ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿಯ ಹೆಮ್ಮೆಯನ್ನು ಕನ್ನಡಕ್ಕೆ ತಂದಿರಿ. ಕೊಡಗಿನ ಗೌರಮ್ಮ, ಶಿವರಾಮ ಕಾರಂತರ ಕತೆಗಳನ್ನು ಅನುವಾದಿಸಿದ್ದೀರಿ. ಇಂಗ್ಲಿಷ್ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ನೀವು ಕನ್ನಡ ಕೃತಿಗಳ ಅನುವಾದ ಪ್ರಪಂಚಕ್ಕೆ ಬಂದಿರಿ. ಇದಕ್ಕೆ ಇಂಬು ಕೊಡುವಂಥ ಸಂದರ್ಭವನ್ನು ವಿವರಿಸುತ್ತೀರಾ?
ದೀಪಾ ಭಾಸ್ತಿ: ನಾನು ಹುಟ್ಟಿ ಬೆಳೆದ ಊರು ಮಡಿಕೇರಿ. ನಾನು ಪತ್ರಿಕೋದ್ಯಮದ ಮುಖ್ಯವಾಹಿನಿಯನ್ನು ಬಿಟ್ಟು 15 ವರ್ಷಗಳೇ ಕಳೆದವು. ನಾನು ಮತ್ತು ನನ್ನ ಪತಿ ಮಡಿಕೇರಿಗೆ ಮರಳಬೇಕು ಎಂದು ಬಹಳ ವರ್ಷಗಳಿಂದ ಆಲೋಚಿಸುತ್ತಿದ್ದೆವು. ಕೋವಿಡ್ ಸಮಯದಲ್ಲಿ ಊರಿಗೆ ಮರಳಿಬಿಟ್ಟೆವು. ಸಾವಕಾಶದ, ಧಾವಂತವಿಲ್ಲದ ಬದುಕು ನಡೆಸುತ್ತಾ ಸಣ್ಣ ಮಟ್ಟದ ಕೃಷಿಯಲ್ಲಿ ತೊಡಗಿಸಿಕೊಂಡು ಬದುಕಬೇಕು ಎನ್ನುವುದು ನಮ್ಮ ಗುರಿಯಾಗಿತ್ತು. ದೊಡ್ಡ ನಗರಗಳ ಬದುಕು ನಮ್ಮಿಬ್ಬರಿಗೂ ಎಷ್ಟೆಷ್ಟೂ ಇಷ್ಟ ಇರಲಿಲ್ಲ. ನನ್ನ ಫ್ರೀಲ್ಯಾನ್ಸ್ ಕೆಲಸ ಹಾಗೂ ಉಳಿದ ಸಾಹಿತ್ಯ ಅನುವಾದಕ್ಕೆ ಸಂಬಂಧಪಟ್ಟ ಕೆಲಸವನ್ನೂ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದು ನನ್ನ ಆಲೋಚನೆ ಆಗಿತ್ತು. ಆದರೆ, 2020ರ ನಡುವಲ್ಲಿ ನಾವು ಮಡಿಕೇರಿಗೆ
ಹೋದ ಮೇಲೆ ನಡೆದದ್ದು ತದ್ವಿರುದ್ಧವಾದುದೇ. ಅನುವಾದ ಕೆಲಸದಲ್ಲಿ ಇನ್ನೂ ಹೆಚ್ಚು ತೊಡಗಿಸಿಕೊಂಡು ಬಿಡುವಂತೆ ಆಗಿ ಕೆಲಸ ಹೆಚ್ಚಾಯಿತೇ ಹೊರತು ಕಡಿಮೆ ಆಗಲಿಲ್ಲ.
ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಕನ್ನಡ ಬಳಕೆ ಆಗುವುದೇ ಕಡಿಮೆ ಆಗುತ್ತಿದೆ. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವಾಗ ಕೆಲವೊಮ್ಮೆ ತಾಯ್ನುಡಿಯ ಜೊತೆ ನನ್ನ ಸಂಬಂಧ ಬಲವಾಗಿಲ್ಲ ಎನ್ನುವ ಭಾವನೆ ನನ್ನೊಳಗೆ ಬೆಳೆಯುತ್ತಲೇ ಇತ್ತು.
ಹೀಗಿರುವಾಗ 2012ರಲ್ಲಿ, ಬರಹಗಾರರಾದ ಕೊಡಗಿನ ಗೌರಮ್ಮ ಅವರ ಜನ್ಮಶತಮಾನೋತ್ಸವ ಆಚರಿಸಲಾಯಿತು. ಆ ಸಂದರ್ಭದಲ್ಲಿ ‘ಹಿಂದೂ’ ಪತ್ರಿಕೆಯಲ್ಲಿ ಅವರ ಬಗ್ಗೆ ಪ್ರಕಟವಾಗಿದ್ದ ಒಂದು ಲೇಖನ ನನ್ನ ಕಣ್ಣಿಗೆ ಬಿತ್ತು. ಅವರ ಬಗ್ಗೆ ಹೆಚ್ಚು ತಿಳಿಯಬೇಕು ಎಂಬ ಆಸಕ್ತಿ ಹುಟ್ಟಿತು. ಗೌರಮ್ಮನವರ ಕೃತಿಗಳ ಬಗ್ಗೆ ಕನ್ನಡದಲ್ಲೂ ಹೆಚ್ಚು ವಿಚಾರಮಂಥನ ನಡೆದದ್ದು ನನ್ನ ಗಮನಕ್ಕೆ ಬಂದಿರಲಿಲ್ಲ. ಆ ದಿನಗಳಲ್ಲಿ ಕೊಡಗಿನ ಗೌರಮ್ಮನವರ ಕೃತಿ/ಕತೆ ಅನುವಾದ ಮಾಡಬೇಕು ಎಂದು ಬಲವಾಗಿ ಅನ್ನಿಸಿತು. ಆದರೆ, ಅನುವಾದ ಕೆಲಸದ ಬಗ್ಗೆಯಾಗಲೀ, ಅದೊಂದು ಕಲೆ, ಅದನ್ನು ಅಭ್ಯಾಸ ಮಾಡುವುದು, ಕಾರ್ಯಗತಗೊಳಿಸುವುದು ಹೇಗೆ ಎಂದಾಗಲೀ ನನಗೆ ಎಷ್ಟೂ ತಿಳಿದಿರಲಿಲ್ಲ. ಅದೊಂದು ಅಪರಿಚಿತ ಜಗತ್ತಾಗಿತ್ತು. ಆಗಾಗ ಅದರಲ್ಲಿ ತೊಡಗಿಸಿಕೊಳ್ಳುತ್ತಾ, ಮತ್ತೆ ಅದರ ಕಡೆ ಗಮನವನ್ನೇ ಹರಿಸದೆ ಬೇರೇನೋ ಮಾಡುತ್ತಾ ಮರೆತುಬಿಡುತ್ತಾ ಇದ್ದೆ. ಕೊನೆಗೊಮ್ಮೆ ಅನುವಾದ ಕಾರ್ಯ ಮುಗಿದು 2023ರ ಜನವರಿಯಲ್ಲಿ ಕೊಡಗಿನ ಗೌರಮ್ಮನವರ ಕತೆಗಳ ಅನುವಾದದ ಮೊದಲ ಪುಸ್ತಕ ‘ಫೇಟ್ಸ್ ಗೇಮ್ ಆ್ಯಂಡ್ ಅದರ್ ಸ್ಟೋರೀಸ್’ ಯೋಡಾ ಪ್ರೆಸ್‌ನಿಂದ ಪ್ರಕಟವಾಯಿತು. ಅನುವಾದ ಮಾಡುತ್ತಾ ಹೋದ ಹಾಗೆಲ್ಲಾ ನಾನು ಕನ್ನಡಕ್ಕೆ ಹತ್ತಿರವಾಗುತ್ತಾ ಇದ್ದೇನೆ ಅನ್ನುವ ಭಾವನೆ ನನ್ನೊಳಗೆ ದಟ್ಟವಾಗುತ್ತಾ ಹೋಯಿತು. ಯಾಕೆಂದರೆ ನಾನು ಓದಿದ್ದು ಇಂಗ್ಲಿಷ್ ಮಾಧ್ಯಮದಲ್ಲಿ, ಮತ್ತೆ ಕೆಲಸ ಮಾಡಿದ್ದೂ ಇಂಗ್ಲಿಷ್ ಭಾಷೆ ಪ್ರಧಾನವಾಗಿದ್ದ ಕಡೆಗಳಲ್ಲಿ. ಹಾಗಾಗಿ, ಅದು ನನಗೆ ಹೊಸ ಜಗತ್ತಿನ ಪರಿಚಯ ಮಾಡಿಕೊಟ್ಟಿತು. ಅಲ್ಲಿಂದ ನಾನು ಕನ್ನಡವನ್ನು ಹೆಚ್ಚು ಅರ್ಥೈಸಿಕೊಳ್ಳಲು ಗಂಭೀರ ಪ್ರಯತ್ನಗಳನ್ನು ಆರಂಭಿಸಿದೆ.
ಅನುವಾದದ ಮೇಲೆ ಕೆಲಸ ಮಾಡುತ್ತಾ ಹೋದಂತೆ ಕನ್ನಡ ಭಾಷೆಗೆ ಹತ್ತಿರವಾಗುತ್ತಾ ಇರುವ ಭಾವನೆ ಇನ್ನೂ ಬೆಳೆದು ಗಟ್ಟಿಯಾಗುತ್ತಾ ಹೋಯಿತು. ಹೀಗಾಗಿ, ಆ ಕೆಲಸದ ಮೇಲೆ ಆಸಕ್ತಿ ಇನ್ನೂ ಹೆಚ್ಚುತ್ತಲೇ ಹೋಯಿತು. ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡಿದರೂ ಅದು ಕನ್ನಡಕ್ಕೆ ಹತ್ತಿರವಾಗುವ ಮಾರ್ಗವೇ ಅಲ್ಲವೇ? ಹಾಗೆಯೇ ಆಸಕ್ತಿ ಇನ್ನೂ ಬೇರು ಬಿಟ್ಟು ಭದ್ರವಾಯಿತು.
ಬಾನು ಅವರ ಕತೆಗಳು ಅವರ ಪೀಳಿಗೆಯವರಿಗಿಂತ ಭಿನ್ನವಾಗಿರುವ ನಿಮ್ಮ ಒಳಗೆ ಪ್ರತಿಧ್ವನಿಸಿದ್ದು ಹೇಗೆ? ಹೀಗೆ ಪೀಳಿಗೆಗಳ ನಡುವಿನ ಅಂತರವನ್ನು, ಕತೆಗಳ ಧ್ವನಿ ಹಾಗೂ ಧಾಟಿಯನ್ನು ಹೇಗೆ ಜೀರ್ಣಿಸಿಕೊಂಡು ಅನುವಾದದ ಮೂಲಕ ಮರುರೂಪಿಸಿದಿರಿ?
ನನ್ನ ಮಟ್ಟಿಗೆ ಬಾನು ಅವರ ಜೀವನಾನುನುಭವ, ಜೊತೆಗೆ ಅವರ ಸಾಹಿತ್ಯ ಬಹಳ ಭಿನ್ನವಾಗಿ ನಿಲ್ಲುತ್ತವೆ. ನಾವಿಬ್ಬರೂ ಬೇರೆಯೇ ಪೀಳಿಗೆಯವರು ಆಗಿದ್ದರೂ ಅವರು ತಮ್ಮ ಕತೆಗಳ ಮೂಲಕ ಮುಟ್ಟಬಯಸುವ ಎಲ್ಲಾ ವಿಷಯಗಳು, ಕಳಕಳಿಗಳು ನಮ್ಮ ಸಮಯಕ್ಕೂ ಅಬಾಧಿತವಾಗಿಯೇ ಮುಂದುವರಿದಿವೆ ಅಲ್ಲವೇ? ಮಹಿಳೆಯರ ಮೇಲಾಗುವ ದೌರ್ಜನ್ಯ, ಪುರುಷಕೇಂದ್ರಿತ ಹಾಗೂ ಪುರುಷಪ್ರಧಾನ ಸಮಾಜದ ದಬ್ಬಾಳಿಕೆಗಳು, ಜಾತಿ ಧರ್ಮದ ತಿಕ್ಕಾಟಗಳು, ಅದರಡಿ ನಲುಗಿ ಹೋಗುವ ಹೆಣ್ಣು ಮಕ್ಕಳು, ಅವರ ಅಸ್ಮಿತೆ, ಹಾಗೂ ಜೀವನ, ಅವರು ಬದುಕಿ ಬಾಳುವ ಬಗೆ ಹಾಗೂ ಆಯ್ದುಕೊಳ್ಳುವ ಮಾರ್ಗಗಳು, ಇಂದಿಗೂ ಪ್ರಸ್ತುತವಾಗಿವೆ. ಇನ್ನು ಮುಂದೆಯೂ ಹೀಗೇ ಮುಂದುವರಿಯುವ ಲಕ್ಷಣಗಳೇ ಹೆಚ್ಚಾಗಿವೆ. ಹಾಗಾಗಿ, ಬಾನು ಅವರ ಕಥೆಗಳಲ್ಲಿ ನಾನು ಕಂಡ ಜಗತ್ತು ತೀರಾ ಅಪರಿಚಿತವಾಗಿ ಏನೂ ಇರಲಿಲ್ಲ. ಅವರ ಕೃತಿಗಳು ನನಗೆ ಭಾಷೆ ಮತ್ತು ಆ ಸಾಮಾಜಿಕ ನೆಲೆಗಟ್ಟಿಗೆ ಇನ್ನೂ ಹೆಚ್ಚಿನ ಸಾಮೀಪ್ಯ ಒದಗಿಸಿದವು.
ಇಂದಿನ ಸಂದರ್ಭದಲ್ಲಿ ಪ್ರತಿರೋಧದ ಧ್ವನಿ ಸಾಹಿತ್ಯದ ಮೂಲಕ ಬರುತ್ತಾ ಇದೆಯೇ? ಕನ್ನಡದ ಬಂಡಾಯ ಸಾಹಿತ್ಯದ ಮೇರು ದಿನಗಳು ಕಳೆದು ಹೋದ ಮೇಲೆ ಆಗಿನ ಸಂದರ್ಭದಲ್ಲಿ ಸೃಷ್ಟಿಯಾದ ಕಥೆಗಳನ್ನು ಮತ್ತೆ ನೋಡುವಾಗ, ಆ ಚೌಕಟ್ಟಿನಲ್ಲಿ ಹುಟ್ಟಿದ ಕನ್ನಡದ ಧ್ವನಿಯನ್ನು ಹೇಗೆ ಕೇಳಿಸಿಕೊಂಡಿದ್ದೀರಿ?
ಸಾಹಿತ್ಯದಲ್ಲಿ ಬಂಡಾಯ ಅನ್ನುವಂಥ ಅಲೆ ಅಥವಾ ಪ್ರಾಕಾರ ಈಗಿನ ದಿನಗಳಲ್ಲಿ ಹಿಂದಿನಂತೆ ಇದ್ದ ಸ್ವರೂಪದಲ್ಲಿ ಕಾಣಿಸದೇ ಇರಬಹುದು. ಆದರೆ, ಕೊಂಚ ಆಳದಲ್ಲಿ ನೋಡಿದರೆ protest literature ಅಂದರೆ ಪ್ರತಿಭಟನಾ ಸಾಹಿತ್ಯ ಎಂದೆಂದಿಗೂ ಜೀವಂತವಾಗಿ ಪ್ರಸ್ತುತವಾಗಿಯೇ ಇದೆ. ಅದು ಮುಂದೆಯೂ ಇರುತ್ತದೆ. ಇಂದಿನ ಸಂದರ್ಭದಲ್ಲೂ ಸಿಎಎ ಪ್ರತಿಭಟನೆಯಲ್ಲಿ ಯುವಕವಿ ಆಮೀರ್ ಅಜೀಜ್ ಅವರ ಸಾಲುಗಳು (ಸಬ್ ಯಾದ್ ರಖಾ ಜಾಯೆಗಾ) ದಟ್ಟವಾಗಿಯೇ ಅನುರಣಿಸಿದವು. ಅಂತೆಯೇ ಈಗಲೂ ಎಲ್ಲಾ ಭಾಷೆಗಳಲ್ಲಿ ಆಗುತ್ತಿರುವಂತೆಯೇ ಕನ್ನಡದಲ್ಲೂ ಶಕ್ತ ಪ್ರತಿಭಟನೆಯ ಸೊಲ್ಲುಗಳು ಕೇಳಿ ಬರುತ್ತಾ ಇವೆ. ಅತ್ಯಂತ ಆಸಕ್ತಿಕರ ಸಾಹಿತ್ಯ ಹುಟ್ಟುತ್ತಿದೆ. ಇದು ಖಂಡಿತಾ ಮುಂದುವರೆಯುತ್ತದೆ ಮತ್ತು ಗಮನವಿಟ್ಟು ನೋಡಿದರೆ ಇದು ಇಂದಿಗೂ ಕಾಣಿಸುವ ವಾಸ್ತವವೇ. ಹಾಗಾಗಿ, ಇದು ದೂರದ ವಿಷಯ ಅನ್ನಿಸಿಲ್ಲ.
ಕನ್ನಡಕ್ಕೆ ಮನ್ನಣೆ ಸಿಗಬೇಕಾದರೆ ಕನ್ನಡದ ಕೃತಿಗಳು ಇಂಗ್ಲಿಷ್‌ನಲ್ಲಿ ಬರಬೇಕು ಎಂದು ಹಲವರು ನಂಬಿದ್ದಾರೆ. ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡುವ ನೀವು ಇದನ್ನು ಹೇಗೆ ನೋಡುತ್ತೀರಿ?
ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದವಾದರೆ ಮಾತ್ರ ಕನ್ನಡಕ್ಕೆ ಪ್ರಸ್ತುತತೆ ಹಾಗೂ ಮೌಲಿಕತೆ ಬರುತ್ತದೆ ಅಂತ ನನಗೆ ಅನ್ನಿಸೋದಿಲ್ಲ. ಕನ್ನಡವನ್ನೂ ಸೇರಿದಂತೆ ಜಗತ್ತಿನ ಯಾವುದೇ ಭಾಷೆ ತನ್ನದೇ ನೆಲೆಯಲ್ಲಿ ವಿಶಿಷ್ಟ, ಪರಿಪೂರ್ಣ ಹಾಗೂ ಅಂತಃಸತ್ವದಿಂದ ಶ್ರೀಮಂತವಾಗಿದೆ. ಹಾಗಾಗಿ ಇಂಗ್ಲಿಷ್ ಅನುವಾದ ಮಾತ್ರ ಅದನ್ನು ಹೊಳೆಯಿಸಬಲ್ಲದು ಎಂಬ ಮಾತನ್ನು ನಾನು ಖಂಡಿತವಾಗಿಯೂ ಒಪ್ಪಲಾರೆ. ಇಂದಿನ ಸಂದರ್ಭದಲ್ಲಿ ಹಾಗೂ ಬದಲಾಗುತ್ತಿರುವ ಜಗತ್ತಿನಲ್ಲಿ ಇಂಗ್ಲಿಷ್ ಒಂದು ಚಾಲ್ತಿಯಲ್ಲಿರುವ ಭಾಷೆ ಆಗಿರಬಹುದು. ಅಂದರೆ language of currency ಅನ್ನಿಸಬಹುದು.
ಹಾಗೆ ನೋಡಿದರೆ ಭಾಷೆಗಳು ಒಂದಕ್ಕೊಂದು ಸಂವಹಿಸುತ್ತವೆ. ದಕ್ಷಿಣ ಭಾರತದ ವಿಷಯವನ್ನೇ ತೆಗೆದುಕೊಂಡರೆ, ನಮ್ಮಲ್ಲಿ ಬಳಸುವ ಎಷ್ಟೋ ಪದಗಳು, ನುಡಿಗಳು ತಮಿಳು ಅಥವಾ ಮತ್ತೊಂದು ಭಾಷೆಯಲ್ಲೂ ಇವೆ. ಕನ್ನಡ, ಮಲಯಾಳಂ, ತುಳು, ತಮಿಳು, ತೆಲುಗು ಇವೆಲ್ಲಾ ಒಂದರ ಜೊತೆ ಇನ್ನೊಂದು ಮಾತನಾಡುತ್ತವೆ. ಒಂದರಿಂದ ಒಂದು ಕಸುವು ಪಡೆದುಕೊಳ್ಳುತ್ತವೆ, ಒಂದಕ್ಕೆ ಮತ್ತೊಂದು ಕಡ ಕೊಡುತ್ತವೆ, ತಬ್ಬಿಕೊಳ್ಳುತ್ತವೆ. ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಆದ ಕಾರಣ ಕನ್ನಡಕ್ಕೆ ಮಹತ್ವ ಸಿಕ್ಕಿದೆ ಅಂತ ಅನ್ನಿಸಲ್ಲ. ಹಾಗೆ ನೋಡಿದರೆ ಇಂಗ್ಲಿಷ್‌ಗೆ ಇದರಿಂದ ಹೆಚ್ಚು ಶಕ್ತಿ ಬರುತ್ತದೆ. ಇಂಗ್ಲಿಷ್ ಒಂದು ಸ್ಪಾಂಜ್ ಇದ್ದ ಹಾಗೆ. ಮೊದಲಿನಿಂದಲೂ ಬೇರೆ ಭಾಷೆಗಳಿಂದ ಪಡೆದು ಬಲಸಂವರ್ಧನೆ ಮಾಡಿಕೊಳ್ಳುತ್ತಿದೆ, ಬೆಳೆಯುತ್ತಿದೆ, ವಿಸ್ತರಿಸುತ್ತಿದೆ. ಈ ನೆಲೆಯಲ್ಲಿ ಹೇಳುವುದಾದರೆ, ಕನ್ನಡದಿಂದಾಗಿ ಇಂಗ್ಲಿಷ್ ಹೆಚ್ಚು ಪಡೆದುಕೊಂಡಿದೆಯೇ ಹೊರತು ಅಲ್ಲಿಂದ ಇಲ್ಲಿಗೆ ಬಂದದ್ದು ಕಡಿಮೆ ಅನ್ನಬಹುದು.
ಸಾಮಾನ್ಯವಾಗಿ ಬೆಂಗಾಲಿ, ಹಿಂದಿ ಇತ್ಯಾದಿ ದಕ್ಷಿಣೇತರ ಭಾಷೆಗಳಿಗೆ ಜಾಗತಿಕ ಸಾಹಿತ್ಯದಲ್ಲಿ ಸ್ಥಾನ ಆಗಲೇ ಸಿಕ್ಕಿದೆ. ಕನ್ನಡದ ಅನುವಾದ ಇಲ್ಲಿ ನಿಲ್ಲಬಹುದು ಹಾಗೂ ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆ ಇತ್ತೇ? ಪಾಪ್ಯುಲರ್ ಲಿಟರೇಚರ್‌ಗೆ ಹೊರತಾದ ದಾರಿ ಇದು. ಇದನ್ನು ನೀವು ಏಕೆ ಆಯ್ಕೆ ಮಾಡಿದಿರಿ?
ಅನುವಾದದ ಕೆಲಸ ಕೈಗೆತ್ತಿಕೊಳ್ಳುವಾಗ ಇದಕ್ಕೆ ಪ್ರಶಸ್ತಿ ಬರಬೇಕು ಅನ್ನುವ ಆಲೋಚನೆಯಾಗಲೀ ಪ್ಲ್ಯಾನ್ ಆಗಲೀ ನನಗೆ ಇರುವುದೇ ಇಲ್ಲ. ನಮ್ಮಲ್ಲಿ ಇರುವ ಉತ್ತಮ ಬರಹಗಾರರು ಪ್ರಶಸ್ತಿ ಬರಲಿ ಎಂಬ ಆಲೋಚನೆ ಇಟ್ಟುಕೊಂಡು ತಮ್ಮ ಕೆಲಸ ಶುರು ಮಾಡಿಲ್ಲ ಎಂದು ನಾನು ಕಂಡಿದ್ದೇನೆ. ಉತ್ತಮ ಸಾಹಿತ್ಯ ಸಂರಚನೆ ಹಾಗೂ ಸೃಷ್ಟಿಯ ಬೀಜ ಇಂತಹ ಆಲೋಚನೆಯ ಚೌಕಟ್ಟಿನಲ್ಲಿ ಮೊಳೆಯುವುದಿಲ್ಲ. ಇಷ್ಟು ಹೇಳಿದ ಮೇಲೆ, ಈ ಮನ್ನಣೆಯಿಂದಾಗಿ ನನ್ನ ಭಾಷೆಯ ಒಂದಷ್ಟು ಉತ್ತಮ ಕೃತಿಗಳು ಜಗತ್ತಿನ ಕಣ್ಣಿಗೆ ಬೀಳಲಿ ಅಂತ ಆಶಿಸುತ್ತಿದ್ದೇನೆ. ಆ ಕಾರಣಕ್ಕೆ ಈ ಅನುವಾದವನ್ನು ನಾನು ಆಯ್ಕೆ ಮಾಡಿಕೊಂಡೆ.
ಅನುವಾದಕರು ಹಾಗೂ ಮೂಲ ಲೇಖಕರು – ಈ ಸಂಬಂಧ ಸ್ವಲ್ಪ ಸಂಕೀರ್ಣವಾದದ್ದು. ಬಾನು ಅವರು ನಿಮ್ಮ ಅನುವಾದದಲ್ಲಿ ಪಾತ್ರ ವಹಿಸಿದ್ದರೆ ಅಥವಾ ಅನುವಾದಕರಾಗಿ ಇದನ್ನು ನಿಭಾಯಿಸಿದ್ದು ಹೇಗೆ?
ಹಾರ್ಟ್ ಲ್ಯಾಂಪ್ (ಎದೆಯ ಹಣತೆ) ಅನುವಾದ ಬಹಳ ಸ್ವತಂತ್ರವಾಗಿ ನಡೆಯಿತು. ಆಗಾಗ ನನಗೆ ಯಾವುದಾದರೂ ಪದ ಅಥವಾ ಶಬ್ದ ಗುಚ್ಛ ಅರ್ಥವಾಗದೇ ಹೋದರೆ ಬಾನು ಅವರ ಹತ್ತಿರ ಅದರ ಅರ್ಥ ಅಥವಾ ಅದನ್ನ ಯಾವ ಸಂದರ್ಭದಲ್ಲಿ ಮತ್ತು ಏನನ್ನು ಹೇಳುವ ಸಲುವಾಗಿ ಬಳಸಿದ್ದೀರಿ ಎಂದು ಕೇಳುತ್ತಿದ್ದೆ. ಹಾಗೆ ನೋಡಿದರೆ ಅನುವಾದ ಎನ್ನುವುದೇ ಸ್ವತಂತ್ರವಾದ ಮೂರನೇ ಪಠ್ಯವಾಗಿಬಿಡುತ್ತದೆ. ಮೂಲ ಲೇಖಕರು, ಅನುವಾದಕರು ಇಬ್ಬರನ್ನೂ ಮೀರಿ, ಇಬ್ಬರೂ ಸೇರಿ ಮತ್ತಷ್ಟು ಜನರ ಕುಸುರಿ ಆಗಿ ಹೊರಬರುವ ಕೃತಿ ಅದು. ಅದು ಒಂದು ಬಗೆಯಲ್ಲಿ ಸ್ವತಂತ್ರ ಕೃತಿ ಎನ್ನಿಸಿಕೊಳ್ಳುತ್ತದೆ. ಇಬ್ಬರೂ ಹೊಂದಬಹುದಾದರೂ, ಇಬ್ಬರೂ ಅದನ್ನು ಹೊಂದಲಾರರು ಎನ್ನುವ ಹಾಗೂ ಇದನ್ನು ನೋಡಬಹುದು. ಅನುವಾದದ ಪ್ರತೀ ಪದಕ್ಕೆ ಅನುಮತಿ ಕೇಳುವ ಅಗತ್ಯ ಇಲ್ಲ. ಇದು ನನ್ನ ಅಭಿಪ್ರಾಯ ಹಾಗೂ ಕೆಲಸ ಮಾಡುವ ಶೈಲಿ. ನಾವಿಲ್ಲಿ ಚಾಟ್ ಜಿಪಿಟಿಯಂತೆ ಕೆಲಸ ಮಾಡುತ್ತಿಲ್ಲ ಅಲ್ಲವೇ?
ಜಾಗತಿಕ ಸಾಹಿತ್ಯದ ಏಜೆಂಟ್, ಅಂತರರಾಷ್ಟ್ರೀಯ ಪ್ರಕಟಣೆಯ ಲಾಬಿ ಇವೆಲ್ಲಾ ಕನ್ನಡಕ್ಕೆ ಸದ್ಯದಲ್ಲಿ ಹೊರತಾದ ಜಗತ್ತು. ಆದರೆ, ನಿಮಗೆ ಈ ಅಂಶಗಳ ಪರಿಚಯ ಇತ್ತೇ?
ಹೌದು, ಹಲವರಿಗೆ ಈ ಕೆಲವು ಅಂಶಗಳು ಹೊಸತು ಅನಿಸಬಹುದು. ಸಾಹಿತ್ಯಿಕ ಏಜೆಂಟ್ (ಲಿಟರರಿ ಏಜೆಂಟ್) ಇರ್ತಾರೆ. ಅವರು ಬರಹಗಾರರು ಅಥವಾ ಅನುವಾದಕರು ಮತ್ತು ಪ್ರಕಾಶನ ಸಂಸ್ಥೆಗಳ ಜೊತೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಇಲ್ಲಿ ಭಿನ್ನ ಮಟ್ಟದ ವೃತ್ತಿಪರತೆ ಕಾಣಸಿಗುತ್ತದೆ. ನನ್ನ ಪುಸ್ತಕ ಯಾರು ಪ್ರಕಟ ಮಾಡುತ್ತಾರೆ ಎಂದು ತಲೆಬಿಸಿ ಮಾಡಿಕೊಳ್ಳದೆ ಬರಹಗಾರರು ಅಥವಾ ಅನುವಾದಕರು ಸಮಾಧಾನ ಚಿತ್ತದಿಂದ ತಮ್ಮ ಕೆಲಸ ಮಾಡುತ್ತಾ ಹೋಗಬಹುದು. ಇದರಲ್ಲಿ ಅವರ ಪಾತ್ರವೂ ಮುಖ್ಯ. ಇದೆಲ್ಲಾ ವಿಚಾರಗಳ ಪರಿಚಯ ನನಗೆ ಇತ್ತು. ಹಾಗಾಗಿ ಬೇರೆ ವಿಷಯಗಳ ಬಗ್ಗೆ ತೀರಾ ತಲೆ ಕೆಡಿಸಿಕೊಳ್ಳದೇ ಕೆಲಸದ ಕಡೆ ಹೆಚ್ಚು ಆಸ್ಥೆಯಿಂದ ತೊಡಗಿಕೊಂಡೆ.
ಕಲೆ: ಪ್ರಕಾಶ್ ಶೆಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.