ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೂ ತಂತ್ರಜ್ಞಾನದ ಖುಷಿ: ಇಲ್ಲಿವೆ ಬೆಳೆ ಬಗ್ಗೆ ಮಾಹಿತಿ ನೀಡುವ ಆ್ಯಪ್‌ಗಳ ವಿವರ

Last Updated 17 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ವ್ಯಾಪಿಸಿದೆ ಹಾಗೆಯೇ ಕೃಷಿಗೂ ಸಾಕಷ್ಟು ಆವರಿಸಿಕೊಂಡಿದೆ. ಇಂಥ ತಂತ್ರಜ್ಞಾನವನ್ನು ಬಳಸಿಕೊಂಡ ಕೃಷಿಕರ ಜೀವನ, ಬೆಳೆ, ಫಸಲು ನಿರ್ವಹಣೆ ಇನ್ನಷ್ಟು ಸುಧಾರಿಸಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಂತೂ ಕೃಷಿಯ ಪ್ರತಿ ಹಂತಕ್ಕೂ ಆ್ಯಪ್‌ಗಳು ಲಭ್ಯವಿವೆ. ಪ್ರತಿ ಬೆಳೆಯ ಬಗ್ಗೆಯೂ ಮಾಹಿತಿ ನೀಡುವ ಹಲವು ಆ್ಯಪ್‌ಗಳಿವೆ.

‘ಕಿಸಾನ್‌ ಸುವಿಧಾ’ ಎಂಬ ಕೇಂದ್ರ ಸರ್ಕಾರ 2016ರಲ್ಲಿ ಬಿಡುಗಡೆ ಮಾಡಿದ ಆ್ಯಪ್‌ನಲ್ಲಿ ರೈತರಿಗೆ ಉಪಯುಕ್ತ ಮಾಹಿತಿ ಇವೆ. ರಸಗೊಬ್ಬರ, ವಿಮೆ, ಮಣ್ಣಿನ ಫಲವತ್ತತೆ, ಸಾವಯವ ಕೃಷಿ ಸೇರಿದಂತೆ ಹಲವು ಅಗತ್ಯ ಮಾಹಿತಿ ಇದರಲ್ಲಿ ಸಿಗುತ್ತದೆ.

ಬೆಂಗಳೂರಿನ ಇಫ್ಕೋ ಕೂಡ ಒಂದು ಅತ್ಯುತ್ತಮ ‘ಇಫ್ಕೋ ಕಿಸಾನ್’ ಎಂಬ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ. ಇದರಲ್ಲೂ ರೈತರಿಗೆ ಬೆಳೆ ಹಾಗೂ ಇತರ ಅಗತ್ಯ ಮಾಹಿತಿ ಸಿಗುತ್ತದೆ. ಖಾಸಗಿ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ‘ಕೃಷಿಮಿತ್ರ’, ‘ಅಗ್ರಿಆ್ಯಪ್‌’ ಕೂಡ ಉಪಯುಕ್ತ ಮಾಹಿತಿಗಳನ್ನು ಹೊಂದಿವೆ.

ಮಾರಾಟ ಖರೀದಿಗೂ ಇದೆ ಆ್ಯಪ್‌

ಮಾಹಿತಿ ಕುರಿತ ಆ್ಯಪ್‌ಗಳೇನೋ ಸಾಕಷ್ಟಿವೆ. ಹಲವು ಜನಪ್ರಿಯವಾಗಿರುವ ಒಂದೊಂದು ಬೆಳೆಗೂ ಆ್ಯಪ್‌ಗಳು ಸಿಗುತ್ತವೆ. ಆದರೆ, ಈವರೆಗೆ ಕೃಷಿ ಸರಕುಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದ ಆ್ಯಪ್‌ ಆಧರಿತ ವ್ಯವಸ್ಥೆಯ ಕೊರತೆ ಇತ್ತು. ಅದೂ ಕೂಡ ಈಗ ನೀಗುತ್ತಿದೆ. ಇದಕ್ಕೆ ಖಾಸಗಿ ಕಂಪನಿಗಳು ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಕೂಡ ವಿಶೇಷ.

ದೆಹಲಿ ಮೂಲದ ಕೃಷಿ ಆಚಾರ್ಯ ಟೆಕ್ನಾಲಜೀಸ್‌ ಸಂಸ್ಥೆ ‘ಬೀಜಕ್’ ಎಂಬ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ಬೆಳೆಗಳನ್ನು ರೈತರು ಮಾರಾಟ ಮಾಡಬಹುದು ಮತ್ತು ಖರೀದಿದಾರರು ಖರೀದಿ ಮಾಡಬಹುದು. ಇದಕ್ಕೆ ಅಮೆರಿಕದ ವೆಂಚರ್ ಕ್ಯಾಪಿಟಲ್ ಸಂಸ್ಥೆ ಸೆಖೋಯಾ ಹೂಡಿಕೆ ಮಾಡಿದೆ ಎಂಬುದು ಈ ಉದ್ಯಮದ ವ್ಯಾಪ್ತಿಯನ್ನು ಸೂಚಿಸುತ್ತದೆ. ಈ ಆ್ಯಪ್‌ ಸೇರಿದಂತೆ ಬಹುತೇಕ ಕೃಷಿ ಸಂಬಂಧಿತ ಆ್ಯಪ್‌ಗಳು ಕನ್ನಡದ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ. ಹೀಗಾಗಿ, ಇಂಗ್ಲಿಷ್ ಬರದ ಕೃಷಿಕರು ಆ್ಯಪ್‌ ಬಳಕೆಗೆ ಹಿಂಜರಿಯುವಂತಿಲ್ಲ.

ಇನ್ನು ಎನ್‌ಬಿಎಚ್‌ಸಿ ಎಂಬ ಸರಕು ನಿರ್ವಹಣೆ ಸಂಸ್ಥೆ ಕೂಡ ‘ಕೃಷಿಸೇತು’ ಎಂಬ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ. ಇದು ಕೂಡ ಕೃಷಿಸಾಮಗ್ರಿಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಮಾಡಿಕೊಡುತ್ತದೆ. ಎನ್‌ಬಿಎಚ್‌ಸಿ ಹೆಚ್ಚು ಸಾಂಸ್ಥಿಕ ಹೂಡಿಕೆ ಮತ್ತು ಸಗಟು ಹೂಡಿಕೆಗೆ ಹೆಚ್ಚು ಒತ್ತಿ ನೀಡಿದೆ.

ಅಗ್ರಿ ಮಾರ್ಕೆಟ್ ಎಂಬ ಸರ್ಕಾರ ಪ್ರಕಟಿಸಿದ ಆ್ಯಪ್‌ನಲ್ಲಿ ಎಲ್ಲ ಬೆಳೆಗಳ ಬೆಲೆ ಮಾಹಿತಿ ಸಿಗುತ್ತದೆ. ಇದರಲ್ಲಿ ವ್ಯಕ್ತಿ ಇರುವ 50 ಕಿ.ಮೀ. ಸುತ್ತಮುತ್ತಲಿನ ಮಂಡಿಗಳಲ್ಲಿನ ಸದ್ಯದ ಬೆಲೆ ಮಾಹಿತಿ ಲಭ್ಯವಾಗುತ್ತದೆ. ಇದು ರೈತರಿಗೆ ತಮ್ಮ ಬೆಳೆಗೆ ಎಷ್ಟು ಬೆಲೆ ಲಭ್ಯವಾಗಬಹುದು ಎಂಬ ಸ್ಪಷ್ಟ ಮಾಹಿತಿ ಸಿಕ್ಕಿಬಿಡುತ್ತದೆ.

ಇನ್ನು ಸರ್ಕಾರವೇ ಸಿಎಚ್‌ಸಿ ಫಾರ್ಮ್‌ ಮಶಿನರಿ ಆ್ಯಪ್‌ ಅಭಿವೃದ್ಧಿಪಡಿಸಿದೆ. ಇದಂತೂ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಯೋಚನೆ. ರೈತರು ತಮ್ಮ ಬಳಿ ಇರುವ ಕೃಷಿ ಸಲಕರಣೆಗಳನ್ನು ಬಾಡಿಗೆಗೆ ಈ ಆ್ಯಪ್‌ ಮೂಲಕ ಕೊಡಬಹುದು. ತಮ್ಮ ಸಲಕರಣೆಯ ಕುರಿತ ಮಾಹಿತಿಯೊಂದಿಗೆ ಆ್ಯಪ್‌ನಲ್ಲಿ ನೊಂದಣಿ ಮಾಡಿಕೊಂಡರೆ, ಅಗತ್ಯ ಇದ್ದವರು ಇದೇ ಆ್ಯಪ್‌ನಲ್ಲಿ ಬುಕ್ ಮಾಡಬಹುದು. ಹಲವು ಪ್ರದೇಶಗಳಲ್ಲಿ ಈ ಆ್ಯಪ್‌ ಯಶಸ್ಸು ಕಂಡಿದೆ. ಆದರೆ, ಇದಕ್ಕೆ ಅಗತ್ಯವಿರುವ ಪ್ರಚಾರ ಸಿಗದಿರುವುದರಿಂದ ಬಳಕೆಯಲ್ಲಿ ಹಿಂದುಳಿದಿದೆ.

ಇದೇ ಯೋಚನೆಯನ್ನಿಟ್ಟುಕೊಂಡು ಅಗ್ರಿಶೇರ್‌ ರೀತಿಯ ಖಾಸಗಿ ಆ್ಯಪ್‌ಗಳೂ ಪ್ಲೇಸ್ಟೋರ್‌ನಲ್ಲಿ ಸಿಗುತ್ತವೆ.

ಅರಿವು ಮತ್ತು ಬಳಕೆಗೆ ಬೇಕಿದೆ ಒತ್ತು

ಕೃಷಿಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಆ್ಯಪ್‌ಗಳು ಈಗ ಲಭ್ಯವಿವೆ. ಇಂಟರ್ನೆಟ್ ಬಳಕೆ ಗ್ರಾಮೀಣ ಪ್ರದೇಶಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದಂತೆಯೇ, ತಂತ್ರಜ್ಞಾನದ ಮೂಲಕ ಮಾಹಿತಿ ಒದಗಿಸುವ ಪ್ರಕ್ರಿಯೆಗೂ ಇಂಬು ಸಿಕ್ಕಿದೆ. ಇಂಟರ್ನೆಟ್‌ ಅಳವಡಿಕೆಯ ಮೊದಲ ಹೆಜ್ಜೆಯೇ ಮಾಹಿತಿ ಒದಗಿಸುವಿಕೆಯಾಗಿರುವುದರಿಂದ, ಈ ನಿಟ್ಟಿನಲ್ಲಿ ಮಹತ್ವದ ಮುನ್ನಡೆಯಾಗುತ್ತಿದೆ. ಈಗಾಗಲೇ ಬೆಲೆ, ಬೆಳೆ, ಸಲಕರಣೆ ಕುರಿತ ಮಾಹಿತಿ ಆ್ಯಪ್‌ಗಳು ಜನಪ್ರಿಯವಾಗುತ್ತಿವೆ. ಇಂತಹ ಆ್ಯಪ್‌ಗಳನ್ನು ಬಳಸಿಕೊಂಡರೆ ರೈತರಿಗೆ ಈಗ ಮಾಹಿತಿ ಕೊರತೆ ಎದುರಾಗದು. ಕೃಷಿಗೆ ಹವಾಮಾನ ಕೂಡ ಅತ್ಯಂತ ಪ್ರಮುಖವಾದ್ದರಿಂದ, ಎಲ್ಲ ಪ್ರಮುಖ ಹವಾಮಾನ ಮುನ್ಸೂಚನೆಗಳನ್ನೂ ಈ ಆ್ಯಪ್‌ಗಳು ಕೊಡುತ್ತವೆ. ಅಲ್ಲದೆ, ಪ್ರತಿ ಕೃಷಿಸಂಬಂಧಿ ಉತ್ಪನ್ನ, ರಾಸಾಯನಿಕವನ್ನು ಉತ್ಪಾದಿಸುವ ಕಂಪನಿಗಳೂ ತಮ್ಮ ಉತ್ಪನ್ನಗಳನ್ನು ಬಳಕೆ ಮಾಡುವ ರೈತರಿಗಾಗಿ ಆ್ಯಪ್‌ ಅನ್ನು ಸಿದ್ಧಪಡಿಸಿದ್ದು, ಇದರಲ್ಲಿ ನಿರ್ದಿಷ್ಟ ಉತ್ಪನ್ನ ಬಳಕೆಯಾಗುವ ಬೆಳೆಗೆ ಸಂಬಂಧಿಸಿದ ಮಾಹಿತಿಯೂ ಸಿಗುತ್ತದೆ.

ಆದರೆ, ಮಾಹಿತಿಗಾಗಿ ಆ್ಯಪ್‌ಗಳ ಬಳಕೆ ಕೃಷಿಕ್ಷೇತ್ರದಲ್ಲಿ ಇನ್ನೂ ಹೆಚ್ಚಬೇಕಿದೆ. ಆಗ ಈ ವಲಯ ಹೆಚ್ಚು ಹೊಸತನಕ್ಕೆ ತೆರೆದುಕೊಳ್ಳುತ್ತದೆ ಮತ್ತು ಇನ್ನಷ್ಟು ಹೊಸ ಹೊಸ ಯೋಚನೆಗಳಿರುವ ಆ್ಯಪ್‌ಗಳು ಮತ್ತು ಅದರ ಮೂಲಕ ಸೇವೆಗಳು ಚಾಲ್ತಿಗೆ ಬರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT