ಮಂಗಳವಾರ, ಜೂನ್ 28, 2022
25 °C

ಹಲಸಿನ ಸಿಪ್ಪೆ ಬಿಡಿಸಲು ಬಂತು ಯಂತ್ರ

ರೇಷ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಕೇರಳ ಹಾಗೂ ಮಂಗಳೂರು, ಉಡುಪಿ ಭಾಗದಲ್ಲಿ ಮದುವೆ ಮತ್ತಿತರ ಸಮಾರಂಭಗಳಲ್ಲಿ ಗುಜ್ಜೆ (ಎಳೆ ಹಲಸು) ಪಲ್ಯ ಮಾಡುತ್ತಾರೆ. ಉತ್ತರ ಕನ್ನಡ ಭಾಗದಲ್ಲಿ ಕಾಯಿ ಹಲಸಿನಿಂದ ರುಚಿ ರುಚಿಯಾದ ಚಿಪ್ಸ್ ತಯಾರಿಸುತ್ತಾರೆ. ಒರಿಸ್ಸಾ ಭಾಗದಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ಕಾಯಿ ಇರುವಾಗಲೇ ಕತ್ತರಿಸಿ ಇದರಿಂದ ಬಗೆ ಬಗೆ ಖಾದ್ಯಗಳನ್ನು ತಯಾರಿಸುತ್ತಾರೆ.

ಆದರೆ ಬಾಯಿಗೆ ರುಚಿ, ಮನಸಿಗೆ ಹಿತ ಎನ್ನಿಸುವ ಚಿಪ್ಸ್, ಪಲ್ಯ ಹಾಗೂ ಇತರ ಖಾದ್ಯಗಳನ್ನು ತಯಾರಿಸುವ ಮೊದಲು ಈ ಎಲ್ಲ ತರಕಾರಿ, ಹಣ್ಣುಗಳ ಸಿಪ್ಪೆ ಬಿಡಿಸಬೇಕು. ಇದು ಬಹಳ ಕಷ್ಟದ ಕೆಲಸ. ಅದರಲ್ಲೂ ಹಲಸಿನ ಕಾಯಿ ಸಿಪ್ಪೆ ಬಿಡಿಸುವುದರ ಹಿಂದೆ ದೊಡ್ಡ ಶ್ರಮವಿದೆ.

ಒಂದು ಹಲಸಿನ ಕಾಯಿ ಸಿಪ್ಪೆ ಬಿಡಿಸಲು ಕನಿಷ್ಠ ಒಂದು ಗಂಟೆಯಾದರೂ ಬೇಕು. ಹಣ್ಣಾದ ಹಲಸನ್ನು ಸುಲಭವಾಗಿ ಬಿಡಿಸಬಹುದು. ಆದರೆ ಹಲಸಿನ ಕಾಯಿ ಹಾಗಲ್ಲ. ಮೇಣ ತುಂಬಿರುವ ಕಾಯಿಯ ಸಿಪ್ಪೆ ಬಿಡಿಸಲು, ಕೈಗೆ ಎಣ್ಣೆ ಸವರಿಕೊಂಡು ನಾಜೂಕಾಗಿ ಬಿಡಿಸಬೇಕು. ಅದು ಬೇಗ ಆಗುವುದು ಕಷ್ಟ.

ಹಲಸಿನ ಕಾಯಿ ಸಿಪ್ಪೆ ಬಿಡಿಸುವವರ ಕಷ್ಟ ನೀಗಿಸಲೆಂದೇ ಯಂತ್ರವೊಂದನ್ನು ಕಂಡು ಹಿಡಿದಿದ್ದಾರೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು.

ಈ ಬಾರಿ ಹೆಸರುಘಟ್ಟದಲ್ಲಿ ನಡೆದ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಈ ಯಂತ್ರವೇ ಆರ್ಕಷಣೆ.

ಮೇಲ್ನೋಟಕ್ಕೆ ಜನರೇಟರ್‌ನಂತೆ ಕಾಣುವ ಈ ಯಂತ್ರ ವಿದ್ಯುತ್ ಚಾಲಿತವಾಗಿದೆ. ಯಂತ್ರದ ಒಳಗೆ 1ಎಚ್‌ಪಿ ಮೋಟರ್ ಅಳವಡಿಸಲಾಗಿದ್ದು ಯಂತ್ರದ ಮೇಲೆ ಬ್ಲೇಡ್‌ ಜೋಡಿಸಲಾಗಿದೆ.

ಬ್ಲೇಡ್‌ನ ಸಹಾಯದಿಂದ ಸಿಪ್ಪೆ ತೆಗೆಯಬಹುದು. ಯಂತ್ರದ ಮೋಟಾರ್‌ನ ವೈರ್‌ ಅನ್ನು ಸಿಕ್ಕಿಸಿ ಸ್ವಿಚ್ ಆನ್ ಮಾಡಿ ಹಲಸಿನ ಕಾಯಿಯನ್ನು ಬ್ಲೇಡ್‌ ಬಳಿ ಇರಿಸಿದರೆ ಅದು ಸರಾಗವಾಗಿ ಸಿಪ್ಪೆ ಸುಲಿಯುತ್ತದೆ (ವಿವರಕ್ಕೆ ಕ್ಯೂಆರ್‌ ಕೋಡ್ ಸ್ಕ್ಯಾನ್ ಮಾಡಿ ನೋಡಿ). ಸುಲಿದ ಸಿಪ್ಪೆಯು ನೇರವಾಗಿ ನೆಲಕ್ಕೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ.

ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳಾದ ಡಾ. ಶ್ರೀನಿವಾಸ ಹಾಗೂ ಡಾ. ಭುವನೇಶ್ವರಿ ಈ ಯಂತ್ರವನ್ನು ಕಂಡು ಹಿಡಿದವರು.

‘ಕೈಯಿಂದ ಗಂಟೆಗೆ 1 ರಿಂದ 2 ಹಲಸಿನ ಕಾಯಿ ಬಿಡಿಸಬಹುದು. ಆದರೆ ಈ ಯಂತ್ರದಿಂದ ಗಂಟೆಗೆ 6 ರಿಂದ 7ಕ್ಕೂ ಅಧಿಕ ಕಾಯಿಗಳನ್ನು ಬಿಡಿಸಬಹುದು. ಇದರಿಂದ ಸಮಯದ ಉಳಿತಾಯದೊಂದಿಗೆ ಶ್ರಮವು ಕಡಿಮೆಯಾಗಲಿದೆ’ ಎನ್ನುವುದು ಭುವನೇಶ್ವರಿ ಅವರ ಅಭಿಪ್ರಾಯ.

ಈ ಯಂತ್ರದ ಬೆಲೆ ₹ 30, 000 ಎಂದು ಅಂದಾಜಿಸಲಾಗಿದ್ದು ನಿಖರವಾದ ಬೆಲೆಯನ್ನು ಇನ್ನು ನಿಗದಿ ಮಾಡಿಲ್ಲ. ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿಗೆ: 9448505484 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು