ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿತ್ತನೆ ಭತ್ತದ ಆಯ್ಕೆ ಬಹು ಸುಲಭ

Last Updated 9 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಪ್ರತಿ ಸಲವೂ ಮಾರುಕಟ್ಟೆಯಿಂದ ಭತ್ತ ಕೊಂಡು ತರುವುದು ಖರ್ಚಿನ ಬಾಬ್ತು. ಅದೂ ಸಹ ಗುಣಮಟ್ಟದ ಖಾತ್ರಿ ಇಲ್ಲ. ಇದಕ್ಕೆ ಪರಿಹಾರ ರೈತರೇ ಬಿತ್ತನೆ ಬೀಜ ಆಯ್ಕೆ ಮಾಡಿಕೊಳ್ಳುವುದು. ಅದಕ್ಕೆ ಸರಳ ಹಾಗೂ ಪಾರಂಪರಿಕವಾಗಿ ರೈತರು ಅನುಸರಿಸುತ್ತಿದ್ದ ಕೆಲವು ಪದ್ಧತಿಗಳ ವಿವರ ಇಲ್ಲಿದೆ.

ಆರೋಗ್ಯವಾಗಿ ಬೆಳೆದ, ಕೀಟ-ರೋಗದ ಹಾವಳಿಯಿಂದ ಮುಕ್ತವಾದ ಭತ್ತದ ತಾಕನ್ನು ಮೊದಲೇ ಗುರುತಿಸಿಕೊಳ್ಳಿ. ಒಡಪು ಅಥವಾ ಗಂಡು ಭತ್ತ ಹಾಗೂ ಇತರೆ ಭತ್ತದ ತಳಿ ಮಿಶ್ರವಾಗಿದ್ದರೆ ತಾಕಿನಲ್ಲಿ ನಿಧಾನವಾಗಿ ಅಡ್ಡಾಡುತ್ತಾ ಕಿತ್ತು ಹಾಕಿ. ನೆನಪಿಡಿ ಒಂದು ತೆಂಡೆ ಬೇರೆ ತಳಿ ಭತ್ತ ಮಿಶ್ರವಾದರೂ ಮುಂದಿನ ಸಲ ಇಡೀ ತಾಕಿಗೆ ವ್ಯಾಪಿಸುತ್ತದೆ. ನಂತರ ಮೂಲ ತಳಿ ಯಾವುದು, ಬೆರಕೆ ತಳಿ ಯಾವುದೆಂದು ಗುರುತಿಸುವುದೇ ಕಷ್ಟ.

ಇದಾದ ನಂತರ ಬಿತ್ತನೆಗೆ ಗುರುತಿಸಿದ ತಾಕನ್ನು ಪ್ರತ್ಯೇಕವಾಗಿ ಕಟಾವು ಮಾಡಿ ಕಣಕ್ಕೆ ಸಾಗಿಸಿ. ಬಿತ್ತನೆ ತಾಕಿನ ಭತ್ತವನ್ನು ಮೊದಲು ಕಟಾವು ಮಾಡುವುದು ಒಳ್ಳೆಯದು. ಕಣದಲ್ಲಿ ಭತ್ತದ ಹೊರೆಗಳನ್ನು ನಿಲಾಕಿ (ನೇರ ನಿಲ್ಲಿಸಿ) ಮಿಶ್ರವಾಗಿರುವ ಕಳೆಗಳಿದ್ದರೆ ತೆಗೆದು ಹಾಕಿ. ನಂತರ ಹೊರೆಗಳನ್ನು ಕಂತೆ ಕಟ್ಟಿ ಒಂದು ಸಲ ಬಡಿದರೆ ಉದುರುವ ಕಾಳುಗಳನ್ನು ಬಿತ್ತನೆಗೆ ಎತ್ತಿಟ್ಟುಕೊಳ್ಳಿ. ಹಾಗೆ ಒಮ್ಮೆ ಬಡಿದಾಗ ಉದುರುವ ಕಾಳುಗಳು ಹೊಲದಲ್ಲಿಯೇ ಚೆನ್ನಾಗಿ ಒಣಗಿರುತ್ತವೆ ಹಾಗೂ ತೆನೆಯ ತುದಿ ಕಾಳುಗಳಾಗಿರುತ್ತವೆ.

ಅಗತ್ಯವಿರುವಷ್ಟು ಪ್ರಮಾಣವನ್ನು ಹೀಗೆ ಬಡಿದು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಚೀಲ ಅಥವಾ ಮಣ್ಣಿನ ಮಡಕೆಗೆ ಹಾಕಿ ಶೇಖರಿಸಿ. ಚೀಲ ಅಥವಾ ಮಡಕೆಯ ಮೇಲೆ ಬಿತ್ತನೆ ಬೀಜ ಎಂಬುದಕ್ಕೆ ಏನಾದರೂ ಗುರುತು ಮಾಡುವುದು ಒಳ್ಳೆಯದು. ಅಲ್ಲದೆ ಮನೆಯ ಎಲ್ಲರಿಗೂ ಅವು ಬಿತ್ತನೆ ಕಾಳು ಎಂಬ ಮಾಹಿತಿ ತಿಳಿಸಿರಬೇಕು. ತುಮಕೂರು-ಚಿತ್ರದುರ್ಗ ಭಾಗದ ಕೆರೆ ಅಚ್ಚುಕಟ್ಟಿನಲ್ಲಿ ಭತ್ತ ಬೆಳೆಯುವ ರೈತರು ಭತ್ತದ ಹೊರೆಗಳನ್ನು ಕಣಕ್ಕೆ ಸಾಗಿಸಿ ಸಾರಣಿಗೆ ಅಥವಾ ಕುಪ್ಪೆ ಹಾಕುವಾಗ ಅಲ್ಲಿ ಉದುರಿದ ಭತ್ತವನ್ನೇ ಬಿತ್ತನೆಗೆ ಎತ್ತಿಟ್ಟುಕೊಳ್ಳುತ್ತಾರೆ. ಬಹುತೇಕ ಹೀಗೆ ಉದುರುವ ಕಾಳುಗಳು ನಿಲುವಿನಲ್ಲೇ (ಅಂದರೆ ಗದ್ದೆಯಲ್ಲಿ) ಚೆನ್ನಾಗಿ ಬಲಿತ ತುದಿಗಾಳುಗಳೇ ಆಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT