ಮಂಗಳವಾರ, ಜನವರಿ 28, 2020
24 °C
ಮಣ್ಣುಜೀವಿಗಳಿಗೆ ಹರ್ಬಲ್‌ ಟೀ

ಕಳೆಗಿಡಗಳ ಟೀ

ಸಾಯಿಲ್ ವಾಸು Updated:

ಅಕ್ಷರ ಗಾತ್ರ : | |

Prajavani

ಕಳೆ / ಸತ್ತೆ ಇತ್ಯಾದಿ ಹೆಸರುಗಳಿಂದ ಗುರುತಿಸುವ ಕೆಲವು ಗಿಡಗಳು ಕರೆಯದೆ ಬರುವ ನೆಂಟರಂತೆ. ಹಾಗೆಯೇ ಬಂದು ಜಮೀನಿನಲ್ಲಿ ಠಿಕಾಣಿ ಹಾಕುತ್ತವೆ. ಗೊಬ್ಬರ - ನೀರು ಕೊಡದಿದ್ದರೂ ಪರವಾಗಿಲ್ಲ. ತನಗೆ ಏನೂ ಆಗುವುದಿಲ್ಲ ಎನ್ನುತ್ತಾ ಬಿರುಬಿಸಿಲಿನಲ್ಲೂ ನಳನಳಿಸುತ್ತಾ ಓಲಾಡುತ್ತವೆ. ಮೂಲ ಬೆಳೆಗಳೊಂದಿಗೆ ಪ್ರತಿಸ್ಪರ್ಧಿಯಾಗಿ ಬೆಳೆಯುತ್ತವೆ. ಇವನ್ನು ನಾಶ ಮಾಡಲು ರೈತರು ಕಾರ್ಕೋಟಕ ಕಳೆನಾಶಕಗಳನ್ನು ಅಸ್ತ್ರವಾಗಿ ಬಳಸುತ್ತಾರೆ. ಈ ಅಸ್ತ್ರಕ್ಕೆ ಕಳೆಗಳು ಕಣ್ಮರೆಯಾಗುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ ಮಣ್ಣಲ್ಲಿನ ಜೀವಾಣುಗಳ ಮೇಲೆ ದುಷ್ಪರಿಣಾಮ ಬೀಳುವುದಂತೂ ನಿಜ.

ಕಳೆಗಿಡಗಳು, ಮಣ್ಣಿನ ಆರೋಗ್ಯದ ಸ್ಥಿತಿ - ಗತಿಗಳನ್ನು ತಿಳಿಸುವ ಸೂಚಕಗಳು ಎಂಬ ನಂಬಿಕೆ ಸಹಜ ಕೃಷಿ ಪದ್ಧತಿ ಅನುಸರಿಸುವ ಕೃಷಿಕರದ್ದು. ನಮ್ಮ ಮಣ್ಣು ಆರೋಗ್ಯ ಮತ್ತು ಫಲವತ್ತತೆಯಿಂದ ಕೂಡಿದೆ ಎಂಬುದನ್ನು ಈ ಕಳೆಗಿಡಗಳು ತೋರಿಸುತ್ತವಂತೆ.

ಅಂದರೆ, ನಮ್ಮ ಹೊಲ - ತೋಟ - ಗದ್ದೆ - ತೋಪುಗಳಲ್ಲಿನ ಮಣ್ಣಿನಲ್ಲಿ ‘ಏನು ನಡೆಯುತ್ತಿದೆ’ ಎಂಬುದನ್ನು ನಮಗೆ ತಿಳಿಸುವ ಸಲುವಾಗಿಯೇ ಈ ಬಗೆಯ ಕಳೆಗಿಡಗಳು ಹುಟ್ಟುತ್ತವೆಯಂತೆ. ಆದ್ದರಿಂದ ಕಳೆಗಿಡಗಳನ್ನು ನೋಡಿದ ತಕ್ಷಣ ಅದನ್ನು ಬುಡಸಮೇತ ಕಿತ್ತೆಸೆಯುವತ್ತ ಯೋಚನೆ ಮಾಡಬೇಡಿ. ಹಾಗೆಯೇ ಕಳೆನಾಶಕ ಸಿಂಪಡಿಸಿ, ಸಾಯಿಸಲೂ ಬೇಡಿ.

ಹಾಗಾದರೆ ಅವುಗಳನ್ನು ಏನು ಮಾಡಬೇಕು ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಇಂಥ ಪರೋಪಕಾರಿ ಕಳೆಗಿಡಗಳನ್ನು ಉಪಯುಕ್ತವಾಗಿ ಬಳಸಲು ಹಲವು ವಿಧಾನಗಳಿವೆ. ಅವುಗಳಲ್ಲಿ ಒಂದು, ಕಳೆಗಿಡಗಳಿಂದ ಚಹಾ ತಯಾರಿಸುವುದು. ಅಂದರೆ ‘ವೀಡ್‌ ಟೀ’ (Weed Tea) ತಯಾರಿಕೆ. ಇದೊಂದು ದ್ರವರೂಪಿ ಗೊಬ್ಬರ ತಯಾರಿಸುವ ವಿಧಾನ.

ತಯಾರಿಕೆ ವಿಧಾನ

1. ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಕಳೆಗಿಡಗಳನ್ನು - ಅಂದರೆ ಎಲೆ ಮತ್ತು ಕಾಂಡ ಭಾಗವನ್ನು ಮಾತ್ರ ಕತ್ತರಿಸಿ.

2. ಅದನ್ನು ಇನ್ನಷ್ಟು ಸಣ್ಣಗೆ ಕತ್ತರಿಸಿ, ಒಂದು ಗೋಣೀಚೀಲದಲ್ಲಿ ಹಾಕಿ.

3. ಕಳೆಗಿಡಗಳಿಂದ ತುಂಬಿದ ಗೋಣೀಚೀಲವನ್ನು ಬಿಗಿಯಾಗಿ ಕಟ್ಟಿ, 200 ಲೀಟರ್ ಸಾಮರ್ಥ್ಯದ ಡ್ರಮ್‌ನಲ್ಲಿ ಇಡಿ. ಆ ಡ್ರಮ್‌ಗೆ ಮುಕ್ಕಾಲು ಭಾಗ ನೀರು ತುಂಬಿಸಿ.

5. ಗೋಣಿಚೀಲದ ಮೇಲೆ ಭಾರವಾದ ಕಲ್ಲೊಂದನ್ನು ಇಡಿ. ಏಕೆಂದರೆ ನೀರಲ್ಲಿರುವ ಗೋಣೀಚೀಲ ಮೇಲಕ್ಕೆ ತೇಲತೊಡಗುತ್ತದೆ. ಅದನ್ನು ತಪ್ಪಿಸಲು ಈ ವಿಧಾನ ಅನುಸರಿಸಬೇಕು.

6. ಡ್ರಮ್‌ ಹಾಗೆಯೇ ತೆರೆದಿರಲಿ.

7. ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ ಡ್ರಮ್‌ನಲ್ಲಿರುವ ಕಳೆಗಿಡಗಳನ್ನು ತುಂಬಿದ ಗೋಣೀಚೀಲವನ್ನು ಕೋಲಿನಿಂದ ಚುಚ್ಚಿ. ಹೀಗೆ ಮಾಡುವಾಗ, ಗೋಣೀಚೀಲದೊಳಗಿರುವ ಕಳೆಗಿಡಗಳಲ್ಲಿನ ಸಾರ ನೀರಲ್ಲಿ ನಿಧಾನವಾಗಿ ಬೆರೆಯುತ್ತದೆ. ನೀರಿನ ಬಣ್ಣವೂ ಕ್ರಮೇಣ ಕಪ್ಪಾಗುತ್ತದೆ.

8. ಹದಿನೈದು ದಿನಗಳ ನಂತರ ಈ ನೀರನ್ನು, ನೀವು ಎಲ್ಲಿಂದ ಕಳೆಗಿಡಗಳನ್ನು ಕಿತ್ತು ಸಂಗ್ರಹಿಸಿ ತಂದಿರುತ್ತೀರೋ ಆ ಜಮೀನಿನ ಮಣ್ಣಿನ ಮೇಲೆ ಹಾಕಿ. ಮಣ್ಣು ನೇರಬಿಸಿಲಿಗೆ ತಾಗದಂತೆ ಮುಚ್ಚಿಗೆ ಮಾಡಿ.

9. ಚಿಮುಕಿಸಿದ ನೀರಿನ ಮೂಲಕ ಕಳೆಗಿಡಗಳಲ್ಲಿನ ಹಲವು ಬಗೆಯ ಪೋಷಕಾಂಶಗಳು ಮಣ್ಣಿಗೆ ಸೇರಿ ಮಣ್ಣಲ್ಲಿ ಜೀವಾಣುಗಳ ಸಂಖ್ಯೆ ಹೆಚ್ಚಾಗುವುದನ್ನು ಹಾಗೂ ಅಲ್ಲಿ ಬೆಳೆಯುವ ಗಿಡಗಳು ಆರೋಗ್ಯವಾಗಿರುವುದನ್ನು ನೀವು ಗಮನಿಸಬಹುದು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು