ಕಾನ್‌ಸ್ಟೆಬಲ್‌ಗೆ ಹೊಡೆದ ಆರೋಪಿ ಬಂಧನ

ಬೆಂಗಳೂರು: ರಾಜಾಜಿನಗರದ ಡಾ. ಎಂ.ಸಿ.ಮೋದಿ ಮೇಲ್ಸೇತುವೆಯ ರಸ್ತೆಯಲ್ಲೇ ಟ್ರಾಫಿಕ್ ಕಾನ್‌ಸ್ಟೆಬಲ್‌ ಕಪಾಳಕ್ಕೆ ಹೊಡೆದ ರಂಗನಾಥ್‌ ಎಂಬಾತನನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿ ತನ್ನ ಮೂವರು ಸ್ನೇಹಿತರೊಂದಿಗೆ ಮದ್ಯ ಸೇವಿಸಿ ಮನೆಗೆ ತೆರಳುತ್ತಿದ್ದಾಗ ಈ ಕೃತ್ಯ ಎಸಗಿದ್ದಾನೆ.

ವಿಜಯನಗರ ಸಂಚಾರ ಠಾಣೆ ಶಶಿಕುಮಾರ್ ಮತ್ತು ಗೃಹರಕ್ಷಕ ಮಹೇಶ್‌, ಮೇಲ್ಸೇತುವೆಯಲ್ಲಿ ಸಂಚಾರ ನಿರ್ವಹಣೆ ಮಾಡುತ್ತಿದ್ದರು. ರಾತ್ರಿ 7 ಗಂಟೆಯಲ್ಲಿ ಬಿಎಂಟಿಸಿ ಬಸ್‌ ಮತ್ತು ಆಟೊ ನಡುವೆ ಅಪಘಾತ ಉಂಟಾಗಿದ್ದರಿಂದ ವಾಹನಗಳ ಚಾಲಕರು ರಸ್ತೆ ಮಧ್ಯೆಯೇ ಜಗಳಕ್ಕಿಳಿದಿದ್ದರು. ಆದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

ಕಾನ್‌ಸ್ಟೆಬಲ್‌ ಹಾಗೂ ಗೃಹರಕ್ಷಕ, ಕೂಡಲೇ ದಟ್ಟಣೆ ಸುಗಮಗೊಳಿಸಲು ಪ್ರಯತ್ನಿಸುತ್ತಿದ್ದರು. ಇದೇ ವೇಳೆ ಬೈಕ್‌ನಲ್ಲಿದ್ದ ರಂಗನಾಥ್‌ ಮತ್ತು ಆತನ ಸ್ನೇಹಿತರು, ಟ್ರಾಫಿಕ್‌ ಸರಿಯಾಗಿ ನೋಡಿಕೊಳ್ಳುವಂತೆ ಕಾನ್‌ಸ್ಟೆಬಲ್‌ಗೆ ಏಕವಚನದಲ್ಲಿ ನಿಂದಿಸಿದ್ದಾರೆ. ಇದಕ್ಕೆ ಕಾನ್‌ಸ್ಟೆಬಲ್‌ ಆಕ್ಷೇಪಿಸಿದ್ದರು. ಏಕಾಏಕಿ ಬಂದ ರಂಗನಾಥ್‌, ಕಾನ್‌ಸ್ಟೆಬಲ್‌ ಕಪಾಳಕ್ಕೆ ಹೊಡೆದಿದ್ದಾನೆ. ಇದಕ್ಕೆ ಆತನ ಸ್ನೇಹಿತರೂ ಬೆಂಬಲ ನೀಡಿದ್ದಾರೆ.

‘ಹೊಡೆದು ಪರಾರಿಯಾಗಲು ಯತ್ನಿಸಿದ ರಂಗನಾಥ್‌ನನ್ನು ಸ್ಥಳೀಯರೇ ಹಿಡಿದುಕೊಟ್ಟಿದ್ದಾರೆ. ಕಾನ್‌ಸ್ಟೆಬಲ್‌, ವಾಕಿಟಾಕಿ ಮೂಲಕ ಠಾಣೆಗೆ ವಿಷಯ ತಿಳಿಸುತ್ತಿದ್ದಂತೆಯೇ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಆತನ ಸ್ನೇಹಿತರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

 

ಪ್ರಮುಖ ಸುದ್ದಿಗಳು