ಗುರುವಾರ , ಫೆಬ್ರವರಿ 20, 2020
18 °C

ಬೆಳೆಗಳಿಗೂ ಬೇಕು ಮೀನೂಟ

ಮಂಜುಳಾ ಭದ್ರಾವತಿ Updated:

ಅಕ್ಷರ ಗಾತ್ರ : | |

ಮೀನು ಮನುಷ್ಯನಿಗಷ್ಟೇ ಆಹಾರವಲ್ಲ, ಬೆಳೆಯುವ ಬೆಳೆಗಳಿಗೂ ಉತ್ತಮ ಪೌಷ್ಟಿಕಾಂಶ ನೀಡುವ ಗೊಬ್ಬರ. ಆದ್ದರಿಂದಲೇ, ಕೆಲವು ರೈತರು ಮೀನು ಅಥವಾ ಅದರ ತ್ಯಾಜ್ಯವನ್ನು ಬೆಲ್ಲದೊಂದಿಗೆ ಮಿಶ್ರ ಮಾಡಿ ಕಳಿಸಿ, ಬರುವ ಸಾರವನ್ನು ಬೆಳೆಗಳಿಗೆ ಟಾನಿಕ್ ರೂಪದಲ್ಲಿ ಕೊಡುತ್ತಿದ್ದಾರೆ.

ಮೀನಿನ ತ್ಯಾಜ್ಯದಿಂದ ಕಡಿಮೆ ಖರ್ಚಿನಲ್ಲಿ ಬೆಳೆ ಪ್ರಚೋದಕ ತಯಾರಿಸಿಕೊಳ್ಳಬಹುದು. ಇದರಿಂದ ಮಾಲಿನ್ಯ ನಿಯಂತ್ರಣವೂ ಸಾಧ್ಯ. ಜತೆಗೆ ಯೂರಿಯಾದಂತಹ ರಾಸಾಯನಿಕ ಬಳಕೆಗೂ ಕಡಿವಾಣ ಹಾಕಬಹುದು. ಆಹಾರಕ್ಕಾಗಿ ಮೀನು ಬಳಸಿದ ನಂತರ ಯಥೇಚ್ಚ ತ್ಯಾಜ್ಯ ಸೃಷ್ಟಿಯಾಗುತ್ತದೆ. ಅದನ್ನು ಎಲ್ಲೆಂದರಲ್ಲಿ ಎಸೆದು ದುರ್ವಾಸನೆಗೆ ಕಾರಣವಾಗುವ ಬದಲು ಈ ರೀತಿ ಸದುಪಯೋಗ ಪಡಿಸಿಕೊಳ್ಳಬಹುದು.

ಮೀನು ತಿಂದರೆ ಮನುಷ್ಯನ ಬುದ್ಧಿ ಚುರುಕಾಗುತ್ತದೆ ಎಂಬುದು ಸಾಮಾನ್ಯ ತಿಳಿವಳಿಕೆ. ಅದೇ ಮೀನಿನಿಂದ ಬೆಳೆಗಳನ್ನೂ ಚುರುಕುಗೊಳಿಸಬಹುದು. ಆದರೆ ಮನುಷ್ಯರಂತೆ ಮೀನಿನ ಸಾರು, ಫ್ರೈ, ಕಬಾಬ್ ರೂಪದಲ್ಲಿ ಬೆಳೆಗೆ ಕೊಡುವ ಹಾಗಿಲ್ಲ. ಬದಲಿಗೆ ಮೀನು ಅಥವಾ ಅದರ ತ್ಯಾಜ್ಯವನ್ನು ಬೆಲ್ಲದೊಂದಿಗೆ ಮಿಶ್ರ ಮಾಡಿ ಅದರಿಂದ ಬರುವ ಸಾರವನ್ನು ಕೊಡಬೇಕು.

ಸಂಸ್ಕರಿಸಿದ ಮೀನು ಮತ್ತು ತಯಾರಾದ ಸಾರ

ಪ್ರಾಣಿಗಳಂತೆ ಸಸ್ಯಗಳಿಗೂ ಅಮೈನೋ ಆ್ಯಸಿಡ್ ಅಗತ್ಯವಿದೆ. ಇದು ಸಸ್ಯಗಳ ಬೆಳವಣಿಗೆ, ಹೂಬಿಡುವಿಕೆ ಮತ್ತು ಉತ್ಪಾದನೆಗೆ ಪೂರಕ. ಸ್ವಲ್ಪ ಪ್ರಮಾಣದಲ್ಲಿ ಬೇಕಾದರೂ ಅತಿಮುಖ್ಯ. ಇದು ದ್ಯುತಿ ಸಂಶ್ಲೇಷಣಾ ಕ್ರಿಯೆಯಿಂದ ಲಭ್ಯವಾಗುವುದಿಲ್ಲ. ಇದಕ್ಕೆ ಒಂದು ಒಳ್ಳೆಯ ಪರಿಹಾರ ಮೀನಿನ ಟಾನಿಕ್. ಕೊರಿಯಾ, ಜಪಾನ್ ಮುಂತಾದ ದೇಶಗಳ ಸಾವಯವ ಕೃಷಿಕರು ಇದನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ನಮ್ಮ ಭಾರತೀಯ ಸಾವಯವ ಕೃಷಿಕರ ಸಂಸ್ಥೆಯೂ ಇದನ್ನು ತನ್ನ ರೈತರ ಮೂಲಕ ಪರೀಕ್ಷಿಸಿದೆ.

ಮೀನು ಹಾಗೂ ಅದರ ತ್ಯಾಜ್ಯದಲ್ಲಿ ಪ್ರೋಟಿನ್ ಹೆಚ್ಚಾಗಿರುತ್ತದೆ. ಅದನ್ನು ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಿಸಿದರೆ ಗಿಡಗಳ ಬೆಳವಣಿಗೆಗೆ ಪೂರಕವಾದ ದ್ರಾವಣ ಲಭ್ಯ. ಬೆಳೆಗಳಿಗೆ ಅಗತ್ಯವಾದ ಶೇಕಡಾ 8ರಿಂದ 10ರಷ್ಟು ಸಾರಜನಕವನ್ನು ಇದು ಒದಗಿಸುತ್ತದೆ. ಕೀಟಗಳನ್ನು ವಿಕರ್ಷಿಸುತ್ತದೆ. ಮುಖ್ಯವಾಗಿ ಬೇರುಗಳನ್ನು ಕತ್ತರಿಸುವ ಗೊಣ್ಣೆ ಹುಳು (ರೂಟ್ ಗ್ರಬ್) ಗಳನ್ನು ಇದರ ಬಳಕೆಯಿಂದ ನಿಯಂತ್ರಿಸಬಹುದು. ‘ಮೀನಿನ ಸಾರದಲ್ಲಿ ಅಮೈನೋ ಆಮ್ಲ ಹಾಗೂ ಸೂಕ್ಷ್ಮಾಣುಗಳು ಸಮೃದ್ಧವಾಗಿದ್ದು ಬೆಳವಣಿಗೆ ಹೆಚ್ಚಿಸುತ್ತವೆ ಹಾಗೂ ಮಣ್ಣಿನ ಫಲವತ್ತತೆಯನ್ನೂ ಸಹ ಸುಧಾರಿಸುತ್ತವೆ’ ಎನ್ನುತ್ತಾರೆ ಶಿವಮೊಗ್ಗ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಡಾ. ಎಂ. ವೈ. ಉಲ್ಲಾಸ್.

ಮೀನಿನ ಸಾರ ಸೋಸುತ್ತಿರುವ ಮೀನಾಕ್ಷಮ್ಮ 

ತಯಾರಿಸುವ ವಿಧಾನ

ಒಂದು ಮಣ್ಣಿನ ಮಡಕೆ ಅಥವಾ ಬಕೆಟ್ ಇಲ್ಲವೇ ಗಾಜಿನ ಜಾಡಿ ತೆಗೆದುಕೊಳ್ಳಿ. ಮುಚ್ಚಳ ಇರುವುದನ್ನು ಖಾತ್ರಿಪಡಿಸಿಕೊಳ್ಳಿ. ಮೀನನ್ನು ಸಣ್ಣ-ಸಣ್ಣ ಚೂರುಗಳಾಗಿ ಕತ್ತರಿಸಿ. ಮಡಕೆ ಅಥವಾ ಬಕೆಟ್ಟಿಗೆ ಕತ್ತರಿಸಿದ ಮೀನಿನ ಸಮಪ್ರಮಾಣಕ್ಕೆ ಬೆಲ್ಲ ಅಥವಾ ಕಾಕಂಬಿ ಹಾಕಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ 1 ಕೆ.ಜಿ ಮೀನಿಗೆ ಒಂದು ಕೆ.ಜಿ ಬೆಲ್ಲ ಅಥವಾ ಕಾಕಂಬಿ ಹಾಕಬೇಕು, ಅದೇ ಒಂದು ಕೆ.ಜಿ ಮೀನಿನ ತ್ಯಾಜ್ಯವಾದರೆ ಒಂದೂವರೆ ಕೆ.ಜಿ ಬೆಲ್ಲ ಅಥವಾ ಕಾಕಂಬಿ ಹಾಕಬೇಕು.

ಹೀಗೆ ಹಾಕಿದ ನಂತರ ಪಾತ್ರೆಯೊಳಗೆ ನೊಣ ಅಥವಾ ಸೊಳ್ಳೆಗಳು ಹೋಗದ ಹಾಗೆ ಹತ್ತಿ ಬಟ್ಟೆಯಿಂದ ಕಟ್ಟಬೇಕು, ಜೊತೆಗೆ ಮುಚ್ಚಳ ಹಾಕಬೇಕು. ಇದನ್ನು ಮನೆಯ ಹೊರಗೆ ಪ್ರಾಣಿಗಳಿಗೆ ದೊರಕದಂತೆ ಇಡಬೇಕು. ಏಕೆಂದರೆ ಮೊದಲ 4 ರಿಂದ 5 ದಿನಗಳಲ್ಲಿ ಈ ಮೀನಿನ ಮಸಾಲೆ ಸಾರದಿಂದ ಕೆಟ್ಟ ವಾಸನೆ ಬರುತ್ತದೆ. ಅದರ ವಾಸನೆಗೆ ನಾಯಿ, ಬೆಕ್ಕು ಇತ್ಯಾದಿ ಪ್ರಾಣಿಗಳು ಹಾಗೂ ಕ್ರಿಮಿ-ಕೀಟಗಳು ಬರುವ ಸಾಧ್ಯತೆ ಹೆಚ್ಚು.

5ನೇ ದಿನದಿಂದ ಮುಂದಿನ 20 ದಿನಗಳವರೆಗೂ ಪ್ರತಿ ದಿನ ಈ ಸಾರವನ್ನು ಕಲಕುತ್ತಿರಬೇಕು. ಈ ಅವಧಿಯಲ್ಲಿ ಈ ದ್ರಾವಣವು ದುರ್ವಾಸನೆ ಕಳೆದುಕೊಂಡು ಸುವಾಸನೆ ಬೀರುವುದನ್ನು ಗಮನಿಸಬಹುದು. ಮಧುರ ವಾಸನೆ ಬರಲು ಆರಂಭಿಸಿದರೆ ಇದು ಬಳಕೆಗೆ ಯೋಗ್ಯ ಎಂದರ್ಥ. ಒಂದು ವೇಳೆ 10 ದಿವಸದ ನಂತರವೂ ಕೆಟ್ಟ ವಾಸನೆಯೇ ಬರುತ್ತಿದ್ದರೆ ಅದರ ಕಳಿಯುವಿಕೆ ಪ್ರಕ್ರಿಯೆ ಸರಿಯಾಗಿ ಆಗುತ್ತಿಲ್ಲ ಎಂದರ್ಥ. ಆಗ ಇದು ಬಳಕೆಗೆ ಯೋಗ್ಯವಲ್ಲ.

ಬಳಕೆಗೆ ಸಿದ್ಧವಾದಾಗ ಈ ಸಾರವನ್ನು ಜರಡಿಯಲ್ಲಿ ಸೋಸಬೇಕು, ಆಗ ಇದು ಜೇನುತುಪ್ಪದಂತೆ ಮಂದವಾಗಿರುತ್ತದೆ. ಬಣ್ಣವೂ ಅದೇ ರೀತಿ. ಈ ಬಸಿದ ಸಾರವನ್ನು ಒಂದು ಗಾಜಿನ ಜಾಡಿ ಅಥವಾ ಪಾತ್ರೆಯಲ್ಲಿ ಹಾಕಿ ಗಾಳಿ ಆಡದಂತೆ ಬಿಗಿಯಾಗಿ ಕಟ್ಟಬೇಕು. ಆರು ತಿಂಗಳವರೆಗೂ ಕೆಡದಂತೆ ಇರುತ್ತದೆ. ಇದರ ತಯಾರಿಕೆಯಲ್ಲಿ ಬಳಸುವ ಬೆಲ್ಲವು ಮೀನು ಕೊಳೆಯುವಾಗ ಉಂಟಾಗುವ ದುರ್ವಾಸನೆಯನ್ನು ತಡೆಯುತ್ತದೆ. ಅಲ್ಲದೆ ಸೂಕ್ಷ್ಮಾಣುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇವೆಲ್ಲವೂ ಗಿಡಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತವೆ.

ಬಳಕೆ ವಿಧಾನ

ಈ ಮೀನಿನ ಸಾರವನ್ನು ಬೆಳೆಗಳ ಎಲೆಗಳ ಮೇಲೆ ಶೇ 3 ರಿಂದ 5ರಷ್ಟು ಸಿಂಪಡಿಸಬೇಕು. ಅಂದರೆ 97 ಲೀಟರ್ ನೀರಿಗೆ 3 ಲೀಟರ್ ಮೀನಿನ ಸಾರ ಮಿಶ್ರ ಮಾಡುವುದು ಉತ್ತಮ. ಇನ್ನೂ ಸರಳವಾಗಿ ಹೇಳಬೇಕೆಂದರೆ ಒಂದು ಲೀಟರ್ ನೀರಿಗೆ 3 ಮಿಲಿ ಲೀಟರ್ (ಅಂದಾಜು ಒಂದು ಚಮಚ) ಮೀನಿನ ಸಾರ ಸಾಕು. ಬೆಳೆಗಳಿಗೆ ನೀರು ಹರಿಯುವಾಗ ಈ ಸಾರವನ್ನು ಮಿಶ್ರ ಮಾಡಬಹುದು. ಆಗ ಪ್ರತಿ ನೂರು ಲೀಟರ್ ನೀರಿಗೆ 2 ಲೀಟರ್ ಮೀನಿನ ಸಾರ ಬೇಕಾಗುತ್ತದೆ.

ಈ ಟಾನಿಕ್‍ನ ಮತ್ತೊಂದು ವೈಶಿಷ್ಟವೇನೆಂದರೆ ತೋಟಗಾರಿಕೆ ಬೆಳೆಗಳಾದ ತರಕಾರಿ ಮತ್ತು ಹೂವಿನ ಮಾರಾಟಕ್ಕೆ ಮುನ್ನ ಒಂದು ಲೀಟರ್ ನೀರಿಗೆ 10 ಮಿಲಿ ಅಥವಾ ಒಂದು ಚಮಚ ಈ ಟಾನಿಕ್‌ ಬೆರೆಸಿ ಸಿಂಪಡಿಸಿ ಮಾರುಕಟ್ಟೆಗೆ ಒಯ್ದರೆ ಹಣ್ಣು ಮತ್ತು ಹೂಗಳು ಹೆಚ್ಚು ಕಾಲ ತಾಜಾತನದಿಂದ ಕೂಡಿರುತ್ತವೆ. ಇದು ಗ್ರಾಹಕರನ್ನು ಸೆಳೆಯುವಲ್ಲಿ ಸಹಾಯಕ. ಕೆಲವರು ಮಾರಾಟ ಮಾಡುವ ಸಲುವಾಗಿಯೇ ರಾಸಾಯನಿಕ ದ್ರವ್ಯಗಳನ್ನು ಹೂ ಮತ್ತು ಹಣ್ಣುಗಳಿಗೆ ಸಿಂಪಡಿಸಿ ಮಾರುತ್ತಾರೆ. ಇದರಿಂದ ಬಳಸುವವರ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೀನಿನ ಟಾನಿಕ್ ಇದಕ್ಕೆ ಸೂಕ್ತ ಪರ್ಯಾಯ.

ಅನೇಕ ಸಂಸ್ಥೆಗಳು ರೈತರಲ್ಲಿ ಈ ಸರಳ ವಿಧಾನದ ಬಗ್ಗೆ ಮಾಹಿತಿ ಹಂಚುತ್ತಿವೆ. ಶಿವಮೊಗ್ಗದ ಸಾವಯವ ಕೃಷಿ ಸಂಶೋಧನಾ ಕೇಂದ್ರವು ಅವರೆ ಬೆಳೆಗೆ ಬಳಸಿ ಯಶಸ್ವಿಯಾಗಿದೆ ಹಾಗೂ ತಮ್ಮ ವ್ಯಾಪ್ತಿಯ ರೈತರಿಗೆ ಮಾಹಿತಿ ನೀಡುತ್ತಿದೆ. ದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ ಹಾಗೂ ನಬಾರ್ಡ್ ಈ ದ್ರಾವಣದ ಬಳಕೆ ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡಿವೆ.

ಭದ್ರಾವತಿ ತಾಲ್ಲೂಕಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಗೊಂದಿ ನೀರಾವರಿ ಆಧುನೀಕರಣ ಯೋಜನೆಯಲ್ಲಿಯೂ ಈ ಬಗ್ಗೆ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ಇದೇ ತಾಲ್ಲೂಕು ಅಗಸನಹಳ್ಳಿಯ ಮೀನಾಕ್ಷಮ್ಮ ಮತ್ತು ಕಾರ್ತಿಕ್ ಇದನ್ನು ಪ್ರಯೋಗಿಸಿ ಯಶಸ್ಸು ಕಂಡಿದ್ದಾರೆ. ಅಲ್ಲದೆ ತಮ್ಮ ಅಕ್ಕಪಕ್ಕದ ರೈತರಿಗೂ ನೀಡಿ ಬಳಸಲು ಉತ್ತೇಜಿಸಿದ್ದಾರೆ. ‘ಮೀನಿನ ಸಾರ ತಯಾರಿಸಿದ 20 ದಿನಗಳ ನಂತರ ಇದು ಕಳಿತು ಸುವಾಸನೆಯನ್ನು ಬೀರಲು ಪ್ರಾರಂಭಿಸಿತು. ಥಟ್ಟನೆ ನೋಡಿದರೆ ಬೇಲದ ಹಣ್ಣಿನ ಪಾನಕದಂತೆ ಭಾಸವಾಗುತ್ತಿತ್ತು. ನೋಡಿದವರು ನಿಜವಾಗಿಯೂ ಮೀನಿನಿಂದ ಉತ್ಪಾದಿಸಿದ ಟಾನಿಕ್ಕೇ ಎಂಬ ಪ್ರಶ್ನೆ ಹಾಕುತ್ತಿದ್ದರು’ ಎನ್ನುತ್ತಾರೆ ಮೀನಾಕ್ಷಮ್ಮ. ಇವರ ಅನುಭವದಂತೆ ಮೀನಿನ ಟಾನಿಕ್ ತಯಾರಿಸಲು ಆಗುವ ವೆಚ್ಚ ಪ್ರತಿ ಲೀಟರ್‌ಗೆ ಸಾಮಾನ್ಯವಾಗಿ ₹30. ಮುಳಬಾಗಿಲು ತಾಲ್ಲೂಕು ತೊಂಡಹಳ್ಳಿಯ ರೈತ ಪ್ರಭಾಕರ್, ಅವರೆ ಹಾಗೂ ತೊಗರಿ ಬೆಳೆಗೆ ಕಾಯಿ ಮತ್ತು ಮೊಗ್ಗು ಕಟ್ಟುವಾಗ ಬಳಸಿದ್ದಾರೆ. ಉತ್ತಮ ಫಲಿತಾಂಶ ಬಂದಿದೆ ಎಂಬುದು ಇವರ ಅನುಭವ. ಮಾಹಿತಿಗೆ ಮುಳಬಾಗಿಲಿನ ರೈತ ಪ್ರಭಾಕರ್ ಅವರ ಸಂಪರ್ಕ: 9008157567 (ಸಮಯ : ಸಂಜೆ 6ಗಂಟೆಯಿಂದ 9ರವರೆಗೆ)

ಚಿತ್ರಗಳು: ಮಲ್ಲಿಕಾರ್ಜುನ ಹೊಸಪಾಳ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು