ಗೇಟ್ ದಾಟುತ್ತಿದ್ದಂತೆ ಕಾಯಿಗಳಿಂದ ಭರ್ತಿಯಾದ ಹಲಸಿನ ಮರಗಳು ಸಾಲಿನಲ್ಲಿ ನಿಂತು ಸ್ವಾಗತ ಕೋರುತ್ತಿದ್ದವು. ನಾಲ್ಕೈದು ಮಾರು ಹಾಗೇ ಹೆಜ್ಜೆ ಹಾಕುತ್ತಾ ಎಡಕ್ಕೆ ತಿರುಗಿದರೆ ಹಲಸು, ಬಲಕ್ಕೆ ತಿರುಗಿದರೂ ಹಲಸು, ರಸ್ತೆಯ ತುದಿಗೆ ಹೋಗಿ ಅಲ್ಲಿದ್ದ ಕಟ್ಟಡ ಏರಿ ನಿಂತರೆ ಅಲ್ಲೂ ಹಲಸು.

ಕೋಲಾರ ಜಿಲ್ಲೆಯ ಟಮಕ ಗ್ರಾಮದ ತೋಟಗಾರಿಕೆ ಮಹಾವಿದ್ಯಾಲಯದ ಆವರಣದಲ್ಲಿ ನಿಂತರೆ ಹಲಸಿನ ಸಂತೆಯಲ್ಲಿ ನಿಂತ ಅನುಭವ ಆಗುತ್ತದೆ. ಕೋಲಾರ ನಗರದಿಂದ 10 ಕಿಲೋಮೀಟರ್ ದೂರದಲ್ಲಿದೆ ಈ ತೋಟಗಾರಿಕೆ ವಿದ್ಯಾಲಯ. ಇದಕ್ಕೆ ರಾಜ್ಯದ ಮೊದಲ ಹಲಸಿನ ತಳಿ ಸಂರಕ್ಷಣಾ ಕ್ಷೇತ್ರ ಅನ್ನುವ ಹೆಗ್ಗಳಿಕೆಯೂ ಇದೆ.

46 ಎಕರೆಯಲ್ಲಿ ಅಂಗಳದ ತುಂಬಾ 1,600ಕ್ಕೂ ಹೆಚ್ಚು ಹಲಸಿನ ಮರಗಳಿವೆ. ಪ್ರತಿ ಮರಕ್ಕೂ ಒಂದೊಂದು ಸಂಖ್ಯೆ ಇದೆ. ಕೆಲ ಮರದ ಬುಡದಲ್ಲಿ ತಳಿ ವಿವರದ ಫಲಕಗಳಿವೆ. ಒಂದೊಂದು ಮರದಲ್ಲಿನ ಹಲಸಿನ ಕಾಯಿಯ ಆಕಾರ, ಗಾತ್ರ, ಮೇಲ್ಮೈ ಲಕ್ಷಣಗಳು ವಿಭಿನ್ನ. ಒಂದು ಮರದಲ್ಲಿ ಕೊಂಬೆಗಳಿಗೇ ಕಾಯಿಗಳು ಜೋತಾಡುತ್ತಿದ್ದರೆ, ಇನ್ನೊಂದು ಮರದಲ್ಲಿ ಬುಡದಿಂದ ನೆತ್ತಿಯವರೆಗೂ ತಬ್ಬಿಕೊಂಡಿರುವ ಕಾಯಿಗಳು. ಮರದ ಬುಡದಲ್ಲಿ, ನೆಲದಲ್ಲಿ ಹುದುಗಿರುವ ರೆಂಬೆಯಿಂದಲೇ ಕಾಯಿಗಳು ಟಿಸಿಲೊಡೆದಿವೆ. ಇಲ್ಲಿ ಅಂಟು ಕಡಿಮೆ ಇರುವ ಹಲಸಿದೆ. ವರ್ಷಪೂರ್ತಿ ಹಲಸು ಬಿಡುವ ಹಲಸಿನ ಮರಗಳೂ ಅಲ್ಲಲ್ಲಿ ಕಾಣುತ್ತವೆ. ಹೀಗೆ ತೋಟದ ತುಂಬ ವಿಶಿಷ್ಟ ಹಲಸಿನ ತಳಿಗಳ ಲೋಕವೇ ಅನಾವರಣಗೊಂಡಿದೆ.

ಅರ್ಧ ಶತಮಾನದ ತೋಟ

ಈ ಹಲಸಿನ ಕ್ಷೇತ್ರ, ಕರ್ನಾಟಕದ ‘ತೋಟಗಾರಿಕೆ ಪಿತಾಮಹ’ ದಿವಂಗತ ಎಂ.ಎಚ್. ಮರೀಗೌಡ ಅವರ ಕನಸಿನ ಕೂಸು, ಅವರ ದೂರದೃಷ್ಟಿಯ ಫಲ. 1969, ಮಹಾತ್ಮಗಾಂಧಿಯವರ ಜನ್ಮಶತಮಾನೋತ್ಸವ ವರ್ಷ. ಅದರ ನೆನಪಿಗಾಗಿ ತೋಟಗಾರಿಕೆ ಇಲಾಖೆಯಿಂದ ಕರ್ನಾಟಕದಾದ್ಯಂತ 100 ಹಣ್ಣಿನ ತೋಟಗಳನ್ನು ಮಾಡಬೇಕೆಂದು ಮರೀಗೌಡರು ಸಂಕಲ್ಪ ಮಾಡಿದರು. ಆ ಪ್ರಯತ್ನದ ಭಾಗವಾಗಿಯೇ ಟಮಕದಲ್ಲಿ ಹಲಸಿನ ತೋಟ ತಲೆ ಎತ್ತಿತು.

‘ಭೂಸ್ವಾಧೀನ ಮತ್ತಿತರ ಪ್ರಕ್ರಿಯೆಯಿಂದಾಗಿ 1973ರಲ್ಲಿ ಅಧಿಕೃತವಾಗಿ ಈ ಹಲಸಿನ ತೋಟದಲ್ಲಿ ಸಸಿಗಳನ್ನು ಬೆಳೆಸುವ ಕಾರ್ಯ ಶುರುವಾಯಿತು. ಈಗಿರುವ ಅಲ್ಲಿನ ಬಹುತೇಕ ಮರಗಳು 1973–75ರ ನಡುವೆ ನಾಟಿ ಮಾಡಿರುವಂತಹವು’ ಎಂದು ನಿವೃತ್ತ ತೋಟಗಾರಿಕಾ ಅಧಿಕಾರಿ ಎಸ್.ವಿ. ಹಿತ್ತಲಮನಿಯವರು, ಮರೀಗೌಡರ ಕಾರ್ಯವನ್ನು ಹೆಮ್ಮೆಯಿಂದ ನೆನಪಿಸಿಕೊಂಡರು.

ಈ ಹಲಸಿನ ತೋಟ(ಹಲಸಿನ ಕ್ಷೇತ್ರ)ದಲ್ಲಿ ಆರಂಭದಿಂದಲೇ ಬೀಜಗಳಿಂದ ಸಸಿ ಮಾಡಿ ಬೆಳೆಸಲಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಲ್ಲೆಲ್ಲಿ ಗುಣಮಟ್ಟದ ಹಣ್ಣುಗಳ ಕಂಡರೂ, ಅವುಗಳ ಬೀಜಗಳನ್ನು ಸಂಗ್ರಹಿಸಿ, ತಂದು, ಸಸಿ ಮಾಡಿ ಕಕ್ಕುಲತೆಯಿಂದ ಇಲ್ಲಿ ಬೆಳೆಸಿದ್ದಾರೆ. ಸುಮಾರು ಮೂರೂವರೆ ದಶಕಗಳ ಕಾಲ (2008ರವರೆಗೆ), ಇಲಾಖೆಯ ಅಧಿಕಾರಿಗಳು ಹಲಸಿನ ತೋಟವನ್ನು ಆಸ್ಥೆ, ಅಕ್ಕರೆಯಿಂದ ಆರೈಕೆ ಮಾಡಿ, ರಕ್ಷಿಸಿದ್ದಾರೆ. ಆ ಆರೈಕೆಯ ಕುರುಹುಗಳು, ತೋಟದಲ್ಲಿರುವ ಮರಗಳಲ್ಲಿ ಕಾಣುತ್ತದೆ.

ಇಲಾಖೆಯಿಂದ ವಿವಿಗೆ ಹಸ್ತಾಂತರ...

2009ರಲ್ಲಿ ಹಲಸಿನ ಕ್ಷೇತ್ರದಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯಕ್ಕೆ ಸೇರಿದ ತೋಟಗಾರಿಕೆ ಕಾಲೇಜು ಆರಂಭವಾಯಿತು. ಆನಂತರ ಇಲಾಖೆಯ ಸುಪರ್ದಿಯಲ್ಲಿದ್ದ ಹಲಸಿನ ತೋಟವನ್ನು, ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಯಿತು. ಇಲಾಖೆಯೊಟ್ಟಿಗಿದ್ದಾಗ ತಳಿ ಸಂಗ್ರಹಣಾ ಕೇಂದ್ರವಾಗಿದ್ದ ಈ ಕ್ಷೇತ್ರ, ವಿಶ್ವವಿದ್ಯಾಲಯಕ್ಕೆ ಹಸ್ತಾಂತರವಾದ ನಂತರ ವೈಜ್ಞಾನಿಕವಾಗಿ ತಳಿ ಅಭಿವೃದ್ಧಿಯಂತಹ ಚಟುವಟಿಕೆಗಳು ಆರಂಭವಾಗಿ, ಈಗ ತಳಿ ಸಂರಕ್ಷಣಾ ಕೇಂದ್ರವಾಗಿದೆ. ವಿಶ್ವವಿದ್ಯಾಲಯ, ಕಾಲೇಜಿನ ವಿಜ್ಞಾನಿಗಳು, ಮರಗಳನ್ನು ಆರೈಕೆ ಮಾಡುವ ಜೊತೆಗೆ ತಳಿ ಅಭಿವೃದ್ಧಿಯನ್ನೂ ಮುಂದುವರಿಸಿದ್ದಾರೆ.

ಕಾಲೇಜಿನ ಸಿಬ್ಬಂದಿ ಮರಗಳಿಗೆ ಕಾಲಕಾಲಕ್ಕೆ ನೀರು, ಗೊಬ್ಬರ ನೀಡಿ ಆರೈಕೆ ಮಾಡುತ್ತಿದ್ದಾರೆ. ಕೆಲವು ಕಡೆ ಸ್ವಾಭಾವಿಕವಾಗಿ ಮರಗಳು ನಶಿಸಿದ್ದರೂ, ಅವುಗಳ ಸಂಖ್ಯೆ ವಿರಳ. ಹಾಗೆ ಬಿದ್ದು ಹೋಗಿರುವ ಮರಗಳ ಜಾಗದಲ್ಲಿ ಮತ್ತೆ ಹಲಸಿನ ಸಸಿಗಳನ್ನು ನಾಟಿ ಮಾಡಿದ್ದಾರೆ. ಹಲಸಿನ ಮರಗಳ ನಡುವೆ ಇರುವ ಜಾಗದಲ್ಲೇ ಕಲ್ಲುಬೆಂಚುಗಳನ್ನು ಅಳವಡಿಸಿದ್ದಾರೆ. ವಿದ್ಯಾರ್ಥಿಗಳು ಬೆಂಚಿನ ಮೇಲೆ ಕುಳಿತು ಓದುತ್ತಾರೆ, ಚರ್ಚೆ ಸಂವಾದ ನಡೆಸುತ್ತಾರೆ.

‘ಖಾಲಿ ಇರುವ ಜಾಗದಲ್ಲಿ ಮಾತ್ರ ಈ ಪ್ರದೇಶಕ್ಕೆ ಹೊಂದುವಂತಹ ಬೇರೆ ಬೇರೆ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದೇವೆ. ಅದು ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ರೈತರಿಗೆ ಪ್ರಾತ್ಯಕ್ಷಿಕೆ ನೀಡುವುದಕ್ಕಾಗಿ. ಅದನ್ನು ಹೊರತುಪಡಿಸಿ, ಈ ತಾಣವನ್ನು ಹಲಸಿನ ಕ್ಷೇತ್ರವಾಗಿಯೇ ಸಂರಕ್ಷಿಸಿದ್ದೇವೆ’ ಎಂದು ವಿವರಿಸಿದರು ತೋಟಗಾರಿಕೆ ಕಾಲೇಜಿನ ಡೀನ್ ರಾಘವೇಂದ್ರ ಮೇಸ್ತ.

ಕನಸು ನನಸಾಗಿದೆ...

‘ಈ ಹಲಸಿನ ತೋಟ ಭವಿಷ್ಯದಲ್ಲಿ ತಳಿ ಸಂರಕ್ಷಣಾ ಕ್ಷೇತ್ರವಾಗಬೇಕು (ಪ್ರೊಜನಿ ಆರ್ಚರ್ಡ್)’ ಎನ್ನುವುದು ಮರೀಗೌಡರ ಆಲೋಚನೆಯಾಗಿತ್ತು’ ಎಂದು ಹಿತ್ತಲಮನಿಯವರು ನೆನಪಿಸಿಕೊಳ್ಳುತ್ತಾರೆ. ಬೇರೆ ಬೇರೆ ಕಡೆ ಸಿಗುವ ಉತ್ತಮ ಗುಣಮಟ್ಟದ ಹಲಸಿನ ಸಸಿಗಳನ್ನು ತಂದು ಇಲ್ಲಿ ಬೆಳೆಸಬೇಕು. ಅವುಗಳಲ್ಲಿ ಉತ್ತಮವಾಗಿ ಬೆಳೆಯುವ, ಇಳುವರಿ ನೀಡುವ, ಗುಣಮಟ್ಟದ ತಳಿಗಳನ್ನು ಆಯ್ಕೆ ಮಾಡಿ, ಸಸಿಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ನೀಡುವಂತಹ ಕೇಂದ್ರವಾಗಬೇಕು ಎಂದು ಮರೀಗೌಡರು ಕನಸು ಕಂಡಿದ್ದರಂತೆ.

ಮರೀಗೌಡರ ಕನಸು ನನಸಾಗಲಾರಂಭಿಸಿದೆ. ತೋಟಗಾರಿಕೆ ಕಾಲೇಜಿನ ಹಣ್ಣು ವಿಭಾಗದ ವಿಜ್ಞಾನಿ ನಾಗರಾಜ್ ಅವರು ಹಲಸಿನ ತೋಟದಲ್ಲಿರುವ ಉತ್ತಮ ತಳಿಗಳನ್ನು ಆಯ್ಕೆ ಮಾಡಿಕೊಂಡು, ಮೂರು ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿ, ಬಿಡುಗಡೆ ಮಾಡಿದ್ದಾರೆ. ಒಂದು ತಳಿಗೆ ಮರೀಗೌಡರ ಹೆಸರಿಡುವ ಮೂಲಕ, ಅವರಿಗೆ ಗೌರವ ಸಲ್ಲಿಸಿದ್ದಾರೆ.

‘ಒಂಬತ್ತು ವರ್ಷಗಳಿಂದ ತಳಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಕೃಷ್ಣಪ್ರಭ ಮರೀಗೌಡ ಆರೆಂಜ್, ಕೃಷ್ಣಪ್ರಭ ಟಮಕ ಗಮ್ಲೆಸ್ ಮತ್ತು ಕೃಷ್ಣಪ್ರಭ ಟಮಕ ಸೂಪರ್ ಎಂಬ ಮೂರು ತಳಿಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಸಸಿ ಮಾಡಿ ರೈತರಿಗೂ ವಿತರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಳಿಗಳ ಅಭಿವೃದ್ಧಿಪಡಿಸುವ ಯೋಚನೆ ಇದೆ’ ಎಂದು ನಾಗರಾಜ್ ವಿವರಿಸಿದರು.

ಈ ಹಲಸಿನ ಕ್ಷೇತ್ರದಲ್ಲಿ ಬೆಳೆಯುವ ಹಣ್ಣುಗಳನ್ನು ಪ್ರತಿ ವರ್ಷ ಹರಾಜು ಹಾಕಲಾಗುತ್ತದೆ. ವ್ಯಾಪಾರಸ್ಥರು, ಈ ಹರಾಜಿನಲ್ಲೇ ಹಣ್ಣುಗಳನ್ನು ಖರೀದಿಸುತ್ತಾರೆ. ಕೆಲವರು, ಕಾಲೇಜಿನ ಎದುರಿನ ರಸ್ತೆ ಬದಿಯಲ್ಲೇ ಮಾರಾಟ ಮಾಡುತ್ತಾರೆ ಎಂದು ಕಾಲೇಜಿನ ಆವರಣದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಾನಂದ ಹೊಂಗಲ್ ಹೇಳಿದರು.

ಇಷ್ಟೆಲ್ಲ ವಿಶೇಷಗಳಿರುವ ಈ ಹಲಸಿನ ಕ್ಷೇತ್ರದಲ್ಲಿ ಹಿಂದೆ ಹಣ್ಣುಗಳ ಸಂಸ್ಕರಣೆ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಯಂತಹ ಶ್ರುತ ಪ್ರಯತ್ನಗಳು ನಡೆದಿವೆ. ‘ಹಲಸಿನ ಪ್ರವಾಸೋದ್ಯಮ’ ಆರಂಭಿಸುವ ಚಿಂತನೆಯೂ ಮೊಳೆತಿದ್ದನ್ನು ಕಾಲೇಜಿನ ಸಿಬ್ಬಂದಿ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಈಗಲೂ ಪ್ರತಿವರ್ಷ ಕ್ಷೇತ್ರ ಭೇಟಿಗಾಗಿ ನೂರಾರು ರೈತರು, ವಿದ್ಯಾರ್ಥಿಗಳು ಬರುತ್ತಾರೆ. ಹೀಗಾಗಿ, ಹಳೆಯ ಎಲ್ಲ ಪ್ರಯತ್ನಗಳನ್ನು ಮುಂದುವರಿಸಲು, ಹೊಸ ಚಿಂತನೆಗಳನ್ನು ಜಾರಿ ಮಾಡಲು ಇದು ಸಕಾಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.