ಲಂಚದ ವ್ಯವಹಾರ ನಿಲ್ಲದಿದ್ದರೆ ಕಠಿಣ ಕ್ರಮ

ಕಲಬುರ್ಗಿ: ‘ಹಣ ಕೊಡದಿದ್ದರೆ ಯಾವ ಇಲಾಖೆಯಲ್ಲೂ ಕೆಲಸವಾಗುತ್ತಿಲ್ಲ. ಹಣ ಕೊಟ್ಟವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಲಂಚದ ವ್ಯವಹಾರ ತಕ್ಷಣ ನಿಲ್ಲಿಸದಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ)ಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಆರ್‌ಟಿಒ, ತಹಶೀಲ್ದಾರ್ ಕಚೇರಿಯಲ್ಲಿ ಲಂಚದ ಹಾವಳಿ ಮಿತಿಮೀರಿದೆ. ಭೂ ಮಾಪನ ಇಲಾಖೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ. ಭೂಮಾಪಕರ ಯಾರ ನಿಯಂತ್ರಣದಲ್ಲೂ ಇಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಈ ಬಗ್ಗೆ ಗಮನಹರಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಸೂಚಿಸಿದರು.

‘ಚಿತ್ತಾಪುರ, ಚಿಂಚೋಳಿ, ಅಫಜಲಪುರ, ಸೇಡಂ ಮತ್ತು ಆಳಂದ ತಾಲ್ಲೂಕುಗಳ ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂಬ ದೂರು ಕೇಳಿ ಬಂದಿವೆ. ಚುನಾವಣೆ ಸಂದರ್ಭದಲ್ಲಿ ನಿಮ್ಮನ್ನು ಸ್ವತಂತ್ರವಾಗಿ ಬಿಟ್ಟಿದ್ದಕ್ಕೆ ಮೆರೆದಿದ್ದೀರಾ. ನಿಮ್ಮ ಕುಮ್ಮಕ್ಕಿನಿಂದ ಸರಿಯಾಗಿ ಕೆಲಸಗಳು ಆಗುತ್ತಿಲ್ಲ’ ಎಂದು ಹರಿಹಾಯ್ದರು.

‘ಹಣ ಇಲ್ಲದೆ ಯಾವ ಕೆಲಸಗಳೂ ಆಗುತ್ತಿಲ್ಲ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ನಾನೇ ಸ್ವತಃ ದೂರವಾಣಿ ಕರೆ ಮಾಡಿದರೂ ಅನೇಕರು ಸ್ವೀಕರಿಸಿಲ್ಲ. ನಿಮ್ಮ ನಾಟಕ, ದೊಂಬರಾಟ ಎಲ್ಲಾ ಇಲ್ಲಿಗೆ ನಿಲ್ಲಿಸಬೇಕು. ಇಲ್ಲವಾದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ತಾಕೀತು ಮಾಡಿದರು.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಶಿಷ್ಟಾಚಾರ ಪ್ರಕಾರ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೊಡುತ್ತಿಲ್ಲ. ಎಷ್ಟೋ ಬಾರಿ ಮಾಧ್ಯಮಗಳ ಮೂಲಕ ನನಗೆ ಗೊತ್ತಾಗುತ್ತಿದೆ. ಇದೇ ಕೊನೆಯ ಎಚ್ಚರಿಕೆ, ಪುನರಾವರ್ತನೆಯಾದರೆ ಕ್ರಮಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಸಹಾಯಕ ಎಂಜಿನಿಯರುಗಳು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರುಗಳೇ ಜೆಸಿಬಿ, ಯತ್ರೋಪಕರಣಗಳನ್ನು ಇಟ್ಟುಕೊಂಡಿದ್ದಾರೆ. ಇದು ಹೀಗೆಯೇ ಮುಂದುವರಿದರೆ ತೊಂದರೆಗೆ ಒಳಗಾಗುತ್ತೀರಿ ಜೋಪಾನ’ ಎಂದು ಎಚ್ಚರಿಕೆ ನೀಡಿದರು.
ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಮಾತನಾಡಿ, ‘ಎಲ್ಲ ಇಲಾಖೆಗಳೂ ಅನುದಾನಕ್ಕಾಗಿ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರಸ್ತಾವ ಸಲ್ಲಿಸುತ್ತಿವೆ. ನಾವು ಅನುದಾನ ಬಿಡುಗಡೆ ಮಾಡಿದರೂ ಅವರು ಕೆಲಸ ಮಾಡುತ್ತಿಲ್ಲ. ಇದರಿಂದ ಎಚ್‌ಕೆಆರ್‌ಡಿಬಿ ಹಣ ಬಳಕೆಯಾಗುತ್ತಿಲ್ಲ’ ಎಂದು ಸಚಿವರ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಇದ್ದರು.

ಶಾಸಕರಾದ ಎಂ.ವೈ.ಪಾಟೀಲ, ಸುಭಾಷ ಆರ್.ಗುತ್ತೇದಾರ, ಡಾ.ಉಮೇಶ ಜಾಧವ, ಕನ್ನೀಜ್ ಫಾತಿಮಾ, ಬಸವರಾಜ ಮತ್ತಿಮೂಡ ಸಭೆಯಲ್ಲಿ ಭಾಗವಹಿಸಿದ್ದರು.

**

ಅಬಕಾರಿ ಇಲಾಖೆ ಬಂದ್ ಮಾಡಸ್ತೀನಿ!

‘ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ವ್ಯಾಪಕವಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಮದ್ಯ ಮಾರಾಟಕ್ಕೆ ‘ಗುರಿ ನಿಗದಿ’ ಮಾಡಿದ್ದರೆ ಹೇಳಿ, ಅಬಕಾರಿ ಇಲಾಖೆಯನ್ನೇ ಬಂದ್ ಮಾಡಿಸುತ್ತೇನೆ’ ಎಂದು ಸಚಿವರು ಗುಡುಗಿದರು.

‘ಜಿಲ್ಲೆಯ ಕೆಲವೆಡೆ ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಮದ್ಯದಂಗಡಿ ಸ್ಥಳಾಂತರವನ್ನು ದಂಧೆ ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಅನುಮತಿಯಿಲ್ಲದೆ ಮದ್ಯದಂಗಡಿ ಸ್ಥಳಾಂತರಿಸಿದರೆ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಎಫ್‌ಐಆರ್‌ ದಾಖಲಿಸಲು ಸೂಚನೆ

‘ಚಿತ್ತಾಪುರದಲ್ಲಿ ವ್ಯಕ್ತಿಯೊಬ್ಬರು ಜೆರಾಕ್ಸ್ ಅಂಗಡಿ ನಡೆಸುತ್ತಿದ್ದು, ಯಾವಾಗಲೂ ತಹಶೀಲ್ದಾರ್ ಕಚೇರಿಯಲ್ಲಿ ಕೂತಿರುತ್ತಾರೆ. ಅವರ ವಿರುದ್ಧ ಕೂಡಲೇ ಎಫ್‌ಐಆರ್‌ ದಾಖಲಿಸಬೇಕು. ಮಧ್ಯವರ್ತಿಗಳು ಕಂಡು ಬಂದರೆ ಸ್ವಯಂ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಚಿವರು ಸೂಚಿಸಿದರು.

ಒದಿತೀನಿ ಎಂದು ಹರಿಹಾಯ್ದ ಸಚಿವ!

ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ಪಿ.ಜಾಧವ ಅವರಿಂದ ವಿವರಣೆ ಪಡೆಯುವ ವೇಳೆ ಸಿಟ್ಟಿಗೆದ್ದ ಸಚಿವರು ‘ನಿಮ್ಮಂತವರಿಗೆ ಒದಿತೀನಿ’ ಎಂಬ ಪದವನ್ನು ಬಳಸಿದರು.

‘ನನ್ನ ಗಮನಕ್ಕೆ ತರದೆ ಎಷ್ಟು ಕೆಲಸಗಳನ್ನು ಉದ್ಘಾಟನೆ ಮಾಡಿದ್ದೀರಿ ಹೇಳಿ. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ನಿಮ್ಮಂತಹ ನೂರು ಅಧಿಕಾರಿಗಳಿಗೆ ಒದಿತೀನಿ’ ಎಂದು ಗುಡುಗಿದರು.

‘15 ವರ್ಷಗಳಿಂದ ಪಾಲಿಕೆಯಲ್ಲೇ ಠಿಕಾಣಿ ಹೂಡಿರುವ ಜಾಧವ ಅವರನ್ನು ಪಾಲಿಕೆ ಸೇವೆಯಿಂದ ಬಿಡುಗಡೆಗೊಳಿಸಬೇಕು’ ಎಂದು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್ ಅವರಿಗೆ ಸೂಚಿಸಿದರು.

ಅಧಿಕಾರಿಗಳೇನು ಪಾಕಿಸ್ತಾನದಲ್ಲಿ ಇದ್ದಾರಾ?

‘ಬಹಳಷ್ಟು ಇಲಾಖೆಗಳ ಅಧಿಕಾರಿಗಳು ಪತ್ರ ವ್ಯವಹಾರದಲ್ಲೇ ಕಾಲ ಕಳೆಯುತ್ತಿದ್ದೀರಿ. ಸಾರ್ವಜನಿಕರು ಹಣ ಕೊಡದಿದ್ದರೆ ಮೇಲಾಧಿಕಾರಿಗಳಿಗೆ ಷರಾ ಬರೆದು ಕಳುಹಿಸಿ ಕೈತೊಳೆದುಕೊಳ್ಳುತ್ತಿದ್ದೀರಿ. ಮೇಲಾಧಿಕಾರಿಗಳೇನು ಪಾಕಿಸ್ತಾನದಲ್ಲಿ ಇದ್ದಾರಾ’ ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಮೇಲಾಧಿಕಾರಿಗಳು ಸ್ಥಳೀಯವಾಗಿ ಲಭ್ಯವಿರುವಾಗ ಪತ್ರ ವ್ಯವಹಾರದ ಅಗತ್ಯವಿದೆಯೇ’ ಎಂದು ಖಾರವಾಗಿ ಪ್ರಶ್ನಿಸಿದರು.

ಪರವಾನಗಿ ರದ್ದತಿಗೆ ಸೂಚನೆ

‘ಒಂದು ಇಲಾಖೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿದರೆ, ಮತ್ತೊಂದು ಇಲಾಖೆ ಅಂತಹವರಿಗೆ ಗುತ್ತಿಗೆ ನೀಡುತ್ತಿದೆ. ಇದು ಸರಿಯಲ್ಲ. ಕಪ್ಪು ಪಟ್ಟಿಗೆ ಸೇರಿರುವ ಗುತ್ತಿಗೆದಾರರ ಪಟ್ಟಿಯನ್ನು ತಯಾರಿಸಬೇಕು ಮತ್ತು ಅವರ ಪರವಾನಗಿ ರದ್ದುಪಡಿಸಬೇಕು’ ಎಂದು ಸೂಚಿಸಿದರು.

ಪ್ರಮುಖ ಸುದ್ದಿಗಳು