ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಪ್‌ ಕಾಂಪೋಸ್ಟ್‌

ತ್ಯಾಜ್ಯ ವಿಲೇವಾರಿಗೆ ರಹದಾರಿ
ಅಕ್ಷರ ಗಾತ್ರ

ಮನೆಯ ತ್ಯಾಜ್ಯವನ್ನು, ಮನೆಯಂಗಳದಲ್ಲೇ ಸುಲಭವಾಗಿ ಕರಗಿಸಿ, ಉತ್ಕೃಷ್ಟ ಗೊಬ್ಬರ ತಯಾರಿಸುವ ‘ಪೈಪ್‌ ಕಾಂಪೋಸ್ಟ್‌’ ಎಂಬ ಪದ್ಧತಿಯೊಂದು ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆ ಪಟ್ಟಣದಲ್ಲಿ ಶುರುವಾಗಿದೆ.

ನಗರ, ಪಟ್ಟಣ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ ಒಂದು ಸವಾಲಾಗಿದೆ. ನಗರಸಭೆ, ಪುರಸಭೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಅರಿವು ಮೂಡಿಸುತ್ತಿವೆ. ಆದರೂ ಬೆಟ್ಟದಂತೆ ಬೆಳೆದಿರುವ ಕಸದ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ. ಇಂಥ ಸಂದರ್ಭದಲ್ಲಿ ಮನೆಯ ತ್ಯಾಜ್ಯವನ್ನು, ಮನೆಯಂಗಳದಲ್ಲೇ ಸುಲಭವಾಗಿ ಕರಗಿಸಿ, ಉತ್ಕೃಷ್ಟ ಗೊಬ್ಬರ ತಯಾರಿಸುವ ‘ಪೈಪ್‌ ಕಾಂಪೋಸ್ಟ್‌’ ಎಂಬ ಪದ್ಧತಿಯೊಂದು ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆ ಪಟ್ಟಣದಲ್ಲಿ ಶುರುವಾಗಿದೆ.

ಏನಿದು ಪೈಪ್‌ ಕಾಂಪೋಸ್ಟ್‌?

ಪಿವಿಸಿ ಅಥವಾ ಮಣ್ಣಿನ ಪೈಪ್‌ ಭೂಮಿ ಹೂತು, ಅದರೊಳಗೆ ಮನೆಯ ಹಸಿ ಕಸ, ಅದರೊಟ್ಟಿಗೆ ಸಗಣಿ ನೀರು, ಮಣ್ಣನ್ನು ಸೇರಿಸಿ ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುವ ವಿಧಾನವೇ ಪೈಪ್‌ ಕಾಂಪೋಸ್ಟ್‌. ಮೂಡಬಿದರೆ ಪುರಸಭಾ ಸದಸ್ಯ ಪಿ.ಕೆ.ಥಾಮಸ್ ಮೂರು ವರ್ಷಗಳ ಹಿಂದೆ ಮಣ್ಣಿನ ಮಡಕೆಯಲ್ಲಿ ಇಂಥ ಕಾಂಪೋಸ್ಟ್‌ ತಯಾರಿಸುವ ಪ್ರಯತ್ನ ಮಾಡಿದರು. ನಂತರ ಮಡಕೆ ಜಾಗದಲ್ಲಿ ಪೈಪ್ ಜೋಡಿಸಿಟ್ಟು ನೋಡಿದರು. ಅದು ಯಶಸ್ವಿಯಾಯಿತು. ಥಾಮಸ್ ಅವರ ಈ ಪ್ರಯತ್ನದಿಂದ ಸ್ಫೂರ್ತಿ ವಿಶೇಷ ಮಕ್ಕಳ ವಸತಿ ಶಾಲೆಯವರು ಉತ್ತೇಜನಗೊಂಡು, ತಮ್ಮ ಶಾಲೆಯ ಅಂಗಳದಲ್ಲೇ ನಾಲ್ಕೈದು ‍ಪಿವಿಸಿ ಪೈಪ್ ಅಳವಡಿಸಿ ಈ ಪದ್ಧತಿ ಅನುಷ್ಠಾನಗೊಳಿಸಿದ್ದಾರೆ.

ಇದಕ್ಕೆ ಏನೇನು ಬೇಕು?

ಪೈಪ್ ಕಾಂಪೋಸ್ಟ್‌ಗೆ ಬಂಡವಾಳ ಕಡಿಮೆ. ಹೆಚ್ಚು ಜಾಗ ಕೂಡ ಬೇಕಾಗಿಲ್ಲ. ಮುಕ್ಕಾಲು ಅಡಿ ವ್ಯಾಸ (8 ಇಂಚು), 5 ಅಡಿ ಉದ್ದದ ಸಿಮೆಂಟ್ ಅಥವಾ ಪಿವಿಸಿ ಪೈಪ್ ತೆಗೆದುಕೊಂಡು, ಒಂದು ಅಡಿ ಆಳಕ್ಕೆ ಗುಂಡಿ ತೆಗೆದು ಲಂಬವಾಗಿ ಹೂತಿಡಬೇಕು. ಪೈಪ್‍ನ ಮೇಲ್ಭಾಗಕ್ಕೆ ಎಂಡ್‍ಕ್ಯಾಪ್ ಅಗತ್ಯ. ಎಂಡ್‌ಕ್ಯಾಪ್ ಸಿಗದಿದ್ದರೆ, ಯಾವುದಾದರೂ ಡಬ್ಬವನ್ನು ಮುಚ್ಚಳವಾಗಿ ಬಳಸಬಹುದು. ಮರದ ಹಲಗೆ, ಟೈಲ್ಸ್ ತುಂಡು... ಇಂಥ ಯಾವುದನ್ನು ಬೇಕಾದರೂ ಬಳಸಬಹುದು.

ಮುಂದೆ ಏನ್ಮಾಡಬೇಕು?

ಮನೆಯಲ್ಲಿ ನಿತ್ಯ ಉತ್ಪತ್ತಿಯಾಗುವ ಹಸಿಕಸವನ್ನು ಪೈಪಿನ ಒಳಗೆ ಹಾಕಿ ಮುಚ್ಚಬೇಕು. ಆ ಕಸವನ್ನು ಪುಡಿಮಾಡಿ ಹಾಕಿದರೆ ಉತ್ತಮ. ಮಾಂಸಹಾರದ ತ್ಯಾಜ್ಯದಲ್ಲಿ ಮೂಳೆಗಳಿದ್ದರೆ ಅದನ್ನು ಪುಡಿ ಮಾಡಿ ಹಾಕಬೇಕು. ಒಮ್ಮೆ ತ್ಯಾಜ್ಯವನ್ನು ಪೈಪ್‌ನಲ್ಲಿ ತುಂಬಿ, ಮೂರು ದಿನಗಳ ನಂತರ ಒಂದು ಹಿಡಿ ಮಣ್ಣು ಮತ್ತು ಒಂದು ಹಿಡಿ ಸಗಣಿಯನ್ನು ನೀರಿನೊಂದಿಗೆ ಬೆರೆಸಿ ಪೈಪ್‌ ಒಳಗೆ ಸುರಿಯಬೇಕು. ಹೀಗೆ ಪ್ರತಿ ಮೂರು ದಿನಗಳಿಗೊಮ್ಮೆ ತ್ಯಾಜ್ಯ ಹಾಕಿ, ಅದರ ಮೇಲೆ ಈ ಮಣ್ಣು–ಸಗಣಿ ಮಿಶ್ರಣವನ್ನು ಹಾಕುತ್ತಾ ಹೋಗಬೇಕು. ಒಂದೊಮ್ಮೆ ಸಗಣಿ ಸಿಗದಿದ್ದಲ್ಲಿ ಹಿಂದಿನ ದಿನ ಕಡಲೆ ಹಿಂಡಿಯನ್ನು ನೀರಿನಲ್ಲಿ ನೆನೆಸಿಟ್ಟು, ಆ ದ್ರಾವಣವನ್ನು ನೀರಿನೊಂದಿಗೆ ಬೆರೆಸಿ ಪೈಪ್‌ಗೆ ಹಾಕಬಹುದು.

ಐದು ಅಡಿಯ ಒಂದು ಪೈಪ್‌ ತುಂಬುವ ಹೊತ್ತಿಗೆ, ಅಷ್ಟೇ ಅಳತೆಯ ಇನ್ನೊಂದು ಪೈಪ್‌ ಅನ್ನು ಪಕ್ಕದಲ್ಲೇ ಹೂತುಬಿಡಿ. ತ್ಯಾಜ್ಯ ಭರ್ತಿಯಾದ ಮೊದಲ ಪೈಪ್‌ಗೆ ಮುಚ್ಚಳ ಹಾಕಿ. ಹೊಸ ಪೈಪಿಗೆ ಮೊದಲಿನಂತೆ ತ್ಯಾಜ್ಯ, ಸಗಣಿ–ಮಣ್ಣಿನ ಮಿಶ್ರಣ ಹಾಕುತ್ತಾ ಪ್ರಕ್ರಿಯೆ ಮುಂದುವರಿಸಿ. ಇದೇ ಪ್ರಕ್ರಿಯೆಯನ್ನು ಒಂದಾದ ಮೇಲೆ ಒಂದರಂತೆ ನಾಲ್ಕು ಪೈಪ್‌ಗಳಿಗೂ ಹಾಕಿ. ಮೂರನೇ ಪೈಪ್‌ ಭರ್ತಿಯಾಗುವ ವೇಳೆಗೆ, ಮೊದಲನೇ ಪೈಪ್‌ನಲ್ಲಿರುವ ತ್ಯಾಜ್ಯ ಕರಗಿ, ಕಾಂಪೋಸ್ಟ್‌ ಆಗಿರುತ್ತದೆ. ಆಗ ನೆಲದಿಂದ ತೆಗೆದು, ಗೊಬ್ಬರವನ್ನು ನಿಮ್ಮ ಅಗತ್ಯಕ್ಕಂತೆ ಬಳಸಿಕೊಳ್ಳಬಹುದು. ಒಂದು ಪೈಪ್‌ನಿಂದ ಕನಿಷ್ಠ 8 ರಿಂದ 10 ಕೆಜಿವರೆಗೂ ಉತ್ಕೃಷ್ಟ ಗೊಬ್ಬರ ತಯಾರಾಗಿರುತ್ತದೆ. ಒಂದು ಮನೆಯಲ್ಲಿ ಐವರು ಸದಸ್ಯರಿದ್ದರೆ, ಒಂದು ಪೈಪ್‌ ಭರ್ತಿಯಾಗಲು ಒಂದೂವರೆ ತಿಂಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಸದಸ್ಯರ ಸಂಖ್ಯೆ ಹೆಚ್ಚಾದರೆ ತ್ಯಾಜ್ಯ ಉತ್ಪತ್ತಿ ಪ್ರಮಾಣ ಹೆಚ್ಚಾಗುತ್ತದೆ. ಆಗ ಪೈಪ್‌ ತುಂಬುವ ವೇಗ ಕೂಡ ಹೆಚ್ಚುತ್ತದೆ.

ಪ್ರಯೋಜನ ಏನು ?

ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಮನೆಯಂಗಳದಲ್ಲೇ ವಿಲೇವಾರಿ ಮಾಡಬಹುದು. ಇದರಿಂದ ಕಸ ಹೊರಗೆ ಎಸೆದು ಮಾಲಿನ್ಯವಾಗುವುದು ತಪ್ಪುತ್ತದೆ. ಜನ–ಜಾನುವಾರುಗಳ
ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ತಪ್ಪಿಸಬಹುದು. ಮನೆಯಲ್ಲಿ ತಯಾರಿಸುವ ಸಾವಯವ ಗೊಬ್ಬರವನ್ನು ಕೈತೋಟಕ್ಕೆ ಬಳಸಬಹುದು ಅಥವಾ ಹೊಲ, ಗದ್ದೆ, ತೋಟಗಳಿಗೂ ಉಪಯೋಗಿ ಸಬಹುದು. ಇದರಿಂದ ಹೊರಗಿನಿಂದ ಗೊಬ್ಬರ ಖರೀದಿಸುವುದು ತಪ್ಪುತ್ತದೆ. ಮಾತ್ರವಲ್ಲ, ಗೊಬ್ಬರ ಬಳಕೆ ಮಾಡಲ್ಲ ಎಂದರೆ, ಅದನ್ನು ಮಾರಾಟ ಮಾಡಿ ಆದಾಯವನ್ನು ಪಡೆಯಬಹುದು.

ಮನೆಯಂಗಳವಿದ್ದವರು, ಹಿತ್ತಲು ಇರುವ ನಗರವಾಸಿಗಳು ಈ ಪೈಪ್‌ ಕಾಂಪೋಸ್ಟ್ ಮಾಡಿಕೊಳ್ಳಲು ಪ್ರಯತ್ನಿಸಬಹುದು. ಮನೆಯ ತ್ಯಾಜ್ಯವನ್ನು ಸುಲಭವಾಗಿ ವಿಲೇವಾರಿ ಮಾಡಬಹುದು.

ತಾಂತ್ರಿಕ ಮಾಹಿತಿಗೆ ಪರಿಸರ ಎಂಜಿನಿಯರ್ ಶಿಲ್ಪಾ – 8123950833, ಹೆಚ್ಚಿನ ಮಾಹಿತಿಗೆ ಸ್ಫೂರ್ತಿ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್– 9900710209 ಸಂಪರ್ಕಿಸಬಹುದು.

ಸ್ಫೂರ್ತಿ ಶಾಲೆಯ ಯಶಸ್ವಿ ಪ್ರಯತ್ನ

ಮೂಡಬಿದರೆಯ ಸ್ಫೂರ್ತಿ ವಿಶೇಷ ಮಕ್ಕಳ ವಸತಿ ಶಾಲೆಯಲ್ಲಿ ಎರಡು ತಿಂಗಳಿನಿಂದ ಪೈಪ್‌ ಕಾಂಪೋಸ್ಟ್‌ ವಿಧಾನ ಚಾಲ್ತಿಯಲ್ಲಿದೆ. ಇಲ್ಲಿನ ಪುರಸಭೆಯ ಪರಿಸರ ಎಂಜಿನಿಯರ್ ಶಿಲ್ಪಾ ಅವರ ತಾಂತ್ರಿಕ ಸಲಹೆ, ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳೇ ಈ ತ್ಯಾಜ್ಯ ವಿಲೇವಾರಿ ಮಾಡಿ ಮತ್ತು ಗೊಬ್ಬರ ತಯಾರಿಸುತ್ತಿದ್ದಾರೆ.

ಈ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದ ನಂತರ ಉಳಿಯುವ ಅಡುಗೆ ತ್ಯಾಜ್ಯವನ್ನು ಪೈಪಿನಲ್ಲಿ ಹಾಕಿ ಗೊಬ್ಬರ ತಯಾರಿಸುತ್ತಿದ್ದಾರೆ. ಈ ಶಾಲೆಯಲ್ಲಿ ಸುಮಾರು 52 ಮಕ್ಕಳಿದ್ದು, ನಿತ್ಯ 4 ರಿಂದ 5 ಕೆಜಿಯಷ್ಟು ಅಡುಗೆ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಅದನ್ನು ಪಿವಿಸಿ ಪೈಪ್‌ಗೆ ಹಾಕುವಂತೆ ಶಿಕ್ಷಕರು, ಸಿಬ್ಬಂದಿ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾರೆ. ಈಗ ನಾಲ್ಕು ಪೈಪ್ ಅಳವಡಿಸಲಾಗಿದೆ. ಒಂದು ಪೈಪ್ ತುಂಬಿದ್ದು, ಆ ಪೈಪ್‌ನಿಂದ ಸುಮಾರು 10 ಕೆಜಿ ಗೊಬ್ಬರ ತೆಗೆದಿದ್ದಾರೆ. ‘ಮಕ್ಕಳಿಗೆ ಈ ಜವಾಬ್ದಾರಿ ನೀಡಿರುವುದರಿಂದ, ಅವರಲ್ಲಿ ಪರಿಸರ ಕಾಳಜಿ ಮೂಡುತ್ತಿದೆ’ ಎನ್ನುತ್ತಾರೆ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್.

‘ಮೊದಲು ಪುರಸಭಾ ಸದಸ್ಯ ಪಿ.ಕೆ.ಥಾಮಸ್ ಅವರಿಂದ ಆರಂಭವಾದ ಈ ಪ್ರಯತ್ನ ಸ್ಫೂರ್ತಿ ಶಾಲೆವರೆಗೂ ತಲುಪಿದೆ. ಮುಂದೆ, ರೋಟರಿ ಸಂಸ್ಥೆಗಳ ಸಹಯೋಗದಲ್ಲಿ, ಪಟ್ಟಣದ ಹಲವೆಡೆ ಈ ಪದ್ಧತಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಈ ಕುರಿತು ಕರಪತ್ರ, ಯುಟ್ಯೂಬ್ ವಿಡಿಯೊ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ’ ಎನ್ನುತ್ತಾರೆ ಶಿಲ್ಪಾ.

ಪೈಪ್‌ ಕಾಂಪೋಸ್ಟ್ ಕುರಿತು ತಯಾರಿಸಿರುವ ವಿಡಿಯೊ ಈಗ ವೈರಲ್ ಆಗಿದೆ. ಅನೇಕ ಕಡೆಗಳಲ್ಲಿ ಸ್ವಯಂ ಪ್ರೇರಿತರಾಗಿ ಈ ಕಾಂಪೋಸ್ಟ್ ವಿಧಾನ ಅನುಸರಿಸಲಾರಂಭಿಸಿದ್ದಾರಂತೆ. ಮೂಡಬಿದರೆಯಲ್ಲಿರುವ ಪ್ರಾಂತ್ಯ ಶಾಲೆಯಲ್ಲೂ ಇದೇ ಪದ್ಧತಿ ಅನುಸರಿಸಲು ಸಿದ್ಧತೆ ನಡೆಯುತ್ತಿದೆ.

ಪಟ್ಟಣದಾದ್ಯಂತ ಮನೆ ಮನೆಯಲ್ಲೂ ಪೈಪ್ ಕಾಂಪೋಸ್ಟ್ ಅಳವಡಿಸಬೇಕು ಎಂಬ ವಿಷಯ ಈಗಾಗಲೇ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿತ್ತು. ಚರ್ಚೆಯೂ ಆಗಿತ್ತು. ಆದರೆ, ಸದಸ್ಯರಲ್ಲಿ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಅದು ಅನುಷ್ಠಾನವಾಗಲಿಲ್ಲ. ಪುರಸಭೆಯಿಂದ ಸಾಧ್ಯವಾಗದದ್ದು ಸ್ಫೂರ್ತಿ ಶಾಲೆಯಲ್ಲಿ ಸಾಧ್ಯವಾಗಿದೆ.

‘ಇದು ಕಡಿಮೆ ವೆಚ್ಚದಲ್ಲಿ (ಅಂದಾಜು ₹500) ಅಳವಡಿಸಿಕೊಳ್ಳಬಹುದಾದ ಈ ಪರಿಸರ ಸ್ನೇಹಿ ವಿಧಾನ. ಇದು ಅನುಷ್ಠಾನವಾದರೆ ಪುರಸಭೆ ಮೇಲಿನ ತ್ಯಾಜ್ಯ ನಿರ್ವಹಣೆಯ ಹೊರೆಯೂ ಕಡಿಮೆಯಾಗುತ್ತದೆ. ಪರಿಸರವೂ ಸ್ವಚ್ಛವಾಗಿರುತ್ತದೆ’ ಎನ್ನುತ್ತಾರೆ ಎಂಜಿನಿಯರ್ ಶಿಲ್ಪಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT