ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಂದೂರು ಕೆಂಪಯ್ಯ: ಕಿನ್ನೂರಿ ನುಡಿಸೋನ ದನಿ ಚೆಂದ

Published 28 ಅಕ್ಟೋಬರ್ 2023, 23:30 IST
Last Updated 28 ಅಕ್ಟೋಬರ್ 2023, 23:30 IST
ಅಕ್ಷರ ಗಾತ್ರ

ತಮ್ಮ ಕಂಚಿನ ಕಂಠಸಿರಿಯಿಂದ ನಾಡಿನಾದ್ಯಂತ ಮನೆಮಾತಾಗಿರುವ ಬಾನಂದೂರು ಕೆಂಪಯ್ಯನವರಿಗೆ 72ರ ಹರೆಯ. ಉದ್ಯೋಗ ನಿಮಿತ್ತ ಮೈಸೂರು, ಧಾರವಾಡ, ಕಲಬುರಗಿ, ಮಂಗಳೂರು, ಬೆಂಗಳೂರು ವಲಯಗಳಲ್ಲಿ ಕೆಲಸ, ವಾಸ ಮಾಡಿರುವುದರಿಂದ ಅವರ ಕಾರ್ಯವ್ಯಾಪ್ತಿ ದೊಡ್ಡದು, ಗೆಳೆಯರ ಬಳಗವೂ ದೊಡ್ಡದು. ಅವರ ಗೆಳೆಯರೆಲ್ಲರೂ ಕೂಡಿ ಕೆಂಪಯ್ಯನವರ ಜೀವನ- ಸಾಧನೆ ಕುರಿತು ‘ಬಾನಂದದ ಕಿನ್ನೂರಿ’ ಎಂಬ ಪುಸ್ತಕವನ್ನು ಪ್ರಕಟಿಸುವ ಮೂಲಕ ಈ ಸವಿನೆನಪನ್ನು ಚಿರಸ್ಥಾಯಿಯಾಗಿಸುತ್ತಿದ್ದಾರೆ.

ಇಂದಿನ ರಾಮನಗರ ಜಿಲ್ಲೆಯ ಬಾನಂದೂರಿನ ಕೇರಿಯಲ್ಲಿ ಹುಟ್ಟಿ ಬೆಳೆದ ಕೆಂಪಯ್ಯ ತನ್ನ ಸರೀಕರಂತೆ ಬಡತನ, ಹಸಿವು, ಅಸ್ಪೃಶ್ಯತೆ ಎಲ್ಲವನ್ನೂ ಉಂಡವರು. ಜೀವನೋಪಾಯಕ್ಕಾಗಿ ಆಕಾಶವಾಣಿಯಲ್ಲಿ ಹುದ್ದೆ ಹಿಡಿದರು. ಒಬ್ಬ ಕಲಾವಿದನಿಗೆ ಹುದ್ದೆಯೇ ಸರ್ವಸ್ವವಾಗುವುದಿಲ್ಲ. ತನ್ನ ಒಳದನಿಯ ಸೆಳೆತಕ್ಕೆ ತನುಮನವನ್ನು ಅರ್ಪಿಸಿಕೊಳ್ಳುತ್ತಾನೆ. ಒಮ್ಮೆ ಅಪ್ಪಗೆರೆ ಗ್ರಾಮದ ಮಠದಲ್ಲಿ ಸಂನ್ಯಾಸಿಯೊಬ್ಬರು ತೀರಿಕೊಂಡಿದ್ದರು. ಬಾನಂದೂರು ಅವರನ್ನು ನೋಡಲು ಮಠಕ್ಕೆ ಹೋಗಿದ್ದರು. ಮೃತರನ್ನು ಅಲ್ಲಿ ಮಣ್ಣು ಮಾಡುವಾಗ ಸುತ್ತಲೂ ಇದ್ದ ಸಾಧುಗಳು ಒಂದು ತತ್ತ್ವಪದ ಹಾಡುತ್ತಿದ್ದರು. ಅದೇ ‘ತನಿವಿನೊಳಗನುದಿನವಿದ್ದು ಎನ್ನ ಮನಕೊಂದ ಮಾತ ಹೇಳದೆ ಹೋದೆ ಹಂಸಾ’. ಆ ಕ್ಷಣದಲ್ಲಿ ಕೆಂಪಯ್ಯನವರ ಹೃದಯ ಹಿಂಡಿದಂತಿತ್ತು. ಅಲ್ಲಿಯೇ ಪದವನ್ನು ಕೇಳಿ ಬರೆದುಕೊಂಡರು. ಹಾಡಿ ಅಭ್ಯಾಸ ಮಾಡಿದರು. ಇವರ ಕಂಚಿನ ಕಂಠಕ್ಕೆ ಹೇಳಿ ಮಾಡಿಸಿದಂತಿತ್ತು ಆ ಪದ. ಸ್ವರ ತಪ್ಪದೆ ಸ್ಥಾಯಿಗೆ ಏರುವ ಇವರ ಧ್ವನಿಯನ್ನು ಕೊಂಡಾಡದವರಿಲ್ಲ. ಅದು ಇಂದಿಗೂ ಬಾನಂಗಳದಲ್ಲಿ ತೇಲುತ್ತಾ ಜನರ ಕಿವಿಗೆ ಇಂಪನ್ನು ತನುವಿಗೆ ತಂಪನ್ನು ಎರೆಯುತ್ತಿದೆ. ಜೀವನದ ಕ್ಷಣಿಕತೆಯನ್ನು ಸಾರುವ ಆ ತತ್ತ್ವಪದ ಬಾನಂದೂರರಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟಿದೆ. ‘ಬಿದಿರೂ ನಾನಾರಿಗಲ್ಲದವಳು’ ಎಲ್ಲೋ ಜೋಗಪ್ಪ ನಿನ್ನರಮಾನೆ’ ‘ಚೆಲ್ಲಿದರು ಮಲ್ಲಿಗೆಯಾ’ ‘ತಿಂಗಾಳು ಮೊಳಗಿದವೊ ರಂಗೋಲಿ ಬೆಳಗಿದವೋ’ ‘ಮೊಗ್ಗಾಗಿ ಬಾರೊ ತುರುಬೀಗೆ’ ಇಂತಹ ಇನ್ನೂ ಹತ್ತು ಹಲವು ಹಾಡುಗಳು ಬಾನಂದೂರರ ಧಾಟಿಯಲ್ಲಿ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಬಾನಂದೂರು ಸೆಂಟ್ರಲ್ ಕಾಲೇಜಿನಲ್ಲಿ ಇಂಗ್ಲಿಷ್ ಬಿ. ಎ. (ಆನರ್ಸ್) ಓದುವಾಗ ಪಿ. ಲಂಕೇಶರ ಶಿಷ್ಯರಾಗಿದ್ದರು. ಒಮ್ಮೆ ಗಣರಾಜ್ಯೋತ್ಸವದ ಅಂಗವಾಗಿ ಕಾರ್ಯಕ್ರಮವನ್ನು ಕೊಡಲು ಪ್ರತಿಭಾನ್ವಿತ ಕಾಲೇಜು ವಿದ್ಯಾರ್ಥಿಗಳ ತಂಡವೊಂದು ದೆಹಲಿಗೆ ಹೋಗಬೇಕಾಗಿಬಂತು. ಜಾನಪದ ಗಾಯನದಲ್ಲಿ ಆಯ್ಕೆಯಾಗಿದ್ದ ಕೆಂಪಯ್ಯನವರೂ ಅಲ್ಲಿದ್ದರು. ತಂಡದ ನೇತೃತ್ವವನ್ನು ಲಂಕೇಶ್ ವಹಿಸಿದ್ದರು. ರೈಲು ಪ್ರಯಾಣದಲ್ಲಿ ಎಲ್ಲರೂ ಸಸ್ಯಾಹಾರಿ ಊಟವನ್ನು ತರಿಸಿಕೊಂಡರೆ, ಇವರು ಮಾಂಸದೂಟ ಹೇಳಿದರಂತೆ. ಊಟವಾದ ಮೇಲೆ ಮೇಷ್ಟ್ರು ಹತ್ತಿರ ಕರೆದು, ‘ನೀನು ಯಾವ ಜಾತಿ?’ ಎಂದು ಕೇಳಿ ಜಗ್ಗಿ ಗದರಿದರು. ದೆಹಲಿಯ ಮೆರವಣಿಗೆಯಲ್ಲಿ ಕರ್ನಾಟಕದ ಟ್ಯಾಬ್ಲೋ ಹೊರಟಿತ್ತು. ಅದರಲ್ಲಿ ಬೂಟ್ ಪಾಲಿಷ್ ಮಾಡುವ ಮೋಚಿಯ ಸ್ಥಿರಚಿತ್ರವೊಂದಿತ್ತು. ಅದನ್ನು ನಟಿಸಲು ಯಾವ ವಿದ್ಯಾರ್ಥಿಯೂ ಒಪ್ಪಲಿಲ್ಲವಂತೆ! ಆಗ ಬಾನಂದೂರು ಆ ಪಾತ್ರವನ್ನು ನಿರ್ವಹಿಸಿದರು. ಲಂಕೇಶರಿಗೆ ಖುಷಿಯಾಯಿತು. ಅಂದಿನಿಂದ ಅವರ ಮೆಚ್ಚಿನ ಶಿಷ್ಯರಾದರು.

ಆಕಾಶವಾಣಿಯೊಂದೇ ಪ್ರಬಲ ಮಾಧ್ಯಮವಾಗಿದ್ದ ಆ ಕಾಲದಲ್ಲಿ ಬಾನಂದೂರು ಜಾನಪದ ಕ್ಷೇತ್ರವನ್ನು ವಿಸ್ತರಿಸಲು ಅವರ ವೃತ್ತಿ ಸಹಕಾರಿಯಾಯಿತು. ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಕರ್ತವ್ಯದಲ್ಲಿದ್ದಾಗ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯ ಮಾಡಿ ಅನೇಕ ಗ್ರಾಮೀಣ ಪ್ರತಿಭೆಗಳನ್ನು ಮತ್ತು ಹೊಸ ಪ್ರಕಾರಗಳನ್ನು ನಾಡಿಗೆ ಪರಿಚಯಿಸಿದರು. ಸಹೋದ್ಯೋಗಿ ಧ್ವನಿಮುದ್ರಕರೊಂದಿಗೆ ಹಳ್ಳಿಗಳನ್ನು ಹುಡುಕಿಕೊಂಡು ಹೊರಟುಬಿಡುತ್ತಿದ್ದರು. ಗ್ರಾಮೀಣ ಕಲೆಗಳು ಜಾತಿಯೊಂದಿಗೆ ತಳುಕುಹಾಕಿಕೊಂಡಿರುವುದು ಆಶ್ಚರ್ಯವೆನಿಸಿದರೂ ಸತ್ಯ. ಕೆಂಪಯ್ಯ ಸರ್ಕಾರಿ ನೌಕರನಾಗಿದ್ದರೂ ಅಸ್ಪೃಶ್ಯತೆ ಅವರ ಚರ್ಮಕ್ಕೆ ಅಂಟಿಕೊಂಡಿದ್ದೂ ಸತ್ಯ. ದಲಿತ ಕೇರಿಗಳನ್ನು ಬಿಟ್ಟರೆ ಮೇಲಿನವರ ಹಟ್ಟಿಗಳಿಗೆ ಹೋಗುವುದು ಅವರಿಗೆ ನಿಷಿದ್ಧವಾಗಿತ್ತು. ಆದ್ದರಿಂದ ಊರ ಗುಡಿ ಅಥವಾ ಒಂದು ಮರದ ಬಳಿಗೆ ಕಲಾವಿದರನ್ನು ಕರೆಸಿ ಧ್ವನಿಮುದ್ರಣ ಮಾಡಿಕೊಳ್ಳುತ್ತಿದ್ದರು. ಒಂದು ಹಳ್ಳಿಯಲ್ಲಿ ಅಂಗವಿಕಲ ಹೆಣ್ಣುಮಗಳೊಬ್ಬಳು ಒಳ್ಳೆಯ ಹಾಡುಗಾರ್ತಿ. ಆಕೆ ಗುಡಿಯ ಬಳಿಗೆ ಬರಲಾಗದು. ಅವರ ಮನೆಗೆ ಇವರನ್ನು ಕರೆಯಲಾಗದು. ‘ನಮ್ಮ ಮನೆಯಲ್ಲಿ ಮಡಿ ಜಾಸ್ತಿ ಅಣ್ಣ, ರೆಕಾರ್ಡ್ ಮಾಡುವುದು ಬೇಡ’ ಅಂದುಬಿಟ್ಟಳಂತೆ! ಚೌಡಿಕೆ ಪದಗಳನ್ನು ಹಾಡುತ್ತಿದ್ದವರು ದೇವದಾಸಿಯರು. ಅವರನ್ನು ಒಪ್ಪಿಸುವುದೇ ಕಷ್ಟವಾಗುತ್ತಿತ್ತು. ಗುಮಟೆ ಪದಗಳನ್ನು ಹಾಡುವವರು ಕ್ಷೌರಿಕರು. ಲಂಬಾಣಿ ಜನರು ಹಾಡುವ ಸೇವಾಲಾಲ್ ಭಜನೆಗಳು, ವೀರಶೈವರ ವೀರಗಾಸೆ ಕುಣಿತ, ಜೋಗತಿಯರು ಹಾಡುವ ಎಲ್ಲಮ್ಮನ ಹಾಡುಗಳು ಎಲ್ಲವನ್ನೂ ಸಂಗ್ರಹಿಸುತ್ತಿದ್ದರು. ಸಣ್ಣಾಟ, ದೊಡ್ಡಾಟಗಳನ್ನು ರಾತ್ರಿಯೆಲ್ಲಾ ರೆಕಾರ್ಡ್ ಮಾಡುತ್ತಿದ್ದರು. 

ಜನಪದ ವಾದ್ಯ ಸಂಗೀತವನ್ನು ವಿಶೇಷವಾಗಿ ಚರ್ಮವಾದ್ಯ, ತಂತಿವಾದ್ಯ, ಊದುವಾದ್ಯ, ಹಲಗಿ ಮಜಲು, ಕರಡಿ ಮಜಲು ಮುಂತಾದ ವಾದ್ಯಗಳನ್ನು ನುಡಿಸುವ ಜನಪದರನ್ನು ಹುಡುಕಿ ಆಕಾಶವಾಣಿಗೆ ಕರೆತರುತ್ತಿದ್ದರು. ಮರೆತೇಹೋಗಿದ್ದ ಪುರಾತನ ಜನಪದ ಚರ್ಮವಾದ್ಯವಾದ ಜಗ್ಗಲಿಗೆಯನ್ನು ಸಂಶೋಧನೆ ಮಾಡಿ ಹೊರತಂದರು. ಈ ಕೆಲವು ಪ್ರಕಾರಗಳು ಅಲ್ಲಿಯವರೆಗೆ ಹೊರಪ್ರಪಂಚಕ್ಕೆ ತಿಳಿದೇ ಇರಲಿಲ್ಲ. ಅವುಗಳನ್ನು ಪರಿಚಯಿಸಿದ ಕೀರ್ತಿ ಬಾನಂದೂರರಿಗೆ ಸಲ್ಲುತ್ತದೆ. ಅಡ್ಡಿ ಆತಂಕಗಳು ಇದ್ದೇ ಇದ್ದವು. ಶ್ರೋತೃಗಳು ಕೆಲವು ಪ್ರಕಾರದ ಹಾಡುಗಳನ್ನು ಅಶ್ಲೀಲವೆಂದು ಪ್ರಸಾರ ಮಾಡಬೇಡಿ ಎಂದು ನಿಲಯ ನಿರ್ದೇಶಕರಿಗೆ ದೂರು ಬರೆಯುತ್ತಿದ್ದರಂತೆ. ಕೆಂಪಯ್ಯ ಅವುಗಳ ಸಂಗ್ರಹ ಮತ್ತು ಪ್ರಸಾರದ ಪ್ರಾಮುಖ್ಯವನ್ನು ಮೇಲಧಿಕಾರಿಗಳಿಗೆ ಮನವರಿಕೆ ಮಾಡುತ್ತಿದ್ದರು ಮತ್ತು ಆ ಕಲಾವಿದರನ್ನು ಆಕಾಶವಾಣಿ ಕೇಂದ್ರಕ್ಕೆ ಆಹ್ವಾನಿಸಿ, ಹಾಡಿಸುತ್ತಿದ್ದರು. ಹೀಗೆ ಈ ಕಲಾಪ್ರಕಾರಗಳು ಮುಖ್ಯವಾಹಿನಿಗೆ ಬರುವಂತೆ ನೋಡಿಕೊಂಡರು. 

ಬಾನಂದೂರು ಗಾಯಕನೆಂದೇ ಗುರುತಿಸಿಕೊಂಡಿ ರುವುದರಿಂದ ಅವರ ಸಾಹಿತ್ಯ ಕಡೆಗಣನೆಗೆ ಒಳಗಾಗಿದೆ ಎಂದು ಹೇಳಬಹುದು. ‘ನನ್ನ ಈ ನೆಲದಲ್ಲಿ’ ಎಂಬ ಕವಿತೆ ಮತ್ತು ‘ಬಯಲುಸೀಮೆಯ ಜಾನಪದ ಕಥೆಗಳು’ ಕಥಾಸಂಕಲನ, ‘ಸುಡುಗಾಡು ಸಿದ್ಧರು’ ಎಂಬ ಸಂಶೋಧನ ಗ್ರಂಥವನ್ನು ಪ್ರಕಟಿಸಿದ್ದಾರೆ. ಸ್ನೇಹಜೀವಿ, ಹಾಸ್ಯಪ್ರಜ್ಞೆಯುಳ್ಳ ಹಸನ್ಮುಖಿ ಕೆಂಪಯ್ಯ ದೂರದರ್ಶನದಲ್ಲಿ ಹಿರಿಯ ಅಧಿಕಾರಿಯಾಗಿದ್ದು, ನಿವೃತ್ತರಾಗಿದ್ದಾರೆ. ಮೊನ್ನೆ ಪಂಡಿತ್‌ ರಾಜೀವ್ ತಾರಾನಾಥರು ಸರೋದ್ ನುಡಿಸುವಾಗ ಕಲೆ ಕಲಾವಿದನ ಉಸಿರನ್ನು ಜೋಪಾನ ಮಾಡುತ್ತದೆ ಅನ್ನಿಸಿಬಿಟ್ಟಿತು. ಬಾನಂದೂರು ಅವರಿಗೆ ಇನ್ನೂ ಹಾಡುವ ಕಸುವಿದೆ. ಹೀಗೆ ಹಾಡುತ್ತಲೇ ಇರಲಿ ಎಂದು ಹಾರೈಸೋಣ.v

ಕಾರ್ಯಕ್ರಮವೊಂದರಲ್ಲಿ ಜನಪದ ಗೀತೆ ಹಾಡಿದ ಬಾನಂದೂರು ಕೆಂಪಯ್ಯ
– ಪ್ರಜಾವಾಣಿ ಚಿತ್ರ‌
ಕಾರ್ಯಕ್ರಮವೊಂದರಲ್ಲಿ ಜನಪದ ಗೀತೆ ಹಾಡಿದ ಬಾನಂದೂರು ಕೆಂಪಯ್ಯ – ಪ್ರಜಾವಾಣಿ ಚಿತ್ರ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT