ಕೆಂಪೇಗೌಡ ಕಟ್ಟಿಸಿದ ಗಣೇಶ ಗುಡಿ

ಗಣೇಶೋತ್ಸವ ಎಂದರೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ಮೂರು ದಿನದ ಪೂಜೆಯ ನಂತರ ಕೆರೆಯಲ್ಲಿ ವಿಸರ್ಜನೆ ಮಾಡುವುದು ಸಾಮಾನ್ಯ. ಆಚರಣೆಯ ಹೆಸರಿನಲ್ಲಿ ಚಂದಾ ಎತ್ತುವುದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವುದು ಕೂಡಾ ಅಷ್ಟೇ ಸಾಮಾನ್ಯ. ಆದರೆ, ಕೆ.ಆರ್‌. ಮಾರುಕಟ್ಟೆಯ ಬಳಿ ಇರುವ ಟಿಪ್ಪುವಿನ ಕೋಟೆಯ ಒಳಗೊಂದು ಗಣೇಶನ ಗುಡಿ ಇದೆ. ಬಹುತೇಕರಿಗೆ ಇದರ ಬಗ್ಗೆ ಗೊತ್ತಿಲ್ಲ. ಅಲ್ಲಿ ನಡೆಯುವ ಗಣೇಶೋತ್ಸವ ಕೂಡಾ ಅಷ್ಟೇ ಭಿನ್ನ. ಈ ಗಣೇಶನಿಗೆ ಯಾವುದೇ ಅದ್ದೂರಿ, ಆಡಂಬರ ಇಲ್ಲದೆ ನೈಜ ಪೂಜೆ ಸಲ್ಲುತ್ತಿದೆ.

ಇತಿಹಾಸದ ಪ್ರಕಾರ 1537ರಲ್ಲಿ ಮಾಗಡಿ ಕೆಂಪೇಗೌಡರು ಈ ಗುಡಿಯನ್ನು ನಿರ್ಮಿಸಿದ್ದಾರೆ. ಗುಡಿಯ ಗೋಡೆಯ ಮೇಲೆ ಗಣೇಶನ ಉಬ್ಬುಚಿತ್ರವಿದೆ. 1761ರಲ್ಲಿ ಹೈದರಾಲಿ ಈ ಗುಡಿಯನ್ನು ಕಲ್ಲು ಸಿಮೆಂಟಿನಿಂದ ನವೀಕರಿಸಿದ್ದಾರೆ. ಮುಜರಾಯಿ ಇಲಾಖೆಗೆ ಸೇರಿದ್ದರೂ ಯಾವುದೇ ನಿರ್ವಹಣೆ ಇಲ್ಲ. ಈ ಗುಡಿಗೆ ಅರ್ಚಕರನ್ನಾಗಲಿ ನೇಮಿಸಿಲ್ಲ, ನಿತ್ಯ ಪೂಜೆ ಇಲ್ಲ. ಬೇರೆ ದೇವಸ್ಥಾನದ ಅರ್ಚಕರೊಬ್ಬರು ವಾರದಲ್ಲಿ ಮೂರು–ನಾಲ್ಕು ದಿನ ಮಧ್ಯಾಹ್ನ 11ರ ವೇಳೆಗೆ ಬಂದು ಪೂಜೆ ಮಾಡುತ್ತಾರೆ.

ಉತ್ಸವ ಮೂರ್ತಿಗೆ ಪೂಜೆ: ಸ್ಥಳೀಯ ಕೆಲವು ಭಕ್ತರು 1986ರಿಂದ ಚತುರ್ಥಿಯ ದಿನ ಶ್ರದ್ಧಾ ಭಕ್ತಿಯಿಂದ ಪಕ್ಕದ ಕೋಟೆ ಆಂಜನೇಯ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ತಂದು ಪೂಜೆ ಮಾಡುವ ಮೂಲಕ ಗಣೇಶೋತ್ಸವವನ್ನು ಸರಳವಾಗಿ ಆಚರಿಸುತ್ತಾರೆ.

ಹಬ್ಬದ ಹಿಂದಿನ ದಿನ ಉತ್ಸಾಹಿ ಯುವಕರು ಗುಡಿಯ ಸುತ್ತ ಸ್ವಚ್ಛ ಮಾಡಿ, ತಳಿರು ತೋರಣ ಕಟ್ಟಿ, ಬಾಳೆ ಹೂವಿನ ಅಲಂಕಾರ ಮಾಡುತ್ತಾರೆ. ಚತುರ್ಥಿಯ ದಿನ ಮಧ್ಯಾಹ್ನ 12ರಿಂದ 1 ಗಂಟೆಯವರೆಗೆ ಪೂಜೆ ಮಾಡಿ ಪ್ರಸಾದ ವಿತರಣೆ ಮಾಡುತ್ತಾರೆ. ಸುಮಾರು ನಲವತ್ತರಿಂದ ಐವತ್ತು ಮಂದಿ ಯುವಕರು ಸ್ವಯಂಪ್ರೇರಣೆಯಿಂದ ಕೆಲಸ ಮಾಡುತ್ತಾರೆ. ನಾನೂರರಿಂದ ಐನೂರು ಮಂದಿ ಪ್ರತಿ ವರ್ಷ ಈ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ದಕ್ಷಿಣಾಭಿಮುಖ ಗಣೇಶ: ಈ ಗುಡಿಯ ವಿಶೇಷವೇ ದಕ್ಷಿಣಾಭಿಮುಖವಾಗಿರುವ ಗಣೇಶ. ಆವರಣದಲ್ಲಿ ವೇಣುಗೋಪಾಲಸ್ವಾಮಿಯ ವಿಗ್ರಹವಿದೆ, ಗೋಡೆಯ ಮೇಲೆ ಸರ್ಪದ ಚಿತ್ರವಿದೆ. ಇವೂ ದಕ್ಷಿಣಾಭಿಮುಖವಾಗಿಯೇ ಇವೆ.

ಪ್ರಮುಖ ಸುದ್ದಿಗಳು