ಮಂಗಳವಾರ, ಜೂನ್ 22, 2021
22 °C

ಸೊಪ್ಪು, ತರಕಾರಿ ನೇರವಾಗಿ ಗ್ರಾಹಕನಿಗೆ ಸಿಗಬೇಕು: ರೇಖಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ಆರೆಂಟು ವರ್ಷಗಳ ಅವಧಿಯಲ್ಲಿ ವಾತಾವರಣದಲ್ಲಿ ಏರುಪೇರು ಆಗುತ್ತಿದೆ. ಇದರ ನೇರ ಪರಿಣಾಮ ವ್ಯವಸಾಯದ ಮೇಲೆ ಆಗುತ್ತಿದೆ. ವಿಪರ್ಯಾಸದ ಸಂಗತಿ ಅಂದರೆ, ಇಂತಹ ಬದಲಾವಣೆಯಿಂದ ರೈತ ಸಂಕಷ್ಟಕ್ಕೆ ಸಿಲುಕುತ್ತ ಇದ್ದರೂ ಜನಸಾಮಾನ್ಯರು ಹೆಚ್ಚೇನೂ ಸ್ಪಂದಿಸುತ್ತಿಲ್ಲ. ಹಾಗಿದ್ದರೂ ರೈತರು ಕಷ್ಟವೋ, ನಷ್ಟವೋ ನೆಲವನ್ನೇ ಅವಲಂಬಿಸಿ ಹಗಲಿರುಳು ದುಡಿಯುತ್ತಿದ್ದಾರೆ.

ಬರೀ 23 ಗುಂಟೆ ಜಮೀನು ಹೊಂದಿರುವ ಸಾಮಾನ್ಯ ರೈತ ಕುಟುಂಬ ನಮ್ಮದು. ಇಲ್ಲಿ ಹತ್ತಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆಸಿ ಕೈಸುಟ್ಟುಕೊಂಡಿದ್ದೆವು. ಈವರೆಗಿನ ಅನುಭವದ ಆಧಾರದ ಮೇಲೆ ಮುಂದಿನ ವರ್ಷ ಇಡಬೇಕಾದ ಹೆಜ್ಜೆಗಳ ಬಗ್ಗೆ ಸ್ಪಷ್ಟತೆ ನನ್ನಲ್ಲಿದೆ. ವಾತಾವರಣದಲ್ಲಿನ ಏರುಪೇರು ಕೃಷಿಗೆ ಹೊಡೆತ ಕೊಡುತ್ತಿದೆ. ಅದನ್ನು ಎದುರಿಸಲು ತೋಟಗಾರಿಕೆ, ಅರಣ್ಯ ಕೃಷಿಗೆ ಒತ್ತು ಕೊಡಲೇಬೇಕು.

ಹಲವಾರು ಹಣ್ಣಿನ ಗಿಡಗಳನ್ನು ಮುಂದಿನ ಮುಂಗಾರಿನಲ್ಲಿ ನಾಟಿ ಮಾಡಲು ಸಿದ್ಧತೆ ನಡೆಸಿದ್ದೇನೆ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಆದಾಯ ಭದ್ರತೆ ನೀಡುವುದು ಹಣ್ಣು ಅರಣ್ಯ ಕೃಷಿ. ಇದು ನಮ್ಮ ರೈತ ಸಮುದಾಯದ ಮುಂದಿನ ಸಂಕಲ್ಪವೂ ಆಗಬೇಕಿದೆ. ಗ್ರಾಹಕರಿಗೆ ತರಕಾರಿ–ಸೊಪ್ಪು ಮಾರಾಟ ನಮ್ಮ ಅನುಭವಕ್ಕೆ ದಕ್ಕಿದೆ. ಅದರ ಮುಂದಿನ ಹೆಜ್ಜೆಯಾಗಿ ನಗರ–ಪಟ್ಟಣಗಳ ಅಪಾರ್ಟ್‌ಮೆಂಟ್‌, ಶಾಲೆ–ಕಾಲೇಜುಗಳಿಗೆ ತೆರಳಿ ಶುದ್ಧ ಹಾಗೂ ಗುಣಮಟ್ಟದ ತರಕಾರಿ, ಹಣ್ಣುಗಳ ಮಾರಾಟದ ಯೋಜನೆ ರೂಪಿಸಿದ್ದೇನೆ. ಈಗ ನಾನು 23 ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದೇನೆ. ಇವುಗಳ ಸಂಖ್ಯೆ ಹೆಚ್ಚಿಸುವುದು ಈ ವರ್ಷದ ಯೋಜನೆಗಳಲ್ಲಿ ಸೇರಿದೆ. ದೇಶ–ವಿದೇಶಗಳ ಸೋರೆಕಾಯಿಗಳನ್ನು ನಾನು ಬೆಳದಿದ್ದು, ಅವುಗಳನ್ನು ಸುಂದರ ಕಲಾಕೃತಿಯಾಗಿ ಮಾಡಲಾಗುತ್ತಿದೆ. ಆ ಕುರಿತ ತರಬೇತಿಯನ್ನು ಮೈಸೂರಿನ ಕೃಷಿ ಕಲಾ ಸಂಸ್ಥೆಯು ನೀಡಿದೆ. ಆಸಕ್ತ ರೈತ ಮಹಿಳೆಯರ ಜೊತೆಗೂಡಿ ಇಲ್ಲಿ ಬೆಳೆದ ಸೋರೆಕಾಯಿಯ ಮೌಲ್ಯವರ್ಧನೆ ಮಾಡುವ ಆಸೆಯಿದೆ. ವೈವಿಧ್ಯ ಸಂರಕ್ಷಣೆಗೆ ದೇಸಿ ತಳಿ, ಸಾವಯವ ಕೃಷಿ, ಉಪಕಸುಬು ಜೊತೆಗೆ ಗ್ರಾಹಕನ ಜೊತೆ ನೇರ ವಹಿವಾಟು ಸಾಧಿಸಿದಾಗ ರೈತನ ಸ್ಥಿತಿ ಸುಧಾರಿಸೀತು. ‘ವ್ಯವಸಾಯ ನಷ್ಟ’ ಎಂಬ ಮಾತು ಖಂಡಿತ ಸುಳ್ಳು. ಹಾಗೆ ಹೇಳಲು ನನ್ನ ಯಶಸ್ವಿ ಕೃಷಿಯೇ ಕಾರಣ ಎನ್ನಲು ಏನು ಅಡ್ಡಿ?!

– ರೇಖಾ ಆರ್‌, ಕೃಷಿಕ ಮಹಿಳೆ

ನಿರೂಪಣೆ: ಎಟಿಪಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು