ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಿವಿನ ಅಂಗಳದಲ್ಲಿ ತೆರೆದಿದೆ ಪಕ್ಷಿ ಪ್ರಪಂಚ

ನವೀನ್‌ ಕುಮಾರ್‌ ಜಿ.
Published : 4 ಆಗಸ್ಟ್ 2024, 0:07 IST
Last Updated : 4 ಆಗಸ್ಟ್ 2024, 0:07 IST
ಫಾಲೋ ಮಾಡಿ
Comments

‘ಕೃಷಿ ಕುಟುಂಬದಲ್ಲಿ ಜನಿಸಿದ ನನಗೆ ಹಕ್ಕಿಗಳೆಂದರೆ ಸಾಮಾನ್ಯ ವಿಷಯ. ದಿನನಿತ್ಯ ಅವುಗಳನ್ನು ಕಂಡರೂ, ಅವುಗಳೆಡೆ ಲಕ್ಷ್ಯ ಹರಿಸುತ್ತಿದ್ದುದು ಕಡಿಮೆ. ಈಗ ಹಾಗಲ್ಲ. ಸುಮಾರು 30ಕ್ಕೂ ಹೆಚ್ಚು ಹಕ್ಕಿಗಳನ್ನು ಗುರುತಿಸಬಲ್ಲೆ. ಹಕ್ಕಿಗಳ ಇಂಚರ ಕೇಳಿದರೆ ಅವುಗಳು ಯಾವ ಪ್ರಭೇದದ ಪಕ್ಷಿ ಎಂದು ಗುರುತಿಸಲು ಪ್ರಯತ್ನಿಸುತ್ತೇನೆ. ಬಾನಾಡಿಗಳ ಬಗ್ಗೆ ನಾನು ಪಡೆದುಕೊಂಡ ಅರಿವನ್ನು ಶಾಲಾ ಮಕ್ಕಳ ಜೊತೆಗೂ ಹಂಚಿಕೊಳ್ಳುತ್ತೇನೆ...’

ಇದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮ ಪಂಚಾಯಿತಿ ಅರಿವು ಕೇಂದ್ರದ (ಸಾರ್ವಜನಿಕ ಗ್ರಂಥಾಲಯ) ಮೇಲ್ವಿಚಾರಕಿ ದೀಪಾ ಎಸ್. ಶೆಟ್ಟಿ ಅವರ ಮಾತುಗಳು.

ಕೆಲ ತಿಂಗಳುಗಳ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಸಹಯೋಗದಲ್ಲಿ ನೇಚರ್‌ ಕನ್ಸರ್ವೇಷನ್‌ ಸಂಸ್ಥೆಯ ಅಂಗಸಂಸ್ಥೆಯಾದ ‘ಅರ್ಲಿ ಬರ್ಡ್‌’ ಅಧೀನದಲ್ಲಿ ನಡೆದ ಪಕ್ಷಿ ಶಿಕ್ಷಣ ತರಬೇತಿ ಕಾರ್ಯಕ್ರಮದಲ್ಲಿ ಇವರು ಪಾಲ್ಗೊಂಡಿದ್ದರು.

ರಾಜ್ಯದಾದ್ಯಂತ ಈ ಕಾರ್ಯಕ್ರಮದ ಅಡಿಯಲ್ಲಿ ತರಬೇತಿ ಪಡೆದ ಅರಿವು ಕೇಂದ್ರದ ಮೇಲ್ವಿಚಾರಕರದು ಇಂತಹದ್ದೇ ಅನಿಸಿಕೆ. ಇವರೆಲ್ಲರೂ ಉತ್ಸಾಹದಿಂದಲೇ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡು ಬರುವ ಪಕ್ಷಿಗಳನ್ನು ವೀಕ್ಷಣೆ ಮಾಡುವುದರ ಜೊತೆಗೆ, ಮಕ್ಕಳಲ್ಲೂ ಇಂಥ ಹವ್ಯಾಸ ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದಾರೆ.

500 ಗ್ರಾಮ ಪಂಚಾಯಿತಿಗಳ ಅರಿವು ಕೇಂದ್ರಗಳ (ಗ್ರಂಥಾಲಯ) ಮೇಲ್ವಿಚಾರಕರಿಗೆ ಪಕ್ಷಿಗಳ ಕುರಿತು ತರಬೇತಿ ನೀಡಲಾಗಿದೆ. ಮಕ್ಕಳಿಗೆ ಪಕ್ಷಿಗಳನ್ನು ಪರಿಚಯಿಸುವ ಮೂಲಕ ಪರಿಸರದ ಅರಿವನ್ನು ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಪಕ್ಷಿಗಳ ವೀಕ್ಷಣೆ, ಅವುಗಳ ಗುರುತಿಸುವಿಕೆ, ಸರಳವಾಗಿ ಹಕ್ಕಿಗಳ ಚಿತ್ರ ಬಿಡಿಸುವುದು, ಅವುಗಳ ಬಗೆಗಿನ ಆಟಗಳು ಸೇರಿದಂತೆ ಹಲವು ಚಟುವಟಿಕೆಗಳ ಕುರಿತು ಅರಿವು ಮೇಲ್ವಿಚಾರಕರಿಗೆ ತರಬೇತಿ ನೀಡಲಾಗಿದೆ. ಅವರು ತಮ್ಮ ಗ್ರಂಥಾಲಯಕ್ಕೆ ಬರುವ ಅಥವಾ ಸಮೀಪದ ಶಾಲೆಗಳ ಮಕ್ಕಳಿಂದ ಈ ಚಟುವಟಿಕೆಗಳನ್ನು ಮಾಡಿಸುತ್ತಿದ್ದಾರೆ.

ಈ ಯೋಜನೆ ಅಡಿಯಲ್ಲಿ ತರಬೇತಿ ಪಡೆದ ಹೆಚ್ಚಿನ ಮೇಲ್ವಿಚಾರಕರು, ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಬಾನಾಡಿಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ 16 ಮಂದಿ ಅರಿವು ಕೇಂದ್ರದ ಮೇಲ್ವಿಚಾರಕರು ತರಬೇತಿ ಪಡೆದು ಪಕ್ಷಿಗಳ ಬಗ್ಗೆ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

‘ಪಕ್ಷಿ ಸಂಕುಲವನ್ನು ಉಳಿಸುವ ಕುರಿತು ನಾವು ಮಕ್ಕಳಿಗೆ ತಿಳಿಸುತ್ತೇವೆ. ಬಿಡುವಿನ ವೇಳೆಯಲ್ಲಿ ಅವರನ್ನು ಪಕ್ಷಿ ವೀಕ್ಷಣೆಗೂ ಕರೆದೊಯ್ಯುತ್ತೇವೆ. ನಮ್ಮ ಸುತ್ತಮತ್ತಲಿನ ಪಕ್ಷಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಮಕ್ಕಳು ಇಂತಹ ಚಟುವಟಿಕೆಗಳಲ್ಲಿ ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಾರೆ’ ಎಂದು ಉಡುಪಿ ಜಿಲ್ಲೆಯ ಹಾವಂಜೆ ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಮೇಲ್ವಿಚಾರಕಿ ಸುಮತಿ ಹೇಳುತ್ತಾರೆ. 

‘ಪ್ರಕೃತಿಯ ಪೆಟ್ಟಿಗೆ’ ತೆರೆದಾಗ...

ಪಕ್ಷಿಗಳ ಮೂಲಕ ಪ್ರಕೃತಿಯ ಸೋಜಿಗವನ್ನು ಮಕ್ಕಳಿಗೆ ಪರಿಚಯಿಸುವ ಪಕ್ಷಿ ಶಿಕ್ಷಣ ಕಾರ್ಯಕ್ರಮಕ್ಕಾಗಿ ರೂಪಿಸಿರುವ ‘ಪ್ರಕೃತಿ ಪೆಟ್ಟಿಗೆ’ (ಕಿಟ್‌) ಹಕ್ಕಿಗಳಿಗೆ ಸಂಬಂಧಿಸಿದ ಪುಸ್ತಕ, ಪೋಸ್ಟರ್‌ಗಳನ್ನು ಹಾಗೂ ಕಲಾ ಚಟುವಟಿಕೆ, ಆಟಗಳ ಮೂಲಕ ಬಾನಾಡಿಗಳ ಬದುಕನ್ನು ತಿಳಿಯಲು ಸಹಕಾರಿಯಾಗುವ ಪರಿಕರಗಳನ್ನು ಹೊಂದಿದೆ.

ಹಕ್ಕಿಗಳ ಚಿತ್ರವಿರುವ ಆಟದ ಕಾರ್ಡ್, ಪಝಲ್‌ಗಳು, ಪಕ್ಷಿಗಳ ಚಿತ್ರಕ್ಕೆ ಬಣ್ಣ ತುಂಬುವ ಚಟುವಟಿಕೆಗೆ ಪೂರಕವಾದ ಪುಸ್ತಕಗಳು, ಪ್ರಕೃತಿಯ ಪತ್ರಿಕೆ, ಹಕ್ಕಿಗಳ ದಾಖಲೀಕರಣ ನಡೆಸಲು ಉಪಯುಕ್ತ ಮಾಹಿತಿ ಒದಗಿಸುವ ಹೊತ್ತಿಗೆಗಳೂ ಈ ಕಿಟ್‌ನಲ್ಲಿದ್ದು, ಮಕ್ಕಳನ್ನು ಆಕರ್ಷಿಸುತ್ತಿವೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತಲ್ಲೂರು ಅರಿವು ಕೇಂದ್ರದಲ್ಲಿ ಮಕ್ಕಳು ಹಕ್ಕಿಗಳ ಪಝಲ್ ಜೋಡಿಸಿದರು
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತಲ್ಲೂರು ಅರಿವು ಕೇಂದ್ರದಲ್ಲಿ ಮಕ್ಕಳು ಹಕ್ಕಿಗಳ ಪಝಲ್ ಜೋಡಿಸಿದರು

‘ನನಗೆ ಪಕ್ಷಿ ವೀಕ್ಷಣೆ, ಅವುಗಳ ಫೋಟೊ ತೆಗೆಯುವ ಹವ್ಯಾಸ ಇದೆ. ಇದೇ ಕಾರಣದಿಂದ ‘ಅರ್ಲಿ ಬರ್ಡ್‌’ ಸಂಸ್ಥೆಯ ಸಂಪರ್ಕಕ್ಕೆ ಬಂದೆ. ಅವರು ನನ್ನನ್ನು ಈ ಯೋಜನೆಯ ಸಂಪನ್ಮೂಲ ವ್ಯಕ್ತಿಯಾಗಿಸಿ, ತರಬೇತಿ ನೀಡಿದರು. ನಾವು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ತರಬೇತಿ ನೀಡಿದೆವು’ ಎಂದು ಶಿಕ್ಷಕ, ಪಕ್ಷಿ ಪ್ರೇಮಿ ಅರವಿಂದ ಕುಡ್ಲ ಅವರು, ತರಬೇತುದಾರರಾಗಿ ಕಾರ್ಯನಿರ್ವಹಿಸಿರುವ ಅನುಭವ ಹಂಚಿಕೊಂಡರು. ತರಬೇತಿಯಲ್ಲಿ ಪಾಲ್ಗೊಂಡಿರುವ ಮೇಲ್ವಿಚಾರಕರೆಲ್ಲರೂ ತಮ್ಮ ಊರಿನ ಮಕ್ಕಳಲ್ಲಿ ಪಕ್ಷಿ ವೀಕ್ಷಣೆಯ ಹವ್ಯಾಸ ಬೆಳೆಸುವ ಮಹತ್ತರವಾದ ಕಾರ್ಯ ನಡೆಸುತ್ತಿದ್ದಾರೆ. ಪಕ್ಷಿಗಳ ವಿಷಯಗಳನ್ನಿಟ್ಟುಕೊಂಡು ಹಲವಾರು ಚಟುವಟಿಕೆಗಳನ್ನೂ ಅರಿವು ಕೇಂದ್ರಗಳಲ್ಲಿ ಮತ್ತು ಸಮೀಪದ ಶಾಲೆಗಳಲ್ಲಿ ನಡೆಸುತ್ತಿದ್ದಾರೆ. ಮಕ್ಕಳಲ್ಲಿ ಪರಿಸರ ಪ್ರೇಮ ಮೂಡಿಸುವ ಪ್ರಯತ್ನ ಈ ಮೂಲಕ ಸದ್ದಿಲ್ಲದೆ ನಡೆಯುತ್ತಿದೆ.

‘ಹಕ್ಕಿಗಳ ಮೂಲಕ ಪರಿಸರ ಜಾಗೃತಿ’

‘ಪರಿಸರ ಶಿಕ್ಷಣವನ್ನು ಗ್ರಂಥಾಲಯಗಳಲ್ಲಿ ಪರಿಚಯಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಜಾರಿಗೊಳಿಸಿರುವ ಯೋಜನೆ ಇದಾಗಿದೆ. ‘ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ನಾವು ಪಕ್ಷಿ ಶಿಕ್ಷಣದ ತರಬೇತಿಯನ್ನು ನೀಡಿದ್ದೇವೆ. ಕಿಟ್‌ ಅನ್ನು ಬಳಸಿ ಮಕ್ಕಳಿಂದ ಹೇಗೆ ಚಟುವಟಿಕೆಗಳನ್ನು ಮಾಡಿಸಬಹುದು ಎಂಬುದಾಗಿ ಕಲಿಸಿಕೊಟ್ಟಿದ್ದೇವೆ. ಅದು ಸದುಪಯೋಗವಾಗುತ್ತಿರುವುದು ಖುಷಿ ತಂದಿದೆ’ ಎಂಬುದು ‘ಅರ್ಲಿ ಬರ್ಡ್‌’ನ ಕಾರ್ಯಕ್ರಮ ಮ್ಯಾನೇಜರ್‌ ಅಭಿಷೇಕ ಕೃಷ್ಣಗೋಪಾಲ್‌ ಅವರ ಸಾರ್ಥಕ ನುಡಿ.

ಉಡುಪಿ ತಾಲ್ಲೂಕು ಪಂಚಾಯಿತಿಯಲ್ಲಿ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ನಡೆದ ತರಬೇತಿ
ಉಡುಪಿ ತಾಲ್ಲೂಕು ಪಂಚಾಯಿತಿಯಲ್ಲಿ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ನಡೆದ ತರಬೇತಿ

ಜಿಲ್ಲಾಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಪಕ್ಷಿ ಶಿಕ್ಷಣದ ಕಿಟ್‌ ಬಳಸುವ ಬಗ್ಗೆ ಆರಂಭದಲ್ಲಿ ತರಬೇತಿ ನೀಡಲಾಗಿದೆ. ಅವರು ಆಯಾ ಜಿಲ್ಲೆಯಿಂದ ಪಂಚಾಯತ್‌ ರಾಜ್‌ ಇಲಾಖೆಯವರು ಆಯ್ಕೆ ಮಾಡಿರುವ ಮೇಲ್ವಿಚಾರಕರಿಗೆ ಅದನ್ನು ಕಲಿಸಿಕೊಟ್ಟಿದ್ದಾರೆ. ಮೇಲ್ವಿಚಾರಕರು ತಾವು ಪಡೆದ ಅರಿವನ್ನು ಮಕ್ಕಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ರಾಜ್ಯದ 500 ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ಮಾರ್ಚ್‌ ತಿಂಗಳಲ್ಲೇ ತರಬೇತಿ ಪೂರ್ಣಗೊಳಿಸಲಾಗಿದೆ. ತರಬೇತಿ ಪಡೆದವರು ಮೇ ತಿಂಗಳಲ್ಲೇ ಚಟುವಟಿಕೆಗಳನ್ನು ಆರಂಭಿಸಿದ್ದರು. ಪೈಲಟ್‌ ಯೋಜನೆಯಂತೆ ಇದನ್ನು ಮಾಡಲಾಗಿದೆ. ಇದು ಯಶಸ್ವಿಯಾಗಿರುವ ಕಾರಣ ಇನ್ನೂ ಹಲವು ಪಂಚಾಯಿತಿಗಳ ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ತರಬೇತಿ ನೀಡುವ ಗುರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಹೊಂದಿದ್ದಾರೆ. 

ಉಡುಪಿಯ ಹಾವಂಜೆಯ ಅರಿವು ಕೇಂದ್ರದಲ್ಲಿ ಮಕ್ಕಳು ಆಟದಲ್ಲಿ ಮಗ್ನರಾಗಿರುವುದು
ಉಡುಪಿಯ ಹಾವಂಜೆಯ ಅರಿವು ಕೇಂದ್ರದಲ್ಲಿ ಮಕ್ಕಳು ಆಟದಲ್ಲಿ ಮಗ್ನರಾಗಿರುವುದು
ಮಕ್ಕಳು ಬಿಡುವಿನ ವೇಳೆಯಲ್ಲಿ ಅರಿವು ಕೇಂದ್ರಕ್ಕೆ ಬರುತ್ತಾರೆ. ಹಕ್ಕಿಗಳ ಕಾರ್ಡ್‌ಗಳ ಆಟವಾಡುತ್ತಾರೆ. ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಬುದ್ಧಿ ಚುರುಕಾಗುತ್ತದೆ. ನಮ್ಮಂತೆ ಹಕ್ಕಿಗಳಿಗೂ ಬದುಕುವ ಹಕ್ಕಿದೆ ಎಂಬಂತಹ ಸಂದೇಶವನ್ನು ಪ್ರತಿ ಮಗುವಿಗೂ ಈ ಮೂಲಕ ನೀಡುತ್ತೇನೆ.
ಪುಷ್ಪಾವತಿ ಶೆಟ್ಟಿ, ಅರಿವು ಕೇಂದ್ರದ ಮೇಲ್ವಿಚಾರಕಿ ಹೆಬ್ರಿ ಉಡುಪಿ ಜಿಲ್ಲೆ
ಹಕ್ಕಿಗಳೆಂದರೆ ನನಗೆ ಪ್ರಾಣ. ಶಾಲೆಗೆ ರಜೆ ಇರುವಾಗ ಕೆಲವೊಮ್ಮೆ ಸಂಜೆ ಹೊತ್ತು ಪಂಚಾಯಿತಿ ಗ್ರಂಥಾಲಯಕ್ಕೆ ಬರುತ್ತೇನೆ. ಇಲ್ಲಿ ಬಗೆ ಬಗೆಯ ಹಕ್ಕಿಗಳ ಚಿತ್ರಗಳ ಕಾರ್ಡ್‌ಗಳಿವೆ. ಜೊತೆಗೆ ಪಝಲ್‌ಗಳು ಕೂಡ ಇವೆ. ಇವುಗಳಲ್ಲಿ ಆಟವಾಡಲು ತುಂಬಾ ಖುಷಿಯಾಗುತ್ತಿದೆ
ಸಹನಾ ಹೆಬ್ರಿ, ಸರ್ಕಾರಿ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ

‘ಹಕ್ಕಿಗಳ ಮೂಲಕ ಪರಿಸರ ಜಾಗೃತಿ’

‘ಪರಿಸರ ಶಿಕ್ಷಣವನ್ನು ಗ್ರಂಥಾಲಯಗಳಲ್ಲಿ ಪರಿಚಯಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಜಾರಿಗೊಳಿಸಿರುವ ಯೋಜನೆ ಇದಾಗಿದೆ. ‘ಅರಿವು ಕೇಂದ್ರಗಳ ಮೇಲ್ವಿಚಾರಕರಿಗೆ ನಾವು ಪಕ್ಷಿ ಶಿಕ್ಷಣದ ತರಬೇತಿಯನ್ನು ನೀಡಿದ್ದೇವೆ. ಕಿಟ್‌ ಅನ್ನು ಬಳಸಿ ಮಕ್ಕಳಿಂದ ಹೇಗೆ ಚಟುವಟಿಕೆಗಳನ್ನು ಮಾಡಿಸಬಹುದು ಎಂಬುದಾಗಿ ಕಲಿಸಿಕೊಟ್ಟಿದ್ದೇವೆ. ಅದು ಸದುಪಯೋಗವಾಗುತ್ತಿರುವುದು ಖುಷಿ ತಂದಿದೆ’ ಎಂಬುದು ‘ಅರ್ಲಿ ಬರ್ಡ್‌’ನ ಕಾರ್ಯಕ್ರಮ ಮ್ಯಾನೇಜರ್‌ ಅಭಿಷೇಕ ಕೃಷ್ಣಗೋಪಾಲ್‌ ಅವರ ಸಾರ್ಥಕ ನುಡಿ.

ಜಿಲ್ಲಾಮಟ್ಟದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಪಕ್ಷಿ ಶಿಕ್ಷಣದ ಕಿಟ್‌ ಬಳಸುವ ಬಗ್ಗೆ ಆರಂಭದಲ್ಲಿ ತರಬೇತಿ ನೀಡಲಾಗಿದೆ. ಅವರು ಆಯಾ ಜಿಲ್ಲೆಯಿಂದ ಪಂಚಾಯತ್‌ ರಾಜ್‌ ಇಲಾಖೆಯವರು ಆಯ್ಕೆ ಮಾಡಿರುವ ಮೇಲ್ವಿಚಾರಕರಿಗೆ ಅದನ್ನು ಕಲಿಸಿಕೊಟ್ಟಿದ್ದಾರೆ. ಮೇಲ್ವಿಚಾರಕರು ತಾವು ಪಡೆದ ಅರಿವನ್ನು ಮಕ್ಕಳ ಜೊತೆ ಹಂಚಿಕೊಳ್ಳುತ್ತಿದ್ದಾರೆ.

ರಾಜ್ಯದ 500 ಗ್ರಾಮ ಪಂಚಾಯಿತಿ ಅರಿವು ಕೇಂದ್ರಗಳ ಮೇಲ್ವಿಚಾರರಿಗೆ ಮಾರ್ಚ್‌ ತಿಂಗಳಲ್ಲೇ ತರಬೇತಿ ಪೂರ್ಣಗೊಳಿಸಲಾಗಿದೆ. ತರಬೇತಿ ಪಡೆದವರು ಮೇ ತಿಂಗಳಲ್ಲೇ ಚಟುವಟಿಕೆಗಳನ್ನು ಆರಂಭಿಸಿದ್ದರು. ಪೈಲಟ್‌ ಯೋಜನೆಯಂತೆ ಇದನ್ನು ಮಾಡಲಾಗಿದೆ. ಇದು ಯಶಸ್ವಿಯಾಗಿರುವ ಕಾರಣ ಇನ್ನೂ ಹಲವು ಪಂಚಾಯಿತಿಗಳ ಅರಿವು ಕೇಂದ್ರಗಳ ಮೇಲ್ವಿಚಾರಿಗೆ ತರಬೇತಿ ನೀಡುವ ಗುರಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT