ಬುಧವಾರ, ಆಗಸ್ಟ್ 17, 2022
25 °C
ಕೃಷಿ ವಿ.ವಿ– ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಯೋಜನೆ ಜಾರಿಗೆ ಸಿದ್ಧತೆ

ಕೃಷಿ ಮಹತ್ವ ಪರಿಚಯಿಸಲು ‘ಅಗ್ರಿ ಟೂರಿಸಂ’

ಮನೋಹರ್‌ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂದಿನ ಪೀಳಿಗೆಗೆ ಕೃಷಿಯ ಮಹತ್ವ ಹಾಗೂ ಗ್ರಾಮೀಣ ಪರಿಸರ ಪರಿಚಯಿಸುವ ಉದ್ದೇಶದಿಂದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸಹಯೋಗದಲ್ಲಿ 'ಅಗ್ರಿ ಟೂರಿಸಂ' (ಕೃಷಿ ಪ್ರವಾಸೋದ್ಯಮ) ಯೋಜನೆಯು ಶೀಘ್ರವೇ ಆರಂಭಗೊಳ್ಳಲಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಮೈಸೂರಿನ ನಾಗೇನಹಳ್ಳಿಯಲ್ಲಿರುವ ಸಾವಯವ ವ್ಯವಸಾಯ ಸಂಶೋಧನಾ ಘಟಕ ಹಾಗೂ ಹಾಸನದ ಗುಂಜೇವು ಪ್ರದೇಶದಲ್ಲಿರುವ ಕೃಷಿ ಸಂಶೋಧನಾ ಘಟಕಗಳಲ್ಲಿ ಈ ಯೋಜನೆ ಮೊದಲಿಗೆ ಅನುಷ್ಠಾನಗೊಳ್ಳಲಿದೆ.

'ಅಗ್ರಿ ಟೂರಿಸಂ' ಯೋಜನೆಯಡಿ ಹಳ್ಳಿಯ ವಾತಾವರಣದೊಂದಿಗೆ ಕೃಷಿ ವಸ್ತು ಸಂಗ್ರಹಾಲಯಗಳನ್ನು ತೆರೆಯಲಾಗುವುದು. ದೇಶದಲ್ಲಿ ಅನುಸರಿಸುತ್ತಿದ್ದ ಪುರಾತನ ಕೃಷಿ ಪದ್ಧತಿಗಳಿಂದ ಈಗಿನ ಆಧುನಿಕ ಕೃಷಿಯವರೆಗಿನ ಬದಲಾವಣೆಗಳನ್ನು ಈ ಕೇಂದ್ರಗಳು ಕಟ್ಟಿಕೊಡಲಿವೆ.

'ಜಿಕೆವಿಕೆ, ನಾಗೇನಹಳ್ಳಿ, ಗುಂಜೇವು ಕೃಷಿ ಸಂಶೋಧನಾ ಘಟಕದಲ್ಲಿ ಯೋಜನೆ ಪ್ರಾಯೋಗಿಕವಾಗಿ ಆರಂಭವಾಗಲಿದೆ. ಇಲ್ಲಿ ಕೃಷಿ ಸಂಬಂಧಿತ ವಸ್ತು ಸಂಗ್ರಹಾಲಯ ಇರಲಿದೆ. ಇಲ್ಲಿ ಈಗಾಗಲೇ ವಿವಿಧ ತಳಿಯ ತರಕಾರಿಗಳು, ವಾಣಿಜ್ಯ ಬೆಳೆಗಳು, ಹಣ್ಣುಗಳನ್ನು ಬೆಳೆಯಲಾಗಿದೆ' ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ರಾಜೇಂದ್ರ ಪ್ರಸಾದ್ ಮಾಹಿತಿ ನೀಡಿದರು.

'ಈ ಘಟಕದಲ್ಲಿ ಹಳೆಯ ಕಾಲದ ಕೃಷಿ ವಿಧಾನ, ಅಂದಿನ ಗ್ರಾಮೀಣ ಜನರ ಜೀವನ ಶೈಲಿ, ಹಾಲು ಕರೆಯುವುದು, ಸಗಣಿ ಬಳಕೆ, ಹಸು ಮೇಯಿಸುವುದು, ದನ ತೊಳೆಯುವುದನ್ನು ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಲಾಗುವುದು. ಕೃಷಿ ಉತ್ಪನ್ನಗಳ ಶೈತ್ಯಾಗಾರ, ಗಾರ್ಡನಿಂಗ್ ಪರಿಚಯವೂ ಮಾಡಿಸಲಿದ್ದೇವೆ' ಎಂದರು.

'ಮೈಸೂರಿಗೆ ಪ್ರವಾಸಿಗರು ಹೆಚ್ಚು ಭೇಟಿ ನೀಡುವುದರಿಂದ ನಾಗೇನಹಳ್ಳಿಯ ಸಾವಯವ ವ್ಯವಸಾಯ ಸಂಶೋಧನಾ ಘಟಕದಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಗಳನ್ನು ಪರಿಚಯಿಸುವ ಚಿಂತನೆ ಇದೆ. ಪಶು ಸಾಕಣೆ, ಸಾವಯವ ಕೃಷಿ ಬೆಳೆಗಳು, ಔಷಧಿ ಸಸ್ಯಗಳ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡಲಾಗುತ್ತದೆ. ಆಸಕ್ತರಿಗೆ ತಜ್ಞರಿಂದ ತರಬೇತಿ ಶಿಬಿರಗಳನ್ನೂ ಆಯೋಜಿಸಲಾಗುವುದು' ಎಂದು ಅಗ್ರಿ ಟೂರಿಸಂ ಯೋಜನೆಯ ಸಂಯೋಜನಾಧಿಕಾರಿ ಕೆ.ನಾರಾಯಣ ಗೌಡ 'ಪ್ರಜಾವಾಣಿ'ಗೆ ತಿಳಿಸಿದರು. 

'ಪ್ರವಾಸೋದ್ಯಮ ಸಚಿವರಾಗಿದ್ದ ಸಿ.ಟಿ.ರವಿ ಅವರು 'ಅಗ್ರಿ ಟೂರಿಸಂ' ಕುರಿತು ಪ್ರಸ್ತಾಪಿಸಿದ್ದರು. ಅದಕ್ಕೆ ಪೂರಕವಾಗಿ ಎಲ್ಲ ರೂಪರೇಷೆಗಳನ್ನು ವಿಶ್ವವಿದ್ಯಾಲಯ ಸಿದ್ಧಪಡಿಸಿದೆ. ಮೂರು ಕೇಂದ್ರಗಳಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಕೊರೊನಾದಿಂದ ಯೋಜನೆ ತುಸು ವಿಳಂಬವಾಯಿತು. ಮುಂದಿನ ಮಾರ್ಚ್ ವೇಳೆಗೆ 'ಅಗ್ರಿ ಟೂರಿಸಂ'ಗೆ ಚಾಲನೆ ಸಿಗಲಿದೆ' ಎಂದು ವಿವರಿಸಿದರು.

ಎತ್ತಿನ ಬಂಡಿಯಲ್ಲಿ ಪ್ರವಾಸ
'ಜನರನ್ನು ಕೃಷಿ ಪ್ರವಾಸಕ್ಕೆ ಕರೆತರುವ ಜವಾಬ್ದಾರಿಯನ್ನು ಪ್ರವಾಸೋದ್ಯಮ ಇಲಾಖೆ ಹೊತ್ತಿರುತ್ತದೆ. ಪ್ರವಾಸಕ್ಕೆ ಬಂದವರನ್ನು ಎತ್ತಿನ ಗಾಡಿಯ ಮೂಲಕ ಬರಮಾಡಿಕೊಳ್ಳಲಾಗುವುದು. ತೋಟಕ್ಕೆ ಎತ್ತಿನ ಬಂಡಿಯಲ್ಲೇ ಕರೆದೊಯ್ಯಲಾಗುವುದು' ಎಂದು ಕೆ.ನಾರಾಯಣ ಗೌಡ ತಿಳಿಸಿದರು.

'ಪ್ರವಾಸಿಗರಿಗೆ ಕೃಷಿ ಪರಿಕರಗಳನ್ನು ಅಲ್ಲಲ್ಲಿ ಪ್ರದರ್ಶಿಸಲಾಗುವುದು. ಕೃಷಿಯ ವಿವಿಧ ತಳಿಗಳು, ಕೃಷಿ ಪದ್ಧತಿಗಳು, ಗ್ರಾಮೀಣ ಆಟಗಳಾದ ಗೋಲಿ, ಬುಗುರಿ, ಕುಂಟೆಬಿಲ್ಲೆ, ಟ್ರ್ಯಾಕ್ಟರ್ ಚಾಲನೆ, ಎತ್ತಿನಗಾಡಿ ಓಡಿಸುವುದು, ಉಳುವುದು, ಹೈನುಗಾರಿಕೆ, ಕುಂಬಾರಿಕೆ, ಕುರಿ, ಕೋಳಿ, ಸಾಗಣೆಗಳ ಮಾಹಿತಿ ನೀಡಲಾಗುವುದು. ಗ್ರಾಮೀಣ ಭಾಗಗಳಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳು, ಘಟಕಗಳಲ್ಲಿ ತಂಗಲು ವಸತಿ ಊಟದ ವ್ಯವಸ್ಥೆಯೂ ಇರಲಿದೆ' ಎಂದು ಮಾಹಿತಿ ನೀಡಿದರು.

*
ಈಗಿನ ಯುವ ಜನಾಂಗಕ್ಕೆ ಕೃಷಿ ಮೇಲೆ ಆಸಕ್ತಿ ಕಡಿಮೆ ಆಗುತ್ತಿದೆ. ಕೃಷಿಗೆ ಪ್ರವಾಸದ ಸ್ಪರ್ಶ ನೀಡುವುದರಿಂದ ಜನರು ಕೃಷಿ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ.
-ಎಸ್.ರಾಜೇಂದ್ರ ಪ್ರಸಾದ್, ಬೆಂಗಳೂರು ಕೃಷಿ ವಿ.ವಿ ಕುಲಪತಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು