ಗುರುವಾರ , ಸೆಪ್ಟೆಂಬರ್ 23, 2021
27 °C

ಪಿಳ್ಳೆ ಪೆಸರು ಪಸರಿಸುತ್ತಿರುವ ಹಸಿರೆಲೆ ಗೊಬ್ಬರ

ನಿಂಗಯ್ಯ ಕಂದಗಲ್ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ ಜಿಲ್ಲೆ ಗಂಗಾವತಿ ಗದ್ದೆ ಬಯಲಿನಲ್ಲೀಗ ಪಿಳ್ಳೆ ಪೆಸಿರಿನ ಸುಗ್ಗಿ. ಕಾಯಿ ಬಿಡಿಸುವ, ಕಾಯಿ ತುಳಿಸುವ, ತೂರಿ ಕೇರಿ ಕಾಳು ಮಾಡುವ ದೃಶ್ಯಗಳು ಎಲ್ಲೆಲ್ಲೂ ಸಾಮಾನ್ಯ. ಕಾಯಿ ಬಿಡಿಸಿದ ಗಿಡಗಳು ಹಸಿರೆಲೆ ಗೊಬ್ಬರವಾಗಿ ಭತ್ತದ ಗದ್ದೆಯ ಸತ್ವ ಹೆಚ್ಚಿಸಲು ತುಂಗಭದ್ರಾ ನೀರಿಗಾಗಿ ಕಾಯುತ್ತಿವೆ. ಖರ್ಚಿಲ್ಲದೆ ನೆಲದ ಫಲವತ್ತು ಹೆಚ್ಚಿಸುವ, ರೈತರ ಕಿಸೆಗೆ ಒಂದಷ್ಟು ಹಣ ತುಂಬಿಸುವ ಪಿಳ್ಳೆ ಪೆಸರು ಬಹು ಉಪಯೋಗಿ ದ್ವಿದಳ ಧಾನ್ಯದ ಬೆಳೆ.

‘ಪಿಳ್ಳೆ ಪೆಸರು’ ಹೆಸರೇ ವಿಶಿಷ್ಟ. ನೋಡಲು ಅಪ್ಪಟ ಹೆಸರು ಗಿಡದಂತೆಯೇ. ಗಾಢ ಹಸಿರು ಬಣ್ಣದ ಎಲೆಗಳ ನಡುವೆ ಹಳದಿ ಹೂಗಳು ಗಮನ ಸೆಳೆಯುತ್ತವೆ. ಹೆಸರು ಗಿಡದಂತೆಯೇ ಹರಡಿಕೊಳ್ಳುವ ಗುಣವಿದೆ. ಇದರ ಹಸಿರು ಬಣ್ಣದ ಕಾಯಿಗಳು ಗಾತ್ರದಲ್ಲಿ ಹೆಸರುಕಾಯಿಗಿಂತ ಚಿಕ್ಕವು. ಕಾಳಿನ ರುಚಿ ಉದ್ದಿನ ಕಾಳಿನಂತೆ ಕೊಂಚ ಒಗರು; ಜಿಗುಟು. ಫೆಸೋಲಸ್ ಟ್ರಲೋಬಸ್ ಇದರ ವೈಜ್ಞಾನಿಕ ಹೆಸರು. ಕಾಡು ಹೆಸರು ಎಂದೂ ಕರೆಯುತ್ತಾರೆ.

ಯುಗಾದಿಯ ನಂತರ, ಬೇಸಿಗೆ ಭತ್ತ ಕೊಯ್ಲು ಮಾಡಿ ಅದೇ ಗದ್ದೆಗಳಿಗೆ ಪಿಳ್ಳೆ ಪೆಸರು ಬಿತ್ತುತ್ತಾರೆ. ಎಕರೆಗೆ ಹತ್ತು ಕೆಜಿ ಬಿತ್ತನೆ ಬೀಜ ಬೇಕಾಗುತ್ತದೆ. ಮುಂದಿನ ಎರಡು ತಿಂಗಳೊಳಗೆ ಇದು ಹುಲುಸಾಗಿ ಬೆಳೆದು, ಹಬ್ಬಿ ಹರಡಿ ನೆಲ ಮುಚ್ಚುತ್ತದೆ. ಕಳೆಯನ್ನು ನಿಯಂತ್ರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಡಯಾಂಚ, ಸೆಣಬಿನ ತರಹ ಎತ್ತರ ಬೆಳೆಯದು. ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಇದು ವರದಾನ. ರೋಟರ್‌ನಿಂದ ನೆಲಕ್ಕೆ ಸೇರಿಸುವುದು ಸುಲಭ. ಬೇಗ ಮಣ್ಣಿನಲ್ಲಿ ಕರಗುತ್ತದೆ.

‘ಪಿಳ್ಳೆ ಪೆಸರಿನ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಗಂಗಾವತಿ, ಕಾರಟಿಗೆ ಮತ್ತು ಸಿಂಧನೂರು ಭಾಗಗಳಲ್ಲಿ ಹಸಿರೆಲೆ ಗೊಬ್ಬರವಾಗಿ ಇದನ್ನು ಬೆಳೆಸುತ್ತಾರೆ. ವಿಜಯನಗರ ಕಾಲುವೆಗಳ ಅಚ್ಚುಕಟ್ಟು ಪ್ರದೇಶದ ಶೇ 40ರಷ್ಟು ಭತ್ತದ ಗದ್ದೆಯಲ್ಲಿ ಇದರ ಕೃಷಿ ಇದೆ. ಕಡಿಮೆ ಅವಧಿಯಲ್ಲಿ ಬೆಳೆದು ಎಕರೆಗೆ 9 ರಿಂದ 10 ಟನ್ ಹಸಿರೆಲೆ ಗೊಬ್ಬರ ಕೊಡುತ್ತದೆ’ ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ತಾಂತ್ರಿಕ ಅಧಿಕಾರಿ ಜಿ. ನಾರಪ್ಪ ಪಿಳ್ಳೆ ಪೆಸರಿನ ಮಹತ್ವ ವಿವರಿಸುತ್ತಾರೆ.

ಬಿತ್ತಿದಾಗ ಬೀಜ ಮೊಳೆಯಲು ತೇವಾಂಶ ಇದ್ದರೆ ಸಾಕು. ಇರುವ ತೇವಾಂಶದಲ್ಲೇ ಹುಲುಸಾಗಿ ಬೆಳೆಯುತ್ತದೆ. ಹೆಚ್ಚು ನೀರು ಕೇಳುವುದಿಲ್ಲ. ರೋಗ ಮತ್ತು ಕೀಟಗಳ ಭಾದೆ ಇಲ್ಲ. ಎಕರೆಗೆ 2 ರಿಂದ 3 ಕ್ವಿಂಟಾಲ್ ಕಾಳಿನ ಇಳುವರಿ ಬರುತ್ತದೆ. ಕಾಳುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಮಾರುಕಟ್ಟೆ ದರ ಪ್ರತಿ ಕ್ವಿಂಟಾಲ್‍ಗೆ ಸುಮಾರು ₹6 ಸಾವಿರ. ಒಮ್ಮೊಮ್ಮೆ ಇದು 10 ಸಾವಿರದವರೆಗೆ ಹೋಗುವುದುಂಟು. ಅಡುಗೆಗೆ ಮಡಕೆ ಕಾಳಿನ ರೀತಿ ಇದನ್ನು ಬಳಸಬಹುದು. ತಮಿಳುನಾಡು, ಕೇರಳದವರು ಇದನ್ನು ಹೆಚ್ಚಾಗಿ ಸಾಂಬಾರಿಗೆ ಬಳಸುತ್ತಾರಂತೆ. ಸಾಂಬಾರು ಗಟ್ಟಿ ಬರಲು ಇದು ಸಹಕಾರಿ. ಸ್ಥಳೀಯವಾಗಿ ಕಾರ್ಮಿಕರು ಮತ್ತು ಬಡವರು ಇದರಿಂದ ದೋಸೆ ಮಾಡುತ್ತಾರೆ. ‘ಇದರ ಊಟ ಮಾಡಿದರೆ ಮದ ಬರ್ತದೆ. ಅದಕ್ಕೆ ಜಾಸ್ತಿ ಬಳಸಲ್ಲ’ ಚಿಕ್ಕ ಜಂತಕಲ್ಲಿನ ಈರಮ್ಮ ಹೇಳುತ್ತಾರೆ. ಇತ್ತೀಚೆಗೆ ಉದ್ದಿನ ತರ ದೋಸೆ ಮಾಡಲೂ ಇದನ್ನು ಬಳಸುವುದು ಹೆಚ್ಚುತ್ತಿದೆ.

ಗಿಡದಿಂದ ಕಾಯಿ ಬಿಡಿಸುವುದು ಬಹಳ ಶ್ರಮದಾಯಕ ಕೆಲಸ. ಇಡೀ ದಿನ ಬಿಡಿಸಿದರೂ ಒಬ್ಬರು ಐದಾರು ಬುಟ್ಟಿ ಕಾಯಿ ಬಿಡಿಸಲಾಗದು. ಹಾಗಾಗಿ ಭೂ ರಹಿತ ಕೂಲಿ ಕಾರ್ಮಿಕರು ರೈತರ ಹೊಲಗಳಲ್ಲಿ ಕಾಯಿ ಬಿಡಿಸಿಕೊಂಡು, ಹೊಲದ ಮಾಲೀಕರಿಗೆ ಒಂದು ಚೀಲಕ್ಕೆ ಒಂದು ಬುಟ್ಟಿ ಕಾಯಿ ಕೊಡುತ್ತಾರೆ. ಕೆಲಸ ಸಿಗದ ಬೇಸಿಗೆಯಲ್ಲಿ ಪಿಳ್ಳೆ ಪೆಸರು ಬಡವರ ಜೇಬು ತುಂಬುತ್ತದೆ!.

ಕುರಿಗಳಿಗೆ ಇದು ಉತ್ತಮ ಮೇವು. ಕೆಲವು ರೈತರು ಕಾಳುಗಳನ್ನು ತೆಗೆದ ನಂತರ ಹೊಲದಲ್ಲಿ ಉಳಿದ ಹಸಿ ಮೇವನ್ನು ಮೇಯಿಸಲು ಕುರಿಗಾರರಿಗೆ ಅವಕಾಶ ಕೊಡುತ್ತಾರೆ. ಇದಕ್ಕಾಗಿ ಕುರಿಗಾಹಿಗಳು ಎಕರೆಗೆ ಮೂರು ಸಾವಿರದವರೆಗೆ ಪಾವತಿಸಬೇಕಾಗುತ್ತದೆ. ಕುರಿಗಳು ಜಮೀನಿನಲ್ಲಿ ಹಿಕ್ಕೆ ಹಾಕುವುದರಿಂದ ಪುಕ್ಕಟೆ ಗೊಬ್ಬರ ಸಿಕ್ಕಂತಾಗುತ್ತದೆ.

ಪಿಳ್ಳೆ ಪೆಸರು ಹಾಲು ಕೊಡುವ ಹಸುಗಳಿಗೂ ಉತ್ತಮ ಮೇವು. ಜಾನುವಾರುಗಳಿಗೆ ಮೇವಾಗಿ ಕೂಡ ಇದನ್ನು ಬಳಸಬಹುದು. ನೈಸರ್ಗಿಕ ಕೃಷಿ ಮಾಡುವ ರೈತರಿಗೆ ಉತ್ತಮ ಹಸಿರೆಲೆ ಗೊಬ್ಬರವಾಗುತ್ತದೆ. ಬಾಳೆ, ಕಬ್ಬು ಮೊದಲಾದ ಬೆಳೆಗಳಲ್ಲಿ ಜೀವಂತ ಮುಚ್ಚಿಗೆಯಾಗಿ ಬಳಸಬಹುದು. ತೆಂಗು, ಸಪೋಟ, ಮಾವಿನ ತೋಟಗಳಲ್ಲಿ ಕಳೆ ನಿಯಂತ್ರಣ ಮತ್ತು ತೇವಾಂಶ ಕಾಪಾಡಲು ಪಿಳ್ಳೆ ಪೆಸರನ್ನು ಬೆಳಸಬಹುದು. ರೈತರೇ ಸುಲಭವಾಗಿ ಬೀಜ ಮಾಡಿಕೊಳ್ಳಬಹುದು. ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆಯಲ್ಲಿ ಪಿಳ್ಳೆ ಪೆಸರನ್ನು ಹಸಿರೆಲೆ ಗೊಬ್ಬರ ಸಸ್ಯವಾಗಿ ಜನಪ್ರಿಯಗೊಳಿಸಲಾಗುತ್ತಿದೆ.

ಒಟ್ಟಿನಲ್ಲಿ ಪಿಳ್ಳೆ ಪೆಸರು ಡಯಾಂಚ, ಸೆಣಬಿಗೆ ಪರ್ಯಾವಾಗಬಲ್ಲ ತೋಟದ ಬೆಳೆಗಾರರಿಗೆ ವರದಾನವಾಗಬಲ್ಲ ಸುಲಭದ ಹಸಿರೆಲೆ ಗೊಬ್ಬರ. ಇದನ್ನೊಮ್ಮೆ ಬೆಳೆಸಿ ನೋಡಿ. ಬೀಜ ಮತ್ತು ವಿವರಗಳಿಗೆ ಸಂಪರ್ಕಿಸಿ: 9008258062

ಚಿತ್ರಗಳು : ಜಿ. ಕೃಷ್ಣಪ್ರಸಾದ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು