ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರುಳಿಸುವ ಕೂರಿಗೆ ಭತ್ತ ಬಿತ್ತನೆ

Last Updated 2 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮೇಲ್ಮಣ್ಣಿನ ಫಲವತ್ತತೆ ಹಾಳಾಗದಂತೆ ಕೂರಿಗೆಯಲ್ಲಿ ಭತ್ತ ಬಿತ್ತನೆ ಮಾಡಿ, ಕಡಿಮೆ ನೀರನ್ನು ಬಳಸಿ ಅಧಿಕ ಫಸಲನ್ನು ತೆಗೆಯುತ್ತಿರುವ ಕೈಲಾಸಮೂರ್ತಿಯವರ ಕೃಷಿ ಪದ್ಧತಿಯಲ್ಲಿ ಭತ್ತ ಬೆಳೆಯಲು ಅತ್ಯಂತ ಕಡಿಮೆ ಕಾರ್ಮಿಕರು ಸಾಕು. ಗೊಬ್ಬರ ಕೀಟನಾಶಕಗಳು ಬೇಕಾಗಿಲ್ಲ.

ಮೈಸೂರು ಜಿಲ್ಲೆಯ ಟಿ.ನರಸಿಪುರರಸ್ತೆಯಲ್ಲಿರುವ ಮಾಡ್ರಳ್ಳಿಯ ಆ ನಾಲ್ಕೆಕರೆ ಭತ್ತದ ಗದ್ದೆಯ ಎರಡೂ ದಿಕ್ಕಿನಲ್ಲಿ ಕಬಿನಿ ಕಾಲುವೆಯಿಂದ ಹರಿಸಿದ ನೀರಿನ ಹಳ್ಳವಿತ್ತು. ಆದರೆ, ಗದ್ದೆಯಲ್ಲಿ ನೀರು ನಿಲ್ಲಿಸಿರಲಿಲ್ಲ. ತೇವಾಂಶವಷ್ಟೇ ಇತ್ತು. ಗೊಬ್ಬರ ಹಾಕಿದ ಲಕ್ಷಣವೂ ಇರಲಿಲ್ಲ. ಅಂಥ ಒಣಗಿದ ನೆಲದಲ್ಲಿ ಭತ್ತ ಸಸಿಗಳು ಆರೋಗ್ಯಪೂರ್ಣವಾಗಿ, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದವು. ‘ನೋಡಿ, ನನ್ನದು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ.. ಹೇಗನಿಸ್ತಾ ಇದೆ’ ಎಂದು ನಗುತ್ತಾ ಪ್ರಶ್ನಿಸಿದರು ಮೈಸೂರಿನ ಪ್ರಯೋಗಶೀಲ ಕೃಷಿಕ ಕೈಲಾಸಮೂರ್ತಿಯವರು. ‘ವಿಭಿನ್ನವಾಗಿದೆ, ಯಾಕೆ ಹೀಗೆ’ ಎಂದು ಕೇಳಿದೆ. ಆಗ ಅವರು ಭತ್ತ ಬೆಳೆದ ಹಿಂದಿನ ಕತೆಯ ಸುರಳಿ ಬಿಚ್ಚಿಕೊಳ್ಳುತ್ತಾ ಸಾಗಿತು.

ಸಹಜ ಕೃಷಿಯ ಪಿತಾಮಹ ಜಪಾನಿನ ಮಸನೋಬಾ ಪುಕುವೊಕಾ ಅವರ ಕೃಷಿ ತತ್ವಗಳಿಂದ ಪ್ರೇರಿತರಾದವರು ಕೈಲಾಸಮೂರ್ತಿ. ಮೂರು ದಶಕಗಳಿಂದ ನೈಸರ್ಗಿಕವಾಗಿ ನಾಟಿ ಪದ್ಧತಿಯಲ್ಲೇ ಭತ್ತ ಬೆಳೆಯುತ್ತಿದ್ದಾರೆ. ಭತ್ತದ ತೆನೆಗಳನ್ನಷ್ಟನ್ನೇ ಕೊಯ್ದು ಉಳಿದವುಗಳನ್ನು ಮಣ್ಣಿಗೆ ಬೆರೆಸುತ್ತಾರೆ. ಅದೇ ಗದ್ದೆಯಲ್ಲಿ ಹಿಂಗಾರಿನಲ್ಲಿ ಸಾಸಿವೆ ಉದ್ದು ಬೆಳೆಯುತ್ತಾರೆ. ಅವುಗಳ ಕಾಳುಗಳನ್ನಷ್ಟೇ ಕೊಯ್ದು ಉಳಿದವುಗಳನ್ನು ಮಣ್ಣಿಗೆ ಸೇರಿಸಿಬಿಡುತ್ತಾರೆ. ಹೀಗಾಗಿ ಮಣ್ಣು ಫಲವತ್ತಾಗಿ ಬೆಳೆ ಬರುತ್ತದೆ.

ಆದರೂ, ‘ಭತ್ತ ಬೆಳೆಯಲು ನಾವು ಹೆಚ್ಚು ನೀರು ಬಳಸುತ್ತಿದ್ದೇವೆ. ಆದಷ್ಟು ಕಡಿಮೆ ನೀರಿನಲ್ಲಿ ಭತ್ತ ಬೆಳೆಯುವಂತಾಗಬೇಕು. ಅದು ಕೃಷಿಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆಯಾಗುತ್ತದೆ’ ಎಂದುಕೊಂಡು ಒಬ್ಬ ಸಂಶೋಧನಾ ವಿದ್ಯಾರ್ಥಿಯಂತೆ ಪ್ರಯೋಗ ಶುರು ಆರಂಭಿಸಿದರು ಕೈಲಾಸಮೂರ್ತಿ.

ಪ್ರಯೋಗ ಹೀಗಿದೆ

ಪ್ರಯೋಗಕ್ಕಿಳಿಯುವ ಮುನ್ನ ನವಲಗುಂದಕ್ಕೆ ಹೋಗಿ ಪರಿಚಿತ ರೈತರೊಬ್ಬರ ನೆರವಿನಿಂದ ಕೂರಿಗೆಯನ್ನು ಮಾಡಿಸಿಕೊಂಡರು. ಅದು, ಭೂಮಿಯನ್ನು ಮೇಲ್ಮಣ್ಣಿನಲ್ಲಿ ಅಗತ್ಯವಿದ್ದಷ್ಟೇ (ಎರಡಿಂಚು) ಉಳುಮೆ ಮಾಡುತ್ತಾ ಹೋಗುತ್ತದೆ. ಉಳುಮೆ ಮಾಡುತ್ತಲೇ ಭತ್ತದ ಬೀಜಗಳನ್ನು ಬಿತ್ತನೆ ಮಾಡುತ್ತದೆ (ಮಣ್ಣೊಳಗೆ ಇಳಿಸುತ್ತದೆ). ಈ ಕೂರಿಗೆಯನ್ನು ಎತ್ತಿನ ಸಹಾಯ ಅಥವಾ ಟ್ರ್ಯಾಕ್ಟರಿಗೆ ಜೋಡಿಸಿ ಉಳುಮೆ ಮಾಡಬಹುದು.

ಕೈಲಾಸಮೂರ್ತಿಯವರು ಜೂನ್ ಮೊದಲ ವಾರದಲ್ಲಿ ದೂಳು ಮಣ್ಣನ್ನೇ ಹದ ಮಾಡಿ ಕೂರಿಗೆಯ ಸಹಾಯದಿಂದ ಭತ್ತದ ಬೀಜವನ್ನು ಬಿತ್ತನೆ ಮಾಡಿಸಿದರು. ಪೈರುಗಳು ಬೆಳೆದ ಮೇಲೆ ಕಳೆಯಂತ್ರದ ಸಹಾಯದಿಂದ (ಅದೂ ಇವರ ಶೋಧನೆಯೇ) ಭತ್ತದ ಸಸಿಯ ಮಧ್ಯೆ ಬೆಳೆದ ಕಳೆಯನ್ನು ತೆಗೆಸಿ ಗೊಬ್ಬರವಾಗಿಸಿದರು. ಆಗಾಗ ಬರುವ ಮಳೆ ನೀರನ್ನು ಹೊರತುಪಡಿಸಿ ಗದ್ದೆಗೆ ನೀರನ್ನು ಕಟ್ಟಲಿಲ್ಲ. ತಿಂಗಳು ಕಳೆಯುವಷ್ಟರಲ್ಲಿ ಎರಡು ಎಕರೆಯಲ್ಲಿ ಬೆಳೆಸಿದ ಭತ್ತದ ಸಸಿಗಳು ಸೊಂಪಾಗಿ ಬೆಳೆದವು. ಸಸಿಗಳು ಬೆಳೆಯುವ ಹಂತದಲ್ಲಿ ಹದ ಮಳೆಯೂ ಸಿಕ್ಕಿತು. ಸುತ್ತಲೂ ಕಾಲುವೆಯಲ್ಲಿ ನೀರಿದ್ದ ಕಾರಣ, ಹೆಚ್ಚುವರಿ ನೀರು ಹರಿಸದೇ, ಮಣ್ಣಿನಲ್ಲಿರುವ ತೇವಾಂಶದಲ್ಲೇ ಸಸಿಗಳನ್ನು ಬೆಳೆಸಿದರು.

ಕಳೆದ ವರ್ಷ ಆರಂಭಿಸಿದ ಈ ಪ್ರಯೋಗದಲ್ಲಿ ಮಸೂರಿ ತಳಿಯನ್ನು ಬೆಳೆದರು. ಎಕರೆಗೆ ಸುಮಾರು 25 ಕ್ವಿಂಟಲ್ ಇಳುವರಿ ಬಂತಂತೆ. ಈ ವರ್ಷ ಇದೇ ವಿಧಾನದಲ್ಲಿ ಸಿದ್ದಸಣ್ಣ ತಳಿ ಹಾಕಿದ್ದಾರೆ. ಫಸಲು ಕೊಯ್ಲಿಗೆ ಬಂದು ನಿಂತಿದೆ.

ವಿಷಮುಕ್ತ ಭತ್ತದ ತಾಕು

ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಬಸಯ್ಯರಿಗೆ ತಾನು ಮಾಡುತ್ತಿರುವ ಕೆಲಸದ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ‘ಐದು ವರಸಾತು ಇಲ್ಲಿ ಕೆಲ್ಸ ಮಾಡಾಕತ್ತು. ಊರಿನ್ಯಾಗೆ ಎಲ್ಲಾರು ಕೆಲ್ಸಾ ಮಾಡದೇ ಒಂದು ತೆರಾ. ಇವ್ರ ಕೆಲ್ಸವೇ ಇನ್ನೊಂದು ತೆರಾ. ಮೊದ್ಲ ಮೊದ್ಲ ಇವ್ರು ಗೊಬ್ಬರಾ ಹಾಕದು ಬ್ಯಾಡ, ಕೀಟನಾಸಕಾ ಹೊಡಿಯಂಗಿಲ್ಲಾ ಅಂದ್ರೆ ಇದೇನು ಬೆಳಿ ತೆಗಿಯಾಕಾದೀತಾ ಅನ್ನುಸ್ತಿತ್ತು. ಈಗ ಗೊತ್ತಾಗ ಬುಟ್ಟದೆ ಅದ್ಯಾವುದು ಇಲ್ಲದೇ ಇದ್ರೂ ಕಳೆದ ವರಸಾ ಎಕರೆಗೆ ಇಪ್ಪತ್ತೈದು ಕ್ವಿಂಟಾಲು ಭತ್ತಾ ಕೊಯ್ದಮಿ. ಈ ವರಸಾ ಮತ್ತೂ ಜಾಸ್ತಿ ಬರ್ತದೆ’ ಎನ್ನುತ್ತಾ ಕೈಲಾಸಮೂರ್ತಿಯವರು ಅನುಸರಿಸುವ ಕೃಷಿ ಪದ್ಧತಿ ಬಗ್ಗೆ ಭರವಸೆಯ ನುಡಿಯಾಡಿದರು.

ಬಸಯ್ಯ ಅವರ ಮಾತು ಮುಗಿಯುವುದರೊಳಗೆ ಪಕ್ಕದ ಗದ್ದೆಯ ಬದುವಿನ ಮೇಲೆ ನವಿಲುಗಳು ಸಾಲಾಗಿ ಕತ್ತು ಕುಣಿಸುತ್ತಾ ಓಡಾಡಲಾರಂಭಿಸಿದವು. ‘ಇವು ದಿನಾ ನಮ್ಮ ಗದ್ದೆಯಲ್ಲಿ ಸರ್ಕಿಟ್ ಹೊಡೆದು ಒಂದಷ್ಟು ಹುಳಾ ತಿಂದು ಉಪಕಾರ ಮಾಡುತ್ತವೆ’ ಎಂದರು ಕೈಲಾಸಮೂರ್ತಿ. ‘ಇದಕ್ಕಿಂತಲೂ ಬಹು ಉಪಕಾರ ಮಾಡುವವು ಭೂಮಿಯೊಳಗಿನ ಸೂಕ್ಷ್ಮಾಣು ಜೀವಿಗಳು. ಅವು ಮಣ್ಣನ್ನು ಫಲವತ್ತಾಗಿಸಲು ಸಾಕಷ್ಟು ಕೆಲಸ ಮಾಡುತ್ತವೆ. ಬಹುತೇಕ ರೈತರಿಗೆ ಅವುಗಳ ಮಹತ್ವದ ಅರಿವಿಲ್ಲ. ಆಳವಾಗಿ ಉಳುಮೆ ಮಾಡಿ, ರಾಸಾಯನಿಕ ಗೊಬ್ಬರ ಹಾಕಿ, ಕಳೆನಾಶಕ ಹೊಡೆಯುತ್ತಾರೆ. ತಿನ್ನುವ ಅನ್ನಕ್ಕೆ ವಿಷ ಬೆರೆಸುತ್ತಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಸಂಗ್ರಹಣೆ, ಸಂಸ್ಕರಣೆ, ಮಾರುಕಟ್ಟೆ

ಬೆಳೆದ ಭತ್ತದ ಕಾಳುಗಳನ್ನು ಶೇಖರಿಸಿಡಲು ಆಧುನಿಕ ಪದ್ಧತಿಯ ಪಣತವೊಂದನ್ನು ಮನೆಯ ಬಳಿಯ ಶೆಡ್‍ನಲ್ಲಿ ಸಿದ್ಧಪಡಿಸಿದ್ದಾರೆ. ಇದು ಅವರ ಆವಿಷ್ಕಾರವೇ. ಅದರಲ್ಲಿ ಶೇಖರಿಸಿದ ಭತ್ತವನ್ನು ಸೌರಶಕ್ತಿಯಿಂದ ನಡೆಯುವ ಗಿರಿಣಿಯಲ್ಲಿ ಅಕ್ಕಿ ಮಾಡಿಕೊಳ್ಳುತ್ತಾರೆ. ಆ ಜವಾಬ್ದಾರಿಯನ್ನು ಮಗ ಕೀರ್ತಿಗೆ ವಹಿಸಿದ್ದಾರೆ. ಅದನ್ನು ಮೈಸೂರಿನ ವಿಜಯನಗರದಲ್ಲಿ ಪ್ರತಿ ಭಾನುವಾರ ನಡೆಯುವ ಸಂತೆಯಲ್ಲಿ ಮಾರುತ್ತಾರೆ. ಇದನ್ನು ತಾವೇ ನಿರ್ವಹಿಸುತ್ತಾರೆ ಕೈಲಾಸಮೂರ್ತಿ. ತನ್ನೆಲ್ಲ ಕೆಲಸಗಳಲ್ಲೂ ಸಹಕರಿಸುವ ಪತ್ನಿ, ಮಗ, ಸೊಸೆ, ಬಸಯ್ಯನ ಬಗ್ಗೆ ಕೈಲಾಸಮೂರ್ತಿಯವರಿಗೆ ಬಗ್ಗೆ ಬಲು ಅಭಿಮಾನ.ಹಲವು ಪ್ರಯೋಗಗಳ ತಾಣವಾಗಿರುವ ಇವರ ತೋಟಕ್ಕೆ ದೇಶ ವಿದೇಶದ ರೈತರು ಭೇಟಿ ನೀಡುತ್ತಾರೆ.

ನೀರು, ಕಾರ್ಮಿಕರ ಉಳಿತಾಯ

ಕೂರಿಗೆ ವಿಧಾನದಲ್ಲಿ ಭತ್ತ ಬೆಳೆಯುವುದರಿಂದ ನೀರಿನ ಬಳಕೆಯಲ್ಲಿ ಮಾಮೂಲಿ ಪದ್ಧತಿಗಿಂತ ಶೇಕಡಾ ಹತ್ತರಷ್ಟು ಕಡಿಮೆಯಾಗುತ್ತದೆ. ಕಾರ್ಮಿಕರ ಸಂಖ್ಯೆಯಲ್ಲೂ ಉಳಿತಾಯವಾಗುತ್ತದೆ. ಮಣ್ಣಿನ ಜೀವವೈವಿಧ್ಯ ರಕ್ಷಣೆಯಾಗುತ್ತದೆ. ಕಳೆ ಮಣ್ಣಿನ ಜೀವಂತಿಕೆಯನ್ನು ಹೆಚ್ಚಿಸುತ್ತದೆ. ಮಣ್ಣಿನ ಫಲವತ್ತತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಗದ್ದೆಯಿಂದ ಮಿಥೇನ್ ಮತ್ತು ನೈಟ್ರಸ್ ಅನಿಲ ಉತ್ಪತ್ತಿಯಾಗುವುದಿಲ್ಲ. ಸುರಕ್ಷಿತವಾಗಿ ಆಹಾರ ಬೆಳೆಯಬಹುದು. ಆದಾಯ ದ್ವಿಗುಣವಾಗುತ್ತದೆ. ಇಂಥ ವಿಧಾನ, ಹೆಚ್ಚುತ್ತಿರುವ ಭೂತಾಪಮಾನಕ್ಕೆ ಉತ್ತರವಾಗಬಹುದು ಎಂದು ತಮ್ಮ ಪ್ರಯೋಗದ ಪ್ರಯೋಜನವನ್ನು ವಿವರಿಸುತ್ತಾರೆ ಕೈಲಾಸ ಮೂರ್ತಿ.ಕೈಲಾಸ ಮೂರ್ತಿಯವರ ಸಂಪರ್ಕ ಸಂಖ್ಯೆ 9880185757. ರಾತ್ರಿ 7 ರಿಂದ 9 ಗಂಟೆಯವರೆಗೆ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT