ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರಾವಣದ ಪೂಜೆಗೆ ಆಕರ್ಷಕ ಹತ್ತಿ ಹಾರ: ಮಾಡುವ ವಿಧಾನ ಹೀಗೆ...

Published 17 ಆಗಸ್ಟ್ 2024, 0:39 IST
Last Updated 17 ಆಗಸ್ಟ್ 2024, 0:39 IST
ಅಕ್ಷರ ಗಾತ್ರ

ಶ್ರಾವಣ ಎಂದರೆ ಹಬ್ಬಗಳ ಸರಣಿ. ಶ್ರಾವಣ ಎಂದರೆ ಪೂಜೆಗಳ ಸಂಭ್ರಮ. ಮಂಗಳಗೌರಿ, ವರಮಹಾಲಕ್ಷ್ಮಿ, ನಾಗರ ಪಂಚಮಿ ಪೂಜೆ ಹೀಗೆ ಸಾಲು ಸಾಲು ಪೂಜೆಗಳಿಗೆಲ್ಲ ಹತ್ತಿಯ ಹಾರಗಳನ್ನು ಬಳಸುವ ಸಂಪ್ರದಾಯ ಮೊದಲಿನಿಂದಲೂ ನಮ್ಮ ಸಂಸ್ಕೃತಿಯಲ್ಲಿ ನಡೆದುಕೊಂಡು ಬಂದಿದೆ. ಈ ಹತ್ತಿ ಹಾರಕ್ಕೆ ‘ಗೆಜ್ಜೆ ವಸ್ತ್ರ’ ಎಂದ ಸಾಂಪ್ರದಾಯಿಕ ಹೆಸರೂ ಇದೆ.  

ಮೊದಲೆಲ್ಲ ಹತ್ತಿ ಎಳೆಗಳನ್ನು ತೆಗೆದುಕೊಂಡು ಒಂದೊಂದು ಅಂಗುಲದ ಅಂತರದಲ್ಲಿ ಕುಂಕುಮದಿಂದ ಒತ್ತಿ ಸರಳ ಹಾರವನ್ನು ಸಿದ್ಧಪಡಿಸಿ ದೇವರ ಕೊರಳಿಗೆ ಹಾಕುತ್ತಿದ್ದರು. ಅದೇ ಹಾರಕ್ಕೆ ಶಿರಸಿ ಸಮೀಪದ ಬೊಮ್ನಳ್ಳಿಯ ಅರ್ಚನಾ ಹೊಸ ರೂಪ ನೀಡಿ ಆಕರ್ಷಕಗೊಳಿಸಿದ್ದಾರೆ. ವಿಶೇಷ ಪೂಜೆಗಳಿಗಾಗಿ ಅರ್ಚನಾ ಬೊಮ್ನಳ್ಳಿ ಸುಂದರ ಗೆಜ್ಜೆ ವಸ್ತ್ರ ಸಿದ್ಧಪಡಿಸಿಕೊಟ್ಟು, ದೇವತಾರಾಧನೆ ಜೊತೆಗೆ ಕಲಾರಾಧನೆಗೂ ಒತ್ತು ಕೊಟ್ಟಿದ್ದಾರೆ.

ಉದ್ದ ಎಳೆಗಳ ಹತ್ತಿ (ಬೊಯ್ಲಡ್‌ ಕಾಟನ್‌), ಫೆವಿಕಲ್‌, ಕತ್ತರಿ, ಸಂತ್ರದ ತಗಡು, ಟಿಕ್ಲಿ ಇಷ್ಟು ಪರಿಕರವಿದ್ದರೆ ಅರ್ಚನಾ ಕೈಗಳಲ್ಲಿ ವೈವಿಧ್ಯಮಯ ಗೆಜ್ಜೆ ವಸ್ತ್ರ ರೆಡಿ. ಕಳೆದ 20 ವರ್ಷಗಳಿಂದ ಈ ಹತ್ತಿ ಹಾರ ಮಾಡುವ ಹವ್ಯಾಸ ಬೆಳೆಸಿಕೊಂಡಿರುವ ಅವರು, ಯೂಟ್ಯೂಬ್‌ನಲ್ಲಿ ಸಿಕ್ಕ ಹತ್ತಿಹಾರದ ವಿಡಿಯೊ ನೋಡಿ ತಾವೂ ವಿಭಿನ್ನ ಹತ್ತಿಹಾರ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ನಂತರದ ದಿನಗಳಲ್ಲಿ ತಮ್ಮದೇ ಕೌಶಲ ಬಳಸಿ ಒಂದಕ್ಕಿಂತ ಒಂದು ಭಿನ್ನ ರೂಪಗಳಲ್ಲಿ ಹತ್ತಿಹಾರ ಸಿದ್ಧಪಡಿಸಿ ದೇವಸ್ಥಾನಗಳಿಗೆ ನೀಡಿದ್ದಾರೆ. 

ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಮಳೆಯೂ ಜೋರು. ಹಳ್ಳಿಗಳಲ್ಲಿ ಹೆಂಗಸರು ಮನೆಯಲ್ಲಿ ಈ ಸಮಯದಲ್ಲಿ ನಿತ್ಯದ ದೇವರ ಪೂಜೆಗೆ ಬೇಕಾದ ದೀಪದ ಬತ್ತಿ ಹಾಗೂ ನಾಗರಪಂಚಮಿ ಮೊದಲಾದ ಹಬ್ಬಗಳಲ್ಲಿ ಬಳಸಲು ಕಲಾತ್ಮಕ ಹತ್ತಿಹಾರದ ರಚನೆಯಲ್ಲಿ ತೊಡಗುತ್ತಾರೆ.ಮಳೆಗಾಲದಲ್ಲಿ ಹೊರಗಡೆ ಗಿಡಗಳಲ್ಲಿ ಹೂವಿನ ಲಭ್ಯತೆ ಕಮ್ಮಿ. ಹತ್ತಿಯಿಂದ ತಯಾರಿಸಿದ ಹಾರವು ದೇವರಿಗೆ ಅರ್ಪಿಸಲು ಅನುಕೂಲವೂ ಹೌದು. 

ಹತ್ತಿಹಾರ ಕಲೆ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಬಳಕೆಯಲ್ಲಿ ಇದೆ. ಅರ್ಚನಾ ಅವರ ತವರು ಸಾಗರ ತಾಲ್ಲೂಕಿನ ಹೆಗ್ಗೋಡು ಬಳಿ ಕೆರೇಕೈ. ತವರಲ್ಲಿ ಕಲಿತ ಕಲೆಯನ್ನು ಶಿರಸಿ ಭಾಗದ ಮಹಿಳೆಯರಿಗೆ ಪರಿಚಯಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಮನೆಯಲ್ಲಿ ನಡೆಯುವ ಪೂಜೆಗಳಲ್ಲದೆ ಪ್ರತೀ ವರ್ಷ ಈ ಭಾಗದ ದೇವಸ್ಥಾನಗಳಲ್ಲಿ ವಿಶೇಷ ನಡೆದಾಗ ಹತ್ತಿಹಾರದ ಸೇವೆ ಸಲ್ಲಿಸುತ್ತಿದ್ದಾರೆ.

ಆಸಕ್ತ ಮಹಿಳೆಯರಿಗೆ ಹತ್ತಿಹಾರ ತಯಾರಿಸುವ ತರಬೇತಿ ಕಾರ್ಯಕ್ರಮ ನೀಡಿದ್ದು, ಈ ತನಕ ನೂರಾರು ಬಗೆಯ ಹತ್ತಿಹಾರ, ಆರತಿ ತಟ್ಟೆ ರಚಿಸಿದ್ದಾರೆ.  

ಹತ್ತಿ ಹಾರ ಸಿದ್ಧಪಡಿಸುತ್ತಿರುವ ಅರ್ಚನಾ ಬೊಮ್ನಳ್ಳಿ 
ಹತ್ತಿ ಹಾರ ಸಿದ್ಧಪಡಿಸುತ್ತಿರುವ ಅರ್ಚನಾ ಬೊಮ್ನಳ್ಳಿ 
ಹತ್ತಿ ಹಾರ
ಹತ್ತಿ ಹಾರ
ಹತ್ತಿಯಲ್ಲಿ ಅರಳಿದ ನವಿಲು
ಹತ್ತಿಯಲ್ಲಿ ಅರಳಿದ ನವಿಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT