ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೌತಿ ಎಂದರೆ ಕಾಡುವ ಬಾಲ್ಯ’

Last Updated 29 ಆಗಸ್ಟ್ 2019, 4:49 IST
ಅಕ್ಷರ ಗಾತ್ರ

ಹೊ ಸ್ತಿಲಿಗೆ ರಂಗೋಲಿ, ಅರಸಿನ ಕುಂಕುಮದ ತಿಲಕ; ದಾರಂದದಲ್ಲಿ ಮಾವಿನ ತೋರಣ; ದೇವರ ಮನೆಯಲ್ಲಿ ಹೂ ಹಣ್ಣು–ಆರತಿ–ಅಲಂಕಾರ– ನೈವೇದ್ಯಭರಿತ ಸುವಾಸನೆ, ಒಳಮನೆಯಲ್ಲಿ ಭೂರಿ ಭೋಜನದ ಘಮ; ಹಬ್ಬದ ಹೊತ್ತು ಮನೆಯೊಳಗೂ ಹೊರಗೂ ಒಂಥರಾ ಘಮಲು... ಗೌರಿ ಮತ್ತು ಗಣೇಶರನ್ನು ಪೂಜಿಸುವ ಈ ಹೊತ್ತಿನಲ್ಲಿ ನಿಮ್ಮಿಷ್ಟದ ಕೆಲವು ಧಾರಾವಾಹಿಗಳ ನಟ ನಟಿಯರೂ ಹಬ್ಬದ ಮತ್ತೇರಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

‘ಮಗಳು ಜಾನಕಿ’ ಧಾರಾವಾಹಿಯ ಜಾನಕಿ, ಅದರಲ್ಲೇಪರಿಸ್ಥಿತಿಯ ಕೂಸು ಆಗಿ ಮನೋಜ್ಞವಾಗಿ ಅಭಿನಯಿಸುತ್ತಿರುವ ನಿರಂಜನ, ‘ಸೀತಾ ವಲ್ಲಭ’ದ ನವವಧು ಮೈಥಿಲಿ, ‘ವಿದ್ಯಾ ವಿನಾಯಕ’ದ... ಹಬ್ಬ ಆಚರಿಸಿಕೊಳ್ಳಲು ನಿಮ್ಮ ಮನೆಗೇ ಬಂದಿದ್ದಾರೆ.

ಊರಿಗೆ ಹೋಗಲು ಪುರುಸೊತ್ತಿಲ್ಲ

‘ಜಾನಕಿ’ ಯಾನೆ ಗಾನವಿಗೆ ಈ ಬಾರಿ ತಮ್ಮೂರು ಚಿಕ್ಕಮಗಳೂರಿಗೆ ಹೋಗಲು ಪುರುಸೊತ್ತಿಲ್ಲವಂತೆ. ಕಾರಣ ‘ಮಗಳು ಜಾನಕಿ’ ಧಾರಾವಾಹಿ ಚಿತ್ರೀಕರಣ. ಬೆಂಗಳೂರಿನಲ್ಲೇ ದೇವಸ್ಥಾನಗಳಿಗೆ ಹೋಗಿ ಎಲ್ಲಾದರೂ ಒಳ್ಳೆಯ ಊಟ ಮಾಡಿ ಅದನ್ನೇ ಹಬ್ಬ ಅಂದ್ಕೋತೀನಿ ಅಂತಾರೆ ಗಾನವಿ.

‘ಗೌರಿ– ಗಣೇಶ ಹಬ್ಬವನ್ನು ಮನೇಲಿ ಜೋರಾಗೇ ಮಾಡ್ತೇವೆ. ಗೌರಿಯನ್ನು ತರಲು ಹೋಗುವುದು, ತರುವುದು, ಕೂರಿಸುವುದು, ಅಲಂಕಾರ ಮಾಡುವುದು, ಪೂಜೆ ಮಾಡುವುದು, ನೈವೇದ್ಯ, ಹಬ್ಬದ ಅಡುಗೆ, ಹೊಸ ಬಟ್ಟೆ... ಹಬ್ಬವೆಂದರೆ ಮನಸ್ಸಿನಲ್ಲಿನೆನಪುಗಳ ಮೆರವಣಿಗೆಯೇ ಸಾಗುತ್ತದೆ. ನನಗೆ ಹಬ್ಬಗಳೆಂದರೆ ಇಷ್ಟ. ಕಾರಣ ಕೇಳಿದ್ರೆ ನಗ್ತೀರಿ. ಒಳ್ಳೊಳ್ಳೆ ಊಟ, ನೆಂಟರು, ನೈವೇದ್ಯ, ಸಿಹಿ ತಿಂಡಿ... ಗಣೇಶನ ಹಬ್ಬ ನಮ್ಮೂರಲ್ಲಿ ‘ಚೌತಿ’. ಚೌತಿ ಎಂದ ಮೇಲೆ ಕರ್ಜಿಕಾಯಿ, ಕಜ್ಜಾಯ, ಚಕ್ಕುಲಿ, ಕೋಡುಬಳೆ... ಎಷ್ಟೊಂದು ತಿಂಡಿಗಳು. ಕಬ್ಬು ತಿನ್ನದಿದ್ದರೆ ಚೌತಿ ಮಾಡಿದ್ದೇ ಗೊತ್ತಾಗುವುದಿಲ್ಲ. ಅವರಿವರಿಂದ ಕಿತ್ತುಕೊಂಡು ಕಬ್ಬು ತಿನ್ನಬೇಕು. ಆಗಲೇ ಮಜಾ... ಚೌತಿ ಅಂದಾಕ್ಷಣ ಇಂತಹ ತರಲೆಗಳೂ ನೆನಪಾಗ್ತವೆ. ಊರಿಗೆ ಹೋಗಿ ಬರೋದ್ರಲ್ಲೇ ಸುಸ್ತಾಗ್ತೇನೆ. ಅದಕ್ಕೆ ಈ ಸಲ ಬೆಂಗಳೂರಲ್ಲೇ ಹಬ್ಬ ಮಾಡ್ಕೋತೇನೆ’.

‘ಏನೇ ಬಂದ್ರೂ ಗಣಪತಿ
ಕಾಪಾಡಪ್ಪ ಅನ್ನೋದು’

‘ನಮ್ಮೂರು ಪುತ್ತೂರು. ನಮ್ಮ ಮನೆಗಿಂತಲೂ ಮಾವಂದಿರ ಮನೆಗಳಲ್ಲಿ ಈ ಹಬ್ಬವನ್ನು ಜೋರಾಗಿ ಮಾಡುತ್ತಾರೆ. ಸಣ್ಣ ವಯಸ್ಸಿನಿಂದಲೂ ನಮ್ಮ ಮನೆಯಲ್ಲಿ ಹಬ್ಬಕ್ಕೆ ವಿಶೇಷ ಪೂಜೆ ಮತ್ತು ಪಾಯಸದೂಟ ಮಾಡೋದು ಸುಖವಾಗಿರೋದು ಅಷ್ಟೇ. ಮಾವಂದಿರ ಮನೆಗಳಲ್ಲಿ ಪೂಜೆ, ನೈವೇದ್ಯ ಹಾಗೂ ಮತ್ತೊಂದು ಸುತ್ತಿನ ಗಡದ್ದು ಊಟ. ನನಗೆ ಗಣಪತಿ ಪ್ರಥಮ ಪೂಜಿತನೇ. ಏನೇ ಬಂದ್ರೂ ಗಣಪತಿ ಕಾಪಾಡಪ್ಪಾ ಅನ್ನೋದು’

– ‘ನಿರಂಜನ’ ಪಾತ್ರಧಾರಿ ರಾಕೇಶ್‌ ಮಯ್ಯ ಅವರ ಗಣಪತಿ ಮತ್ತು ಹಬ್ಬದ ಭಾವ.

‘ನಾನೂ ಗಣಪತಿಯಂತೆ ಬ್ರಹ್ಮಚಾರಿ’

‘ವಿದ್ಯಾ ವಿನಾಯಕ’, ‘ಮಗಳು ಜಾನಕಿ’ ಮತ್ತು ‘ಸರ್ವ ಮಂಗಳ ಮಾಂಗಲ್ಯೇ’ ಧಾರಾವಾಹಿಗಳಲ್ಲಿ ಪ್ರಬುದ್ಧ ಅಭಿನಯದಿಂದ ವೀಕ್ಷಕರ ಮನ ಗೆದ್ದವರು ಕಿರಣ್‌ ವಟಿ. ಗಣಪತಿ ಮತ್ತು ಹನುಮಾನ್‌ ತಮ್ಮಿಷ್ಟದ ದೇವರು ಎನ್ನುತ್ತಾರೆ, ಅವರು.

‘ನಾನೂ ಸ್ವತಃ ಬ್ರಹ್ಮಚಾರಿಯಾಗಿರುವ ಕಾರಣಕ್ಕೋ ಏನೋ ಗಣಪತಿ ಮತ್ತು ಹನುಮಾನ್‌ ನನ್ನ ಫೇವರಿಟ್‌ ದೇವರುಗಳು. ಹಾಗಾಗಿ ಹಬ್ಬ ಇರಲಿ ಇಲ್ಲದಿರಲಿ ನನಗೆ ಇವರ ಪೂಜೆ ಎಂದರೆ ಹಬ್ಬವೇ. ಸಣ್ಣ ವಯಸ್ಸಿನಿಂದಲೂ ನಮ್ಮ ಮನೆಯಲ್ಲಿ ತುಂಬಾ ಗಡದ್ದಾಗಿ ಮಾಡುವ ಹಬ್ಬ. ಈ ವರ್ಷ ನಮ್ಮ ಮನೆಯಲ್ಲಿ ಮಾಡಲಾಗುತ್ತಿಲ್ಲ. ಹಾಗಾಗಿ ಅಣ್ಣನ ಮನೆಯಲ್ಲಿ ಮಾತ್ರ ಪೂಜೆ. ನಾನು ನಾಗರಭಾವಿ ನಿವಾಸಿ. ಹಾಗಾಗಿ ನಮ್ಮ ಲೇಔಟ್‌ ಗಣೇಶನ ಪೂಜೆ ಜೋರಾಗಿಯೇ ಮಾಡುತ್ತೇವೆ. ಹಾಗಾಗಿ ಮನೆಯಲ್ಲೂ, ಹೊರಗೂ ಈ ಹಬ್ಬ ನನ್ನ ಪಾಲಿಗೆ ಅತ್ಯಂತ ಮಹತ್ವದ್ದು’ ಎನ್ನುತ್ತಾರೆ ವಟಿ.

‘ಗಣೇಶೋತ್ಸವ ಮತ್ತು ತುಂಟಾಟಕ್ಕೆ ಅವಿನಾಭಾವ ನಂಟು. ಮಾಡಿದ ತರಲೆಗಳೂ ಒಂದೆರಡಲ್ಲ. ಕಾಲೇಜು ದಿನಗಳಲ್ಲಿ ನಾವು ಗೆಳೆಯರೆಲ್ಲ ಸೇರಿ ಗಣೇಶೋತ್ಸವಕ್ಕೆ ಚಂದಾ ಎತ್ತುತ್ತಿದ್ದೆವು. ಎಲ್ಲರೂ ಚಂದಾ ಕೊಡುವುದಿಲ್ಲ. ಕೆಲವರು ನಾಜೂಕಾಗಿ ಕೊಡುವುದಿಲ್ಲ ಎಂದರೆ ಇನ್ನು ಕೆಲವರು ಬಾಯಿಗೆ ಬಂದಂತೆ ಬೈಯ್ಯುವುದೂ ಉಂಟು. ನಮಗೆ ಯಾರಾದರೂ ಹಾಗೆ ಬೈದರೆ ರಾತ್ರಿ ಅವರ ಮನೆಗೆ ಹೋಗಿ ಬಲ್ಬ್‌ ಕದ್ಕೊಂಡು ಬರ್ತಿದ್ವಿ. ಆಗ ಅದು ದೊಡ್ಡ ಸಾಧನೆ’ ಎಂದು ನಗುತ್ತಾರೆ.

‘ಅಜ್ಜಿಯೊಂದಿಗೆ ಹಬ್ಬ’

‘ಮೂರು ವರ್ಷ ಆಯ್ತು ಅಜ್ಜಿ ಮನೆಗೆ ಬಂದು. ಅದಕ್ಕಾಗಿ ಗೌರಿ ಹಬ್ಬದ ದಿನವೇ ಮೈಸೂರಿಗೆ ಬಂದುಬಿಟ್ಟೆ. ಅಜ್ಜಿಗೆ ರೇಷ್ಮೆ ಸೀರೆ ತಗೊಂಡಿದ್ದೀನಿ. ಅವರು ಮಾಡೋ ಎಲ್ಲಾ ಅಡುಗೆ ನನಗೆ ತುಂಬಾ ಇಷ್ಟ. ಚಪ್ಪರಿಸಿಕೊಂಡು ತಿನ್ನುತ್ತೇನೆ. ಹಾಗಾಗಿ ಈ ಸಲದ ಹಬ್ಬ ನನಗೆ ಡಬಲ್‌ ಖುಷಿ’.

–‘ಸೀತಾ ವಲ್ಲಭ’ ಧಾರಾವಾಹಿಯ ಮೈಥಿಲಿ ಯಾನೆ ಸುಪ್ರೀತಾ ಸತ್ಯನಾರಾಯಣ್‌ ಅವರ ಹಬ್ಬದ ಮೂಡ್‌ ಇದು.

ಸಣ್ಣ ವಯಸ್ಸಲ್ಲಿ ನಮಗೆ ಮನೆಯಲ್ಲಿ ಮಾಡುವ ಹಬ್ಬಕ್ಕಿಂತಲೂ ಸಾರ್ವಜನಿಕ ಗಣೇಶೋತ್ಸವದ ಸಂಭ್ರಮ ಜೋರು. ನಾನು ಮತ್ತು ನನ್ನ ಗೆಳತಿಯರೂ ಹುಡುಗರೊಂದಿಗೆ ಸೇರಿಕೊಂಡು ದೇಣಿಗೆ ಸಂಗ್ರಹಿಸಿ ನಮ್ಮ ಬೀದಿಯ ಗಣೇಶೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ವಿ. ಆಗ ನಾನು ಒಂಥರಾ ಟಾಮ್‌ ಬಾಯ್‌ನಂತಿದ್ದೆ. (ಆಗ ಮಾತ್ರ, ಈಗ ಪಾಪದ ಹುಡುಗಿ). ಒಬ್ಬರಿಗೊಬ್ಬರು ಕಬ್ಬು ಕಿತ್ಕೊಂಡು ತಿನ್ನುತ್ತಿದ್ದ ನೆನಪು ಪ್ರತಿ ಹಬ್ಬದಲ್ಲೂ ನೆನಪಾಗುತ್ತದೆ’ ಎಂದು ಸುಪ್ರೀತಾ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT