ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ ಕದಡಿದ ರೋಹಿತ್‌ ವೇಮುಲ ಜೀವನಾಧಾರಿತ ‘ನಕ್ಷತ್ರದ ಧೂಳು’ ನಾಟಕ

Published 15 ಅಕ್ಟೋಬರ್ 2023, 3:52 IST
Last Updated 15 ಅಕ್ಟೋಬರ್ 2023, 3:52 IST
ಅಕ್ಷರ ಗಾತ್ರ

ಗಂಗಾವತಿಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ‘ನಕ್ಷತ್ರದ ಧೂಳು’ ನಾಟಕ ಪ್ರದರ್ಶಿತವಾಯಿತು. ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್‌ ವೇಮುಲ ಅವರ ಜೀವನದ ನಿಜ ಘಟನೆ ಆಧರಿಸಿದ ನಾಟಕ ಇದು. ಒಂದೇ ಒಂದು ಪಾತ್ರ ರಂಗವನ್ನು ಆವಾಹಿಸಿಕೊಂಡು ಒಂದು ಗಂಟೆಗೂ ಹೆಚ್ಚು ಅವಧಿಯ ಪ್ರದರ್ಶನ ನೀಡುವ ಸವಾಲಿತ್ತು. ಹರ್ಷಕುಮಾರ ಕುಗ್ವೆ ಬರೆದ, ಪ್ರವೀಣ್ ರೆಡ್ಡಿ ಗುಂಜಳ್ಳಿ ನಿರ್ದೇಶಸಿದ ಈ ನಾಟಕದಲ್ಲಿ ರಾಯಚೂರಿನ ‘ರಂಗಕನಸು’ ತಂಡದ ಲಕ್ಷ್ಮಣ ಮಂಡಲಗೇರ ಅವರ ಅಭಿನಯವಿತ್ತು.

ಆತ್ಮಕಥಾ ಮಾದರಿಯ ನಾಟಕವನ್ನು ನೋಡುತ್ತಿದ್ದಾಗ ತಂತಾನೆ ಕಣ್ಣಿನಿಂದ ಜಾರಿ ಕೆನ್ನೆಗೆ ಹನಿಗಳು ಇಳಿದವು. ರೋಹಿತ್‌ ವೇಮುಲ ಅವರ ಬದುಕಿನ ಸಂಕಟವೇ ನಮ್ಮ ಸಂಕಟವೂ ಆಗಿ, ನಮಗರಿಯದೆ ಹೊಡೆವ ಚಪ್ಪಾಳೆಗಳು ಹೊಸ ಲೋಕಕ್ಕೆ ಕರೆದುಕೊಂಡು ಹೋದವು.

ರಾಯಚೂರಿನ ‘ರಂಗಕನಸು’ ತಂಡ ಸಮುದಾಯದ ಮತ್ತು ಸಾಕ್ಷರತಾ ಆಂದೋಲನದ ಬೀದಿ ನಾಟಕಗಳಿಂದ ಪ್ರಭಾವ ಬೀರಿದಂಥದ್ದು. ಹವ್ಯಾಸಿ ಮತ್ತು ಜನಪದ ಗ್ರಾಮೀಣ ರಂಗಭೂಮಿಯನ್ನು ಕಟ್ಟಿ ಮುನ್ನಡೆಸಿದ ನೆಲ ರಾಯಚೂರು. ಇಲ್ಲಿ ‘ನಕ್ಷತ್ರ ಧೂಳು’ ಸಹಜವಾಗಿಯೇ ಗಮನಸೆಳೆಯಿತು.

ಹಾಸ್ಟೆಲ್ ವಿದ್ಯಾರ್ಥಿಯಾದ ರೋಹಿತ್‌ ವೇಮುಲ ತಮ್ಮ ಚಿಂತನೆಯ ಮೂಲಕ ಈ ಲೋಕದ ಸಂಕಟಗಳನ್ನು ಅನಾವರಣ ಮಾಡುತ್ತಾ, ನಮ್ಮ ಮುಂದಿರುವ ಜವಾಬ್ದಾರಿ ಏನೆಂದು ತಿಳಿಸುವ ಕ್ರಮವು ನಾಟಕದಲ್ಲಿತ್ತು. ನೋಡುಗರಿಗೆ ತಮ್ಮ ಬದುಕುಗಳನ್ನೂ ಪ್ರಶ್ನಿಸಿಕೊಳ್ಳುವಂತೆ ಮಾಡುವ ತಂತ್ರವಿದು. ವರ್ತಮಾನದ ಸಂದರ್ಭದಲ್ಲಿ ಜಾತೀಯತೆಯನ್ನು ಮೀರಲಾಗದ ಈ ಸಮಾಜವು ದಲಿತ ವಿದ್ಯಾರ್ಥಿಗಳನ್ನು ಸಂಶೋಧನೆಯಿಂದ, ಓದಿನಿಂದ ದೂರ ಇಡಲು ಮಾಡಿದ ಹುನ್ನಾರವನ್ನು ನಾಟಕ ಸೂಕ್ಷ್ಮವಾಗಿ ಅನಾವರಣಗೊಳಿಸಿದೆ. ಮಾರ್ಕ್ಸ್, ಅಂಬೇಡ್ಕರ್, ಫುಲೆ, ಪೆರಿಯಾರ್ ಅವರ ಆದರ್ಶಗಳನ್ನು ಇಟ್ಟುಕೊಂಡ ಒಬ್ಬ ವಿದ್ಯಾರ್ಥಿಯ ಕಷ್ಟದ ಕಥೆಯನ್ನು ಬಿಚ್ಚಿಟ್ಟಿದೆ.

ಸಮಾಜೋ–ರಾಜಕೀಯದಿಂದ ಸ್ವಾರ್ಥಪರವಾದ ಬೇರೆ ಬೇರೆ ಸಂಘಟನೆಗಳು ವಿದ್ಯಾರ್ಥಿ ಸಂಘಟನೆಗಳನ್ನು ಒಡೆಯುತ್ತಲೇ ಕೆಲವರನ್ನು ಬೀದಿಯಲ್ಲಿ ತಂದು ನಿಲ್ಲಿಸುತ್ತವೆ. ರೋಹಿತ್‌ ವೇಮುಲ ಮತ್ತವರ ಗೆಳೆಯರು ಹಾಸ್ಟೆಲಿನಿಂದ ಹೊರದಬ್ಬಿಸಿಕೊಳ್ಳುವ ದೃಶ್ಯ ಇದನ್ನೇ ಅರುಹುವುದು. ಕೌದಿಯಿಂದ ಹೊಲಿದ ವೆಲಿವಾಡ ಟೆಂಟಿನಲ್ಲಿ ಕುಳಿತು ಪ್ರತಿಭಟಿಸುವ ಮೂಲಕ ಅಂಬೇಡ್ಕರ್‌ವಾದದ ಆಶಯಗಳನ್ನು ಮತ್ತೆ ಮುನ್ನಲೆಗೆ ತರುತ್ತಾರೆ. ಬಾಲ್ಯದಲ್ಲಿ ಜಾತಿಯ ಕಾರಣಕ್ಕಾಗಿ ಹೊರ ದಬ್ಬಿಸಿಕೊಂಡವರು ತಂದೆಯಿಂದ ದೂರವಾಗಿ, ಅಮ್ಮ ಅನುಭವಿಸಿದ ಅಸ್ಪೃಶ್ಯತೆಯ ವಾಸನೆ ವಿಶ್ವವಿದ್ಯಾಲಯಕ್ಕೂ ತಲುಪಿ,ರೋಹಿತ್‌ ಅಲ್ಲಿಂದ ಹೊರಹಾಕುವಂತೆ ಮಾಡುತ್ತದೆ. ಕೇಂದ್ರ ಮಂತ್ರಿಗಳ ರಾಜಕೀಯ, ವಿಶ್ವವಿದ್ಯಾಲಯದ ಕುಲಪತಿಗಳ ಜಾತಿ ಲೆಕ್ಕಾಚಾರಗಳು ಆತನನ್ನು ಬಸವಳಿಯುವಂತೆ ಮಾಡುತ್ತವೆ. ಬಾರದ ಸ್ಕಾಲರ್‌ಶಿಪ್ ಮತ್ತು ಕಿರುಕುಳಗಳಿಂದ ನೊಂದು ಈ ವ್ಯವಸ್ಥೆಯಿಂದ ಬೇಸತ್ತು ತಮ್ಮ ಹೋರಾಟಕ್ಕೆ ಅಂತಿಮ ಶರಾ ಬರೆಯುವ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.

ರೋಹಿತ್‌ ಅಗಲಿದ ನಂತರ ಅಂಬೇಡ್ಕರ್‌ವಾದದ ಆಶಯವನ್ನು ದಲಿತ ಮತ್ತು ಶೋಷಿತ ಲೋಕಕ್ಕೆ ಮತ್ತಷ್ಟು ಹತ್ತಿರವಾಗುವಂತೆ ಬಹುದೊಡ್ಡ ಹೋರಾಟ ರೂಪುಗೊಳ್ಳುತ್ತದೆ. ಲಕ್ಷ್ಮಣ ಮಂಡಲಗೇರಾ ಅವರ ಅಭಿನಯ ನೋಡುಗರನ್ನು ತನ್ಮಯರಾಗಿಸಿ, ಅರಿವಿನ ದೀಪವನ್ನು ಹಚ್ಚುವಂತಿದೆ. ಗೋಡೆಯ ಚಿತ್ರಗಳು, ಟೇಬಲ್ಲಿನ ಮೇಲಿಟ್ಟ ಪುಸ್ತಕಗಳು, ಆ ಬೆಳಕಿನ ಚಿತ್ತಾರಗಳು, ಅಭಿನಯ ಎಲ್ಲವೂ ಒಂದಕ್ಕೊಂದು ಪೂರಕ. ಇನ್ಸಾಫ್ ಹೊಸಪೇಟೆ ಸಂಗೀತ ಸಂಯೋಜನೆ ಗಮನಾರ್ಹ. ಹಾಡುಗಳು, ಜಂಬೆಯಿಂದ ಹೊಮ್ಮಿಸುವ ಶಬ್ದಗಳು ಕಾಡುತ್ತವೆ. ಭೈರವ ಕಲಬುರ್ಗಿ ಅವರ ಬೆಳಕಿನ ವಿನ್ಯಾಸವೂ ಔಚಿತ್ಯಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT