ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳ: ಹುಣಸೆ ಬೀಜ ಬೇರ್ಪಡಿಸಲು ಯಂತ್ರ

Last Updated 12 ನವೆಂಬರ್ 2021, 20:34 IST
ಅಕ್ಷರ ಗಾತ್ರ

ಬೆಂಗಳೂರು: ಹುಣಸೆ ಹಣ್ಣಿನ ಬೀಜವನ್ನು ಸಲೀಸಾಗಿ ಬೇರ್ಪಡಿಸುವ ಯಂತ್ರವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೊಯ್ಲಿನೋತ್ತರ ಎಂಜಿನಿಯರಿಂಗ್ ವಿಭಾಗ ಆವಿಷ್ಕರಿಸಿದ್ದು, ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

ಸಿಪ್ಪೆ ತೆಗೆದು ಹಣ್ಣು ಬೇರ್ಪಡಿಸುವ ಯಂತ್ರವನ್ನು ಈಗಾಗಲೇ ಆವಿಷ್ಕರಿಸಲಾಗಿತ್ತು. ಆದರೆ, ಬೀಜ ಬೇರ್ಪಡಿಸುವ ಯಂತ್ರವಿರಲಿಲ್ಲ. ಆಂಧ್ರಪ್ರದೇಶದಲ್ಲಿ ಖಾಸಗಿ ಕಂಪನಿ ತಯಾರಿಸಿದ್ದ ಯಂತ್ರ ಯಶಸ್ಸು ಕಂಡಿರಲಿಲ್ಲ. ಇದೀಗ ಕೃಷಿ ವಿ.ವಿ ಎಂಜಿನಿಯರ್‌ಗಳು ಆವಿಷ್ಕರಿಸಿರುವ ಯಂತ್ರ ಶೇ 90ರಷ್ಟು ಕಾರ್ಯಕ್ಷಮತೆ ಹೊಂದಿದೆ.

‘3 ಫೇಸ್ ವಿದ್ಯುತ್ ಸಾಮರ್ಥ್ಯದ ಯಂತ್ರ ಇದಾಗಿದ್ದು, ಪ್ರತಿ ಗಂಟೆಗೆ 100 ಕೆ.ಜಿ ಹುಣಸೆ ಹಣ್ಣಿನಿಂದ ಬೀಜ ತೆಗೆಯಬಹುದಾಗಿದೆ. ಯಂತ್ರ ನಿರ್ಮಾಣಕ್ಕೆ ಅಂದಾಜು ₹ 1.35 ಲಕ್ಷ ತಗುಲಿದ್ದು, ಅದೇ ದರದಲ್ಲಿ ಮಾರಾಟಕ್ಕೆ ಇರಿಸಲಾಗಿದೆ. ಯಂತ್ರಕ್ಕೆ ಪೇಟೆಂಟ್ ಪಡೆಯುವ ಪ್ರಕ್ರಿಯೆಯೂ ಆರಂಭವಾಗಿದೆ’ ಎಂದು ಸಹಾಯಕ ಸಂಶೋಧನಾ ಎಂಜಿನಿಯರ್ ದರ್ಶನ್ ಹೇಳಿದರು.

‘ಪಾವಗಡ, ಕೂಡ್ಲಿಗಿ, ಕುಷ್ಟಗಿ, ಚಿಂತಾಮಣಿ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವೆಡೆ ಹುಣಸೆ ಹಣ್ಣಿನ ಉತ್ಪನ್ನ ಹೆಚ್ಚಿದೆ. ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡಿನಲ್ಲೂ ಹುಣಸೆ ಹಣ್ಣಿನ ಕೃಷಿ ಇದೆ. ಹಣ್ಣಿನ ಬೀಜಗಳನ್ನು ಬೇರ್ಪಡಿಸುವ ಸಂದರ್ಭದಲ್ಲಿ, ಬಹುತೇಕ ಬೀಜಗಳು ನಿರುಪಯುಕ್ತವಾಗುತ್ತಿವೆ. ಇದಕ್ಕೆ ಪರಿಹಾರವಾಗಿ ಹೊಸ ಯಂತ್ರ ತಯಾರಿಸಲಾಗಿದ್ದು, ಶೇ 90ರಷ್ಟು ಗುಣಮಟ್ಟದ ಬೀಜಗಳು ದೊರೆಯುತ್ತವೆ’ ಎಂದೂ ತಿಳಿಸಿದರು.

‘ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಹುಣಸೆ ಹಣ್ಣಿನ ಬೀಜಗಳನ್ನು ಬಳಸಲಾಗುತ್ತದೆ. ಪ್ರತಿ ಕೆ.ಜಿ ಬೀಜಕ್ಕೆ ಸದ್ಯ ₹ 7 ದರವಿದೆ. ಬೀಜಗಳನ್ನು ಸರಿಯಾಗಿ ಬೇರ್ಪಡಿಸಿ ಕೊಟ್ಟರೆ, ಹೆಚ್ಚಿನ ದರವೂ ಸಿಗಲಿದೆ.’

‘ಇದು ದೊಡ್ಡ ಗಾತ್ರದ ಯಂತ್ರ. ಸಣ್ಣ ರೈತರಿಗೆ ಹೊರೆ ಆಗುತ್ತದೆ. ಗ್ರಾಮಕ್ಕೊಂದು ಹಾಗೂ ಹೋಬಳಿಗೊಂದು ಯಂತ್ರವಿದ್ದರೂ ಬಾಡಿಗೆ ಆಧಾರದಲ್ಲಿ ಬಳಸಬಹುದು. ಮುಂದಿನ ದಿನಗಳಲ್ಲಿ ಹುಣಸೆ ನಾರು ತೆಗೆಯುವ ಯಂತ್ರವನ್ನೂ ಆವಿಷ್ಕರಿಸುವ ಯೋಜನೆ ಇದೆ’ ಎಂದೂ ದರ್ಶನ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT