದ್ದಾರೆ.

ಲಕ್ಷ್ಮಣ ಅವರ ತೋಟಕ್ಕೆ ಅರಭಾವಿ ತೋಟಗಾರಿಕೆ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರಶಿಕ್ಷಣಾರ್ಥಿಗಳು, ಕೃಷಿ ವಿಜ್ಞಾನಿಗಳು ಲಕ್ಷ್ಮಣ ಅವರ ಕೃಷಿ ಸಾಧನೆ ತಿಳಿಯಲು ಬರುತ್ತಾರೆ. ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. 2020–21ನೇ ಸಾಲಿನಲ್ಲಿ ಕೃಷಿ ಇಲಾಖೆಯ ‘ಕೃಷಿ ಪಂಡಿತ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿವಿಧ ಸಂಘ–ಸಂಸ್ಥೆಯ ಪ್ರಶಸ್ತಿ–ಸನ್ಮಾನಕ್ಕೆ ಪಾತ್ರವಾಗಿದ್ದಾರೆ. ಮೊ.ಸಂಖ್ಯೆ: 8496977769.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು