ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಯಿಂದ ತೋಟಗಾರಿಕೆಯೂ ಲಾಭ..!

ಅಂಜುಮನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್‌ ರಜಾಕ್‌ ದುದನಿ ಕೃಷಿ ಯಶೋಗಾಥೆ
Last Updated 6 ಮೇ 2019, 20:16 IST
ಅಕ್ಷರ ಗಾತ್ರ

ಸಿಂದಗಿ:ಅರವತ್ತೊಂಬತ್ತರ ಹರೆಯದ ಅಬ್ದುಲ್‌ ರಜಾಕ್‌ ದುದನಿ ಅವರಿಗೆ ಕೃಷಿಯೇ ಉಸಿರು. ದಿನವಿಡಿ ತೋಟದ ಕೃಷಿ ಚಟುವಟಿಕೆಗಳಲ್ಲೇ ಮಗ್ನ.

ಪಟ್ಟಣದಿಂದ 4 ಕಿ.ಮೀ. ದೂರದ ಇಂಡಿ ರಸ್ತೆಯಲ್ಲಿದೆ ಇವರ ತೋಟ. ಸೋಮವಾರ ಇಲ್ಲಿಗೆ ಭೇಟಿ ನೀಡಿದ ಸಂದರ್ಭ, ಸುಡು ಬಿಸಿಲಲ್ಲೂ ಬೆನ್ನಿಗೆ ಬೆಲ್ಟ್ ಹಾಕಿಕೊಂಡು, ಯಂತ್ರದ ಸಹಾಯದಿಂದ ದ್ರಾಕ್ಷಿ ತೋಟದಲ್ಲಿನ ಕಸ ತೆಗೆಯುವುದರಲ್ಲಿ ಮಗ್ನರಾಗಿದ್ದರು ದುದನಿ.

ಬಿಡುವಿಲ್ಲದ ಕೃಷಿ ಕಾಯಕದ ನಡುವೆಯೇ ‘ಕೃಷಿ ಮಾತು’ ಆರಂಭಗೊಂಡಿತು. ಎಂಟು ಎಕರೆ ಭೂಮಿಯಲ್ಲಿ ದ್ರಾಕ್ಷಿ, ಪಪ್ಪಾಯಿ, ಬಾಳೆ... ಹೀಗೆ ಸಂಪೂರ್ಣ ತೋಟಗಾರಿಕೆ ಬೆಳೆ ಬೆಳೆಯುತ್ತಿರುವುದಾಗಿ ತಿಳಿಸಿದರು ದುದನಿ.

‘ದಶಕದ ಹಿಂದೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸುತ್ತಿದ್ದೆ. ₹ 2 ಲಕ್ಷ ಖರ್ಚಾಗುತ್ತಿತ್ತು. ₹ 6 ಲಕ್ಷ ವರಮಾನ ಸಿಗ್ತಿತ್ತು. ಎರಡು ವರ್ಷದಿಂದ ಸಂಪೂರ್ಣ ಸಾವಯವ ಕೃಷಿ ಕೈಗೊಂಡ ಬಳಿಕ, ಹೊಸ ಅನುಭವದ ಜತೆ ಲಾಭವೂ ಹೆಚ್ಚಿದೆ. ಇದೀಗ ಕೇವಲ ₹ 60,000 ಮಾತ್ರ ಖರ್ಚಾಗುತ್ತಿದೆ. ಆದಾಯ ₹ 10 ಲಕ್ಷಕ್ಕೆ ಹೆಚ್ಚಿದೆ. ಈ ವರ್ಷ ದ್ರಾಕ್ಷಿಯನ್ನು ಮಣೂಕ ಮಾಡಿ, 30 ಟನ್‌ ಮಣೂಕವನ್ನು ನೆರೆಯ ಮಹಾರಾಷ್ಟ್ರದ ಸಾಂಗಲಿಗೆ ಕಳುಹಿಸಿಕೊಟ್ಟಿರುವೆ’ ಎಂದು ದುದನಿ ತಮ್ಮ ಕೃಷಿ ಯಶೋಗಾಥೆ ಬಿಚ್ಚಿಟ್ಟರು.

‘ಡಿ.ಸಿ.ಸಿ ಬ್ಯಾಂಕ್‌ನಿಂದ ₹ 8 ಲಕ್ಷ ಸಾಲ ಪಡೆದು, ಕುರಿ ಸಾಕಣೆಗಾಗಿ ಶೆಡ್ ನಿರ್ಮಿಸಿರುವೆ. ಈಗ 50 ಕುರಿಗಳಿವೆ. ಆಕಳು ಇವೆ. ಇವುಗಳ ಗಂಜಲವನ್ನು ಸಾವಯವ ಕೃಷಿಗಾಗಿ ಬಳಸುವೆ. ಇದು ಜೀವಾಮೃತ ಇದ್ದಂತೆ.

ಇದರ ಜತೆಗೆ ಉತ್ತರ ಪ್ರದೇಶದ ಗಾಜಾಬಾದ್‌ನ ಕೃಷಿ ವಿಜ್ಞಾನಿ ಕೃಷ್ಣಚಂದ್ರ ಸಲಹೆ ಮೇರೆಗೆ ಸಾವಯವ ದ್ರವ ಔಷಧಿ ಬಳಕೆ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ಎರೆ ಹುಳು ಉತ್ಪತ್ತಿಯಾಗಿವೆ.

ಭೂಮಿ ಫಲವತ್ತಾಗಿ ಸತ್ವಯುತವಾಗಿ ಉಳಿಯಬೇಕು. ವಿಷಪೂರಿತ ಆಹಾರ ದೂರಿಡಬೇಕು. ಮನುಷ್ಯ ಸದೃಢನಾಗಿರಬೇಕು ಅಂದರೇ ಸಾವಯವ ಕೃಷಿ ಪದ್ಧತಿಯೊಂದೇ ರಾಜಮಾರ್ಗ’ ಎಂದು ಕೃಷಿ ಮಾತು ಹೇಳಿದರು.

12 ವರ್ಷದ ದ್ರಾಕ್ಷಿಗೆ ಸಾವಯವದಿಂದ ಜೀವ ಕಳೆ ಬಂದಿದೆ. ಜಾನುವಾರುಗಳು ತಿನ್ನದ ತಪ್ಪಲಿನಿಂದ ದಷ್ಪರಣಿ ಎಂಬ ಜೀವಾಮೃತ ಸಿದ್ಧಪಡಿಸಿ ಬೆಳೆಗೆ ಸಿಂಪಡಿಸುವುದನ್ನು ದುದನಿ ವಿವರಿಸಿದರು.

‘ಐದು ವರ್ಷದ ಹಿಂದೆ ಸುರಿದ ಆಲಿಕಲ್ಲು ಮಳೆಯಿಂದ ದ್ರಾಕ್ಷಿ ಬೆಳೆ ಸಂಪೂರ್ಣ ನಾಶವಾಗಿ, ₹ 15 ಲಕ್ಷ ನಷ್ಟ ಉಂಟಾಗಿತ್ತು. ಆದರೂ ಎದೆಗುಂದದೆ ಮುನ್ನುಗ್ಗಿರುವೆ. ರೈತರಿಗೆ ಸಂಕಷ್ಟಗಳು ಎದುರಾದರೆ, ಆತ್ಮಹತ್ಯೆಯೇ ಪರಿಹಾರ ಎಂಬ ತಪ್ಪು ದಾರಿ ತುಳಿಯದೆ, ಮುಂದೆ ಸಾಗಬೇಕು ಎಂಬುದೇ ನನ್ನ ಆಶಯ.

ಮುಂಬರುವ ದಿನಗಳಲ್ಲಿ ತೋಟದ ಒಂದು ಭಾಗದಲ್ಲಿ, ಶತಾವರಿ ಆಯುರ್ವೇದಿಕ್ ಸಸ್ಯ ಬೆಳೆಸುವ ಉದ್ದೇಶ ಹೊಂದಿರುವೆ. ಕೃಷಿ ಕಾಯಕ ತುಂಬಾ ತೃಪ್ತಿ ತಂದಿದೆ. ಇದೇ ನನಗೆ ಸುಖಿ ಜೀವನ ತರಿಸಿದೆ’ ಎಂದು ತಿಳಿಸಿದರು.

ಸಂಪರ್ಕ ಸಂಖ್ಯೆ-9448711247

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT