ಬುಧವಾರ, ಆಗಸ್ಟ್ 17, 2022
28 °C

PV Web Exclusive: ಈ ಜಲ ತಿಜೋರಿ ಬಗ್ಗೆ ಗೊತ್ತಾ ನಿಮಗೆ ?

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

ಈ ಹಳ್ಳಿಗರಿಗೆ ಬೇಸಿಗೆಯಲ್ಲಿ ಜಲಕ್ಷಾಮ ಎದುರಾಗುವ ಭಯವಿಲ್ಲ. ಇಲ್ಲಿನ ಜಲ ತಿಜೋರಿಗಳು ಭದ್ರಗೊಂಡಿವೆ. ತಿಜೋರಿಯ ತುಂಬ ಸಮೃದ್ಧ ಜಲ ನಳನಳಿಸುತ್ತಿದೆ.

***

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಹಳ್ಳಿಗಳು, ನೆರೆಯ ಕಾಸರಗೋಡು ಜಿಲ್ಲೆಯ ಕುಂಬ್ಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಪ್ರತಿವರ್ಷ ಬೇಸಿಗೆಯ ನೀರಿನ ಬರ ಎದುರಿಸಲು ಡಿಸೆಂಬರ್, ಜನವರಿ ವೇಳೆಗೆ ಸಜ್ಜಾಗುತ್ತವೆ. ಸಣ್ಣ ತೋಡು, ಹಳ್ಳ, ಹೊಳೆಗಳಲ್ಲಿ ಹರಿದು ಹೋಗುವ ನೀರನ್ನು ಹಿಡಿದಿಟ್ಟುಕೊಳ್ಳಲು ‘ಕಟ್ಟ’ ನಿರ್ಮಿಸಿಕೊಳ್ಳುತ್ತವೆ. ಕಟ್ಟ ನಿರ್ಮಾಣ ಇಲ್ಲಿನ ಜೀವನಕ್ರಮದ ಭಾಗವಾಗಿದೆ. ಇದೊಂದು ಸಂಸ್ಕೃತಿಯಾಗಿ ಬೆಳೆದು ಬಂದಿದೆ. 

ಮರೆಯಾಗುವ ಆತಂಕದಲ್ಲಿದ್ದ ಕಟ್ಟ ಸಂಸ್ಕೃತಿಗೆ ಮರುಜೀವ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಚಂದ್ರಶೇಖರ ಏತಡ್ಕ ಅವರ ಬಳಿ ನಿಮ್ಮೂರಿನ ಕಟ್ಟಕ್ಕೆ ಈಗ ಎಷ್ಟು ಸಂಭ್ರಮಾಚರಣೆ ಎಂದು ಪ್ರಶ್ನಿಸಿದೆ. ‘ನಮ್ಮೂರಿನ ಕಟ್ಟಗಳು 75 ವರ್ಷಗಳ ಹಿಂದಿನ ಬೇಸಿಗೆಗಳ ಸಾಕ್ಷಿಪ್ರಜ್ಞೆಯಾಗಿವೆ ಎಂದುಕೊಂಡಿದ್ದೆವು. ಆದರೆ, ಇವು ಇನ್ನೂ ಹಿರಿಯವೆಂಬುದು ಅರಿವಿಗೆ ಬಂತು. 1934ರ ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಆಗಿನ ಡಿಸ್ಟ್ರಿಕ್ಟ್ ಕಲೆಕ್ಟರ್, ಕೃಷಿಕರಿಗೆ ಕಟ್ಟ ಕಟ್ಟಲು ತಿಳಿಸಿರುವ ದಾಖಲೆಗಳು ಸಿಕ್ಕಿವೆ’ ಎಂದರು.


ತಗಡಿನ ಶೀಟ್‌ ಮೂಲಕ ನೀರಿಗೆ ತಡೆ

ಹಾಗೇ ಮಾತನಾಡುತ್ತ ಕಟ್ಟಗಳ ಏಳು–ಬೀಳುಗಳ ಕತೆಗಳೆಲ್ಲ ಅವರೊಂದಿಗಿನ ಸಂಭಾಷಣೆಯಲ್ಲಿ ಹೊರಬಂದವು. ‘1980ರ ದಶಕದ ಆರಂಭದಲ್ಲಿ ಗ್ರಾಮೀಣ ಭಾಗದಲ್ಲಿ ಕಟ್ಟಗಳು ಜನಪ್ರಿಯವಾಗಿದ್ದವು. ಕೃಷಿ ವಿಸ್ತರಣೆಗೆ ಕಟ್ಟಗಳು ಸಾಥ್ ನೀಡಿದವು. ಹಳ್ಳಿಗರಿಗೆ ಬೇಸಿಗೆಯಲ್ಲೂ ನೀರಿನ ಬರದ ಬಿಸಿಯನ್ನು ತಟ್ಟದಂತೆ ಅವು ಕಾಳಜಿವಹಿಸಿದ್ದವು. ವಿದ್ಯುತ್ ಸಂಪರ್ಕಗಳು ಹಳ್ಳಿಗಳನ್ನು ಬೆಳಗಿದವು. ನಿಧಾನವಾಗಿ ಆಧುನಿಕ ಯಂತ್ರಗಳು ಕಾಡ ನಡುವಿನ ರಸ್ತೆ ಹಿಡಿದು ಹಳ್ಳಿಗಳನ್ನು ತಲುಪಿದವು. ನೆಲ ಕೊರೆಯುವ ಯಂತ್ರಗಳು ಗ್ರಾಮೀಣ ಪ್ರದೇಶಗಳಲ್ಲಿ ಗದ್ದಲ ನಡೆಸಿದವು. ಕಟ್ಟ ಕಟ್ಟುವ ಕಷ್ಟಕ್ಕಿಂತ ಬೋರ್‌ವೆಲ್ ನೀರು ಸುಲಭವಾಗಿ ದಕ್ಕುತ್ತದೆಂಬ ಭ್ರಮೆ ಸೃಷ್ಟಿಯಾಯಿತು. ವಿದ್ಯುತ್ ಮೋಟರ್ ಬಳಸಿ, ಬೆಳೆಗಳಿಗೆ ನೀರು ಹಾಯಿಸುವ ಕ್ರಮವೂ ರೂಢಿಯಾಯಿತು. ಹೀಗೆ ಕಾಲ ಸರಿಯುತ್ತ 1995ರ ಸುಮಾರಿಗೆ ಕಟ್ಟಗಳ ಬಗ್ಗೆ ಜನರಿಗೆ ಉದಾಸೀನ ಬೆಳೆಯಿತು. ಒಂದೆರಡು ವರ್ಷಗಳಲ್ಲೇ ಬೇಸಿಗೆಯ ಬರದ ಕಾವು ತಟ್ಟ ತೊಡಗಿತು. ಏತಡ್ಕ ಸಮೀಪ ಸಮಾಲೋಚನಾ ಸಭೆ ನಡೆಸಿದೆವು. ಕೇರಳದ ‘ತಡೆಯಣಗಳುಡೆ ಪೆರುಂದಚ್ಚನ್’ (ತಡೆಗಟ್ಟಗಳ ತಜ್ಞ) ಎಂದೇ ಕರೆಯುವ ನಿವೃತ್ತ ಮುಖ್ಯ ಎಂಜಿನಿಯರ್ ಟಿ.ಎನ್.ಎನ್. ಭಟ್ಟತ್ತಿರಿಪಾಡ್ ಹಾಗೂ ಇನ್ನೂ ಅನೇಕ ಜಲತಜ್ಞರು, ಕೃಷಿಕರು, ಊರವರು ಎಲ್ಲರೂ ಸಮಾಗಮಿಸಿದರು. ಅಲ್ಲಿ ಕಟ್ಟ ಮರುಜೀವ ಪಡೆಯಬಹುದಾದ ಆಶಾಭಾವ ವ್ಯಕ್ತವಾಯಿತು’ ಎಂದು ಅವರು ಆಗ ನಡೆದ ಸಭೆಯನ್ನು ನೆನಪಿಸಿಕೊಂಡರು.


ಸಾಂಪ್ರದಾಯಿಕ ಜ್ಞಾನ– ಆಧುನಿಕ ಸ್ಪರ್ಶದೊಂದಿಗೆ ಮೇಲೆದ್ದಿರುವ ಕಟ್ಟ

‘ಜನರು ಕಟ್ಟಗಳ ಬಗ್ಗೆ ಚರ್ಚೆ ಆರಂಭಿಸಿದರು. ಸರಣಿ ಕಟ್ಟಗಳ ಪ್ರದೇಶಗಳಿಗೆ ಜಲಯಾತ್ರೆ ನಡೆಯಿತು. ಇವುಗಳ ಅಧ್ಯಯನ, ಕಾರ್ಯಾಗಾರಗಳು ನಡೆದವು. ಜಲಾಸಕ್ತರು ಪುಸ್ತಕಗಳನ್ನು ಬರೆದರು. ಜನರಲ್ಲೂ ಕುತೂಹಲ ಬೆಳೆಯಿತು. ಕಟ್ಟ ಎಂಬುದು ಅಭಿಮಾನದ ಸಂಗತಿಯಾಯಿತು. ಕಟ್ಟ ನೋಡಲೆಂದೇ ಊರಿಗೆ ಬರುವವರನ್ನು ಕಂಡು ಹಳ್ಳಿಗರು ಸಂಭ್ರಮಿಸಿದರು. ಕಟ್ಟ ನಿರ್ಮಾಣದ ಬೀಜ ಮೊಳೆತ, ಅದಕ್ಕೊಂದು ನಿರ್ಧರಿತ ನಿಲುವಿಗೆ ಬಂದ ನವೆಂಬರ್ 15 ಅನ್ನು ಕಟ್ಟ ದಿನವಾಗಿ ಘೋಷಿಸಿ, ಈಗಲೂ ಈ ದಿನಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ. ಕಟ್ಟ ಕಟ್ಟುತ್ತಿದ್ದ ಹಿರಿಯರಲ್ಲಿ ಅನೇಕರು ಇಲ್ಲ, ಆದರೆ, ಹೊಸಬರಲ್ಲಿ ಕಟ್ಟದ ಬಗೆಗಿನ ಉತ್ಕಟತೆ ಈಗಲೂ ಕಡಿಮೆಯಾಗಿಲ್ಲ ಎಂಬುದೇ ಸಾರ್ಥಕತೆ’ ಎನ್ನುವಾಗ ಅವರಲ್ಲಿ ಸಂತೃಪ್ತ ಭಾವ.

ಕುಂಬ್ಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 7000 ಎಕರೆ ಭೂಮಿ ಇದೆ. ಇಲ್ಲಿ ವರ್ಷಕ್ಕೆ ಸರಾಸರಿ 35 ಕಟ್ಟಗಳು ನಿರ್ಮಾಣವಾಗುತ್ತವೆ. ಏತಡ್ಕಕ್ಕೆ ಭೇಟಿ ನೀಡಿದರೆ, ಸರಣಿ ಕಟ್ಟಗಳನ್ನು ಕಾಣಬಹುದು ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಕುಂಬ್ಡಾಜೆ ಪಂಚಾಯಿತಿಯ ಕೃಷಿಕರು ಯಾವುದೇ ಸರ್ಕಾರಿ ಅನುದಾನದ ನೆರವಿಲ್ಲದೇ, ಪ್ರತಿವರ್ಷ ಜಲಸಂರಕ್ಷಣೆಗಾಗಿ ಸುಮಾರು ₹ 20 ಲಕ್ಷ ವೆಚ್ಚ ಮಾಡುತ್ತಾರೆ. ಸರ್ಕಾರದ ನೆರವು ದೊರೆತರೆ ಅನುಕೂಲ ಎಂಬುದು ಕೃಷಿಕರ ಅಭಿಪ್ರಾಯ.


ಸಾಂಪ್ರದಾಯಿಕ ಕಟ್ಟ

ಕಟ್ಟ ನಿರ್ಮಾಣ ಹೇಗೆ?
ತಮ್ಮ ಜಮೀನಿನಲ್ಲಿ ಪ್ರತಿವರ್ಷ ಕಟ್ಟ ಕಟ್ಟುವ ಪಡ್ರೆ ಗ್ರಾಮದ ಕೃಷಿಕ ಶ್ರೀಹರಿ ಭಟ್ಟ ಸಜಂಗದ್ದೆ ಅವರು ಕಟ್ಟದ ಮಹತ್ವ ಹಾಗೂ ಅದರ ಕೌಶಲವನ್ನು ‘ಪ್ರಜಾವಾಣಿ’ ಜತೆ ಹಂಚಿಕೊಂಡರು. ‘ಕೃಷಿ ಜಮೀನಿನ ಪಕ್ಕದ ತೋಡುಗಳಲ್ಲಿ ಹರಿದು ಹೋಗುವ ನೀರಿನ್ನು ಹಿಡಿದಿಟ್ಟುಕೊಳ್ಳುವ ತಾತ್ಕಾಲಿಕ ವ್ಯವಸ್ಥೆ ಈ ಕಟ್ಟ. ಇದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚುವ ಜತೆಗೆ, ಅಂತರ್ಜಲ ಮಟ್ಟವೂ ವೃದ್ಧಿಯಾಗುತ್ತದೆ. ಇದಕ್ಕೆ ವೆಚ್ಚವೂ ಅಧಿಕವಲ್ಲ. ಐದಾರು ಅಡಿ ಉದ್ದ–ಅಗಲದ ಕಟ್ಟಕ್ಕೆ ಗರಿಷ್ಠ ₹ 2500 ಖರ್ಚು ತಗಲಬಹುದು. ಸ್ಥಳೀಯವಾಗಿ ಲಭ್ಯವಾಗುವ ತೆಂಗು–ಅಡಿಕೆ ಮರಗಳ ತುಂಡುಗಳು, ಮಣ್ಣಿನ ಮೆಲಿಪು (ಮಣ್ಣನ್ನು ಒಂದುವಾರ ನೀರಿನಲ್ಲಿಟ್ಟು ಹದಗೊಳಿಸಿದರೆ ಅದು ಅಂಟಿನ ರೀತಿ ಆಗುತ್ತದೆ) ಇದ್ದರೆ ಸಾಕು’ ಎನ್ನುತ್ತಾರೆ ಅವರು.

‘ಗುಜರಿ ಕಟ್ಟ, ನೆರಿಕೆ ಕಟ್ಟಗಳು ನೆಲಮೂಲದ ಜ್ಞಾನದಿಂದ ಬಂದವು. ಆಧುನಿಕ ಮಾದರಿಯಲ್ಲಿ ಈಗ ಹಲಗೆ ಹಾಕಿ, ಪ್ಲಾಸ್ಟಿಕ್ ಬಳಸಿ, ಮರಳಿನ ಚೀಲಗಳನ್ನು ಪೇರಿಸಿಯೂ ಕಟ್ಟ ಕಟ್ಟುವುದು ರೂಢಿಯಲ್ಲಿದೆ. ಏತಡ್ಕದಲ್ಲಿ ಹಲವಾರು ತೋಡುಗಳು ಸೇರಿ ಹೊಳೆಯ ರೂಪ ಪಡೆದುಕೊಂಡಿವೆ. ಅಂತಹ ಪ್ರದೇಶಗಳಲ್ಲಿ ಕಟ್ಟ ನಿರ್ಮಿಸಲು ವೃತ್ತಿಪರತೆ, ನಾಜೂಕುತನ, ಜಾಗದ ಮಣ್ಣಿನ ಪದರಗಳ ತಿಳಿವಳಿಕೆ, ಕೃಷಿ ವೈವಿಧ್ಯದ ಅರಿವು, ಜೊತೆಗೆ ಲಕ್ಷಾಂತರ ರೂಪಾಯಿ ವೆಚ್ಚವನ್ನು ಭರಿಸಬೇಕಾಗುತ್ತದೆ. ಆಧುನಿಕ ವಾಣಿಜ್ಯ ಕೃಷಿಯ ಭರಾಟೆಯಲ್ಲಿ ಕಟ್ಟಗಳು ಕಣ್ಮರೆಯಾಗುವ ಹಂತದಲ್ಲಿದ್ದವು. ಆದರೆ, ಜಲಕ್ಷಾಮದ ಬಿಸಿ ಜನರನ್ನು ಎಚ್ಚರಿಸಿದೆ. ಮೂರ್ನಾಲ್ಕು ವರ್ಷಗಳಿಂದ ಮತ್ತೆ ಹಳ್ಳಿಗಳಲ್ಲಿ ಕಟ್ಟಗಳ ಜಲಸಂಭ್ರಮ ಕಾಣಸಿಗುತ್ತಿದೆ’ ಎನ್ನುತ್ತಿದ್ದರು ಅವರು.

‘25–30 ಕಟ್ಟಗಳು ಮೇಲೇಳುವ ಪಡ್ರೆ ಗ್ರಾಮದಲ್ಲಿ ಐದಾರು ಕಟ್ಟಗಳು ಮಾತ್ರ ಉಳಿದುಕೊಂಡಿದ್ದವು. ಬೇಸಿಗೆ ಬರ ಊರವರನ್ನು ಎಚ್ಚರಿಸಿತು. ಈಗ ಮತ್ತೆ 35ರಷ್ಟು ಕಟ್ಟಗಳು ಜಲ ನೆಮ್ಮದಿಯನ್ನು ಕರುಣಿಸಿವೆ. ಕೃಷಿ ಬೆಳೆಗಳಿಗೆ ಸಾಮಾನ್ಯವಾಗಿ ಮಾರ್ಚ್ ಕೊನೆಯವರೆಗೂ ನೀರಿನ ಪಸೆಯನ್ನು ಉಳಿಸುತ್ತವೆ ಕಟ್ಟಗಳು’ ಎಂದು ಶ್ರೀಹರಿ ಭಟ್ಟ ಅನುಭವ ಹಂಚಿಕೊಂಡರು.


ಅಡಿಕೆ ಮರದ ದಬ್ಬೆಗೆ ಮಣ್ಣು ಮೆತ್ತಿ ನಿರ್ಮಿಸಿರುವ ಕಟ್ಟದ ರಚನೆ

‘ಹಿಂದಿನಿಂದ ಕಟ್ಟ ಕಟ್ಟುವ ಸಂಪ್ರದಾಯ ಅಂತರ್ಗತವಾಗಿದೆ. ಹಿಂದೆ ಪಾರಂಪರಿಕ ಕಟ್ಟವನ್ನು ಕಟ್ಟುತ್ತಿದ್ದೆವು. ಈಗ ಕಾರ್ಮಿಕರ ಕೊರತೆ, ಅಧಿಕ ವೆಚ್ಚದ ಕಾರಣಕ್ಕೆ ಫೈಬರ್ ಶೀಟ್, ಮಣ್ಣು ಹಾಕಿ ಕಟ್ಟುತ್ತೇವೆ. ನಮ್ಮ ಪತ್ತಡ್ಕ ಕಟ್ಟದಲ್ಲಿ ಒಂದು ಕಿ.ಮೀ.ವರೆಗೆ ಸರಾಸರಿ 8 ಅಡಿಯಷ್ಟು ನೀರು ನಿಲ್ಲುತ್ತದೆ. 200 ಎಕರೆ ಭೂಮಿಗೆ ನೀರುಣಿಸುತ್ತದೆ. ಏಪ್ರಿಲ್ ಕೊನೆಯವರೆಗೆ ನೀರಿನ ಕೊರತೆಯಾಗದು. ಸಮೀಪದ ಬೋರ್‌ವೆಲ್‌ಗಳು ರೀಚಾರ್ಜ್ ಆಗುವುದರಿಂದ ಮತ್ತೊಂದು ತಿಂಗಳು ಆ ನೀರನ್ನು ಬಳಸಿಕೊಳ್ಳಬಹುದು. ಪ್ರತಿವರ್ಷ ಪಾಲುದಾರರೆಲ್ಲ ಸೇರಿ ಅಂದಾಜು ₹ 1.25 ಲಕ್ಷ ವೆಚ್ಚ ಮಾಡುತ್ತೇವೆ. ಕಟ್ಟದಲ್ಲಿ ಇರುವ ನೀರು ಕಣ್ಣಿಗೆ ಕಾಣುವ ನೀರು. ಬೆಳೆ ಕಳೆದುಕೊಳ್ಳುವ ಆತಂಕವಿಲ್ಲ. ಹೀಗಾಗಿ, ಇದು ವೆಚ್ಚದಾಯಕ ಅನ್ನಿಸುವುದಿಲ್ಲ. ಈ ವರ್ಷ ಆಗಾಗ ಮಳೆ ಸುರಿದ ಕಾರಣಕ್ಕೆ ಈಗಷ್ಟೇ ಕಟ್ಟದ ಕೆಲಸ ಪೂರ್ಣಗೊಂಡಿದೆ’ ಎಂದು ವಿವರಿಸಿದರು ಪಡ್ರೆಯ ಕೃಷಿಕ ಗಣಪತಿ ಭಟ್ಟ ಪತ್ತಡ್ಕ.

‘ಕಲ್ಲು, ಮಣ್ಣು, ಮರದ ಗೆಲ್ಲು ಬಳಸಿ ಹಿಂದೆ ಹಳ್ಳಿಗಳಲ್ಲಿ ಸಾವಿರಾರು ಕಟ್ಟಗಳನ್ನು ಕಟ್ಟುತ್ತಿದ್ದರು. ಕಾಲಕ್ರಮದಲ್ಲಿ ಕಟ್ಟಗಳೂ ಕಡಿಮೆಯಾದವು, ಅವುಗಳ ಮಾದರಿಯೂ ರೂಪಾಂತರಗೊಂಡಿದೆ. ನಾಲ್ಕೈದು ವಿನ್ಯಾಸಗಳು ಹೆ‌ಚ್ಚು ಪ್ರಚಲಿತದಲ್ಲಿವೆ. ಈಗಲೂ ಹಳ್ಳಿಗಳಲ್ಲಿ ಕಟ್ಟಗಳು ಇವೆ. ಆದರೆ, ಕುಂಬ್ಡಾಜೆ ಪಂಚಾಯಿತಿಯ ಜನರು ಪ್ರೀತಿಯಿಂದ, ಜತನದಿಂದ ಕಟ್ಟ ಕಟ್ಟುವ ಪರಿ ಮಾದರಿಯಾದದ್ದು. ಸರ್ಕಾರದಿಂದ ನಿರ್ಮಿತವಾಗುವ ನಾಲ್ಕೈದು ನೀರಿನ ತಡೆಗಳನ್ನು ಹೊರತುಪಡಿಸಿದರೆ, ಇನ್ನುಳಿದೆಲ್ಲವೂ ಜನರಿಂದಲೇ ಆಗುತ್ತವೆ. ಕೇರಳ ಕರ್ನಾಟಕದಲ್ಲಿ ಇಷ್ಟು ದೊಡ್ಡ ಕಟ್ಟಗಳ ಕೇಂದ್ರೀಕರಣ ಕಾಣುವುದು ಅಪರೂಪ. ಹೊಸ ಪೀಳಿಗೆಯವರು ಸಹ ಅತ್ಯುತ್ಸಾಹದಿಂದ ದೇಗುಲ ಕಟ್ಟುವಷ್ಟು ಶ್ರದ್ಧೆಯಿಂದ ಇಲ್ಲಿ ಕಟ್ಟ ಕಟ್ಟುತ್ತಾರೆ’ ಎನ್ನುತ್ತಾರೆ ಜಲತಜ್ಞ ಶ್ರೀಪಡ್ರೆ.


ಓಡುವ ನೀರಿಗೆ ತಡೆ ಹಾಕುವ ಯತ್ನ

‘ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ ಕಟ್ಟ ಕಟ್ಟುವುದನ್ನು ಗಮನಿಸಿದ್ದೇನೆ. ಇದರ ಹಿಂದಿನ ಪರಿಶ್ರಮ ನಿಜಕ್ಕೂ ಸ್ತುತ್ಯಾರ್ಹ. ಇಲ್ಲಿ ಕಡಿದಾದ ಬೆಟ್ಟ–ಗುಡ್ಡಗಳಿವೆ. 3500 ಮೀ.ಮೀ.ಗೂ ಅಧಿಕ ಮಳೆಯಾಗುತ್ತದೆ. ಆದರೆ, ಇಲ್ಲಿನ ಗುಡ್ಡಗಳು ಖಾಲಿಯಾಗಿವೆ. ಏಕಜಾತಿಯ ತೋಟಗಾರಿಕೆಯಿಂದ ಗುಡ್ಡಗಳಿಗೆ ಅಪಾಯ ಬಂದಿದೆ. ಸಾಕಷ್ಟು ಅಪಾಯಗಳು ಈಗಾಗಲೇ ಎದುರಾಗಿವೆ. ಆದಷ್ಟು ಅರಣ್ಯ ಬೆಳೆಸಿ, ಮಣ್ಣಿನ ಸವಕಳಿ ತಡೆಯಲು ಕ್ರಮವಾದರೆ, ನೀರಿನ ಸುಸ್ಥಿರತೆಗೆ ನಿಜವಾದ ಅರ್ಥ ಬರುತ್ತದೆ. ಅರಣ್ಯ ಬೆಳೆಸುವ ದಿಸೆಯಲ್ಲಿ ಪ್ರಯತ್ನ ಅಗತ್ಯವಿದೆ’ ಎನ್ನುತ್ತಾರೆ ಪರಿಸರ ಬರಹಗಾರ ಶಿವಾನಂದ ಕಳವೆ.

ಆಶಾಭಾವ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕಳೆದ ವರ್ಷ ಸಾಮಾಜಿಕ ಮುಖಂಡ ಧರಣೇಂದ್ರಕುಮಾರ್ ನೇತೃತ್ವದಲ್ಲಿ 40 ಕಟ್ಟಗಳು ನಿರ್ಮಾಣವಾಗಿದ್ದವು. ಈ ವರ್ಷವೂ ಅಲ್ಲಿನ ರೋಟರಿ ಕ್ಲಬ್ ಕಟ್ಟ ನಿರ್ಮಾಣದಲ್ಲಿ ಆಸಕ್ತಿ ತೋರಿರುವುದು ವಿಶೇಷ. ಮೂಡುಬಿದರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಎನ್‌ಎಸ್‌ಎಸ್ ಘಟಕ ಸಹ ಕೆಲವು ವರ್ಷಗಳಿಂದ ಹಳ್ಳಿಗಳಲ್ಲಿ ಕಟ್ಟ ನಿರ್ಮಾಣದ ಜಾಗೃತಿ ಮೂಡಿಸುತ್ತಿದೆ. ಇವು ಮತ್ತೆ ಕಟ್ಟ ಸಂಸ್ಕೃತಿಗೆ ಮರಳಲು ಪೂರಕವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು