ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷವಿಡೀ ನಗುವ ನಿತ್ಯಪುಷ್ಪ

Last Updated 19 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಹೆಚ್ಚಿನ ಆರೈಕೆ ಇಲ್ಲದೇ, ಎಲ್ಲೆಂದರಲ್ಲಿ ಬೆಳೆಯುತ್ತಾ, ಸದಾ ನಗುಸೂಸುತ್ತಾ ಮನೆಯಂಗಳವನ್ನು ತನ್ನ ಸೌಂದರ್ಯದಿಂದ ಕಂಗೊಳಿಸುವಂತೆ ಮಾಡುವ ಹೂವೇ ನಿತ್ಯಪುಷ್ಪ. ಗಿಡದ ಬೀಜವು ಗಾಳಿಯಿಂದ ಹಾರಿ ಬಂದು, ನೀರು ಗೊಬ್ಬರವಿಲ್ಲದಿದ್ದರೂ ತನ್ನಷ್ಟಕ್ಕೆ ತಾನೇ ಬೆಳೆಯುವುದು ವೈಶಿಷ್ಟ್ಯ. ಇದನ್ನು ಪ್ರಾಣಿಗಳು ತಿನ್ನುವುದಿಲ್ಲ. ಆದ್ದರಿಂದ ರಸ್ತೆ ಪಕ್ಕದಲ್ಲಿ ಹಾಕಿದರೂ ಯಾವುದೇ ತೊಂದರೆ ಇಲ್ಲ.

ಸದಾ ಪುಷ್ಪ, ಸದಾಬಾಹರ್, ನಿತ್ಯಕಲ್ಯಾಣಿ, ಕಾಶಿ ಕಣಗಿಲೆ ಎಂದು ಹಲವಾರು ಹೆಸರುಗಳಿಂದ ಕರೆಸಿಕೊಳ್ಳುವ ಈ ಚೆಲುವೆ ಬಿಳಿ, ಗುಲಾಬಿ, ನಸುಗೆಂಪು ಬಣ್ಣಗಳಿಂದ ಮನಸೂರೆಗೊಳ್ಳುತ್ತಾಳೆ. ಗೋಡೆಯ ಬಿರುಕು, ಮನೆಯ ಅಂಗಳ, ತುಳಸಿ ಕಟ್ಟೆಯ ಹತ್ತಿರ, ಗೇಟಿನ ಪಕ್ಕ ಹೀಗೆ ಎಲ್ಲೆಲ್ಲೂ ಇದು ವರ್ಷವಿಡೀ ಹೂವು ಬಿಡುತ್ತಿರುತ್ತದೆ. ಆದ್ದರಿಂದಲೇ ಇದಕ್ಕೆ ನಿತ್ಯ ಕಲ್ಯಾಣಿ ಅಥವಾ ಸದಾ ಪುಷ್ಪ ಎನ್ನುತ್ತಾರೆ. ಇದು ದಕ್ಷಿಣ ಅಮೆರಿಕದಿಂದ ಬಂದ ಸಸ್ಯವಾಗಿದೆ. ಇದನ್ನು ಆಯುರ್ವೇದದಲ್ಲಿ ಕಾಸಿಕಣಗಿಲೆ ಎನ್ನುತ್ತಾರೆ.

ಔಷಧಗಳ ಆಗರ
ನಿತ್ಯಪುಷ್ಪ ಕೇವಲ ಸೌಂದರ್ಯಕ್ಕೆ ಮಾತ್ರವಲ್ಲದೇ ಇದರ ಹೂವು, ಕಾಂಡ, ಬೇರು ಹೀಗೆ ಪ್ರತೀ ಭಾಗವೂ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಅತ್ಯುತ್ತಮ ಆಯುರ್ವೇದ ಔಷಧವಾಗಿ ಬಳಸಬಹುದು. ಈ ಗಿಡದ ಬೇರನ್ನು ಸುಟ್ಟು ಮಾಡಿದ, ಸಂಸ್ಕರಿಸಿದ ಬೂದಿಗೆ ಕ್ಯಾನ್ಸರ್ ಕೋಶಗಳನ್ನು ನಾಶಮಾಡುವ ಶಕ್ತಿ ಇದೆ. ಇದು ಕ್ಯಾನ್ಸರ್ ನಿವಾರಕವೂ ಹೌದು. ಇದರ ಎಲೆ ಮತ್ತು ಹೂವಿನ ರಸವನ್ನು ಬೇವಿನ ಎಣ್ಣೆಯೊಂದಿಗೆ ಬೆರೆಸಿ ಉಪಯೋಗಿಸಿದರೆ ಚರ್ಮ ವ್ಯಾಧಿಗಳಾದ ಇಸುಬು, ಹುಳುಕಡ್ಡಿ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದು ಮಧುಮೇಹ ನಿವಾರಕವಾಗಿಯೂ ಕೆಲಸ ಮಾಡುತ್ತದೆ.

ಜೇನುಕಡಿತಕ್ಕೆ ಈ ಎಲೆಯ ರಸವನ್ನು ಹಚ್ಚಿದಾಗ ನಂಜಾಗುವುದನ್ನು ತಡೆಯುತ್ತದೆ. ಹೂವಿನ ಕಷಾಯ ಮಾಡಿ ತಲೆಗೆ ಲೇಪಿಸಿಕೊಂಡರೆ ಹೇನು ನಿವಾರಣೆಯಾಗುತ್ತದೆ. ನಿತ್ಯಪುಷ್ಪ ಸೌಂದರ್ಯ ವರ್ಧಕವೂ ಹೌದು. ಇದರ ರಸವನ್ನು ನೇರವಾಗಿ ಸೇವಿಸುವುದು ನರರೋಗಿಗಳಿಗೆ ಒಳ್ಳೆಯದಲ್ಲ. ಆದ್ದರಿಂದ ಆಯುರ್ವೇದದಲ್ಲಿ ಇದನ್ನು ಇತರ ಗಿಡಮೂಲಿಕೆಗಳೊಂದಿಗೆ ಬಳಸುತ್ತಾರೆ. ವೈದ್ಯರ ಸಲಹೆ ಮೇರೆಗೆ ಬಳಸುವುದು ಒಳ್ಳೆಯದು.

ಗುಲಾಬಿ ಬಣ್ಣದ ಹೂಬಿಡುವ ಗಿಡಕ್ಕಿಂತ ಬಿಳಿ ಹೂಗಳನ್ನು ಬಿಡುವ ಗಿಡಗಳಲ್ಲಿ ಔಷಧೀಯ ಗುಣಗಳು ಅಧಿಕವಾಗಿರುತ್ತದೆ. ಅರಿತು ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT