ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಜೆಸ್ಟಿಕ್‌ ಮಾಯಾಂಗನೆಯ ಮೋಹದಲಿ...

 ಈರಪ್ಪ ಎಂ ಕಂಬಳಿ
Published 24 ಆಗಸ್ಟ್ 2024, 23:30 IST
Last Updated 24 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಅದು 1974. ಹತ್ತನೆಯ ತರಗತಿಯಲ್ಲಿ ಫೇಲಾಗುವುದು ಗ್ಯಾರಂಟಿ ಎಂದುಕೊಂಡು ಊರಲ್ಲಿ ಮುಖ ತೋರಿಸಲು ನಾಚಿ ತುಂಗಭದ್ರೆಯ ದಡದ ಮೇಲಿದ್ದ ಸಿಂಧನೂರ ತಾಲ್ಲೂಕಿನ ಧಡೆಸೂಗೂರ ‘ರೈತರ ಮಕ್ಕಳ ತರಬೇತಿ ಶಾಲೆ’ಗೆ ಓಡಿಹೋಗಿದ್ದೆ. ಸರ್ಕಾರದ ಖರ್ಚಿನಲ್ಲಿ ಶೈಕ್ಷಣಿಕ ಪ್ರವಾಸವೆಂದು ಅವರೇ ಬೆಂಗಳೂರಿಗೆ ನಮ್ಮನ್ನು ತಂದು ಇಳಿಸಿದಾಗ ಸಂಜೆ ಆರರ ಹೊತ್ತು. ಮೆಜೆಸ್ಟಿಕ್‌ನಲ್ಲಿರುವ ತೋಟದಪ್ಪ ಛತ್ರದಲ್ಲಿ ಎರಡು ದಿನಗಳ ವಾಸ್ತವ್ಯ.

‘ಇದನ್ನೇನು ತೋಟದಪ್ಪನ ಧರ್ಮಛತ್ರ ಅಂದುಕೊಂಡಿದ್ದೀಯಾ?’ ಎಂದು ಛೇಡಿಸುವುದು ಹಳೆ ಮೈಸೂರು ಭಾಗದಲ್ಲಿ ತುಸು ಹೆಚ್ಚೇ ಚಾಲ್ತಿಯಲ್ಲಿದೆ. ಇದು ಅಕ್ಷರಶಃ ನಿಜ. ಸಂಜೆಯಾದರೆ ಬೀದಿ ವ್ಯಾಪಾರಿಗಳ ಗಜಿಬಿಜಿ ಈ ಛತ್ರದ ಆವಾರದಲ್ಲಿ. ಮೆಜೆಸ್ಟಿಕ್, ಬೆಂಗಳೂರಿನ ಹೃದಯಭಾಗವಾದರೆ 50 ವರ್ಷಗಳ ಹಿಂದೆ ಹ್ಯಾಗಿತ್ತೊ ಈಗಲೂ ಹಾಗೇ ತನ್ನತನ ಉಳಿಸಿಕೊಂಡು ಬಂದಿರುವ ಈ ಛತ್ರವನ್ನು ಏನೆಂದು ಕರೆಯಬಹುದು? ನೆನಪುಗಳಿಗೆ ಸಾವಿಲ್ಲ!

ಕಣ್ಣ ತುಂಬ ಕನಸು ಚಿಮ್ಮುವ ಹುಡುಗರಾದ ನಾವು ಆಗ ಕಾಯಲಿಲ್ಲ. ಅಡುಗೆ ಆಗುವುದರೊಳಗೆ ಅಡ್ವಾನ್ಸ್ ಆಗಿ ವಿಧಾನಸೌಧವನ್ನೊಮ್ಮೆ ನೋಡಿಕೊಂಡು ಬರಲು ಐದಾರು ಜನ ಸಿದ್ಧರಾಗಿದ್ದೆವು. ಆಗಿನ್ನೂ ಖಾಲಿ ಹೊಡೆಯುತ್ತಿದ್ದ ಎದುರುಗಡೆಯ ಧರ್ಮಾಂಬುದಿ ಕೆರೆಯಂಗಳ (ಈಗಿನ ಕೆಎಸ್‌ಆರ್‌ಟಿಸಿ– ಬಿಎಂಟಿಸಿ ಬಸ್ ನಿಲ್ದಾಣ)ದಲ್ಲಿ ಬರೆ ಹಾಕಿದಂತೆ ತೋರುತ್ತಿದ್ದ ಕಾಲುದಾರಿಗಿಳಿದು ಆ ಕಡೆಯ ಧನ್ವಂತರಿ ರಸ್ತೆ ಹತ್ತಿ, ಕತ್ತಲಾಗುವ ಮೊದಲೇ ವಿಧಾನಸೌಧವನ್ನು ಕಣ್ತುಂಬಿಕೊಂಡು ಬರಲು ‘ಹುರ್ರಾ’ ಎಂದು ಒಂದೇ ಉಸಿರಿಗೆ ಓಟ ಕಿತ್ತಿದ್ದೆವು.

ಆಗಿನ್ನೂ ಆ ಭವ್ಯ ವಿಧಾನಸೌಧಕ್ಕೆ ಯಾವುದೇ ತಡೆಬೇಲಿ ಇರಲಿಲ್ಲ. ದೊಡ್ಡ ದೇವಸ್ಥಾನದಂತೆ ತೋರುವ ಆ ಭವ್ಯ ಮಹಲ್‌ ಒಂದು ಸುತ್ತು ಹಾಕಿಕೊಂಡು ಮುಂಭಾಗಕ್ಕೆ ಬಂದಾಗ ತಮ್ಮದೇ ಸ್ವಂತ ಮನೆಯಂಗಳವೆನ್ನುವ ತೆರದಲ್ಲಿ ಮಡದಿ ಮಕ್ಕಳು ಮರಿಗಳೊಂದಿಗೆ ಮೆಟ್ಟಿಲುಗಳ ಮೇಲೆಲ್ಲಾ ಬೀಡುಬಿಟ್ಟಿರುವ ಸ್ಥಳೀಯ ಕುಟುಂಬ ಸದಸ್ಯರ ಗಜಿಬಿಜಿ ನೋಡಬೇಕಿತ್ತು! ಅವರ ನಡುವೆ ಕಡ್ಲೇಕಾಯಿ ಮಾರುವವರ ಮೆರವಣಿಗೆ! ಈಗ ಅದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಬಿಡಿ.

ಕತ್ತಲಾಗುತ್ತಿದ್ದಂತೆ ಹೊಟ್ಟೆ ಎಚ್ಚರಿಸಿದಾಗ ಕಾಲೆಳೆದುಕೊಂಡು ಛತ್ರಕ್ಕೆ ಮರಳಿದ್ದೆವು. ಅದು ದೀಪಾವಳಿಯ ಹಿಂದಿನ ದಿನ. ಮೂಲೆಯಲ್ಲಿದ್ದ ಶಾಂತಲಾ ಸಿಲ್ಕ್‌ ಹೌಸ್‌ ಆಗಲೂ ಹೊಸ ಲೈಟುಗಳಿಂದ ಝಗಮಗಿಸುತ್ತಿತ್ತು. ಹತ್ತಿರದ ತುಳಸಿತೋಟದಿಂದ ಆರ್ಕೆಸ್ಟ್ರಾ ಸೌಂಡು! ಚಿಕ್ಕ ಲಾಲ್ ಬಾಗ್ ಎಂತಲೂ ಅದಕ್ಕೆ ಕರೆಯುವುದುಂಟು. ಕೆಳಗೆ ಇಳಿದು ಹೋಗಲು ಮೆಟ್ಟಿಲು, ಮೇಲೆ ಕಲಾತ್ಮಕವಾದ ಕಲ್ಲಿನ ಕಮಾನುಗಳು.

ಅದು ಟ್ಯಾಂಕ್ ಬಂಡ್ ರೋಡ್. ಒಂದು ಕಡೆ ಗುಂಪಾಗಿ ನಿಂತಿರುತ್ತಿದ್ದ ಹೋಟೆಲ್ ಮಾಣಿಗಳನ್ನು ಕರೆದೊಯ್ಯಲು ಮಾಲೀಕರು ನಿತ್ಯ ಅಲ್ಲಿಗೆ ಬರುತ್ತಾರೆಂದು ಅದ್ಯಾರೋ ನಮಗೆ ತಿಳಿಸಿದರು. ಮಹಾನಗರ ಎಂದ ಮೇಲೆ ಹಳ್ಳಿಗಾಡಿನ ಹುಡುಗರು ದಾರಿ ತಪ್ಪಿಬಿಟ್ಟಾರು ಎಂದು ನಮಗೆ ‘ದೂರ ಎಲ್ಲಿಗೂ ಹೋಗಕೂಡದು, ಹತ್ತಿರದಲ್ಲಿಯೇ ಸುಳಿದಾಡಿಕೊಂಡು ಇರಬೇಕು’ ಎಂದು ತಾಕೀತು ಮಾಡಿದ್ದರು.

ಸರಿ, ಕಾಲಿಗೆ ಚಕ್ರ ಕಟ್ಟಿಕೊಂಡಂತಿರುವ ವಯಸ್ಸು ಒಂದು ಕಡೆ ಸುಮ್ಮನೆ ನಿಲ್ಲಲು ಬಿಡುವುದಿಲ್ಲ. ಛತ್ರದ ಮುಂದಿದ್ದ ಜಗುಲಿ ಇಳಿದು, ಕೆರೆಯ ಕಟ್ಟೆಯಗುಂಟ ಒಂದೇ ದಿಕ್ಕಿನಲ್ಲಿ ಸುತ್ತಾಡಲು ಹೊರಟರೆ ಭೂಮಿ ದುಂಡಗಿದೆ ಎನ್ನುವಂತೆ ಮತ್ತೆ ನಾವು ಇಳಿದುಕೊಂಡ ಛತ್ರಕ್ಕೇ  ಬಂದು ತಲುಪುತ್ತಿದ್ದೆವು! ಕೆರೆ ಏರಿ ಮೇಲೆ ಅಲ್ಲೊಂದು ಇಲ್ಲೊಂದು ನಗರ ಸಾರಿಗೆ ಬಸ್ಸುಗಳು ಬೇರೆ ಬೇರೆ ದಿಕ್ಕುಗಳಿಗೆ ಮುಖ ಮಾಡಿ ನಿಂತಿರುತ್ತಿದ್ದವು. ಮುಂದಿನ ಕೆರೆಯಂಗಳದಲ್ಲಿ ಮೈಸೂರಿಗೆ ಹೋಗುವ ಸರ್ಕಾರಿ ಬಸ್ಸೊಂದು ಕಾದು ನಿಂತಿತ್ತು. ಅದೇ ಜಾಗ ಈಗ ಕೆಎಸ್‌ಆರ್‌ಟಿಸಿಯ ಕೇಂದ್ರ ಬಸ್ ನಿಲ್ದಾಣ.

ಆಗಿನ್ನೂ ಬೆಂಗಳೂರಿಗೆ ಈಗಿನಷ್ಟು ವೇಗ ಒದಗಿರಲಿಲ್ಲ. ರೈಲು ನಿಲ್ದಾಣವೇ ಆಗ ನಮಗೆ ವಿಮಾನ ನಿಲ್ದಾಣದಂತೆ ಕುತೂಹಲ ಹುಟ್ಟಿಸಿದ್ದು ನಿಜ. ಇಂಗ್ಲಿಷ್ ಉಚ್ಚಾರದಲ್ಲಿ ‘ಮೆಜೆಸ್ಟಿಕ್’ ಅಂದರೇನೇ ಅದರ ಗಾತ್ರ ಮತ್ತು ಸೌಂದರ್ಯಗಳಿಂದ ಪ್ರಭಾವ ಬೀರುವ ಆದರಣೀಯ ತಾಣ. ಅಂದಮೇಲೆ, ಊರಿಗೆ ಬಂದಾಕೆ ನೀರಿಗೆ ಬಾರದಿರುತ್ತಾಳೆಯೆ? ಮೆಜೆಸ್ಟಿಕ್ ಆಕರ್ಷಣೆ ಅಂದರೆ ಹಾಗೇ. ಈಗಿನ ಉಪ್ಪಾರಪೇಟೆ ಪೋಲಿಸ್ ಠಾಣೆಯ ಎದುರುಗಡೆ ಇದ್ದ ಮೆಜೆಸ್ಟಿಕ್ ಥಿಯೇಟರ್ ನಾಮಾವಶೇಷವಾಗಿ ಕಾಡುತ್ತಿದೆ, ಈಗಲೂ! ಸರ್ಪಭೂಷಣ ಮಠ, ಗೀತಾ ಟಾಕೀಸು, ಒಂದೇ ಎರಡೇ...

ಚಿತ್ರಮಂದಿರದ ಮುಂದೆ ಟಿಕಿಟ್‌ ಹಿಡಿದು ನಿಂತು ಕಾಯುತ್ತಿದ್ದ ವೇಳೆ ಅಜ್ಜ ಒಬ್ಬರು ಹತ್ತಿರ ಬಂದು ‘ಲೇ ಹುಡುಗ್ರಾ ಅದೋ ಅಲ್ಲಿದೆಯಲ್ಲ, ಎದುರುಗಡೆ ಆ ಮನೆ ನಾಗೇಂದ್ರರಾಯರದು’ ಎಂದಾಗ ‘ಹೌದ್ರಾ, ರೇಣುಕಾ ಎಲ್ಲಮ್ಮನ ಸಿನಿಮಾದಾಗ ಜಮದಗ್ನಿ’ ಎಂದು ನಾವು ಬಾಯ ಮೇಲೆ  ಬೆರಳಿಟ್ಟುಕೊಂಡು ನೋಡುವ ಹೊತ್ತಿಗೆ, ‘ಅಲ್ಲಿ ಪಟಾಕಿ ಸಿಡಿಸುವವರು ಅವರ ಮಕ್ಕಳು. ಒಬ್ಬ ಕವಿ, ಮತ್ತೊಬ್ಬ ನಟ, ಮಗದೊಬ್ಬ ಫೋಟೋಗ್ರಾಫರ್’ ಎಂದು ಆ ಅಜ್ಜ ವಿವರಿಸುವ ಹೊತ್ತಿಗೆ, ಬೆಲ್ ಆಗಿ ಮ್ಯಾಟಿನಿ ಬಿಟ್ಟು, ಥಿಯೇಟರ್ ಒಳಗಿನಿಂದ ಜನ ಬುದುಬುದನೆ ಬರಲಾರಂಭಿಸಿದ್ದರು. ನಮಗೋ ಒಳಗೆ ಹೋಗಲು ಆತುರ.

ಮೆಜೆಸ್ಟಿಕ್ ಹೊಟ್ಟೆಯಲ್ಲಿ ಒಂದು ಗುಪ್ತಾ ಮಾರ್ಕೆಟ್ ಇತ್ತು. ಯಾವಾಗಲೂ ಬೆಲ್ಲಕ್ಕೆ ಇರುವೆ ಮುತ್ತಿದಂತೆ ಜನವೋ ಜನ. ಗುಟ್ಟಾಗಿ ಕಳ್ಳ ಸಾಗಣೆ ಸರಕುಗಳನ್ನು ಅಲ್ಲಿ ಮಾರುತ್ತಾರೆಂಬ ವದಂತಿ ಇತ್ತು. ಆ ಕಾರಣಕ್ಕೇ ಅದಕ್ಕೆ ‘ಗುಪ್ತ’ ಮಾರುಕಟ್ಟೆ ಎಂದು ಹೆಸರು ಬಂದಿರಬೇಕೆಂಬುದು ಆಗ ನನ್ನ ಮೂಢನಂಬಿಕೆ. ಹೀಗಾಗಿ ಅದಕ್ಕೆ ಅದರದೇ ಆದ ಆಕರ್ಷಣೆ. ‘ಸಂಜೆ ಆರರ ಹೊತ್ತು ಗುಪ್ತಾ ಮಾರ್ಕೆಟ್ ಮುಂದೆ ಕಾದಿರುತ್ತೀನಿ, ಮಿಸ್ ಮಾಡಬೇಡ’ ಎಂದು ಆಪ್ತ ಗೆಳೆಯರ ಭೇಟಿಗೆ ಅದು ಹೇಳಿ ಮಾಡಿಸಿದ ‘ವೇಯ್ಟಿಂಗ್‌ ಪಾಯಿಂಟ್!’

ಆ ತುದಿಯಲ್ಲಿ ಧನ್ವಂತರಿ ಆಯುರ್ವೇದ ಆಸ್ಪತ್ರೆ, ಈ ತುದಿಯಲ್ಲಿ ಎಲೈಟ್ ಹೊಟೇಲು. ಗಲ್ಲಿಗಳಲ್ಲಿ ನುಗ್ಗಿದರೆ ಕಪಾಲಿ ಚಿತ್ರಮಂದಿರದಿಂದ ತುಸು ಮುಂದಕ್ಕೆ ಹೋದರೆ ಯಾವಾಗಲೂ ತೆಲುಗು ಸಿನಿಮಾ ಪ್ರದರ್ಶಿಸುತ್ತಿದ್ದ ಮೂವಿ ಲ್ಯಾಂಡ್, ವಾಹ್! ಪಕ್ಕದ ಗಲ್ಲಿಯಲ್ಲಿ ಜೋಳದ ರೊಟ್ಟಿ ಗದ್ದಿಗೆಪ್ಪನ ಖಾನಾವಳಿ. ಉತ್ತರ ಕರ್ನಾಟಕದ ರಾಜಕಾರಣಿಗಳು ದಂಡಿಯಾಗಿ ಅಂಡಲೆಯುವ ಜಾಗ. ಮತ್ತೊಂದು ಕಡೆ ಮುದ್ದೆ ಮುರಿಯುವವರಿಗಾಗಿ ಮಾದಪ್ಪನ ಮೆಸ್.

ಹಾಗೇ ತುಸು ಬಲಗಡೆ ತಿರುಗಿದರೆ ಸುಬೇದಾರ್ ಛತ್ರಂ ರಸ್ತೆಯಲ್ಲಿ ಅಣ್ಣಮ್ಮನ ಗುಡಿ. ಎಡಕ್ಕೆ ಕಾಲಾಡಿಕೊಂಡು ಹೋದರೆ ವೃತ್ತಿ ನಾಟಕ ಕಂಪನಿಗಳ ಆಡುಂಬೊಲ ಗುಬ್ಬಿ ವೀರಣ್ಣ ರಂಗಮಂದಿರ. ಬಲಕ್ಕೆ ತಿರುಗಿ ಕೆಂಪೇಗೌಡ ರಸ್ತೆಯಲ್ಲಿ ಕೆಂಪೇಗೌಡ ಥಿಯೇಟರ್, ಎದುರುಗಡೆ ಜನತಾ ಬಜಾರು, ಮುಂದೆ ಹೋದರೆ ಬೃಹದ್ದಾಕಾರದ ಹೊಸ ಮೈಸೂರು ಬ್ಯಾಂಕ್ ಕಟ್ಟಡ–ಇವು ಮೆಜೆಸ್ಟಿಕ್ ಏರಿಯಾದಲ್ಲಿರುವ ಹೆಗ್ಗುರುತುಗಳು!

ಚಿಕ್ಕಪೇಟೆ, ತರಗುಪೇಟೆ, ತುಳಸಿತೋಟ, ಗಾಂಧಿನಗರದ ಸುತ್ತಮುತ್ತಲ ಬಹುತೇಕ ಮೂಲ ನಿವಾಸಿಗಳು ಎಂದೋ ತಮ್ಮ ಮನೆ ಮಾರುಗಳನ್ನು ಹಣದ ಥೈಲಿ ಹಿಡಿದುಕೊಂಡು ಬಂದ  ಮಾರ್ವಾಡಿಗಳಿಗೆ ಮಾರಿ ನಗರದ ಹೊರವಲಯದಲ್ಲಿ ಹೋಗಿ ನೆಲೆಸಿದ್ದು ಮತ್ತೊಂದು ಕುತೂಹಲಕಾರಿ ಇತಿಹಾಸ.

ಮೆಜೆಸ್ಟಿಕ್‌ ಎಂಬ ಮಾಯಾಂಗನೆಯ ಮೋಹಕ ನೆನಪು ಮನಸ್ಸು ಮಾಗಿದಷ್ಟೂ ಮತ್ತೆ ಮತ್ತೆ ಕಾಡುತ್ತಲೇ ಇದೆ!

ಮುಕ್ತ ಮುಕ್ತ ವಿಧಾನಸೌಧದ ಆವರಣ...
ಮುಕ್ತ ಮುಕ್ತ ವಿಧಾನಸೌಧದ ಆವರಣ...
ಐವತ್ತು ವರ್ಷಗಳ ಹಿಂದೆ ಮೆಜೆಸ್ಟಿಕ್‌ ಪ್ರದೇಶ ಹೀಗಿತ್ತು...  ಚಿತ್ರಗಳು: ಪ್ರಜಾವಾಣಿ ಸಂಗ್ರಹ
ಐವತ್ತು ವರ್ಷಗಳ ಹಿಂದೆ ಮೆಜೆಸ್ಟಿಕ್‌ ಪ್ರದೇಶ ಹೀಗಿತ್ತು...  ಚಿತ್ರಗಳು: ಪ್ರಜಾವಾಣಿ ಸಂಗ್ರಹ
ಬೆಂಗಳೂರಿನ ಕೆಂಪೇಗೌಡ ರಸ್ತೆ 
ಬೆಂಗಳೂರಿನ ಕೆಂಪೇಗೌಡ ರಸ್ತೆ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT