ಶನಿವಾರ, ಅಕ್ಟೋಬರ್ 31, 2020
25 °C
ಹಸಿರು ಉಸಿರು

PV Web Exclusive: ಹಾನಾಪುರದ ಚೆಲ್ಲು ನೆಲ್ಲು ಗದ್ದೆಯ ಸೊಬಗ ಅರಸುತ್ತಾ...

ವೆಂಕಟೇಶ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

'ಭತ್ತದ 'ಉದ್ಯಮ’ದ ಊರಿನಿಂದ ಬಂದ ನನಗೆ, ಹಾನಾಪುರದಲ್ಲಿ 'ನೆಲ್ಲು'‌ (ಭತ್ತ) ಬೆಳೆ ಇನ್ನೂ ಧ್ಯಾನಸ್ಥ ರೂಪದಲ್ಲಿಯೇ ಕಂಡಿತು, ಹರ್ಷವೆನಿಸಿತು' ಎಂಬ ಈ ಖುಷಿಖುಷಿ ಬರಹದ ಹಿಂದೆ ವಿಷಾದದ ಛಾಯೆಯೂ ಇದೆ. ದಾವಣಗೆರೆ ತಾಲ್ಲೂಕಿನಲ್ಲಿ ಭತ್ತದ ಕೃಷಿ ಪಡೆದುಕೊಂಡಿರುವ ರೂಪಾಂತರಗಳ ಜೊತೆಗೆ ಬಾಗಲಕೋಟೆಯಲ್ಲಿ ಇನ್ನೂ ಉಳಿದಿರುವ ಪಾರಂಪರಿಕ ಕೃಷಿ ಪದ್ಧತಿಯ ಮಾಹಿತಿಯನ್ನು ಆಸ್ಥೆಯಿಂದ ಕಟ್ಟಿಕೊಡುತ್ತದೆ. 'ಪ್ರಜಾವಾಣಿ' ಬಾಗಲಕೋಟೆ ವರದಿಗಾರ ವೆಂಕಟೇಶ್ ಅವರ ಈ ಬರಹ ಉತ್ತರ ಕರ್ನಾಟಕ-ಮಧ್ಯ ಕರ್ನಾಟಕದ ಬೇಸಾಯದ ಬದುಕನ್ನು ಮತ್ತೊಂದು ದೃಷ್ಟಿಕೋನದಿಂದ ಕಟ್ಟಿಕೊಡಲು ಯತ್ನಿಸುತ್ತದೆ.

---

ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ದಾವಣಗೆರೆ ತಾಲ್ಲೂಕಿನ ಹಳ್ಳಿಯಿಂದ ಬಂದ ನನಗೆ, ಬಾಲ್ಯದಲ್ಲಿ ನಮ್ಮೂರಿಗೆ ಹಸಿರುಡಿಸಿ ಚೆಲುವು ಹೆಚ್ಚಿಸುತ್ತಿದ್ದ ಭತ್ತದ ಗದ್ದೆಗಳೇ ಅಪ್ಯಾಯವಾಗಿದ್ದವು. ಚೌಕಾಕಾರದ ಗೆರೆ ಕೊರೆದಂತೆ ತೋರುವ ಮಣ್ಣಿನ ದಿಂಡುಗಳ ನಡುವೆ ನೀರು ನಿಲ್ಲಿಸಿ, ಗೋಣಿಚೀಲದ ಕುಪ್ಪೆ ಹೊದ್ದು ಮಳೆಯಲ್ಲಿ ನೆನೆಯುತ್ತಾ ಕೆಸರು ಸಾಲುಗಳಲ್ಲಿ ಭತ್ತದ ಸಸಿ ನೆಟ್ಟು ನಾಟಿ ಮಾಡಿ ನೆಲ ಸಿಂಗರಿಸಿದ್ದ ನೆನಪು.

ಆದರೆ ನನ್ನ ಶಿಕ್ಷಕ ಮಿತ್ರ ಶಶಿಧರ ಹೂಗಾರ, ತನ್ನೂರಿನಲ್ಲಿ ಮಳೆಗಾಲದಲ್ಲಿ ಮೈದಳೆವ ’ಚೆಲ್ಲುನೆಲ್ಲು‘ ಗದ್ದೆಗಳ ಬಗ್ಗೆ ಹೇಳಿದಾಗ ಅಚ್ಚರಿ ಮೂಡಿತ್ತು.

ಶಾಶ್ವತ ಬರಪೀಡಿತ ಎಂಬ ಹಣೇಪಟ್ಟಿ ಹೊತ್ತ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲ್ಲೂಕಿನ ಹಾನಾಪುರ ಶಶಿಧರನ ಊರು. ಗುಡ್ಡ, ಕೊರಕಲು, ಕಣಿವೆಗಳಿಂದ ಕೂಡಿದ ಮರಳುಗಲ್ಲಿನ ಬೃಹತ್ ಶಿಲಾಪದರದ ಮೇಲೆ (ಸೆಕೆಂಡರಿ ರಾಕ್) ಊರು ರೂಪುಗೊಂಡಿದೆ. ಸುತ್ತಲ ಕುರುಚಲು ಕಾಡಿನಲ್ಲಿ ಬೆಳೆದ ಪಾಪಾಸುಕಳ್ಳಿ ನಮ್ಮ ಪ್ರತೀ ಹೆಜ್ಜೆಗೂ ತೊಡರಾಗುತ್ತದೆ. ಬೇಸಿಗೆಯಲ್ಲಿ ಕಾದ ಹೆಂಚಿನಂತೆ ತೋರುವ ಊರಿನಲ್ಲಿ ಮೃಗಜಲವ ಬೆನ್ನತ್ತಲಾಗದೇ ಹೆಚ್ಚಿನವರು ಗೋವಾ, ಮಂಗಳೂರಿಗೆ ಗುಳೇ ಹೋಗುತ್ತಾರೆ. ಉಳಿದವರಿಗೆ ಕುರಿ ಸಾಕಾಣಿಕೆಯೇ ಮೂಲಾಧಾರ.

ಶಿಲೆಯ ಹಾಸಿನ ಮೇಲಿರುವ ಒಂದಷ್ಟು ಮಣ್ಣಿನ ಪದರಗಳೇ ಮಳೆಗಾಲದಲ್ಲಿ ಹೊಲಗಳಾಗುತ್ತವೆ. ಆಳದಲ್ಲಿನ ಕಲ್ಲಿನ ಪದರಗಳಲ್ಲಿ ಡ್ರಿಲ್ಲಿಂಗ್ ಮೆಶಿನ್‌ ಹಾಯದ ಕಾರಣ ಬೋರ್‌ವೆಲ್ ಕೊರೆಸಿ ನೀರು ತೆಗೆದು ಕೃಷಿ ಮಾಡುವುದು ಇಲ್ಲಿ ಮರೀಚಿಕೆ. ಅದೇ ಕಾರಣಕ್ಕೆ 10 ಕಿ.ಮೀ ದೂರದ ಆಸಂಗಿ ಬ್ಯಾರೇಜ್ ಬಳಿ ಮಲಪ್ರಭ ನದಿಯಿಂದ ಪೈಪ್‌ಲೈನ್‌ ಹಾಕಿ ಸರ್ಕಾರ, ಊರಿಗೆ ಕುಡಿಯುವ ನೀರು ಕಲ್ಪಿಸಿದೆ. ನೀರ ಪಸೆ ಕಾಣಸಿಗದ ಇಂತಹ ಕಡೆ ಭತ್ತ ಬೆಳೆಯುವುದು ನನಗೆ ಊಹಿಸಲು ಅಸಾಧ್ಯವಾಗಿತ್ತು.

'ವಾರದಿಂದ ಚಂಡಿ ಹಿಡಿದಿದ್ದ ಉತ್ತರೆ ಮಳೆ ಹಾನಾಪುರ ಪಕ್ಕದ ಲಲಿತಾ ಕೊಳ್ಳದಲ್ಲಿ ದಿಡಿಗು (ನೀರ ಝರಿ) ಸೃಷ್ಟಿಸಿದ್ದಾಳೆ. ಅಲ್ಲಿ ಮಿಂದು, ಚೆಲ್ಲುನೆಲ್ಲು‌ ಗದ್ದೆ ನೋಡಿಕೊಂಡು ಬರೋಣ' ಎಂದು ಶಶಿಧರ ಹೇಳಿದಾಗ ಇನ್ನಿಬ್ಬರು ಶಿಕ್ಷಕ ಮಿತ್ರರಾದ ಶಿವಸಂಗಯ್ಯ ಹಾಗೂ ಮಂಜುನಾಥ ಪಾಗಿ ಕೂಡ ಜೊತೆಯಾದರು. ನಾಲ್ವರು ಬೈಕ್‌ನ ಕಿವಿಹಿಂಡಿದೆವು.


ಹಾನಾಪುರದ ಚೆಲ್ಲು ನೆಲ್‌ ಗದ್ದೆಯಲ್ಲಿ ಭತ್ತದೊಂದಿಗೆ ಕಳೆಯದ್ದೂ ಸಹಬಾಳ್ವೆ

ಏನಿದು ಚೆಲ್ಲು ನೆಲ್ಲು‌ ಗದ್ದೆ

ಹಾನಾಪುರದಲ್ಲಿ ಸಾಮಾನ್ಯವಾಗಿ ಮಳೆ ಸುರಿದಾಗ ನೆಲದೊಳಗೆ ಕಲ್ಲಿನ ಹಾಸು ಇರುವ ಕಾರಣ ನೀರು ಇಂಗುವುದಿಲ್ಲ. ಇಳಿಜಾರಿನತ್ತ ಹಾಯುತ್ತದೆ. ಆದರೆ ತಗ್ಗು ಪ್ರದೇಶಗಳಲ್ಲಿ ಮುಂದೆ ಹರಿದು ಹೋಗಲು ಸಾಧ್ಯವಾಗದೇ ಅಲ್ಲಿಯೇ ಸಂಗ್ರಹವಾಗುತ್ತದೆ. ಅಲ್ಲಿ ಬೀಜ ಚೆಲ್ಲಿ (ಎರಚಿ) ಭತ್ತ ಬೆಳೆಯುವುದೇ ಚೆಲ್ಲು ನೆಲ್ಲು‌ ಗದ್ದೆಯ ವೈಶಿಷ್ಟ್ಯ. ಹಾನಾಪುರದ ಲಲಿತಾಕೊಳ್ಳದ (ಹಾಲುಹಂಡೆ) ಹಾದಿಯಲ್ಲಿ ನಮಗೆ ಇಂತಹ ಹತ್ತಾರು ಗದ್ದೆಗಳು ಕಾಣಸಿಕ್ಕವು.

ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿ ರೋಹಿಣಿ (ರೋಣಿ) ಮಳೆ ಬೀಳುತ್ತಿದ್ದಂತೆಯೇ ಬೀಜ ಎರಚಲಾಗುತ್ತದೆ. ಮುಂದೆ ಆರು ತಿಂಗಳಲ್ಲಿ (ದೀಪಾವಳಿ) ಅದು ಕೊಯ್ಲಿಗೆ ಬರುತ್ತದೆ. ಹಬ್ಬದ ಊಟಕ್ಕೆ ಹೊಸ ಅಕ್ಕಿಯ ಬಾನದ (ಅನ್ನ) ಮೆರುಗು.

ಕಳೆಯೂ ಇಲ್ಲಿ ಸಹಪಾಠಿ!

ಚೆಲ್ಲುನೆಲ್ಲು‌ ಗದ್ದೆಯಲ್ಲಿ ಮಳೆಗಾಲಕ್ಕೂ ಮುನ್ನ ಉಳುಮೆ ಮಾಡಿ ನೆಲ ಹದ ಮಾಡುತ್ತಾರೆ. ಒಂದಷ್ಟು ಗೋಡು (ಕೊಟ್ಟಿಗೆ ಗೊಬ್ಬರ) ತುಂಬುತ್ತಾರೆ. ಮಳೆ ಬಿದ್ದು ನೀರು ಸಂಗ್ರಹವಾಗಿ ಮಣ್ಣು ನೆನೆಯುತ್ತಲೇ ಭತ್ತದ ಬೀಜ ಎರಚಲಾಗುತ್ತದೆ. ಮಳೆಗಾಲದಲ್ಲಿ ಸಜ್ಜೆ ಊರಿನ ಪ್ರಮುಖ ಬೆಳೆ. ಕೆಲವೊಮ್ಮೆ ಮಳೆ ಚೆನ್ನಾಗಿ ಆದರೆ ಸಜ್ಜೆ ಹೊಲದಲ್ಲೂ ಭತ್ತದ ಬೀಜ ಹರಳುಗಟ್ಟುತ್ತವೆ. ಸಸಿ ಒಡಮೂಡುತ್ತಿದ್ದಂತೆಯೇ ಗದ್ದೆ ಜೀವ ಪಡೆಯುತ್ತದೆ. ಕಳೆನಾಶಕ, ಮೇಲ್‌ಗೊಬ್ಬರ, ಕೀಟನಾಶಕ ಯಾವುದನ್ನೂ ಉಣಬಡಿಸದೇ ಸಹಜವಾಗಿಯೇ ಬೆಳೆಯುವ ಕಾರಣ ಇಲ್ಲಿ ಪ್ರಕೃತಿ ಸಹಜ ನ್ಯಾಯ ಪಾಲನೆಯಾಗುತ್ತದೆ. ಭತ್ತದ ಜೊತೆ ಕಳೆಯೂ ಜೀವ ತಳೆಯುತ್ತದೆ. ಬೆಳೆಗಿಂತ ಕಳೆ ಹೆಚ್ಚಾದರೆ ಮಾತ್ರ ಅದನ್ನು ಕಿತ್ತು ಹಾಕುತ್ತೇವೆ. ಇಲ್ಲದಿದ್ದರೆ ಎರಡೂ ಒಟ್ಟಿಗೆ ಬೆಳೆಯುತ್ತವೆ ಎಂದು ನೆಲ್ ಗದ್ದೆ ಕೃಷಿಕ ಅಯ್ಯಪ್ಪ ಹೂಗಾರ ಹೇಳುತ್ತಾರೆ.

ಆರು ತಿಂಗಳ ಸುದೀರ್ಘ ಅವಧಿಯ ಕಾರಣ ಭತ್ತ ಕೆಲವೊಮ್ಮೆ ಎದೆಯೆತ್ತರಕ್ಕೆ ಬೆಳೆಯುತ್ತದೆ. ಮಳೆ–ಗಾಳಿಗೆ ಅದು ಬೀಳಬಾರದು ಎಂಬ ಕಾರಣಕ್ಕೆ ತೆನೆ ಒಡೆಯುವ ಕೆಲ ದಿನಗಳ ಮುನ್ನ ಅದನ್ನು ಕತ್ತರಿಸಿ ದನಗಳಿಗೆ ಮೇವು ಆಗಿ ಬಳಕೆ ಮಾಡುತ್ತಾರೆ.


ಹಾನಾಪುರದ ಚೆಲ್ಲು ನೆಲ್‌ ಗದ್ದೆಯಲ್ಲಿ ಬೆಳೆದ ಭತ್ತ

ಬೀಜ ಸಂಗ್ರಹಕ್ಕೆ ಒತ್ತು

ಹಾನಾಪುರದಲ್ಲಿ ಭತ್ತ ಬೆಳೆಯುವವರು ಯಾರೂ ಮಾರುಕಟ್ಟೆಯಲ್ಲಿ ಬೀಜ ಕೊಳ್ಳುವುದಿಲ್ಲ. ಬದಲಿಗೆ ತಲೆತಲಾಂತರದಿಂದ ಕಾಪಿಟ್ಟುಕೊಂಡು ಬಂದ ಬೀಜವನ್ನೇ ಬಿತ್ತನೆ ಬಳಸುತ್ತಾರೆ. ಅದಕ್ಕೆ ವಿಶೇಷ ಹೆಸರೂ ಇಲ್ಲ. ಊರಿನವರ ಪಾಲಿಗೆ ಅದು 'ನೆಲ್' ಬೀಜ ಮಾತ್ರ. ಅರ್ಧ ಇಲ್ಲವೇ ಒಂದು ಎಕರೆಗೂ ಕಡಿಮೆ ಜಾಗದಲ್ಲಿ ಭತ್ತ ಬೆಳೆಯುತ್ತಾರೆ. ಹೀಗಾಗಿ ಮಾರಾಟ ಮಾಡುವುದಿಲ್ಲ. ಬದಲಿಗೆ ಮುಂದಿನ ಎರಡು ವರ್ಷಕ್ಕೆ ಬಿತ್ತನೆಗೆ ಬೇಕಾದಷ್ಟು ಭತ್ತ (ಬೀಜ) ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಉಳಿದದ್ದನ್ನು ಕುಟ್ಟಿ ಅಕ್ಕಿಯನ್ನು ಊಟಕ್ಕೆ ಬಳಸುತ್ತಾರೆ. ಎಕರೆಗೆ ಏಳೆಂಟು ಚೀಲ ಬೆಳೆದರೆ ಹೆಚ್ಚು. ಬೆಳೆ ಚೆನ್ನಾಗಿ ಬಂದರೆ ಹಿಂದಿನ ವರ್ಷ ಬೀಜಕ್ಕೆ ತೆಗೆದಿಟ್ಟಿದ್ದ ಭತ್ತ ಈ ವರ್ಷ ಹಳೆಯ ಅಕ್ಕಿಯಾಗಿ ಬಳಕೆಯಾಗುತ್ತದೆ. ಮಳೆ ಕೈಕೊಟ್ಟು ಮಧ್ಯದಲ್ಲಿಯೇ ಬೆಳೆ ಕುಂಠಿತಗೊಂಡರೆ ಅದು ದನಗಳಿಗೆ ಮೇವು ಆಗುತ್ತದೆ. ಹೀಗಾಗಿ ನಷ್ಟದ ಪ್ರಶ್ನೆಯೇ ಇಲ್ಲ.


ಹಾನಾಪುರದ ಚೆಲ್ಲು ನೆಲ್‌ ಗದ್ದೆಯಲ್ಲಿ ಬೆಳೆದ ಕೆಂಪು ಅಕ್ಕಿ

ಉದ್ಯಮ ಸ್ವರೂಪಕ್ಕೆ ರೂಪಾಂತರ

ಹಾನಾಪುರದ ಚೆಲ್ಲು ನೆಲ್ಲು‌ ಗದ್ದೆಗಳ ಕಂಡಾಗ ಅಪ್ಪನ ಕಾಲದಲ್ಲಿ ನಮ್ಮೂರಿನ ಸಾಂಪ್ರದಾಯಿಕ ಭತ್ತದ ಕೃಷಿ ನೆನಪಾಯಿತು. ಬಾಲ್ಯಕ್ಕೆ ಜಾರಿದೆ. ಹಿಂದೆ ನಮ್ಮೂರ ಗದ್ದೆ ಬಯಲುಗಳಲ್ಲಿ ಭದ್ರೆಯ ವೈಯ್ಯಾರದೊಂದಿಗೆ ನೀರಾವು, ಏಡಿ, ಮೀನು, ಕಪ್ಪೆಗಳು ಕುಪ್ಪಳಿಸುತ್ತಿದ್ದವು. 35 ವರ್ಷಗಳ ಹಿಂದೆ ನಮ್ಮೂರಲ್ಲಿ ಅಪ್ಪ ಸಾಂಪ್ರದಾಯಿಕ ಭತ್ತದ ಕೃಷಿಯಲ್ಲಿ ತೊಡಗಿದ್ದಾಗ ಎಕರೆಗೆ 11ರಿಂದ 12 ಪಲ್ಲ (ಕ್ವಿಂಟಲ್) ಬೆಳೆಯಲು ಏದುಸಿರುಬಿಡುತ್ತಿದ್ದರು. ಅದೆಲ್ಲಾ ಈಗ ನೆನಪು ಮಾತ್ರ.

ಊರಲ್ಲಿ ಈಗ ನಾಟಿಗೆ ಮುನ್ನ ಟ್ರ್ಯಾಕ್ಟರ್‌ನಲ್ಲಿ ಗದ್ದೆ ಉಳುಮೆ ಮಾಡುತ್ತೇವೆ. ಮಡಿ ಮಾಡಿ 25 ದಿನ ಕಾಲ ಭತ್ತದ ಸಸಿ ಬೆಳೆಸಿ ನಂತರ ಅದನ್ನು ಕಿತ್ತುತಂದು ಗದ್ದೆಯಲ್ಲಿ ನಾಟುತ್ತೇವೆ. ಸಸಿ ನೆಟ್ಟ ಮೂರನೇ ದಿನಕ್ಕೆ ಕಳೆನಾಶಕ ಹೊಲಕ್ಕೆ ಬೀಳುತ್ತದೆ. 20 ದಿನಗಳಿಗೆ ಸರ್ಕಾರಿ ಗೊಬ್ಬರ (ರಸಗೊಬ್ಬರ), ನಂತರ ಮತ್ತೊಮ್ಮೆ ಕಳೆ ತೆಗೆದು ಔಷಧಿ (ಕೀಟನಾಶಕ) ಸಿಂಪಡಣೆಯಾಗುತ್ತದೆ. ಎರಡು ತಿಂಗಳ ನಂತರ ಮತ್ತೊಮ್ಮೆ ರಸಗೊಬ್ಬರ ಕೊಟ್ಟು, ವಾತಾವರಣ ಅವಲಂಬಿಸಿ ಎರಡನೇ ಬಾರಿಗೆ ಕೀಟನಾಶಕ ಹೊಡೆಯುತ್ತೇವೆ. ಮೂರು ತಿಂಗಳಲ್ಲೇ ವಡೆ ಒಡೆದು (ಭತ್ತದ ಗೊನೆ) ಭತ್ತ ಕೊಯ್ಲಿಗೆ ಸಿದ್ಧವಾಗುತ್ತದೆ.

90ರ ದಶಕದಲ್ಲಿ ಪಕ್ಕದ ಆಂಧ್ರದಿಂದ ಹಣದ ಗಂಟು ಹೊತ್ತು ವಲಸೆ ಬಂದು ಊರ ‍ಪಕ್ಕ ಕ್ಯಾಂಪು ಹಾಕಿದ್ದ 'ರೆಡ್ಡಿ'ಗಾರು ಭತ್ತ ಬೆಳೆಗೆ ಈ ರೀತಿಯ ಹೊಸ ವ್ಯಾಕರಣ ಕಲಿಸಿದರು. ವರ್ಷದ ಲೆಕ್ಕದಲ್ಲಿ ಮಿಟ್ಟ (ಲಾವಣಿ) ಪಡೆದು, ಸೀಮೆಗೊಬ್ಬರ ಸುರಿದು ನಾಲ್ಕು ತಿಂಗಳಿಗೊಂದು ಬೆಳೆ ತೆಗೆದರು. ಅವರಿಗಿದು ಬಾಡಿಗೆ ನೆಲ ಹೀಗಾಗಿ ನಂಟಿನ ಪ್ರಶ್ನೆಯೇ ಇರಲಿಲ್ಲ. ನೆಲಕ್ಕೆ ಹಣ ಸುರಿ, ಗಳಿಸು ಎಂಬ ಪಾಠ ಹೇಳಿಕೊಟ್ಟರು.

64, 1010, ಮಂಜುಳಾ ಸೋನಾ, ಡೈಮಂಡ್, ಮಾಮೂಲ್, ಆರ್‌ಎನ್‌ಆರ್, ಎಮರ್ಜೆನ್ಸಿ, ಜಯಶ್ರೀ, ಜೀರಾ ಹೀಗೆ ಆಕರ್ಷಕ ಹೆಸರಿನ ಹೈಬ್ರೀಡ್ ತಳಿ ದಾಂಗುಡಿ ಇಟ್ಟವು. ಸಣ್ಣ ಅಕ್ಕಿ, ದೊಡ್ಡದು, ಅವಲಕ್ಕಿಗೆ, ಮಂಡಕ್ಕಿಗೆಂದು ವೈವಿಧ್ಯಮಯ ತಳಿ ಕಾಣಸಿಕ್ಕವು. ನೇಗಿಲು, ಕುಂಟೆ, ಗೋರು, ಎತ್ತುಗಳು ಮಾಯವಾಗಿ ಅಲ್ಲಿ ಟ್ರ್ಯಾಕ್ಟರ್ ಟಿಲ್ಲರ್, ರೋಲ್ಟಾವೇಟರ್ ಚಾಲ್ತಿಗೆ ಬಂದವು. ಎಕರೆಯಲ್ಲಿ ಬೆಳೆಯುತ್ತಿದ್ದ 12 ಚೀಲ ಭತ್ತ ಈಗ 64ಕ್ಕೆ ಏರಿಕೆಯಾಗಿದೆ. ಆದರೂ ಊರವರ ಲೆಕ್ಕದಲ್ಲಿ ಅದು ಕಡಿಮೆ ಇಳುವರಿ!

ಮೂರೂವರೆ ದಶಕಗಳ ಅಂತರದ ಈ ರೂಪಾಂತರದ ಫಲವನ್ನು ಈಗ ಉಣ್ಣುತ್ತಿದ್ದೇವೆ. ಹಣದ ಹರಿವು ಊರವರಿಗೆ ಹತ್ತಿರದ ಜಿಲ್ಲಾ ಕೇಂದ್ರ ದಾವಣಗೆರೆಯನ್ನು ನಿಕಟವಾಗಿಸಿತು. ಅಲ್ಲಿನ 'ಆಕರ್ಷಣೆ'ಗಳು ಖರ್ಚುಗಾರರನ್ನಾಗಿಸಿತು. ಬಿತ್ತನೆ ಬೀಜ, ರಸಗೊಬ್ಬರ, ಔಷಧಿಯ ಹೆಸರಿನಲ್ಲಿ ಹಣ ಸುರಿಯುವುದು ಹೆಚ್ಚಾಗಿ ಈಗ ಗಳಿಕೆ ನಗಣ್ಯವಾಗಿದೆ. ವಿಷ ಬಿತ್ತಿ ಬೆಳೆಯುವ ಈ ಆಟದಲ್ಲಿ ದಲಾಲರ ಅಂಗಡಿಯಲ್ಲಿ ಸಾಲದ ಪಟ್ಟಿ ದೊಡ್ಡದಾಯಿತು. ಆರಂಭದಲ್ಲಿ ಚೆನ್ನಾಗಿ 'ಬಿತ್ತಿ' ಬೆಳೆದುಕೊಂಡ 'ಕ್ಯಾಂಪ್‌'ನ ರೆಡ್ಡಿಗಾರು ಕ್ರಮೇಣ ಹೊಲದ ಒಡೆಯರಾಗಿದ್ದಾರೆ. ಇನ್ನೊಂದೆಡೆ ಮಲೆನಾಡಿನಿಂದ ವಲಸೆ ಬಂದಿರುವ ವಾಣಿಜ್ಯ ಬೆಳೆ ಅಡಿಕೆಯೂ ಗದ್ದೆಗಳೊಂದಿಗೆ ಪೈಪೋಟಿಗೆ ಇಳಿದಿದೆ. ಊರ ಗದ್ದೆ ಬಯಲಲ್ಲಿ ಈಗ ಔಷಧದ ಘಾಟು.. ಸರ್ಕಾರಿ ಗೊಬ್ಬರ ಬೆರೆತು ಕಾಲುವೆಗುಂಟ ಸಾಗುವ ಭದ್ರೆ ಬಣ್ಣ ಬದಲಿಸಿದ್ದಾಳೆ. ನೀರ ಹಾದಿಯಲ್ಲಿನ ಆಕೆಯ ಒಡನಾಡಿಗಳು ಕಾಣಸಿಗುತ್ತಿಲ್ಲ.

'ಆ ದಿನಗಳ' ಮೆಲುಕು ಹಾಕುತ್ತಲೇ ಹಾನಾಪುರದ ಪುಟ್ಟ ನೆಲ್ಲು‌ ಗದ್ದೆಗಳ ನಡುವೆ ಮನದಣಿಯೇ ಓಡಾಡಿದೆ. ಪಕ್ಕದಲ್ಲಿಯೇ ಬಂಡೆಗಳ ನಡುವಿನಿಂದ ಹರಿದುಹೋಗುತ್ತಿದ್ದ ಮಳೆ ನೀರ ಹಾದಿಗೆ ಇಳಿದು ಕುಪ್ಪಳಿಸಿದೆ. ನೀರು ಅಲೆಯಾಗುತ್ತಲೇ ಪುಳಕ್ಕನೆ ನೀರು ಹಾವೊಂದು ಜಾರಿ ಹೋಯ್ತು. ತಿಳಿನೀರ ಹಾದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಣ್ಣ ಗಾತ್ರದ ಕಪ್ಪು ಮೀನುಗಳ ಜಾತ್ರೆ ನೆರೆದಿತ್ತು. ಕಪ್ಪೆಗಳ ವಟಗುಟ್ಟುವಿಕೆ ಮನಸ್ಸು ಅರಳಿಸಿತು. 

ಭತ್ತದ 'ಉದ್ಯಮ’ದ ಊರಿನಿಂದ ಬಂದ ನನಗೆ, ಹಾನಾಪುರದಲ್ಲಿ 'ನೆಲ್ಲು'‌ (ಭತ್ತ) ಬೆಳೆ ಇನ್ನೂ ಧ್ಯಾನಸ್ಥ ರೂಪದಲ್ಲಿಯೇ ಕಂಡಿತು. ಹರ್ಷವೆನಿಸಿತು. ಗದ್ದೆಯ ಭತ್ತ‌ ಒಕ್ಕಿದ ಮೇಲೆ ನಮ್ಮ ಮನೆಯಲ್ಲಿ ಉಣ್ಣಲು ನನಗೊಂದಷ್ಟು ಅಕ್ಕಿ ಕೊಡು ಮಹಾರಾಯ ಎಂದು ಮಿತ್ರನ ಎದುರು ಬೇಡಿಕೆ ಇಟ್ಟು ಊರಿನತ್ತ ಬೈಕ್ ತಿರುಗಿಸಿದೆ..

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು