ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸಗುಪ್ಪಿಯಲ್ಲೊಬ್ಬ ಮಾದರಿ ರೈತ, ಸಾವಯವ ಕೃಷಿಯಲ್ಲಿ ಖುಷಿ ಕಂಡ ನಿಂಗಪ್ಪ

Last Updated 4 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಘಟಪ್ರಭಾ: ಗೋಕಾಕ ತಾಲ್ಲೂಕಿನ ಮುಸಗುಪ್ಪಿಯ ರೈತ ನಿಂಗಪ್ಪ ರಾಮಪ್ಪ ಆಶಿರೊಟ್ಟಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಗಮನ ಸೆಳೆದಿದ್ದಾರೆ.

60ರ ಹರೆಯದಲ್ಲೂ ಕ್ರಿಯಾಶೀಲತೆಯಿಂದ ತೋಟದ ನಿರ್ವಹಣೆಯಲ್ಲಿ ತೊಡಗಿರುತ್ತಾರೆ. 2 ಎಕರೆ ಜಮೀನಿನಲ್ಲಿ 1,100 ‘ತರು’ಗಳನ್ನು ನೆಟ್ಟಿದ್ದಾರೆ. 15 ವರ್ಷಗಳಿಂದ ಸಾವಯವ ಕೃಷಿ ಪದ್ಧತಿ ಅನುಸರಿಸಿ ಯಶಸ್ಸು ಕಾಣುತ್ತಿರುವುದಾಗಿ ಹೇಳುತ್ತಾರೆ. ಈ ಭಾಗದಲ್ಲಿ ‘ಸಾವಯವ ಸರ್ದಾರ’ ಎನಿಸಿಕೊಂಡಿದ್ದಾರೆ. ಮುಸುಗುಪ್ಪಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಏಕೈಕ ಸಾವಯವ ಕೃಷಿಕರೆಂಬ ಹೆಗ್ಗಳಿಕೆಯೂ ಅವರದು.

ಕಬ್ಬು, ಅರಿಸಿನ:‘ಸಾವಯವ ಕೃಷಿಯಲ್ಲಿ ಕಬ್ಬು ಹಾಗೂ ಅರಿಸಿನ ಬೆಳೆ ಬೆಳೆಯುತ್ತಿದ್ದು, ಉತ್ತಮ ಇಳುವರಿ ದೊರೆಯುತ್ತಿದೆ. ಅನುಭವದಿಂದಾಗಿ ನನಗೆ ಪದ್ಧತಿಯ ಮೇಲೆ ನಂಬಿಕೆ ಹೆಚ್ಚಾಗಿದೆ. ಬೇಡಕಿಹಾಳದ ಸಾವಯವ ಕೃಷಿಕ ಹಾಗೂ ತಜ್ಞ ಸುರೇಶ ದೇಸಾಯಿ ಸಲಹೆ ನೀಡಿದ್ದಾರೆ. ಇಂತಹ ತಜ್ಞರನ್ನು ಹದಿನೈದು ವರ್ಷಗಳ ಹಿಂದೆಯೇ ನಮಗೆ ಭೇಟಿ ಮಾಡಿಸಿ ಪ್ರೇರಣೆ ನೀಡಿದ ಶಾಸಕ ಸತೀಶ ಜಾರಕಿಹೊಳಿ ಅವರನ್ನು ಮರೆಯಲಾಗದು’ ಎಂದು ತಿಳಿಸಿದರು.

ಮೂಡಲಗಿಯ ವಿಕಾಸ ಸೇವಾ ಕೇಂದ್ರ ಆರಂಭಿಸಿರುವ ‘ಸಾವಯವ ಕೃಷಿ ಪದ್ಧತಿ ಅಳವಡಿಸಲು ರೈತರಿಗೆ ತಿಳಿವಳಿಕೆ ನೀಡುವ ಅಭಿಯಾನ’ದಲ್ಲಿ ನಿಂಗಪ್ಪ ಪಾಲ್ಗೊಂಡು, ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದಾರೆ. ‘ಬೇಸಾಯದ ಮೇಷ್ಟ್ರು’ ಕೂಡ ಆಗಿದ್ದಾರೆ.

ರೈತರಿಗೆ ಸಲಹೆ:‘ತರುಗಳನ್ನು ನೆಡುವಾಗ 8X5 ಅಂಗುಲದ ಅಂತರದ ಅಳತೆ ಪದ್ಧತಿ ಅನುಸರಿಸಬೇಕು. ತರುವಿನ ಬೆಳವಣಿಗೆಗೆ ನೈಸರ್ಗಿಕ ಗಾಳಿ, ಸೂರ್ಯನ ಬೆಳಕು ಅತ್ಯವಶ್ಯ. ಈ ಪದ್ಧತಿ ಅನುಸರಿಸಿದರೆ 15ರಿಂದ 18ಕ್ಕೂ ಅಧಿಕ ಕಬ್ಬಿನ ಗಣಿಕೆಗಳು ಟಿಸಿಲೊಡೆಯುತ್ತವೆ. ನೇರವಾಗಿ ಬೆಳೆಯುತ್ತವೆ. ಇದಕ್ಕೆ ನಮ್ಮ ಗದ್ದೆ ಉದಾಹರಣೆ’ ಎಂದು ತಿಳಿಸಿದರು.

‘ಒಂದು ಕಬ್ಬು 2 ಕೆ.ಜಿ.ಯಂತೆ ಹಿಡಿದರೆ 64ಸಾವಿರ ಕೆ.ಜಿ. ಆಗುತ್ತದೆ. ಅಂದರೆ ಎಕರೆಗೆ 64 ಟನ್ ಇಳುವರಿ ಪಡೆಯಬಹುದು. ಎರಡು ಎಕರೆಗೆ 128 ಟನ್ ಇಳುವರಿ ಖಂಡಿತವಾಗಿ ದೊರೆಯುತ್ತದೆ. ಪ್ರತಿ ವರ್ಷವೂ ಕಾರ್ಖಾನೆಗಳು ನಿಗದಿಪಡಿಸಿದ ಬೆಲೆ ನೀಡಿ ಖರೀದಿಸುತ್ತಿವೆ’ ಎಂದು ಮಾಹಿತಿ ನೀಡಿದರು.

‘ಕೊಟ್ಟಿಗೆ ಗೊಬ್ಬರ, ಗಂಜಲವನ್ನು ಮಾತ್ರ ಬೆಳೆಗೆ ಹಾಕುತ್ತೇವೆ. ಹೀಗಾಗಿ ಭೂಮಿ ಫಲವತ್ತಾಗಿದೆ. ತರುಗಳನ್ನು ನಿಗದಿತ ಅಂತರದಲ್ಲಿ ನಾಟಿ ಮಾಡಿದಲ್ಲಿ ಅವು ಹುಲುಸಾಗಿ ಬೆಳೆಯುತ್ತವೆ. ಕಾರ್ಖಾನೆಗಳು ಅಥವಾ ಗ್ರಾಹಕರು ಖುದ್ದಾಗಿ ಬಂದು ಖರೀದಿಸಿಕೊಂಡು ಹೋಗುತ್ತಾರೆ; ಅಷ್ಟೊಂದು ಬೇಡಿಕೆ ಇದೆ’ ಎಂದು ಅನುಭವ ಹಂಚಿಕೊಂಡರು.

ಅವರ ಸಂಪರ್ಕಕ್ಕೆ ಮೊ: 9740758724.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT