ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ: ರಂಗೋಲಿಯಲ್ಲಿ ಭಾವ–ಜೀವ

Published 1 ಜೂನ್ 2024, 23:30 IST
Last Updated 1 ಜೂನ್ 2024, 23:30 IST
ಅಕ್ಷರ ಗಾತ್ರ

ಸ್ನೇಹಿತರೊಬ್ಬರ ವಾಟ್ಸ್‌ಆ್ಯಪ್‌ಗೆ ಪಂಢರಪುರದ ವಿಠ್ಠಲ ಮತ್ತು ಆತನ ಭಕ್ತನ (ವಾರಕರಿ) ಚಿತ್ರಗಳು ಬಂದವು. ‘ಏನ್‌ ಮಸ್ತ್‌ ಫೋಟೊ ತೆಗೆದಾರಲ್ರೀ’ ಎಂದೆ. ‘ಇವು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದ ಫೋಟೊಗಳಲ್ಲ; ರಂಗೋಲಿಯಲ್ಲಿ ಅರಳಿದ ಚಿತ್ರ’ ಎಂದ ಗೆಳೆಯ. ರಂಗೋಲಿಯಲ್ಲಿ ಇಷ್ಟು ಅಚ್ಚುಕಟ್ಟಾಗಿ ಚಿತ್ರ ಬಿಡಿಸಲು ಸಾಧ್ಯವೆ ಎಂಬ ಕುತೂಹಲದಿಂದ ಬೆಳಗಾವಿಯ ವಡಗಾವಿಯ ನಾಜರ್‌ ಕ್ಯಾಂಪ್‌ನಲ್ಲಿರುವ ಕಲಾವಿದ ಅಜಿತ್‌ ಔರವಾಡಕರ ಅವರ ಫೋಟೊ ಸ್ಟುಡಿಯೊಗೆ ಭೇಟಿ ನೀಡಿದಾಗ ಅಲ್ಲಿ ರಂಗೋಲಿಯಲ್ಲಿ ಬಿಡಿಸಿದ ವೈವಿಧ್ಯಮಯ ಚಿತ್ರಗಳ ಲೋಕವೇ ಅನಾವರಣಗೊಂಡಿತು.

56ರ ಹರೆಯದ ಅಜಿತ್‌ ವೃತ್ತಿಯಿಂದ ಛಾಯಾಗ್ರಾಹಕ. ಎರಡು ದಶಕಗಳ ಹಿಂದೆ ಆಕರ್ಷಕವಾದ ಚಿತ್ರಕಲೆಗಳನ್ನು ಬಿಡಿಸುತ್ತಿದ್ದ ಅವರು, ಖಾಸಗಿ ಕಾಲೇಜೊಂದರಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ವೃತ್ತಿ ಬದುಕಿನಲ್ಲಿ ಎದುರಾದ ತೊಡಕುಗಳಿಗೆ ಬೇಸತ್ತು ಕಲಾ ಬದುಕಿಗೆ ವಿರಾಮ ನೀಡಿದ್ದರು. ತಾವು ರಚಿಸಿದ ಪೇಂಟಿಂಗ್‌ಗಳನ್ನೆಲ್ಲ ಮೂಲೆಗೆ ಎಸೆದು, ‘ಇನ್ಮೇಲೆ ಚಿತ್ರ ಬಿಡಿಸುವುದೇ ಬೇಡ. ಫೋಟೊ ಕ್ಲಿಕ್ಕಿಸುತ್ತ ಬದುಕಿನ ಬಂಡಿ ದೂಡಿದರಾಯಿತು’ ಎಂದು ನಿರ್ಧರಿಸಿ ಬದುಕಿನಲ್ಲಿ ಮುಂದೆ ಸಾಗಿದ್ದರು. ಹೀಗೆ ಒಂದು ದಶಕವೂ ಕಳೆದಿತ್ತು. ಈ ಅವಧಿಯಲ್ಲಿ ಬಣ್ಣ–ಕುಂಚ ಮುಟ್ಟಿರಲಿಲ್ಲ! ಇಂಥ ಗಟ್ಟಿ ನಿರ್ಧಾರ ಮಾಡಿದ್ದ ಅಜಿತ್‌ ಅವರನ್ನು ಮತ್ತೆ ಚಿತ್ರಗಳನ್ನು ಬಿಡಿಸುವಂತೆ ಮಾಡಿದ್ದು ರಂಗೋಲಿ. ಹೇಗೆ ಎಂಬುದನ್ನು ಅವರೇ ಇಲ್ಲಿ ವಿವರಿಸಿದ್ದಾರೆ...

‘2012ರ ನವೆಂಬರ್‌ನಲ್ಲಿ ಮಹಾರಾಷ್ಟ್ರದ ಶಿವಸೇನಾ ಮುಖ್ಯಸ್ಥ ಬಾಳಾಸಾಹೇಬ ಠಾಕ್ರೆ ನಿಧನರಾದರು. ಅದೇ ವೇಳೆಗೆ ದೀಪಾವಳಿ ಹಬ್ಬವೂ ಇದ್ದಿದ್ದರಿಂದ ಕುಟುಂಬದವರು ಮನೆಯಂಗಳದಲ್ಲಿ ಚಿತ್ರ ಬಿಡಿಸಲು ವಿವಿಧ ಬಣ್ಣಗಳ ರಂಗೋಲಿ ತಂದಿದ್ದರು. ಏನಾಯಿತೋ ಗೊತ್ತಿಲ್ಲ. ನನಗೇ ಅರಿವಿಲ್ಲದಂತೆ, ರಂಗೋಲಿಯಲ್ಲಿ ಬಾಳಾಸಾಹೇಬ ಠಾಕ್ರೆ ಚಿತ್ರ ಮೂಡಿಸಿದೆ. ನಾಲ್ಕಾರು ದಿನ ಸ್ಟುಡಿಯೊದಲ್ಲೂ ಅದನ್ನು ಪ್ರದರ್ಶಿಸಿದೆ. ನೂರಾರು ಜನ ವೀಕ್ಷಿಸಿ ‘ಭೇಷ್‌’ ಎಂದು ಬೆನ್ನುತಟ್ಟಿದರು’ ಎಂದು ಅಜಿತ್‌ ಮಾತು ಆರಂಭಿಸಿದರು.

ಸಿದ್ಧಗಂಗಾ ಸ್ವಾಮೀಜಿ
ಸಿದ್ಧಗಂಗಾ ಸ್ವಾಮೀಜಿ

‘ಖ್ಯಾತ ಸಿತಾರ್‌ ವಾದಕ ರವಿಶಂಕರ್‌ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೆ, ಸಂಘಟಕರಿಗೆ ದಿನಾಂಕ ಕೊಟ್ಟಿದ್ದರಿಂದ ಸಲೈನ್‌ ಹಚ್ಚಿಕೊಂಡೇ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅವರು ತಮ್ಮ ಆರೋಗ್ಯಕ್ಕಿಂತ ಕಲೆಗೆ ಎಷ್ಟೊಂದು ಬೆಲೆ ಕೊಡ್ತಾರೆ ಎಂದು ತಿಳಿಯಿತು. ಇವೆರಡೂ ಪ್ರಸಂಗಗಳು ಮತ್ತೆ ನನ್ನಲ್ಲಿ ಕಲೆಯ ಬಗ್ಗೆ ಪ್ರೀತಿ ಹುಟ್ಟಿಸಿದವು. ನನ್ನಲ್ಲಿನ ಕಲಾ ಪ್ರತಿಭೆ ವ್ಯರ್ಥ ಮಾಡಬಾರದು. ಭಿನ್ನವಾಗಿ ಚಿತ್ರಗಳನ್ನು ಬಿಡಿಸಬೇಕೆಂದು ಪ್ರೇರಣೆ ಮೂಡಿಸಿದವು. ಹಾಗಾಗಿ ರಂಗೋಲಿಯಲ್ಲಿ ಚಿತ್ರ ಬಿಡಿಸಲು ಆರಂಭಿಸಿದೆ’ ಎಂದು ಅನುಭವ ಹಂಚಿಕೊಂಡರು.

ಮಹಾನ್‌ ನಾಯಕರು, ಸಾಧು–ಸಂತರು, ಸಮಾಜ ಸುಧಾರಕರು, ವಿಜ್ಞಾನಿಗಳು, ಗಾಯಕರು, ಸಾಹಿತಿಗಳು, ಕ್ರೀಡಾಪಟುಗಳು, ಚಲನಚಿತ್ರ ನಟ–ನಟಿಯರು ಹೀಗೆ... ಯಾವುದೇ ಗಣ್ಯರ ಜನ್ಮದಿನದಂದು ಮತ್ತು ಅವರು ಮೃತಪಟ್ಟಾಗ ಅಜಿತ್‌ ರಂಗೋಲಿಯಲ್ಲಿ ಚಿತ್ರ ಬಿಡಿಸಿ ಗೌರವ ಸಮರ್ಪಿಸುತ್ತಾರೆ. ಇದಲ್ಲದೆ ವಿವಿಧ ಧಾರ್ಮಿಕ ಸ್ಥಳಗಳು ಮತ್ತು ದೇವರ ಚಿತ್ರಗಳಿಗೆ ರಂಗೋಲಿಯಲ್ಲಿ ರೂಪ ನೀಡಿ ಜೀವ ತುಂಬಿದ್ದಾರೆ.

ಇವರು 2 ಅಡಿ ಅಗಲ–3 ಅಡಿ ಉದ್ದದ ಮತ್ತು 4 ಅಡಿ ಅಗಲ–6 ಅಡಿ ಉದ್ದದ ಪ್ಲೈವುಡ್‌ ಮೇಲೆ ಕಲೆ ಪ್ರದರ್ಶನಕ್ಕೆ ಅಣಿಯಾಗುತ್ತಾರೆ. ಒಂದು ಕೈಯಲ್ಲಿ ಬಿಡಿಸಿಬೇಕಾದವರ ಭಾವಚಿತ್ರ ಹಿಡಿದು, ಮತ್ತೊಂದು ಕೈಯಿಂದ ಪೆನ್ಸಿಲ್‌ನಲ್ಲಿ ರೇಖಾಚಿತ್ರ ಮೂಡಿಸುತ್ತಾರೆ. ನಂತರ ವಿನ್ಯಾಸಕ್ಕೆ ತಕ್ಕಂತೆ ರಂಗೋಲಿ ಬಳಸಿ ಚಿತ್ರಕ್ಕೆ ಜೀವ ನೀಡುತ್ತಾರೆ. ಒಂದೊಂದು ಚಿತ್ರ ಬಿಡಿಸುವುದಕ್ಕೆ 14 ತಾಸಿಗಿಂತ ಅಧಿಕ ಸಮಯ ತೆಗೆದುಕೊಳ್ಳುತ್ತಾರೆ. ಕೆಲವೊಂದು ಚಿತ್ರಕ್ಕೆ 48 ತಾಸು ಶ್ರಮಿಸಿದ ಉದಾಹರಣೆಗಳೂ ಇವೆ.

ಪುನೀತ್ ರಾಜ್‌ಕುಮಾರ್
ಪುನೀತ್ ರಾಜ್‌ಕುಮಾರ್

‘ಪೆನ್ಸಿಲ್‌ನಲ್ಲಿ ಚಿತ್ರ ಬಿಡಿಸುವುದು ಕಷ್ಟ. ಎಲ್ಲರಿಗೂ ಆ ಕಲೆ ಒಲಿಯದು. ರಂಗೋಲಿಯಲ್ಲಿ ಬಿಡಿಸುವುದಂತೂ ಸಾಹಸವೇ. ರಂಗೋಲಿಯಲ್ಲಿ ಚಿತ್ರ ಬಿಡಿಸುವಾಗ ಹೆಚ್ಚಿನ ಗಾಳಿ ಬೀಸಬಾರದು, ಒಂದು ಹನಿಯೂ ಬೀಳಬಾರದು. ನೊಣ ಬಂದರೂ ಮತ್ತು ಪ್ಲೈವುಡ್‌ ತುಸು ಅಲುಗಾಡಿದರೂ ಇಡೀ ಚಿತ್ರವೇ ಹಾಳಾಗುತ್ತದೆ. ಇವೆಲ್ಲ ಎಚ್ಚರಿಕೆಗಳನ್ನು ಇಟ್ಟುಕೊಂಡೇ ನನ್ನ ಹವ್ಯಾಸದಲ್ಲಿ ತೊಡಗಿದ್ದೇನೆ’ ಎನ್ನುವ ಅವರ ಮಾತಲ್ಲಿ ಪರಿಶ್ರಮ ವ್ಯಕ್ತವಾಯಿತು.

ವಿಭಿನ್ನವಾಗಿ ಚಿತ್ರ ರಚಿಸುವಲ್ಲಿ ನಿರತರವಾದ ಅವರು, 200ಕ್ಕೂ ಅಧಿಕ ಚಿತ್ರಗಳಿಗೆ ರಂಗೋಲಿಯಲ್ಲಿ ಜೀವ ತುಂಬಿದ್ದಾರೆ.

ಪಂಢರಪುರ ವಿಠ್ಠಲ–ವಾರಕರಿ, ಶಿವಾಜಿ ಮಹಾರಾಜರ ರಾಜ್ಯಾಭಿಷೇಕ, ಅಯೋಧ್ಯೆಯಲ್ಲಿ ನಿರ್ಮಾಣವಾದ ನೂತನ ರಾಮಮಂದಿರಕ್ಕೆ ಬಾಲರಾಮನ ಆಗಮನ ಚಿತ್ರ ಕಣ್ಮನ ಸೆಳೆಯುತ್ತಿವೆ. ಮಹಾತ್ಮ ಗಾಂಧಿ, ಲಾಲ್‌ ಬಹಾದ್ದೂರ್‌ ಶಾಸ್ತ್ರಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌, ಬಿ.ಆರ್‌.ಅಂಬೇಡ್ಕರ್‌, ಬಾಲಗಂಗಾಧರ ತಿಲಕ, ಸಿದ್ಧೇಶ್ವರ ಸ್ವಾಮೀಜಿ, ಸಿದ್ಧಗಂಗಾ ಸ್ವಾಮೀಜಿ, ಇಂದಿರಾ ಗಾಂಧಿ, ಅಟಲ್‌ ಬಿಹಾರಿ ವಾಜಪೇಯಿ, ಎಪಿಜೆ ಅಬ್ದುಲ್‌ ಕಲಾಂ, ಲತಾ ಮಂಗೇಶ್ಕರ್‌, ಉಸ್ತಾದ್‌ ಬಿಸ್ಮಿಲ್ಲಾ ಖಾನ್‌, ಅಮಿತಾಬ್‌ ಬಚ್ಚನ್‌, ಪುನೀತ್‌ ರಾಜ್‌ಕುಮಾರ್‌, ಭೀಮಸೇನ್‌ ಜೋಶಿ ಹೀಗೆ.. ಹಲವಾರು ದಿಗ್ಗಜರು ಸೊಗಸಾಗಿ ಮೂಡಿದ್ದು, ಅಜಿತ್‌ ಕಲಾ ನೈಪುಣ್ಯಕ್ಕೆ ಕೈಗನ್ನಡಿ ಹಿಡಿದಂತಿವೆ.

‘ನಾನು ಬಿಡಿಸಿದ ಸ್ಥಳಗಳಲ್ಲೇ ಚಿತ್ರ ಪ್ರದರ್ಶಿಸಬೇಕು. ಯಾವ ಕಾರಣಕ್ಕೂ ಪ್ಲೈವುಡ್‌ ಅಲುಗಾಡಿಸುವಂತಿಲ್ಲ. ನನ್ನ ಚಿತ್ರಗಳನ್ನೆಲ್ಲ ಸ್ಟುಡಿಯೊದಲ್ಲೇ ವಾರದವರೆಗೆ ಪ್ರದರ್ಶಿಸುತ್ತೇನೆ. ಕೆಲವೊಂದಕ್ಕೆ ಹೆಚ್ಚಿನ ಜನಸ್ಪಂದನೆ ಸಿಕ್ಕಾಗ, ಎರಡೂ ವಾರಗಳವರೆಗೆ ಪ್ರದರ್ಶಿಸಿದ ಹೆಮ್ಮೆಯಿದೆ’ ಎನ್ನುತ್ತಾರೆ.

ಬೆಳಗಾವಿಯ ತಮ್ಮ ಮನೆಯಲ್ಲಿ ಕಲಾವಿದ ಅಜಿತ್‌ ಔರವಾಡಕರ ರಂಗೋಲಿ ಮೂಲಕ ಚಿತ್ರ ಬಿಡಿಸುತ್ತಿರುವುದು
ಬೆಳಗಾವಿಯ ತಮ್ಮ ಮನೆಯಲ್ಲಿ ಕಲಾವಿದ ಅಜಿತ್‌ ಔರವಾಡಕರ ರಂಗೋಲಿ ಮೂಲಕ ಚಿತ್ರ ಬಿಡಿಸುತ್ತಿರುವುದು

ಮನೆಯಂಗಳದಲ್ಲಿ ಮಹಿಳೆಯರ ಕೈಯಲ್ಲಿ ಚುಕ್ಕಿ ಮತ್ತು ಗೆರೆಗಳಲ್ಲಿ ಮೂಡುವ ವೈವಿಧ್ಯ ರಂಗೋಲಿಗಳು ಒಂದು ಕಡೆಯಾದರೆ, ಅಜಿತರ ಕೈಯಲ್ಲಿ ಅದೇ ರಂಗೋಲಿಯಲ್ಲಿ ದೇಶದ ಪ್ರಸಿದ್ಧರು ಜೀವ ತಳೆಯುವುದು ಅದ್ಭುತವೇ ಸರಿ. 

ಕಲಾವಿದ ಅಜಿತ್‌ ಔರವಾಡಕರ ಬಿಡಿಸಿದ ಶಿವಾಜಿ ಮಹಾರಾಜರ ರಾಜ್ಯಾಭಿಷೇಕದ ಚಿತ್ರ
ಕಲಾವಿದ ಅಜಿತ್‌ ಔರವಾಡಕರ ಬಿಡಿಸಿದ ಶಿವಾಜಿ ಮಹಾರಾಜರ ರಾಜ್ಯಾಭಿಷೇಕದ ಚಿತ್ರ
ನಾನು ಎಲ್ಲ ರೀತಿಯ ಚಿತ್ರವನ್ನು ಬಿಡಿಸಿದೆ ಎನ್ನಲಾಗದು. ಕಲಾವಿದನ ಬದುಕು ಎಂದಿಗೂ ಪರಿಪೂರ್ಣವಾಗದು. ಹಾಗಾಗಿ ಉಸಿರು ಇರುವವರೆಗೂ ಸುಂದರವಾದ ಆಕರ್ಷಕವಾದ ಚಿತ್ರ ಬಿಡಿಸುತ್ತೇನೆ. ಕಲಿಯಲಿಚ್ಛಿಸುವವರಿಗೂ ಮಾರ್ಗದರ್ಶನವನ್ನೂ ನೀಡುತ್ತೇನೆ.
–ಅಜಿತ್‌ ಔರವಾಡಕರ, ಕಲಾವಿದ
ಕಲಾವಿದ ಅಜಿತ್‌ ಔರವಾಡಕರ ಬಿಡಿಸಿದ ಖ್ಯಾತ ಗಾಯಕ ಭೀಮಸೇನ ಜೋಶಿ ಅವರ ಚಿತ್ರ
ಕಲಾವಿದ ಅಜಿತ್‌ ಔರವಾಡಕರ ಬಿಡಿಸಿದ ಖ್ಯಾತ ಗಾಯಕ ಭೀಮಸೇನ ಜೋಶಿ ಅವರ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT