ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕೈಲಿ ಮೈಸೂರು ಶೈಲಿ

Published 19 ಮೇ 2024, 0:01 IST
Last Updated 19 ಮೇ 2024, 0:01 IST
ಅಕ್ಷರ ಗಾತ್ರ

ಮಕ್ಕಳಲ್ಲಿ ಮೈಸೂರು ಶೈಲಿ ಕುರಿತು ಅಭಿಮಾನ ಮೂಡಿಸಲು ಆಯೋಜಿಸಿದ್ದ ಕಲಾಶಿಬಿರ ಹೊಸ ಪೀಳಿಗೆಗೆ ಪಾರಂಪರಿಕ ಜ್ಞಾನವನ್ನು ದಾಟಿಸಿತು.

ಹದಿಹರೆಯದ ಎಳೆಯ ಕೈಗಳು, ಇಷ್ಟು ದಿನ ಬಿಡುವಿಲ್ಲದೆ ಮೊಬೈಲ್‌ ಸ್ಕ್ರೀನ್‌ ಮೇಲೆ ಮೇಲ್ತುದಿಯತ್ತ ಜರಗುತ್ತಿದ್ದ ಬೆರಳು, ತನ್ಮಯತೆಯಿಂದ ಪೆನ್ಸಿಲ್‌ ಹಿಡಿದಿದ್ದವು. ಆ ಕಂಗಳೂ ಅಷ್ಟೇನೆ.. ಸ್ಕ್ರೀನ್‌ ಮೇಲೆ ಮಾತ್ರ ಸರಿದಾಡಿ ಅಭ್ಯಾಸವಿದ್ದರೂ ಚಾಂಚಲ್ಯ ಮರೆತು, ಕ್ಯಾನ್ವಾಸ್‌ ಮೇಲೆ ದೃಷ್ಟಿ ನೆಟ್ಟಿದ್ದವು. 

ಒಂದು ವಾರದ ಶಿಬಿರದಲ್ಲಿ ಮೈಸೂರು ಶೈಲಿಯಲ್ಲಿ ಬರುವ ಎಂಬೊಸಿಂಗ್‌ ಮತ್ತು ಪದರಗಳಂತೆ ಚಿನ್ನದ ಲೇಪನವನ್ನು ಎದ್ದು ಕೂರಿಸುವುದು, ಇವನ್ನು ಕಲಿಸಬೇಕಾಗಿತ್ತು. ಪುಟ್ಟ ಪುಟ್ಟ ಕೈಗಳು ಅದಕ್ಕೂ ತಯಾರಾದವು. ಕೊನೆಕೊನೆಗೆ ಕಲಾಕೃತಿ ಮುಗಿಸಬೇಕು ಎನ್ನುವ ಹಟಕ್ಕಿಂತಲೂ, ಅದಿನ್ನೆಷ್ಟು ಚಂದ ಕಂಡೀತು ಎಂಬ ಕುತೂಹಲವೇ ಗೆದ್ದಿತು. ಕೆಲ ಮಕ್ಕಳು ಬೆಳಗ್ಗೆ ಒಂಬತ್ತು ಗಂಟೆಗೆ ಬಂದರೆ ರಾತ್ರಿಯವರೆಗೂ ಶಿಬಿರದಲ್ಲಿ ತಮ್ಮ ಕಲಾಕೃತಿಯ ತಯಾರಿಯಲ್ಲಿ ಮೈಮರೆಯುತ್ತಿದ್ದರು. 

ಪರಿಣಾಮ, ಒಂದು ವಾರದಲ್ಲಿಯೇ ಗಣೇಶ, ಕಮಲದೊಳು ಸ್ಥಾಪಿತಳಾದ ಲಕ್ಷ್ಮಿ, ಗಜಲಕ್ಷ್ಮಿ, ಗಜ ಸಂಸಾರ, ನಂದಿ, ಗೃಹಲಕ್ಷ್ಮಿ–ಹೀಗೆ ಹಲವಾರು ದೇವದೇವತೆಯರು ಈ ಮಕ್ಕಳ ಕೈಗಳಲ್ಲಿ ರೂಪು ತಳೆದರು. 

ಹಾಸನ ಜಿಲ್ಲೆಯಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಚಿತ್ರಕಲಾ ಶಿಕ್ಷಕರೂ ಸೇರಿ 30 ಜನ ಈ ವಿಶೇಷ ಕಲಾ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇಡೀ ದಿನ ಕತ್ತು ತಗ್ಗಿಸಿ ದೇವರನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ವರ್ಷಾನುಗಟ್ಟಲೆ ಬೇಕಾಗುವ ಸಾಧನೆಗೆ ಮುನ್ನುಡಿಯಂತಿತ್ತು ಶಿಬಿರ. 

ಒಂಬತ್ತನೆ ತರಗತಿಯ ಚಿರಂತನ್‌ ಎಚ್, ‘ಹಂಸವಾಹಿನಿ–ವೀಣಾಪಾಣಿನಿ ಸರಸ್ವತಿಯ ಚಿತ್ರ ಬಿಡಿಸತೊಡಗಿದಾಗಲೇ ಮೈಸೂರು ಪರಂಪರೆಯ ವೈಭವ ಅರ್ಥವಾಯಿತು’ ಎಂದು ಹೇಳಿದ. ‘ಇಡೀ ವಾರ ಫೋನು, ಟೀವಿಯಿಂದ ದೂರ ಇದ್ದೆ. ಬೋರಾದರೆ ತಾನೆ ಅದೆಲ್ಲ ನೋಡಬೇಕು ಅಂತನಿಸೋದು... ನಮಗೆ ಬೇಜಾರು ಆಗಲೇ ಇಲ್ಲ. ಚಿತ್ರ ಬಿಡಿಸ್ತಾ, ಎಂಬೋಸಿಂಗ್‌ ಮಾಡುತ್ತ, ಸಮಯ ಹೋಗಿದ್ದೇ ಗೊತ್ತಾಗ್ತಿರಲಿಲ್ಲ. ಈಗ ಇನ್ನೊಂದು ಕಲಾಕೃತಿ ಆರಂಭಿಸಿರುವೆ‘ ಎಂದು ಖುಷಿಯಿಂದಲೇ ಹೇಳಿದರು.

ಶಿಬಿರದ ಅವಧಿಯಲ್ಲಿ ಚಿತ್ರಕಲೆಯಲ್ಲಿ ಗಣಿತೀಯ ರೇಖೆಗಳನ್ನು ಎಳೆಯುವ ಕುರಿತು ಚಿಣ್ಣರು ಹೆಚ್ಚಿನ ಆಸಕ್ತಿ ತೋರಿದರು. ಅರ್ಧ ಕಲಿಕೆ ಅಲ್ಲಿಯೇ ಪೂರ್ಣವಾದಂತೆ ಇತ್ತು. ಕಲೆಯಲ್ಲಿ ಆಸಕ್ತಿ ತೋರುವುದೇ ಮೊದಲ ಹಂತ. ಅದನ್ನು ಗೆದ್ದಿದ್ದಾಗಿತ್ತು. ವರ್ಣವೈವಿಧ್ಯಮಯ ಈ ಕಲೆಯ ಇತಿಹಾಸ ಹೇಳಿದಂತೆಲ್ಲ ಅವರಿಗೆ ಹೆಮ್ಮೆಯೂ ಆಗತೊಡಗಿತು. ಮೊದಲೆಲ್ಲ ಚಿನ್ನದ ರೇಕುಗಳಿಂದ ಚಿತ್ರಿಸುತ್ತಿದ್ದರು ಎಂಬ ಸತ್ಯ ಅರಿವಾಗುತಲ್ಲೇ ರೋಮಾಂಚಿತರಾದ ಮಕ್ಕಳು, ಆ ಕಲೆಯ ಅನನ್ಯತೆಯನ್ನು ತಾವೂ ಕಲಿಯುವತ್ತ ಮನಸ್ಸು ಮಾಡಿದರು. 

ಅದ್ಹೆಂಗೆ ಅಷ್ಟು ಪರಿಶ್ರಮಕ್ಕೆ ಈ ಪುಟ್ಟ ಜೀವಗಳು ತಯಾರಾದವು? ಸ್ಕ್ರೀನ್‌ ಮತ್ತು ಆಟಗಳನ್ನು ಬಿಟ್ಟು ಮೈಮರೆತರು? ಈ ಪ್ರಶ್ನೆಗಳನ್ನು ಬೆನ್ನಟ್ಟಿದಾಗ, ಹಾಸನದ ವಿದ್ಯಾಶಾಲೆಯ ತನಿಷಾ ಎಚ್‌.ಟಿ ಇದಕ್ಕೆ ಉತ್ತರವಾದಳು. ‘ಮೈಸೂರು ಶೈಲಿ ಎಂದರೇನೆ ಗೊತ್ತಿರದ ದಿನಗಳಿಂದ, ನಾವೂ ಕಲಾಕೃತಿ ರಚಿಸುವವರೆಗೂ ಶಿಬಿರದಲ್ಲಿದ್ದ ಶಿಕ್ಷಕರು ಹಲವಾರು ವಿಷಯಗಳನ್ನು ತಿಳಿಸಿಕೊಟ್ಟರು. ಚಿನ್ನ ಬಳಸಿ ಮಾಡಿರುವ ಕಲಾಕೃತಿಗಳನ್ನು ನೋಡಬೇಕೆಂಬ ಆಸೆ ಇದೆ. ಈ ಕಲೆಯನ್ನು ಮುಂದುವರಿಸುವ ಆಸಕ್ತಿಯೂ ಹುಟ್ಟಿದೆ’ ಎಂದಳು.

ಮಕ್ಕಳನ್ನು ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ ಕಲಿಸುವುದಕ್ಕೂ, ಸಾಂಪ್ರದಾಯಿಕ ಶೈಲಿಯನ್ನು ಕಲಿಸುವುದಕ್ಕೂ ಅಗಾಧವಾದ ವ್ಯತ್ಯಾಸವಿದೆ. ಒಂದೇ ಚಿತ್ರದೊಳಗೆ ಚಿತ್ತ ಚಾಂಚಲ್ಯ ಇರುವ ಮಕ್ಕಳನ್ನು ತೊಡಗಿಸಬಹುದೆ? ಅತಿ ನಯ ನಾಜೂಕಿನ ರೇಕುಗಳನ್ನು ಚಿತ್ರಿಸುವಾಗ ಸಹನೆ ಕೆಡಲಿಲ್ಲವೇ? ಆಸಕ್ತಿ ಮೂಡಿಸುವ ಭರದಲ್ಲಿ... ಇದ್ಯಾವುದಿದು ಇಷ್ಟು ಸಮಯ ಬಯಸುತ್ತದೆ ಎಂಬ ರೇಜಿಗೆ ಹುಟ್ಟಲಿಲ್ಲವೇ ಇಂಥ ಪ್ರಶ್ನೆಗಳೂ ಮನಸಿನಲ್ಲಿ ಮೂಡಿದ್ದವು. ಇವಕ್ಕೆಲ್ಲ ಕಲಾಶಿಬಿರ ಏರ್ಪಡಿಸಿದ್ದ ಚಿತ್ರಕಲಾವಿದರೂ, ಶಿಕ್ಷಕರೂ ಆಗಿರುವ ಬಿ.ಎಸ್‌. ದೇಸಾಯಿ ಅವರು ಉತ್ತರಿಸಿದರು.

‘ನಮ್ಮ ಪರಂಪರೆ, ನಮ್ಮ ಶೈಲಿ, ನಮ್ಮ ಸಂಸ್ಕೃತಿ ಇವೆಲ್ಲ ಮುಂದಿನ ಪೀಳಿಗೆಗೆ ದಾಟಬೇಕಲ್ಲ, ದಾಟುವುದಿಲ್ಲ ಎಂಬ ಹಳಹಳಿಕೆಯೊಂದಿಗೆ, ದಾಟಬೇಕು ಎಂಬ ಕಾಳಜಿಯೂ ಹುಟ್ಟಿದಾಗ, ಇಂಥ ಶಿಬಿರ ಏರ್ಪಡಿಸಬೇಕು ಅನಿಸಿತು. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆಯೂ ವ್ಯಕ್ತವಾಯಿತು. ವಿಜಯನಗರ ಸಾಮ್ರಾಜ್ಯದ ಮೂಲದಿಂದ ಈ ಶೈಲಿ ಹುಟ್ಟಿಕೊಂಡಿತು. ಮುಂದೆ ಹಾಳುಹಂಪೆಯಾದಾಗ ಹಲವಾರು ಕಲಾವಿದರು ದಕ್ಷಿಣಕ್ಕೆ ವಲಸೆ ಬಂದರು. ಶ್ರೀರಂಗಪಟ್ಟಣದಿಂದ ಮೈಸೂರು ಶೈಲಿಯಾಗಿ ಹೆಸರುವಾಸಿಯಾಯಿತು. ಚಿನ್ನದ ಲೇಪನದಿಂದ ಸಿದ್ಧವಾಗುತ್ತಿದ್ದ ಈ ಕುಸುರಿ ಕೆಲಸದ ಕಲಾಕೃತಿಗಳು, ನೈಜ ವರ್ಣದಿಂದ ಕಂಗೊಳಿಸುತ್ತಿದ್ದವು. ಆ ವೈಭೋಗ ಮರಳಿ ಬರದಿದ್ದರೂ ನಮ್ಮ ಶೈಲಿ ಮಾಯವಾಗಬಾರದು ಎಂಬ ಕಾಳಜಿಯಿಂದ ಈ ಶಿಬಿರ ಆರಂಭಿಸಿದೆ’ ಎಂದು ಹೇಳಿದರು.

ಕಲೆಗೆ ಪ್ರೋತ್ಸಾಹದ ನೀರೆರೆಯುವವರು ಇದ್ದರೆ, ಇವು ಉಳಿಯುವುದಷ್ಟೇ ಅಲ್ಲ, ನಳನಳಿಸುತ್ತವೆ. ರಾಜಾಶ್ರಯ ದೊರೆತ ಕಾರಣಕ್ಕೇನೆ, ಶತಮಾನಗಳ ಕಾಲ ಈ ಪರಂಪರೆ ಉಳಿದುಕೊಂಡು ಬಂದಿದೆ. ಪ್ರಜಾಪ್ರಭುತ್ವದ ಈ ಕಾಲದಲ್ಲಿಯೂ ಕಲೆ ಉಳಿಸಲು ಅಗತ್ಯ ಇರುವ ಸಹಕಾರ, ಸಹಾಯ ದೊರೆತರೆ ನಮ್ಮ ಪಾರಂಪರಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಸಾಗಿಸುವ ಸಾರ್ಥಕ ಕೆಲಸ ಆಗುತ್ತದೆ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT