ದಾಳ ಉರುಳಿಸಲಿ ನೋಡೋಣ: ಬಿಜೆಪಿ ವಿರುದ್ಧ ತೊಡೆತಟ್ಟಿದ ಡಿ.ಕೆ. ಶಿವಕುಮಾರ್‌

ಬೆಂಗಳೂರು: ‘ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಹಸ್ತಕ್ಷೇಪ ಮಾಡಿದ್ದೇನೆ ಎಂದು ಯಾಕೆ ಹೇಳಿದ್ದಾರೋ ಗೊತ್ತಿಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ಸತೀಶ ಜಾರಕಿಹೊಳಿ ಹಿರಿಯ ನಾಯಕರು. ಬೆಳಗಾವಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮಗಳಿಗೆ ಅವರು ಆಹ್ವಾನಿಸಿದ ಸಂದರ್ಭಗಳಲ್ಲೆಲ್ಲಾ ನಾನು ಹೋಗಿದ್ದೇನೆ’ ಎಂದರು.

‘ನಾನೊಬ್ಬ ಚೆಸ್ ಆಟಗಾರ ಎಂದು ಈಗಾಗಲೇ ಹೇಳಿದ್ದೇನೆ. ಇದು ರಾಜಕೀಯ. ಏನು ಬೇಕಾದರೂ ಆಗಬಹುದು. ಅವರು (ಬಿಜೆಪಿಯವರು) ಒಂದೇ ಒಂದು ದಾಳವನ್ನು ಉರುಳಿಸಲಿ ನೋಡೋಣ. ಆಮೇಲೆ, ನಾವು ಯಾವ ದಾಳವನ್ನು ಹೇಗೆ ಉರುಳಿಸುತ್ತೇವೋ ಕಾದು ನೋಡಿ. ನಾನು ಟಾರ್ಗೆಟ್‌ ಆದರೂ ಅಡ್ಡಿ ಇಲ್ಲ’ ಎಂದು ಸವಾಲು ಹಾಕಿದರು.

‘ನಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ’ ಎಂಬ ಸತೀಶ್ ಜಾರಕಿಹೊಳಿ ಹೇಳಿಕೆ‌ಗೆ ಪ್ರತಿಕ್ರಿಯಿಸಿದ ಅವರು, ‘ಅದರಲ್ಲಿ ತಪ್ಪೇನಿದೆ? ರಾಜಕಾರಣಿ ಆದವರಿಗೆ ಆಸೆಗಳು ಇರಬೇಕು. ಜೊತೆಗೆ ಗುರಿಯೂ ಇರಬೇಕು. ಅದೇ ನಿಜವಾದ ರಾಜಕಾರಣ’ ಎಂದರು.

‘ನಾಗೇಂದ್ರ, ಆನಂದ್ ಸಿಂಗ್ ನನಗೆ ಆತ್ಮೀಯರು. ನನ್ನನ್ನು ನಂಬಿಯೇ ಅವರು ಪಕ್ಷಕ್ಕೆ ಬಂದಿದ್ದಾರೆ. ರಾಹುಲ್ ಗಾಂಧಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದೇವೆ. ಅವರಿಬ್ಬರೂ ಹೊಸಬರು. ಅವರಲ್ಲಿ ಯಾರೂ ಪಕ್ಷ ತ್ಯಜಿಸುವುದಿಲ್ಲ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿಗಳು