ಬಿಜೆಪಿಯಿಂದ ಐವರು ಶಾಸಕರ ರಾಜೀನಾಮೆ ಕೊಡಿಸೋಣ ಬಿಡಿ: ಕುಮಾರಸ್ವಾಮಿ ವ್ಯಂಗ್ಯ

ಮಂಡ್ಯ: ‘ರಾಜ್ಯ ಸರ್ಕಾರದ ಅಳಿವು–ಉಳಿವಿನ ಬಗ್ಗೆ ಮಾಧ್ಯಮಗಳು ತೋಳ ಬಂತು ತೋಳ ಕತೆ ಹೇಳುತ್ತಿವೆ. ಸರ್ಕಾರದ ಉಳಿವಿಗಾಗಿ ಬಿಜೆಪಿಯ ಐವರು ಶಾಸಕರ ರಾಜೀನಾಮೆ ಕೊಡಿಸೋಣ ಬಿಡಿ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದರು.

ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜಾರಕಿಹೊಳಿ ಸಹೋದರರ ನಡೆಯಿಂದ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ನನಗೆ ಗೊತ್ತಿಲ್ಲ. ಅವರಿಗೆ ಅಸಮಾಧಾನ ಇರುವ ಬಗ್ಗೆಯೂ ನನಗೆ ಮಾಹಿತಿ ಇಲ್ಲ. ಆದರೆ, ಈ ಬಗ್ಗೆ ಮಾಧ್ಯಮಗಳು ಬಿಸಿ ಬಿಸಿ, ತಾಜಾ ಸುದ್ದಿ ನೀಡುತ್ತಿವೆ. ಸರ್ಕಾರ ಬಿದ್ದೇ ಹೋಯಿತು ಎಂಬಂತೆ ಮಾತನಾಡುತ್ತಿದ್ದಾರೆ. ಹೈದರಾಬಾದ್‌ಗೆ 10 ಜನರ ತಂಡ ಹೋಗಿದೆ, ಇನ್ನೊಲ್ಲೇ 10 ಮಂದಿ ಇದ್ದಾರೆ ಎಂದೆಲ್ಲಾ ವರದಿ ಬರುತ್ತಿವೆ. ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಸುದ್ದಿ ಮಾಡುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ’ ಎಂದು ಹೇಳಿದರು.

‘ಸ್ವಲ್ಪ ದಿನ ಕಾದು ನೋಡೋಣ, ಬೇಕು ಎಂದರೆ ಯು ಟರ್ನ್‌ ತೆಗೆದುಕೊಳ್ಳೋಣ. ಬಿಜೆಪಿಯಿಂದ ಯಾರನ್ನಾದರೂ ರಾಜೀನಾಮೆ ಕೊಡಿಸೋಣ’ ಎಂದರು.

ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು ಮಾತನಾಡಿ, ‘ರಾಜಕೀಯ ಸಮ್ಮಿಲನದ ಬಗ್ಗೆ ಈಗಲೇ ಏನನ್ನೂ ಹೇಳುವುದಿಲ್ಲ. ಬಿಜೆಪಿಯಿಂದ ಐದು ಜನ ಬರುವರೋ, 10 ಮಂದಿ ಬರುವರೋ ಎಂಬುದನ್ನು ಕಾದು ನೋಡಿ. ಈ ವಿಚಾರದಲ್ಲಿ ಜೆಡಿಎಸ್‌ ಹಿಟ್‌ ಅ್ಯಂಡ್‌ ರನ್‌ ಮಾಡುವುದಿಲ್ಲ. ಜೆಡಿಎಸ್‌ ಯಾವಗಲೂ ಯಶಸ್ವಿ ರಾಜಕಾರಣ ಮಾಡುತ್ತದೆ. ಈ ವಿಚಾರದಲ್ಲೂ ನಾವೇ ಯಶಸ್ವಿಯಾಗುತ್ತೇವೆ’ ಎಂದು ಹೇಳಿದರು.

ಪ್ರಮುಖ ಸುದ್ದಿಗಳು