ಬಲು ಸೊಬಗು ಈ ಗೌರಿ ಹೂವಿನ ಚೆಲುವು

ರಾಮನಗರ: ಗೌರಿ ಒಂದು ಸುಂದರ ನೈಸರ್ಗಿಕ ಹೂ. ಅದರ ಸಸ್ಯ ಶಾಸ್ತ್ರೀಯ ಹೆಸರು ಗ್ಲೋರಿಯೋಸಾ ಸುಪರ್ಬ. ಈ ಹೂವಿನ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ.

ಗೌರಿ ಹೂವಿಗೆ ರಾಮನಗರ ತಾಲ್ಲೂಕು ಹೆಸರಾಗಿತ್ತು. ಮಳೆಗಾಲದಲ್ಲಿ ಕಾಡು-ಮೇಡು, ಮಾವಿನ ತೋಟಗಳಲ್ಲಿ ಬೇಲಿಗಳ ಮೇಲೆ ಗೌರಿ ಬಳ್ಳಿಗಳು ಬೆಳೆಯುತ್ತಿದ್ದವು. ಗ್ರಾಮೀಣ ಪ್ರದೇಶದಲ್ಲಿ ಓಡಾಡುವವರಿಗೆ ಈ ಹೂವಿನ ದರ್ಶನವಾಗುತ್ತಿತ್ತು. ಅದರೆ ಮಳೆ ಕೊರತೆ ಹಾಗೂ ಗೌರಿ ಗೆಡ್ಡೆ ಹೊರ ರಾಜ್ಯಕ್ಕೆ ಸಾಗಾಣಿಕೆಯಾದ ಮೇಲೆ ಈ ಹೂವು ಮರೆಯಾಗಿತ್ತು.

ಇಲ್ಲಿನ ಕೂಟಗಲ್ ಹೋಬಳಿಯ ಶಾನುಭೋಗನಹಳ್ಳಿ ಗ್ರಾಮದ ಸಮೀಪ ಮಾವಿನ ತೋಟವೊಂದರ ಬೇಲಿಯ ಮೇಲೆ ಕಾಣಿಸಿಕೊಂಡಿರುವ ಗೌರಿ ಅಚ್ಚರಿ ತಂದಿದೆ. ಮಳೆಯಾದರೆ ಮರೆಯಾಗಿರುವ ಗಿಡ, ಮರ, ಬಳ್ಳಿ ಮತ್ತೆ ಪುಟಿದು ಬರುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ.

ಗೌರಿ ಒಂದು ಔಷಧಿ ಸಸ್ಯ. ಅದರ ಹೂವು ಹಾಗೂ ಗೆಡ್ಡೆಯನ್ನು ಆಯುರ್ವೇದ ವೈದ್ಯದಲ್ಲಿ ಬಳಸಲಾಗುತ್ತಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಗೌರಿ ಬಳ್ಳಿಯನ್ನು ಫಾರಂಗಳಲ್ಲಿ ವಿಶೇಷವಾಗಿ ಬೆಳೆಸಲಾಗುತ್ತಿದೆ. ಇದೊಂದು ಉದ್ಯಮವಾಗಿ ಬೆಳೆಯುತ್ತಿದೆ. ಆದ್ದರಿಂದ ಅಲ್ಲಿನ ಬಿತ್ತನೆಗಾಗಿ ಗೌರಿ ಗೆಡ್ಡೆಯನ್ನು ಅಗೆದು ಕೊಂಡೊಯ್ದ ಪರಿಣಾಮವಾಗಿ ಇಲ್ಲಿ ಬಿತ್ತನೆ ಸಾಧ್ಯವಾಗಲಿಲ್ಲ.

ಈ ಬಾರಿ ಆರಂಭದಲ್ಲಿ ಮಳೆಯಾದ ಕಾರಣ ಗಿಡ-ಮರ ಹಸಿರಾಗಿವೆ. ಪರಿಸರಲ್ಲಿ ಹೊಸ ಚೈತನ್ಯ ಉಂಟಾಗಿದೆ. ಇದರ ಪರಿಣಾಮವಾಗಿ ಗೌರಿ ಮತ್ತೆ ಕಾಣಿಸಿಕೊಂಡಿದೆ.

‘ಗೌರಿ ಹೂ ನಮ್ಮ ನಾಡಿನ ಸಂಪತ್ತು. ಅದು ಕಣ್ಮರೆಯಾಗಲು ಬಿಡಬಾರದು. ಇಲ್ಲಿನ ಔಷಧಯುಕ್ತ ಸಸ್ಯಗಳನ್ನು ಬೇರು ಸಮೇತ ಕೊಂಡೊಯ್ಯುವ ಕೆಲಸಕ್ಕೆ ಕಡಿವಾಣ ಹಾಕಬೇಕು’ ಎನ್ನುತ್ತಾರೆ ಪರಿಸರವಾದಿ ಭೂಹಳ್ಳಿ ಪುಟ್ಟಸ್ವಾಮಿ.

ಇದಕ್ಕೆ ಗ್ರಾಮೀಣ ಪ್ರದೇಶದ ಜನರ ಸಹಕಾರ ಬೇಕು. ಅಮೂಲ್ಯ ಸಸ್ಯಗಳನ್ನು ಕೀಳುವ ವ್ಯಕ್ತಿಗಳು ಕಂಡು ಬಂದಾಗ ಪ್ರಶ್ನಿಸಿದರೂ ಸಾಕು, ಎಷ್ಟೋ ಸಸ್ಯಗಳು ಉಳಿಯುತ್ತವೆ ಎಂದು ತಿಳಿಸಿದರು.

ಈಗಾಗಲೇ ಪ್ರಕೃತಿಯಲ್ಲಿನ ಅಸಂಖ್ಯಾತ ಸಸ್ಯ ವರ್ಗಗಳು ಕಣ್ಮರೆಯಾಗಿವೆ. ಇದರಿಂದ ಪರಿಸರದ ವೈವಿಧ್ಯತೆ ನಮ್ಮ ಕಣ್ಣೆದುರೇ ಕರಗಿ ಹೋಗುತ್ತಿದೆ. ನಿರ್ಲಕ್ಷ್ಯದಿಂದಲೋ, ಬೇಜವಾಬ್ದಾರಿತನದಿಂದಲೋ ಅವುಗಳ ಮಹತ್ವವನ್ನು ಅರಿಯದೆಯೋ ನಾಶ ಮಾಡುವುದು ನಮ್ಮ ಮತ್ತು ಭೂಮಿಯ ನಾಶಕ್ಕೂ ಕಾರಣವಾಗುತ್ತದೆ ಎಂಬುದನ್ನು ಎಲ್ಲರು ಅರಿಯಬೇಕು ಎಂದು ಅಭಿಪ್ರಾಯಪಟ್ಟರು.

**

ಗೌರಿ ಹೂವಿನ ಎಲ್ಲ ಭಾಗಗಳು ವಿಷಕಾರಿಯಾಗಿವೆ. ಇದನ್ನು ಚೇಳಿನ ಕಡಿತದ ನಂಜು ನಿವಾರಕವಾಗಿ ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಬಳಸಲಾಗುತ್ತಿದೆ
–ಎಂ. ಬೈರೇಗೌಡ, ಜಾನಪದ ವಿದ್ವಾಂಸ

**

ಗೌರಿ ಹಬ್ಬದ ಸಂದರ್ಭದಲ್ಲಿ, ಗೌರಿ ದೇವತೆಯ ಹೆಸರಿನಲ್ಲಿರುವ ಈ ವಿಶಿಷ್ಟ ಹೂವು ಈಗ ಎಲ್ಲೆಡೆ ಅರಳಿನಿಂತು ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದೆ
–ಎಸ್.ಟಿ. ಕಾಂತರಾಜ್ ಪಟೇಲ್, ಪ್ರಗತಿ ಪರ ಕೃಷಿಕ

**

ಔಷಧೀಯ ಉದ್ದೇಶಗಳಿಗೆ ಮಾತ್ರವಲ್ಲದೆ ಪಶುಪಕ್ಷಿಗಳಿಗೂ ಪ್ರಯೋಜನಕಾರಿಯಾದ ಗೌರಿ ಹೂವಿನಂತಹ ಅಮೂಲ್ಯ ಸಸ್ಯ ಸಂಪತ್ತನ್ನು ಉಳಿಸಬೇಕು
–ಭೂಹಳ್ಳಿ ಪುಟ್ಟಸ್ವಾಮಿ, ಪರಿಸರವಾದಿ

ಪ್ರಮುಖ ಸುದ್ದಿಗಳು