ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟದ ನಿಯಮಗಳಂತೆಯೇ ಜೀವನದ ನಿಯಮಗಳೂ...

Published 8 ಆಗಸ್ಟ್ 2023, 1:16 IST
Last Updated 8 ಆಗಸ್ಟ್ 2023, 1:16 IST
ಅಕ್ಷರ ಗಾತ್ರ

ಆಟೋಟದ ಪಂದ್ಯಗಳಲ್ಲಿ ಹೆಚ್ಚು ಗೆಲ್ಲುವವರು ಯಾರು? ಕೇವಲ ಅತ್ಯಂತ ಹೆಚ್ಚಿನ ಕೌಶಲವುಳ್ಳವರೋ, ಅಧಿಕ ಬಲಶಾಲಿಗಳೋ, ದೊಡ್ಡ ಸಂಖ್ಯೆಯ ಬೆಂಬಲಿಗರಿರುವವರೋ ಮಾತ್ರವೇ ಅಲ್ಲ. ಬದಲಿಗೆ, ತಕ್ಕ ಮಟ್ಟಿನ ಕೌಶಲ, ಬಲ ಮತ್ತು ಬೆಂಬಲಗಳ ಜೊತೆಗೆ ಆಟದ ನಿಯಮಗಳ ಪರಿಪೂರ್ಣ ಜ್ಞಾನ ಉಳ್ಳವರು. ಇದಕ್ಕೆ ಹತ್ತಾರು ಉದಾಹರಣೆಗಳನ್ನು ನೀಡಬಹುದು. ಕ್ರಿಕೆಟ್ ಆಟದಲ್ಲಿ ಮಳೆಯಿಂದ ಪಂದ್ಯ ಕಡಿತವಾಗುವ ಅನುಮಾನವಿದ್ದಾಗ, ನಿಯಮಗಳ ಲೆಕ್ಕಾಚಾರ ಇರುವ ತಂಡ ಗೆಲ್ಲುವ ಸಾಧ್ಯತೆ ಹೆಚ್ಚು. ಓಟದ ಪಂದ್ಯಗಳ ವೇಳೆ ಅಂತಿಮ ಗೆರೆ ಮುಟ್ಟುವ ಸಂದರ್ಭದಲ್ಲಿ ತಲೆಯನ್ನು ಮುಂದಕ್ಕೆ ಚಾಚಿ ನಿಯಮಗಳ ರೀತ್ಯಾ ಗೆದ್ದವರು ಅದೆಷ್ಟೋ ಮಂದಿ ಇದ್ದಾರೆ. ನಮ್ಮ ಸಾಮರ್ಥ್ಯಕ್ಕೆ ಸಮಾನರಾದ ನಾಲ್ಕಾರು ಮಂದಿ ನಮ್ಮ ಜೊತೆಗೆ ಸ್ಪರ್ಧಿಸುತ್ತಿದ್ದಾರೆ ಎಂದಾಗ ನಿಯಮಗಳ ಸಮ್ಯಕ್ ಅರಿವನ್ನು ಮೂಡಿಸಿಕೊಳ್ಳುವುದು ಗೆಲುವಿಗೆ ಹಾದಿಯಾಗಬಹುದು. ಇಂತಹ ಎಡೆಗಳಲ್ಲಿ ಕೇವಲ ನಿಯಮಗಳ ಪರಿಚಯ ಮಾತ್ರವೇ ಗೆಲುವು ಕಾಣಿಸುವುದಿಲ್ಲ. ಬದಲಿಗೆ, ಉಳಿದೆಲ್ಲ ಧನಾತ್ಮಕ ಅಂಶಗಳ ಜೊತೆಗೆ ನಿಯಮಗಳನ್ನೂ ಚೆನ್ನಾಗಿ ಅರಿತಿರುವ ಸಂಗತಿ ಕೆಲಸಕ್ಕೆ ಬರುತ್ತದೆ.

ನಿಯಮಗಳು ಆಟಗಳ ವಿಷಯದಲ್ಲಿ ಮಾತ್ರವೇ ಪ್ರಸ್ತುತ ಎಂದಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ನಿಯಮಗಳು ಇರುತ್ತವೆ. ಬದುಕಿನ ನಿಯಮಗಳಲ್ಲಿ ಕೆಲವು ಲಿಖಿತ; ಹಲವು ಅಲಿಖಿತ; ಬಹುತೇಕವು ನಿರಂತರವಾಗಿ ಬದಲಾಗುತ್ತಿರುವ ನಿಯಮಗಳು. ಜೀವನದಲ್ಲಿ ಯಶಸ್ಸು ಕಂಡ ಅಧಿಕ ಮಂದಿ ತಮ್ಮ ವ್ಯವಹಾರದ ನಿಯಮಗಳನ್ನು ಅರಿತಿರುತ್ತಾರೆ. ತೀರಾ ಬಲಶಾಲಿಗಳು ಈ ನಿಯಮಗಳನ್ನು ಬದಲಿಸಬಲ್ಲರು ಕೂಡ. ಇದನ್ನೆಲ್ಲ ಮೀರಿ ‘ಪೆಟ್ಟಿಗೆಯಿಂದ ಹೊರಗಿನ ಚಿಂತನೆ’ ಮಾಡುವವರಿಗೂ ನಿಯಮಗಳ ಪರಿಚಯ ಚೆನ್ನಾಗಿ ಇರಬೇಕಾದದ್ದು ಮುಖ್ಯವಾಗುತ್ತದೆ. ಅರಿಯದ ನಿಯಮಗಳನ್ನು ಮೀರುವುದಾದರೂ ಹೇಗೆ?!

ಜೀವನದಲ್ಲಿ ಗೆಲುವು ಸಾಧಿಸುವ ವಿಷಯದಲ್ಲಿ ಆಲ್ಬರ್ಟ್ ಐನ್’ಸ್ಟೈನ್ ಅವರ ಮಾತು ಪ್ರಸಿದ್ಧ: ‘ಮೊದಲು ಆಟದ ನಿಯಮಗಳನ್ನು ಕಲಿಯಬೇಕು. ಅನಂತರ ಉಳಿದ ಎಲ್ಲರಿಗಿಂತಲೂ ಚೆನ್ನಾಗಿ ಆಡಬೇಕು’. ಶಾಲೆಯ ವಿಷಯಕ್ಕೆ ಬಂದಾಗ, ಆಯಾ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಒಂದೇ ರೀತಿಯ ಸಮವಸ್ತ್ರವನ್ನು ತೊಟ್ಟು, ಒಂದೇ ಶಾಲೆಗೆ ಬಂದು, ಒಬ್ಬರೇ ಶಿಕ್ಷಕರ ಬಳಿ ಕಲಿಯುತ್ತಾರೆ. ಅವರೆಲ್ಲಿ ಬಹುತೇಕರು ಸರಿಸುಮಾರು ಒಂದೇ ರೀತಿಯ ಕೌಟುಂಬಿಕ ಹಿನ್ನೆಲೆಯವರು. ಮನೆಯಲ್ಲಿ ಅವರ ಪೋಷಕರೆಲ್ಲರೂ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ತಕ್ಕಮಟ್ಟಿಗೆ ನಿಗಾ ವಹಿಸುತ್ತಾರೆ. ಅಂದರೆ, ಒಂದೇ ಮೈದಾನದಲ್ಲಿ ಓಡುವ ಸ್ಪರ್ಧಿಗಳ ರೀತಿಯಲ್ಲಿ ಭೂಮಿಕೆ ಇರುತ್ತದೆ ಎಂದಾಯಿತು. ಹೀಗಿರುವಾಗ ಕೆಲವರು ಹೆಚ್ಚು ಸಫಲರಾಗುತ್ತಾರೆ; ಹಲವರು ಎಷ್ಟೇ ಪ್ರಯತ್ನಿಸಿದರೂ ಮೊದಲ ಸ್ಥಾನಕ್ಕೆ ಬರಲಾರದೆ ಉಳಿಯುತ್ತಾರೆ. ಇಂತಹ ಸಂದರ್ಭಗಳನ್ನು ಅಧ್ಯಯನ ಮಾಡಿದ ಸಂಶೋಧಕರಿಗೆ ಗೆಲ್ಲುವ ವಿದ್ಯಾರ್ಥಿಗಳ ಬಗ್ಗೆ ಕೆಲವೊಂದು ಮಹತ್ವದ ಮಾಹಿತಿ ದೊರೆತವು. ಸಫಲ ವಿದ್ಯಾರ್ಥಿಗಳು ಪರೀಕ್ಷೆಯ ನಿಯಮಗಳನ್ನು ಉಳಿದವರಿಗಿಂತಲೂ ಚೆನ್ನಾಗಿ ಅರಿತಿರುತ್ತಾರೆ. ತಮಗೆ ವಿಷಯ ತಿಳಿದಿದೆ ಎಂದ ಮಾತ್ರಕ್ಕೆ ಮೂರು ಅಂಕಗಳ ಪ್ರಶ್ನೆಗೆ ಮೂರು ಪುಟಗಳ ಉತ್ತರ ಬರೆಯಬಾರದು ಎಂಬ ಪರಿಜ್ಞಾನ ಅವರಿಗೆ ಇರುತ್ತದೆ. ಮೌಲ್ಯಮಾಪಕರ ಮನಃಸ್ಥಿತಿಯನ್ನು ಅವರು ಬಲ್ಲರು. ‘ನಿಮಗೆ ಇಷ್ಟ ಬಂದ ಅನುಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸಬಹುದು’ ಎನ್ನುವ ಆಯ್ಕೆ ಇದ್ದರೂ ಅವರು ಪ್ರಶ್ನೆಪತ್ರಿಕೆಯ ನಿರ್ದಿಷ್ಟ ಕ್ರಮವನ್ನೇ ಅನುಸರಿಸುತ್ತಾರೆ. ಉತ್ತರದ ಯಾವ ಅಂಶಗಳನ್ನು ಪರೀಕ್ಷಕರು ಅಂಕಗಳಿಗೆ ಪರಿಗಣಿಸುತ್ತಾರೆಂಬ ಸ್ಪಷ್ಟತೆ ಅವರಿಗೆ ಇರುತ್ತದೆ. ಅಂತಹ ಅಂಶಗಳನ್ನು ತಪ್ಪದೇ ಸ್ಫುಟವಾಗಿ ಬರೆದು, ಮೌಲ್ಯಮಾಪಕರ ಗಮನ ಸೆಳೆಯುತ್ತಾರೆ. ಅಂದರೆ, ಒಟ್ಟಾರೆ ಅವರಿಗೆ ಪರೀಕ್ಷೆಯ, ಮೌಲ್ಯಮಾಪನದ ನಿಯಮಗಳ ಪರಿಚಯ ಚೆನ್ನಾಗಿ ಇರುತ್ತದೆ. ಆ ಅರಿವನ್ನು ಬಳಸಿಕೊಂಡು ಸ್ಪರ್ಧೆಯಲ್ಲಿ ಮೇಲೇರುತ್ತಾರೆ. ಈ ನಿಯಮಗಳ ಪರಿಚಯ ಇಲ್ಲದ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ವಹಿಸಿದರೂ ಅಂಕಗಳ ವಿಷಯದಲ್ಲಿ ಹಿಂದುಳಿಯುವ ಸಾಧ್ಯತೆಗಳಿರುತ್ತವೆ.

ಇಂತಹ ಅರಿವು ಜೀವನದ ಪ್ರತಿಯೊಂದು ಹಂತದಲ್ಲೂ ನೆರವಿಗೆ ಬರುತ್ತದೆ. ಜೀವನಶಿಕ್ಷಣದ ತರಬೇತುದಾರರು ‘ಸ್ಥಾನಪಲ್ಲಟ’ ಎನ್ನುವ ಮಾದರಿಯನ್ನು ಬಳಸುತ್ತಾರೆ. ಉದಾಹರಣೆಗೆ, ನೀವು ಯಾವುದೋ ಒಂದು ನೌಕರಿಗೆ ಅರ್ಜಿ ಹಾಕಿದ್ದೀರಿ ಎಂದು ಭಾವಿಸಿ. ಅದಕ್ಕೆ ಸಿದ್ಧತೆಯಾಗಿ ನಿಮ್ಮ ಸಾಮಾನ್ಯಜ್ಞಾನವನ್ನು ಬೆಳೆಸಿಕೊಳ್ಳುವ ಪುಸ್ತಕ ಓದುತ್ತೀರಿ. ಸಂದರ್ಶಕರು ಏನು ಪ್ರಶ್ನೆಗಳನ್ನು ಕೇಳಬಹುದು ಎಂದು ತಲೆ ಕೆಡಿಸಿಕೊಳ್ಳುತ್ತೀರಿ. ಎಂತಹ ಬಟ್ಟೆ ತೊಟ್ಟು ಸಂದರ್ಶನಕ್ಕೆ ಹೋಗಬೇಕು ಎಂದು ಆಲೋಚಿಸುತ್ತೀರಿ. ಇವೆಲ್ಲದಕ್ಕಿಂತಲೂ ಪರಿಣಾಮಕಾರಿ ವಿಧಾನವೆಂದರೆ, ನಿಮ್ಮನ್ನು ನೀವೇ ಸಂದರ್ಶಕರೆಂದು ಭಾವಿಸುವುದು. ಈಗ ನೀವು ಓರ್ವ ಅಭ್ಯರ್ಥಿಯನ್ನು ಕೆಲಸಕ್ಕೆ ನಿಯಮಿಸಬೇಕಿದೆ. ಅಂತವರಿಂದ ನಿಮ್ಮ ನಿರೀಕ್ಷೆ ಏನು? ಇದಕ್ಕೆ ಉತ್ತರಿಸಬೇಕೆಂದರೆ ಆ ಕೆಲಸಕ್ಕೆ ಬೇಕಾದ ಅರ್ಹತೆಗೆ ಯಾವ ನಿಯಮಗಳು ಪಾಲನೆಯಾಗಬೇಕು ಎನ್ನುವುದನ್ನು ತಿಳಿದಿರಬೇಕು. ನೀವೀಗ ಸಂಸ್ಥೆಯ ಆಡಳಿತ ನಿರ್ವಾಹಕರಾಗಿ ಸೇರಬೇಕಿದೆ. ಒಂದು ವೇಳೆ ಅಂತಹ ನಿರ್ವಾಹಕರನ್ನು ನೀವೇ ಆಯ್ಕೆ ಮಾಡಬೇಕೆಂದರೆ ಮೊದಲು ಸಂಸ್ಥೆಯ ಆಡಳಿತ ವಿಧಾನಗಳ ಪರಿಚಯ ಇರಬೇಕು. ಯಾವ ಮಟ್ಟದಲ್ಲಿ ಲೋಪ-ದೋಷಗಳಿವೆ; ಯಾವ ಸ್ತರದಲ್ಲಿ ಉನ್ನತಿಯ ಅಗತ್ಯವಿದೆ; ಯಾವ ಹಂತದಲ್ಲಿ ಸಂಸ್ಥೆ ಮತ್ತಷ್ಟು ಬೆಳವಣಿಗೆಯನ್ನು ಬಯಸುತ್ತದೆ ಎನ್ನುವ ಸ್ಪಷ್ಟತೆ ಸಂದರ್ಶಕರಿಗೆ ಇರಬೇಕಾಗುತ್ತದೆ. ಈ ನಿಯಮಗಳನ್ನು ಸಮರ್ಪಕವಾಗಿ ತುಂಬುವ ಅಭ್ಯರ್ಥಿಗೆ ಕೆಲಸ ದೊರೆಯುವ ಸಾಧ್ಯತೆಗಳು ಬಲವಾಗುತ್ತವೆ. ಈಗ ನೀವೇ ಅಂತಹ ಅಭ್ಯರ್ಥಿ ಆಗಬೇಕೆಂದರೆ ಏನು ಮಾಡಬೇಕು? ಈ ರೀತಿ ಆಲೋಚಿಸಿದಾಗ ನಿಮ್ಮ ಸಿದ್ಧತೆಯ ಹಂದರವೇ ಬದಲಾಗಿ ಹೋಗುತ್ತದೆ. ಸಂದರ್ಶನದ ನಿಯಮಗಳ ಅರಿವು ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಜೀವನದಲ್ಲಿ ಯಶಸ್ವಿಯಾದ ಬಹುತೇಕರು ತಮ್ಮ ಕಾರ್ಯಕ್ಷೇತ್ರದ ನಿಯಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಲೇ ಇರುತ್ತಾರೆ. ವಿಪರೀತ ವೇಗದಲ್ಲಿ ಮುನ್ನಡೆಯುತ್ತಿರುವ ಜಾಗತಿಕ ಪ್ರಗತಿ ನಿಯಮಗಳನ್ನು ನಿರಂತರವಾಗಿ ಬದಲಿಸುತ್ತಲೇ ಇರುತ್ತದೆ. ಇದನ್ನು ಅರಿತು, ಕ್ಲುಪ್ತವೇಳೆಗೆ ಸರಿಯಾದ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಸಾಗುವುದು ವೈಯಕ್ತಿಕವಾಗಿ ಮತ್ತು ಸಾಂಘಿಕವಾಗಿ ಬಹಳ ಮುಖ್ಯ. ನಿಯಮಗಳನ್ನು ಚೆನ್ನಾಗಿ ಅರಿತವರು ಮಾತ್ರವೇ ನಿಯಮಗಳನ್ನು ಬದಲಿಸಬಲ್ಲರು ಎಂಬ ಮಾತು ನಮ್ಮ ಕಾಲಘಟ್ಟದ ನಿಯಮಗಳಲ್ಲಿ ಒಂದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT