ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಿಲು ತೆರೆದಿದೆ ಕಾಗಿನೆಲೆ ಕರೆದಿದೆ

Last Updated 21 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ,ಕೂಗಿದರು ದನಿ ಕೇಳಲಿಲ್ಲವೇ ನರಹರಿಯೆಬಾಗಿಲನು ತೆರೆದು...

ಈ ಸಾಲುಗಳನ್ನು ಕೇಳಿದರೆ, ಇಂದಿಗೂ ರೋಮಾಂಚನ, ಅನುಭಾವ, ಅನುಭವಗಳೇ ಅನನ್ಯ. ಕನಕರ ದಾಸಪದಗಳು ‘ಭಕ್ತ ಕನಕದಾಸ’ ಸಿನಿಮಾ ನೋಡಿದವರಿಗಂತೂ ಜೀವಾಳ.

ನೀವು ಕನಕರ ಜನ್ಮ ಮತ್ತು ಕರ್ಮಭೂಮಿ ಕಾಗಿನೆಲೆ–ಬಾಡಕ್ಕೆ ಬಂದು ನೋಡಬೇಕು. ಅಲ್ಲಿನ ಪ್ರವಾಸಿತಾಣಗಳು ನಿಮಗಾಗಿಯೇ ಬಾಗಿಲು ತೆರೆದು ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತದೆ. ಆ ತಾಣಗಳು ನಮ್ಮನ್ನಷ್ಟೇ ಅಲ್ಲ ವಿಶ್ವದ ಪ್ರವಾಸಿಗಳನ್ನು ಕೈ ಬೀಸಿ ಕರೆಯುತ್ತಿದೆ.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ನಂತರ, ಪ್ರಾಧಿಕಾರದ ಮೂಲಕ ನಿರ್ಮಾಣಗೊಂಡ ‘ಕನಕ ಪರಿಸರಸ್ನೇಹಿ ಉದ್ಯಾನ’ದಂತಹ ತಾಣಗಳು ಪ್ರವಾಸಿಗರ ಮನಸೂರೆಗೊಳ್ಳುತ್ತವೆ.

2007–08ರಲ್ಲಿ ಕರ್ನಾಟಕ ಸರ್ಕಾರ ರಚಿಸಿದ ಪ್ರಾಧಿಕಾರ, ಸುಮಾರು ₹ 100 ಕೋಟಿಯಲ್ಲಿ ಕಾಗಿನೆಲೆಯನ್ನು ಅಧ್ಯಾತ್ಮದ ಜೊತೆಗೆ ಪ್ರವಾಸಿಗರ ನೆಲೆಯಾಗಿಸುತ್ತಿದೆ. ಆಧುನಿಕ ಬೇಡಿಕೆಗೆ ತಕ್ಕಂತೆ, ಕನಕರ ಪದಗಳು, ಕೀರ್ತನೆ, ಕಾವ್ಯ, ಮುಂಡಿಗೆಗಳು, ಕೃತಿಗಳು, ರಚನೆಗಳು, ಜೀವನ ಮತ್ತಿತರ ಆಧಾರದಲ್ಲಿ ರೂಪಿಸುತ್ತಿದೆ.

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯು, ಜಿಲ್ಲಾ ಕೇಂದ್ರದಿಂದ ಸುಮಾರು 12 ಕಿ.ಮೀ. ಅಂತರದಲ್ಲಿದೆ. ಇಲ್ಲಿ 134 ಎಕರೆಯಲ್ಲಿ ಉದ್ಯಾನವನ್ನು ಕನಕರ ಬದುಕು–ಬರಹ ಜೊತೆ ಸಮೀಕರಿಸಿಕೊಂಡು ನಿರ್ಮಿಸಲಾಗಿದೆ. ಇದರ ಪಕ್ಕದಲ್ಲಿ ಕನಕರ ‘ಮೋಹನತರಂಗಿಣಿ’ಯಲ್ಲಿ ಕಂಗೊಳಿಸುವ 238 ಎಕರೆಯ ದೊಡ್ಡಕೆರೆ ಇದೆ. ಇದನ್ನು ‘ಕನಕಕೆರೆ’ ಎನ್ನುತ್ತಾರೆ. ಈ ಕೆರೆಯಲ್ಲಿ ಬೋಟಿಂಗ್ ಸೇರಿದಂತೆ ವಿವಿಧ ‘ಜಲ ವೈಭವ’ಗಳನ್ನು ರೂಪಿಸಲಾಗುತ್ತಿದೆ.

ಉದ್ಯಾನದಲ್ಲಿ ಸುಮಾರು 30 ಎಕರೆ ಹುಲ್ಲುಹಾಸಿದೆ. ಅಲಂಕಾರಿಕ ಗಿಡಗಳು ‘ಪ್ರೇಮ ಕಾವ್ಯ’ದಂತಿವೆ. ಅವುಗಳ ವಿನ್ಯಾಸ, ಎಲೆಗಳು ಮತ್ತು ಹೂವುಗಳೇ ವರ್ಣಮಯ. ಜತೆಗೆ ಔಷಧೀಯ ಸಸ್ಯಗಳ ಉದ್ಯಾನವನ್ನು ಬೆಳೆಸಲಾಗುತ್ತಿದೆ. ಪಕ್ಕದಲ್ಲಿರುವ ಸಂಗೀತ ಕಾರಂಜಿಯ ನರ್ತನಕ್ಕೆ ಎಂಥವರೂ ನಾಚಿ ನೀರಾಗುತ್ತಾರೆ.

ಸಮೀಪದಲ್ಲಿ ಕೃತಕ ಬಂಡೆಗಳ ಮೇಲಿಂದ ನೀರು ಸುರಿಸಿ ಕೃತಕ ಜಲಪಾತ ನಿರ್ಮಿಸಲಾಗಿದೆ. ನಡುವೆ ಸಾಗಲು ಸೇತುವೆಯಿದೆ. ಇಲ್ಲಿ, ರಾಶಿ-ನಕ್ಷತ್ರ-ದೈವಿ ಉದ್ಯಾನವನ ಮತ್ತು ಮಿನಿರಾಕ್ ಒಳ ಉದ್ಯಾನಗಳಿವೆ.

ಚೆನ್ನಕೇಶವ ದೇವಸ್ಥಾನ ಕಾಗಿನೆಲೆ
ಚೆನ್ನಕೇಶವ ದೇವಸ್ಥಾನ ಕಾಗಿನೆಲೆ

ಚಿಟ್ಟೆ ಉದ್ಯಾನ ರೂಪಿಸಲಾಗಿದ್ದು, ಇಲ್ಲಿಗೆ ಬರುವ ಸುಮಾರು 55 ಬಗೆಯ ಚಿಟ್ಟೆಗಳನ್ನು ಪ್ರಾಧಿಕಾರ ಗುರುತಿಸಿದೆ. ಜತೆಗೆ ನೂರಾರು ಸಸ್ಯ ಸಂಕುಲ, ಪಕ್ಷಿಗಳ ಹೆಸರನ್ನೂ ದಾಖಲಿಸಿದೆ ಎನ್ನುತ್ತಾರೆ ಪ್ರಾಧಿಕಾರದ ಆಯುಕ್ತ ಮಲ್ಲೇಶಪ್ಪ ಹೊರಪೇಟೆ.

ಆವರಣದ ಇನ್ನೊಂದು ಬದಿಯಲ್ಲಿ ಪ್ರಕೃತಿಚಿಕಿತ್ಸಾ ಕೇಂದ್ರ, ಪಾರಂಪರಿಕ ಮತ್ತು ಕುಶಲಕರ್ಮಿ ಗ್ರಾಮ ಹಾಗೂ ಕಲಾಕೃತಿಗಳ ಮೊಗಸಾಲೆ ಮತ್ತು ವಸ್ತುಸಂಗ್ರಹಾಲಯದ ಸ್ಥಾಪನೆಯ ಕಾರ್ಯವು ಪ್ರಗತಿಯಲ್ಲಿದೆ.

ಕನಕರ ವರ್ಣರಂಜಿತ ಜೀವನದ ನಾನಾ ಸಂಗತಿಗಳನ್ನು ಪ್ರತಿಬಿಂಬಿಸುವ 46 ಶಿಲ್ಪಕಲಾಮೂರ್ತಿಗಳನ್ನು ನೋಡಬಹದು.

ಇತ್ತ ಎತ್ತರವಾದ ಆಧಾರಪೀಠದ ಮೇಲೆ ಕನಕ ವರ್ಣದ ಕನಕದಾಸರ ಮೂರ್ತಿ ಇದೆ. ಕೈಯಲ್ಲಿ ತಂಬೂರಿ ಮತ್ತು ತಾಳಗಳು, ಭುಜದ ಮೇಲೆ ಕಂಬಳಿ ಹಾಗೂ ಜೋಲುವ ಜೋಳಿಗೆಯಿದೆ. ಸಮೀಪದಲ್ಲೇ ಮಕ್ಕಳಿಗಾಗಿಯೇ ಮನರಂಜನಾ ಪಾರ್ಕ್‌ ಇದೆ. ಇಳಿಜಾರು ಗುಪ್ಪೆ, ತೂಗುಯ್ಯಾಲೆಗಳಲ್ಲಿ ಮಕ್ಕಳು ಆನಂದಿಸಬಹುದು. ಅಲ್ಲಲ್ಲಿ ಬಳ್ಳಿ ಹಬ್ಬಿಸಿ ನಿರ್ಮಿಸಿದ ವಲ್ಲಿಪಂಥವಿದೆ. ಬಳ್ಳಿಗಳ ಸುರಂಗವಿದೆ. ತರಹೇವಾರಿ ಹೂವು, ಸಸ್ಯ ಸಂಪತ್ತು ಮುದ ನೀಡುತ್ತವೆ. ಆಹಾರಕ್ಕಾಗಿ ಫುಡ್‌ ಕೋರ್ಟ್‌, ವಿಶ್ರಾಂತಿ ಗೃಹ, ದಣಿವಾರಿಸಲು ಸಣ್ಣ ಸಣ್ಣ ಮಂಟಪ, ಕುಟೀರಗಳಿವೆ.

ಕಾಗಿನೆಲೆಯಲ್ಲಿರುವ ಅರಮನೆಯ ವಿಹಂಗಮ ನೋಟ
ಕಾಗಿನೆಲೆಯಲ್ಲಿರುವ ಅರಮನೆಯ ವಿಹಂಗಮ ನೋಟ

ಉದ್ಯಾನದಲ್ಲಿ ಸಂಚರಿಸುವಾಗ, ಕನಕರು ಮಾತ್ರವಲ್ಲ, ಕುವೆಂಪು ಅವರ ‘ಮಲೆನಾಡ ಬನಗಳಲಿ...’ ಬೇಂದ್ರೆಯವರ ‘ಪಾತರಗಿತ್ತಿ ಪಕ್ಕಾ...’ ಕಂಬಾರರು ಈಚೆಗೆ ಧಾರವಾಹಿಗಾಗಿ ಬರೆದ ‘..ವಲಸಿಗ ಹಕ್ಕಿಗೂ ಐತೇ ಇಲ್ಲಿ ಜಾಗಾ...’, ಚೊಕ್ಕಾಡಿಯವರ ‘ಮುನಿಸು ತರವೇ...’, ಕೆ.ಎಸ್. ನರಸಿಂಹ ಸ್ವಾಮಿಯವರ ಪ್ರೇಮಕವಿತೆಗಳು, ಬಿ. ಆರ್‌. ಲಕ್ಷಣರಾಯರ ‘ಸುಬ್ಬಾ ಭಟ್ಟರ ಮಗಳೇ...’ ಸೇರಿದಂತೆ ನೂರಾರು ಕಾವ್ಯದ ಸಾಲುಗಳನ್ನು ನೀವು ಗುನುಗುನಿಸದೇ ಇರಲಾರಿರಿ.

ಉದ್ಯಾನ ಮಾತ್ರವಲ್ಲ 3 ಸಾವಿರ ಆಸೀನಗಳ ‘ಕಲಾಭವನ’ವಿದೆ. ಪಕ್ಕದಲ್ಲೇ ಕನಕ ಯಾತ್ರಿ ನಿವಾಸವಿದ್ದು, ಉಪಹಾರ– ಊಟಕ್ಕೆ ಕ್ಯಾಂಟೀನು ಕೂಡಾ ಇದೆ.

* ಕನಕರ ಸಮಾಧಿ: ಕನಕರು (ಕ್ರಿ.ಶ. 1495ರಿಂದ 1563) ಕಾಗಿನೆಲೆಯಲ್ಲಿ ತಮ್ಮ ದೇಹತ್ಯಾಗ ಮಾಡಿದರು ಎಂಬ ಉಲ್ಲೇಖ ಇತಿಹಾಸದಲ್ಲಿದೆ. ಅವರ ದೇಹವನ್ನು ‘ಕನಕಕೆರೆ’ಯ ಪಕ್ಕದಲ್ಲಿ ಮಣ್ಣುಮಾಡಿದ ಜಾಗದ ಮೇಲೆ ವೃಂದಾವನವನ್ನು ಕಟ್ಟಿದ್ದರು. ಪ್ರಾಧಿಕಾರವು ಇಲ್ಲಿ ದೊರೆತ ಅಸ್ಥಿಪಂಜರವನ್ನೊಳಗೊಂಡ ಗ್ರಾನೈಟ್ ಶಿಲೆಯಲ್ಲಿ ವಿಜಯನಗರ ಶೈಲಿ ಮಾದರಿಯಲ್ಲಿ ಸಮಾಧಿ ನಿರ್ಮಿಸಿದೆ.

* ಕಾಗಿನೆಲೆಯಾದ ಕಥೆ: ಇಲ್ಲಿ ಶ್ರೀಲಕ್ಷ್ಮಿ ಮತ್ತು ಶ್ರೀನರಸಿಂಹನ ದೇವಸ್ಥಾನವಿದ್ದು, ‘ಕಾಗಿನಲೆ’ ಹೆಸರಿನ ಜೊತೆ ಹಾಸುಹೊಕ್ಕಿದೆ.
ಕಾಗಿನೆಲೆಯನ್ನು ‘ಕಾಗಿನೆಲ್ಲಿ’ ಎಂದೂ ಕರೆಯುತ್ತಾರೆ. ಕಾಗಿ ಎಂದರೆ ಕಾಗೆ; ನೆಲ್ಲಿ ಎಂದರೆ ನೆಲ್ಲಿಯ ಕಾಯಿ.
‘ಈ ದೇಗುಲದ ಜಾಗವು ದಿಬ್ಬವಾಗಿತ್ತು. ಅಲ್ಲಿ ಕಾಗೆಯೊಂದು ನೆಲ್ಲಿಕಾಯಿಯನ್ನು ಉದುರಿಸಿಹೋಯಿತು. ಕಾಯಿ ಹುಟ್ಟಿ ಮರವಾಯಿತು. ಮುಂದೆ ಅಲ್ಲಿಗೆ ಕುರಿ ಮೇಯಿಸುತ್ತಾ ಬಂದ ಕುರಿಗಾಹಿ ಕೊಂಡಪ್ಪ ವೆಂಕಟಪ್ಪ ಮರದ ಕೆಳಗೆ ನೆರಳಿನಲ್ಲಿ ಕುಳಿತುಕೊಳ್ಳಲು ಹೋದರು. ಅವರಿಗೆ ವಿಚಿತ್ರ ಅನುಭವ ಆಯಿತು. ಹೀಗಾಗಿ, ಅಲ್ಲಿ ಅಗೆದಾಗ, ನರಸಿಂಹದೇವರ ಶಿಲಾಮೂರ್ತಿ ಸಿಕ್ಕಿತು. ಅದನ್ನು ಸ್ಥಳದಲ್ಲೇ ಪ್ರತಿಷ್ಠಾಪಿಸಿದರು. ಮುಂದೆ ಅವರ ಕುಟುಂಬದವರು ಗುಡಿ ನಿರ್ಮಿಸಿ, ಶ್ರೀಲಕ್ಷ್ಮಿಯ ವಿಗ್ರಹವನ್ನೂ ಪ್ರತಿಷ್ಠಾಪಿಸಿದರು, ಹೀಗೆ ‘ಕಾಗಿನೆಲ್ಲಿ’ ಎಂಬ ಹೆಸರು ಬಂದು, ‘ಕಾಗಿನೆಲೆ’ಯಾಯಿತು ಎಂಬ ಪ್ರತೀತಿ ಇದೆ.

ಕನಕರ ಪೂರ್ವಿಕರು ಕಾಗಿನೆಲೆ ಸಮೀಪದ ಬಾಡದಲ್ಲಿ ಢಣಾಯಕರಾಗಿದ್ದರು. ಆದರೆ, ಕನಕರು ದಾಸರಾದಾಗ ಬಾಡದಲ್ಲಿದ್ದ ಕುಟುಂಬದ ಆದಿಕೇಶವನ ಮೂರ್ತಿಯನ್ನು ಕಾಗಿನೆಲೆಗೆ ತಂದು ಗುಡಿ ಸ್ಥಾಪಿಸಿದರು. ಈ ಮಾದರಿಯನ್ನು ಪ್ರಾಧಿಕಾರವು ಇಲ್ಲಿ ನಿರ್ಮಿಸಿದೆ. ಕನಕರ ಪ್ರತಿಮೆ, ಶಂಖ ಮರದ ಭಿಕ್ಷಾ ತಟ್ಟೆಯನ್ನು ರಚಿಸಿದೆ.

ಆದಿಕೇಶವನ ದೇವಸ್ಥಾನವು ಇಲ್ಲಿದೆ. ಈ ಮೂರ್ತಿಯ ಮೂಲವು ಕನಕರ ಹುಟ್ಟೂರಾದ ಬಾಡದಲ್ಲಿತ್ತು. 2009ರಲ್ಲಿ ಪ್ರಾಧಿಕಾರ ಈ ದೇಗುಲಗಳ ಅಭಿವೃದ್ಧಿ ಮಾಡಿದ್ದು, ವಿಜಯ ನಗರ ಶೈಲಿಯಲ್ಲಿದೆ. ಮಗ್ಗುಲಲ್ಲೇ ಕಾಂತೇಶ, ಭ್ರಾಂತೇಶ ಮತ್ತು ಶಾಂತೇಶ ನಾಮಾವಳಿಯ ಆಂಜನೇಯ ಮೂರ್ತಿಗಳಿವೆ.

ಕಾಗಿನೆಲೆಯ ಔಷಧೀಯ ವನದ ಸುಂದರ ನೋಟ
ಕಾಗಿನೆಲೆಯ ಔಷಧೀಯ ವನದ ಸುಂದರ ನೋಟ

* ಬಾಡ ವೈಭವ: ಕನಕರ ಹುಟ್ಟೂರು ಬಾಡ. ಬಾಡ ಗ್ರಾಮ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನಲ್ಲಿದ್ದು, ಜಿಲ್ಲಾ ಕೇಂದ್ರ
ದಿಂದ 25 ಕಿ.ಮೀ ಅಂತರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ–4ರಲ್ಲಿನ ಐತಿಹಾಸಿಕ ಬಂಕಾಪುರಪಟ್ಟಣ (ಕೋಟೆ ಮತ್ತು ನವಿಲುಧಾಮ)ದಿಂದ ಕೇವಲ 6 ಕಿ.ಮೀ. ಅಂತರದಲ್ಲಿದೆ.

ಇಲ್ಲಿ ಉತ್ಖನ್ನನದ ವೇಳೆ ಆದಿಕೇಶವ (ರಂಗನಾಥ) ದೇವಸ್ಥಾನ ಇದ್ದ ಬಗ್ಗೆ ಕುರುಹುಗಳು ಲಭ್ಯವಾಗಿದ್ದವು. ಅರಮನೆಯ ಅವಶೇಷಗಳು ಪತ್ತೆಯಾದವು. ಬೆಳ್ಳಿ, ತಾಮ್ರದ ನಾಣ್ಯಗಳು, ಮಡಿಕೆ ಚೂರುಗಳು ದೊರೆತಿದ್ದು, ಇದು ಕನಕದಾಸರ ಅರಮನೆಯೆಂದು ಖಚಿತಪಡಿಸಿದ್ದರು ಎನ್ನುತ್ತಾರೆ ಸಂಶೋಧಕ ಜಗನ್ನಾಥ ಗೇನಣ್ಣನವರ.

ಪ್ರಾಧಿಕಾರವು ಇಲ್ಲಿ ವಿಜಯನಗರ ಶಿಲ್ಪಕಲಾ ಶೈಲಿಯಲ್ಲಿ ಅರಮನೆಯನ್ನು ಪುನರ್ ನಿರ್ಮಿಸಿದೆ. ಸುತ್ತ ಕೆಂಪುಕಲ್ಲಿನ ಕೋಟೆ, ಒಳಾಂಗಣದಲ್ಲಿ ಕನಕರ ಕೀರ್ತನೆಗಳನ್ನು ಗ್ರಾನೈಟ್ ಶಿಲೆಯಲ್ಲಿ ಚಿತ್ರಿಸಲಾಗಿದೆ. ಅವರ ಜೀವನ ಹಾಗೂ ಸಾಹಿತ್ಯದ ವಿಶೇಷ ಸನ್ನಿವೇಶಗಳನ್ನು ತೈಲವರ್ಣ ಹಾಗೂ ಉಬ್ಬು ಚಿತ್ರಗಳಲ್ಲಿ ರೂಪಿಸಲಾಗಿದೆ. ಕತ್ತಲಾಗುತ್ತಲೇ ಕಾರಂಜಿ ಹಾಗೂ ದೀಪಗಳನ್ನು ಹಾಕಲಾಗುತ್ತದೆ.ಸಮೀಪದಲ್ಲೇ ಕನಕರ ಧ್ಯಾನ ಮಂದಿರ ಹಾಗೂ ಬಯಲು ರಂಗಮಂದಿರವಿದೆ.

‘ಕುಲ, ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ?’ ಎಂಬ ಕನಕರ ನುಡಿಯಂತೆ ಕಾಗಿನೆಲೆ ತನ್ನ ಬಾಗಿಲನ್ನು ತೆರೆದು ನಿಂತು, ಎಲ್ಲರನ್ನೂ ಕೈ ಬೀಸಿ ಕರೆಯುತ್ತಿದೆ.

ಕನಕ ಕಾವ್ಯವೂ, ಕಾಗಿನೆಲೆಯ ಅಭಿವೃದ್ಧಿಯೂ...
ಕನಕದಾಸರ ‘ಮೋಹನ ತರಂಗಿಣಿ’ ಕಾವ್ಯದಲ್ಲಿ ಕೃಷ್ಣ-ರುಕ್ಮಿಣಿ, ಪ್ರದ್ಯುಮ್ನ-ರತಿ, ಉಷೆ-ಅನಿರುದ್ಧರ ಪ್ರಣಯ ಕತೆಗಳಿವೆ. ಕೃಷ್ಣ ಇಡೀ ಕಾವ್ಯದ ಸೂತ್ರಧಾರನಾಗಿದ್ದು, ಶೃಂಗಾರ ಕಾವ್ಯವಾಗಿದೆ ಎನ್ನುತ್ತಾರೆ ಸಂಶೋಧಕ ಜಗನ್ನಾಥ ಗೇನಣ್ಣನವರ. ಇದೇ ಮಾದರಿಯಲ್ಲಿ ಉದ್ಯಾನವೂ ಶೃಂಗಾರಮಯವಾಗಿದೆ.ದೊರೆ ಕೃಷ್ಣದೇವರಾಯರನ್ನು ಶ್ರೀಕೃಷ್ಣನೊಂದಿಗೆ ಸಮೀಕರಿಸಿದಂತೆ, ಕಾಗಿನೆಲೆಯಲ್ಲಿ ವಿಜಯನಗರ ಶಿಲ್ಪಕಲೆಯನ್ನು ಅನುಸರಿಸಲಾಗಿದೆ. ಕಾವ್ಯದಲ್ಲಿನ ನಿಸರ್ಗ ವರ್ಣನೆಯನ್ನು ಇಲ್ಲಿ ರೂಪಿಸಲಾಗಿದೆ ಎನ್ನುತ್ತಾರೆ ಇಲ್ಲಿನ ಶಶಿಧರ ಸ್ವಾಮಿ ಹಿರೇಮಠ.

* ರಾಮಧಾನ್ಯ ಚರಿತ್ರೆ: ರಾಮಧಾನ್ಯ ಚರಿತ್ರೆಯಲ್ಲಿ ಗೌತಮ ಋಷಿ ಆಶ್ರಮದಲ್ಲಿ ನವಧಾನ್ಯ (ನರೆದಲಗ, ನೆಲ್ಲು, ಹಾರಕ, ಬರಗು, ಜೋಳ, ಕಂಬು, ಸಾಮೆ, ಗೋದಿ, ನವಣೆ) ಗಳಿಂದ ಸಿದ್ಧ ಮಾಡಿದ ಭಕ್ಷ್ಯಭೋಜನವನ್ನು ಸವಿಯುವ ಪ್ರಸಂಗ ಬರುತ್ತದೆ. ಇದೇ ಸಾರದಲ್ಲಿ ರಾಮಧಾನ್ಯ ಕುಟೀರ ಎಂಬ ಆಹಾರ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

* ಹರಿಭಕ್ತಿಸಾರ: ಹರಿಭಕ್ತಿಸಾರ ಕೃತಿಯಲ್ಲಿ ಭಕ್ತಿಯೇ ಪ್ರಾಮುಖ್ಯ. ಅಂತೆಯೇ ಹುಲ್ಲಿನ ಮೇಲ್ಛಾವಣಿಯ ಕುಟೀರ (ಗುಡಿಸಲು)ವು ವಿಶ್ರಾಂತಿ ಜೊತೆ ಭಕ್ತಿ, ಜ್ಞಾನ, ಚಿಂತನೆ ತನ್ಮಯತೆ ನೀಡುತ್ತದೆ. ಜಂಜಾಟದಿಂದ ಮುಕ್ತಿ ನೀಡುತ್ತದೆ.

* ನಳ ಚರಿತ್ರೆ: ಈ ನಳಚರಿತ್ರೆ ಕಾವ್ಯವು ಪ್ರಣಯ ಆದರ್ಶಪ್ರೇಮ, ಮತ್ತು ಆದರ್ಶ ದಾಂಪತ್ಯದ ಬಗ್ಗೆ ತಿಳಿಸುತ್ತದೆ. ದಂಪತಿ, ಕುಟುಂಬಗಳ ವಿಹಾರಕ್ಕೆ ಅನುವಾಗುವಂತೆ ಉದ್ಯಾನ ರೂಪಿಸಲಾಗಿದೆ. ‘ಹೀಗೆ, ಕನಕಾಧಾರಿತವಾಗಿ ಕಾಗಿನೆಲೆಯನ್ನು ಅಭಿವದ್ಧಿ ಪಡಿಸುತ್ತಿದ್ದೇವೆ’ ಎನ್ನುತ್ತಾರೆ ಆಯುಕ್ತ ಮಲ್ಲೇಶಪ್ಪ ಹೊರಪೇಟೆ.

ಚಿತ್ರ: ನಾಗೇಶ್‌ ಬಾರ್ಕಿ
ಚಿತ್ರ: ನಾಗೇಶ್‌ ಬಾರ್ಕಿ

**
ಕಾಗಿನೆಲೆಯ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಅವರು, ಕನಕ ಜಯಂತಿ ಮೆರವಣಿಗೆಯಲ್ಲಿ ಡಿ.ಜೆ, ಹುಚ್ಚು ಕುಣಿತಗಳು ಬೇಡ. ಅದು ಸಂಸ್ಕೃತಿಯ ಪ್ರತೀಕವಾಗಬೇಕು ಎಂದು ಕರೆಕೊಟ್ಟಿದ್ದರು. ಅಲ್ಲದೇ, ಎಲ್ಲ ಧರ್ಮ, ಜಾತಿ, ಮತಗಳ ಭೇದವಿಲ್ಲದೇ ಪಾಲ್ಗೊಳ್ಳುವ ಮೂಲಕ ‘ಕನಕರ ಜಯಂತಿ’ ಆಗಿಯೇ ಉಳಿಯಬೇಕು ಎಂದು ಕರೆ ನೀಡುವ ಮೂಲಕ ಸಂಸ್ಕೃತಿ, ಸಾಮರಸ್ಯ, ಸದ್ಭಾವನೆಗೆ ಒತ್ತು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT