ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ತಲೆಯಲ್ಲಿನ ಗಾಳಿಯಂತಹ ಯೋನ್‌ ಫೊಸ್ಸೆ ಕೃತಿಗಳು

Published 7 ಅಕ್ಟೋಬರ್ 2023, 23:41 IST
Last Updated 7 ಅಕ್ಟೋಬರ್ 2023, 23:41 IST
ಅಕ್ಷರ ಗಾತ್ರ

–ಕರುಣಾಕರನ್

ಕನ್ನಡಕ್ಕೆ: ಎ.ಕೆ. ರಿಯಾಝ್ ಮೊಹಮ್ಮದ್

‘ಚೆನ್ನಾಗಿ ಸಂವಹನ ಮಾಡಲು ಸಾಧ್ಯವಾದರೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದೆನ್ನುವುದು ನಮ್ಮ ಭ್ರಮೆಯೆಂದೇ ನಾನು ಭಾವಿಸುತ್ತೇನೆ’ ಯೋನ್ ಫೊಸ್ಸೆ ಒಂದು ಸಂದರ್ಶನದಲ್ಲಿ ಹೇಳುತ್ತಾರೆ. ‘‘ಯಾವುದು ಒಂದು ಸಂವಹನದ ವಿರುದ್ಧವಾಗಿ ಇರುವುದೊ ಅದನ್ನು ಕಲೆ ಅಂತ ಹೇಳಬಹುದು’ ಎಂದು ಜರ್ಮನ್ ಜರ್ಮನ್ ತತ್ವಜ್ಞಾನಿ ಅಡೋರ್ನೊ ಹೇಳಿದ್ದಾರೆ. ಅವರು ಹೇಳುವುದರಲ್ಲಿಯೇ ಒಂದು ವಿಷಯ ಅಂತರ್ಗತವಾಗಿದೆ. ಆ ವಿಷಯಕ್ಕೂ ಬದುಕಿಗೂ ಏನೋ ಒಂದು ಸಂಬಂಧವಿರುವುದಂತೂ ನಿಜ’’ ನಾರ್ವೇಜಿಯನ್ ಬರಹಗಾರ ಫೊಸ್ಸೆ ಅವರ ಈ ತೀರ್ಮಾನವನ್ನು ಒಪ್ಪಿಕೊಂಡರೆ, ಕಲೆಯನ್ನು ಗ್ರಹಿಸುವ ನಿಟ್ಟಿನ ನಮ್ಮ ಚರ್ಚೆಗಳು ಬೇರೆ ದಿಕ್ಕಿನತ್ತ ಸಾಗಬಹುದು. ಆದರೆ, ಕಲೆ ಮತ್ತು ಸಾಹಿತ್ಯ ಉಪಯುಕ್ತವಾದ ಬೇರೆ ಯಾವುದೋ ಸಂಗತಿಗಳು ಎಂದು ತಪ್ಪಾಗಿ ಗ್ರಹಿಸಿದರೆ ಫೊಸ್ಸೆ ಅವರ ಈ ಅಭಿಪ್ರಾಯ ವಿವಾದಾತ್ಮಕ ಹೇಳಿಕೆಯಾಗುತ್ತದೆ.

ಕೆಲವು ವರ್ಷಗಳ ಹಿಂದೆ ಕವಿ ಮತ್ತು ಅನುವಾದಕ ಸಚ್ಚು ಥಾಮಸ್ ನನಗೆ ಬರೆದರು: ‘ಯೋನ್ ಫೊಸ್ಸೆ ಅವರ Scenes From A Childhood ಮಲಯಾಳದ ಎಲ್ಲಾ ಕತೆಗಾರರು ಓದಲೇಬೇಕಾದ ಪುಸ್ತಕವಾಗಿದೆ. ಇನ್ನೊಂದು ಸಂದರ್ಭದಲ್ಲಿ ಕತೆಗಾರರಾದ ಸುರೇಶ್ ಪಿ. ಥಾಮಸ್ ನನಗೆ ಫೊಸ್ಸೆ ಬಗೆಗಿನ ಒಂದು ಪುಸ್ತಕ ಕಳುಹಿಸಿದರು. ನನ್ನ ಈ ಯುವ ಗೆಳೆಯರು ನಮ್ಮ ಸಾಹಿತ್ಯವನ್ನು ‘ಮುಂಗಾಣಬಲ್ಲರು’ ಮಾತ್ರವಲ್ಲ, ಮಲಯಾಳದ ಕಲ್ಪನೆಯಲ್ಲಿ ತಮ್ಮ ವಿಶಿಷ್ಟವಾದ ಒಳಗೊಳ್ಳುವಿಕೆಯಿಂದಾಗಿ ವಿಭಿನ್ನ ಓದಿನ ಅನುಭವವನ್ನು ಕೂಡ ನೀಡಬಲ್ಲವರು. ಫೊಸ್ಸೆ ನನ್ನ ಮೆಚ್ಚಿನ ಬರಹಗಾರರಲ್ಲಿ ಒಬ್ಬರಾದದ್ದು ಈ ಗೆಳೆಯರಿಂದ. ಬಾಲ್ಯ ಮತ್ತು ಯೌವನದ ನೆನಪುಗಳನ್ನು ಕಲೆಯಲ್ಲಿ ಕದಡುವ ಯಾರಿಗೇ ಆಗಲಿ ಈ ಬರಹಗಾರರನ್ನು ಇಷ್ಟಪಡಲು ಕಾರಣಗಳು ಇರಬಹುದು. ಚೆನ್ನಾಗಿ ಸಂವಹನ ನಡೆಸಿದರಷ್ಟೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬಹುದು ಎನ್ನುವುದೇ ಒಂದು ಭ್ರಮೆ ಎಂದು ನೀವು ನಂಬಬೇಕು.

‘ಸಮುದ್ರದ ಬಗ್ಗೆ ಏನೂ ತಿಳಿದಿಲ್ಲದ ಮೀನಿನ ಕತೆ’-ನಾರ್ವೇಜಿಯನ್ ಸಂಸ್ಕೃತಿಯಲ್ಲಿನ ತನ್ನ ಸಾಹಿತ್ಯದ ಬಗ್ಗೆ ಯೋನ್ ಫೊಸ್ಸೆ ಹೀಗೆ ಹೇಳುತ್ತಾರೆ. ನಾರ್ವೇಜಿಯನ್ನರು ಹೆಚ್ಚು ಮಾತನಾಡದ, ಮೌನವಾಗಿರಲು ಇಷ್ಟಪಡುವ ಜನರಂತೆ. ತಮ್ಮ ನಾಟಕಗಳು ಕೂಡ ಹಾಗೆಯೇ ಎಂದು ಫೊಸ್ಸೆ ಹೇಳುತ್ತಾರೆ.

‘ಹೆಚ್ಚು ಮಾತನಾಡದ ಬರವಣಿಗೆ’ಯು ಸಾಹಿತ್ಯ ಮಾತ್ರವಲ್ಲದೆ ಭಾಷೆ ಮತ್ತು ಮಾಧ್ಯಮದ ಸಾಧ್ಯತೆಯೂ ಆಗಿದೆ. ಸ್ವಾರಸ್ಯಕರ ಮತ್ತು ವಿಷಾದವಾದ ಮನುಷ್ಯಸ್ಥಿತಿಯನ್ನು ಬರವಣಿಗೆಯಲ್ಲಿ ಮೂಡುವಂತೆ ಮಾಡುವುದೇ ಇಂತಹ ಬರವಣಿಗೆ. ಹೆಚ್ಚು ಮಾತನಾಡದ ವ್ಯಕ್ತಿಯೇ ಅಲ್ಲವೇ ಥಟ್ಟನೆ ಗಮನಸೆಳೆಯುವುದು?

ಬಹುತೇಕ ಇಂತಹ ಒಂದು ಪ್ರೀತಿಯೇ ಯೋನ್ ಫೊಸ್ಸೆ ಅವರ ಬರವಣಿಗೆ ಮೇಲೆ ನನಗೆ ಇರುವುದು. ಕೆಲವು ನಾಟಕಗಳು, ಕೆಲವು ಕತೆಗಳು, ಕೆಲವು ಕಾದಂಬರಿಗಳ ಮೂಲಕ ಫೊಸ್ಸೆ ಅವರ ಬರವಣಿಗೆಯನ್ನು ಪರಿಚಯಿಸುವ ಯಾರೂ ಅವುಗಳಲ್ಲಿ ಇರುವ ‘ಖಾಲಿ ಜಾಗಗಳನ್ನು’ ಗಮನಿಸಿರುತ್ತಾರೆ. ಅಲ್ಲೊಂದು ದ್ರವೀಕೃತ ನಿಶ್ಶಬ್ದ ಕಾಡುತ್ತದೆ. ಕಟ್ಟಿ ನಿಂತಿರುವ ಒಂದನ್ನು-ಅದು ಏನೇ ಇರಲಿ, ಕೆಲವೊಮ್ಮೆ ಸ್ಮರಣೆ, ಕೆಲವೊಮ್ಮೆ ದುಃಖ, ಕೆಲವೊಮ್ಮೆ ಪ್ರೀತಿ, ಹೀಗೆ ಏನೂ ಹಾಗಬಹುದು- ಮನುಷ್ಯಸ್ಥಿತಿಯ ದೃಷ್ಟಿಯಾಗಿ ರೂಪಾಂತರಗೊಳಿಸುತ್ತದೆ. ಕಟ್ಟಿ ನಿಂತಿರುವ ಒಂದನ್ನು ಮುರಿಯಲು ಇಚ್ಛಿಸುತ್ತದೆ.

ಅವರ Scenes From A Childhood ಎಂಬ ಕಥಾ ಸಂಕಲನದಲ್ಲಿ ಒಂದು ನೀಳ್ಗಥೆಯಿದೆ, And Then My Dog will Come Back to me ಎಂಬ ಹೆಸರಿನಲ್ಲಿ. ಒಂದು ನಾರ್ವೇಜಿಯನ್ ಹಳ್ಳಿಯ ಒಬ್ಬ ವ್ಯಕ್ತಿ ತನ್ನ ಸಾಕುನಾಯಿಯನ್ನು ಕೊಂದಿದ್ದಕ್ಕಾಗಿ ನೆರೆಯವನನ್ನು ಕೊಲ್ಲುತ್ತಾನೆ. ಈ ಎರಡೂ ಕೊಲೆಗಳು-ನಾಯಿಯ ಮತ್ತು ನೆರೆಯವರ-ನಿಜಕ್ಕೂ ಸಂಭವಿಸಿವೆಯೇ ಎಂದು ನಿರ್ದಿಷ್ಟಪಡಿಸದ ನಿರೂಪಣೆಯ ಮೂಲಕ ಕತೆಯನ್ನು ಹೇಳುತ್ತಾರೆ. ನೆನಪಿನ ಅಥವಾ ಒಂದು ಘಟನೆಯ ವಿವರಣೆ, ಅದರ ಅಂಚುಗಳನ್ನು ಬಿಡುಗಡೆ ಮಾಡುವ ಕ್ರಮ ಇದು. ಕತೆಯ ಆರಂಭದಿಂದ ಅಂತ್ಯದವರೆಗೆ ನಾವು ಪ್ರಯಾಣಿಸುವುದುಒಂದು ಅನಿಶ್ಚಿತತೆಯೊಂದಿಗೆ. ಆದರೆ, ಅಂತಹ ಒಂದು ಸಂದರ್ಭದಲ್ಲಿ ಕೂಡ, ಈ ಎರಡೂ ಅಪರಾಧಗಳ ಸಾಧ್ಯತೆಯನ್ನು–ಮನುಷ್ಯ ಮತ್ತು ಓದುಗನಾಗಿ–ನಮಗೆ ತೆರೆದಿಡುತ್ತದೆ. ಒಂದು ಕತೆಯನ್ನು ಓದಲು ಯೋಗ್ಯತೆ ಪಡೆಯುವುದನ್ನು ಮತ್ತು ಒಂದು ಅಪರಾಧಕ್ಕೆ ಸಾಕ್ಷಿಯಾಗುವುದನ್ನು ತುಂಬಾ ಸಹಜವಾಗಿಯೂ, ಕೆಲವೊಮ್ಮೆ ಜೀವನದ ಘಟನೆಯೆಂಬಂತೆಯೂ ನಾವು ಅನುಭವಿಸುತ್ತೇವೆ. ‘ನಾನು ಎಂದಿಗೂ ಅವನನ್ನು ಇಷ್ಟಪಡಲಿಲ್ಲ’ ಎಂಬ ಮಾತನ್ನು, ಕತೆಯಲ್ಲಿ ನಡೆಯುವ ಕೊಲೆಗೆ ಕಾರಣ ಅದೊಂದಷ್ಟೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ ಅಥವಾ ಅದು ಹುಚ್ಚು ಹುಚ್ಚು ಮಾತಾಗಿ ಮುಂದುವರಿಯುವ ಸ್ವಗತದಂತೆ ಕಾಣಿಸುತ್ತದೆ.

Scenes From A Childhood ಖಂಡಿತವಾಗಿಯೂ ಮತ್ತೊಂದು ಸುಂದರವಾದ ಕತೆ. ಇದು ಬಾಲ್ಯವನ್ನು ಜೀವನದ ಆಸ್ತಿಯನ್ನಾಗಿ ಮಾಡಿಬಿಡುತ್ತದೆ. ಹಲವಾರು ತುಣುಕುಗಳಲ್ಲಿ ಸಣ್ಣ ಸಣ್ಣ ಟಿಪ್ಪಣಿಗಳಂತೆ ಈ ಕತೆಯನ್ನು ಬರೆಯಲಾಗಿದೆ; ಭಾಷೆಯೂ ಸರಳ. ‘ನಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾದದ್ದು ಕಾಣೆಯಾಗಿದೆ ಎಂದೇ ನಾನು ಅರ್ಥಮಾಡಿಕೊಂಡಿದ್ದೇನೆ. ಹಾಗಾಗಿ ಒಂದು ಕ್ರಾಂತಿಯ ಅಗತ್ಯವಿದೆ’ ಈ ಎರಡು ಸಾಲುಗಳಿರುವ ಒಂದು ತುಣುಕು ಕೂಡ ಈ ಕತೆಯಲ್ಲಿ ಇದೆ. 1987 ಮತ್ತು 2013ರ ನಡುವೆ ಬರೆದ ಕತೆಗಳ ಮತ್ತು ಒಂದು ಕಿರು ಕಾದಂಬರಿಯ ಸಂಗ್ರಹವಾಗಿದೆ Scenes from a Childhood ಎಂಬ ಪುಸ್ತಕ.

ವಾಸ್ತವದಲ್ಲಿ, ಮೊದಲು ನಾನು ಓದಿದ್ದು ಯೋನ್ ಫೊಸ್ಸೆ ಅವರ ಕೆಲವು ನಾಟಕಗಳನ್ನು. ಅವರ ಕತೆಗಳಲ್ಲಿಯೂ ಅಲಂಕಾರವಿಲ್ಲದ ಭಾಷೆ ಮತ್ತು ಸಣ್ಣ ನಾಟಕೀಯ ಕ್ರಿಯೆ ಮಿಳಿತವಾಗಿರುವುದನ್ನು ಆಮೇಲೆ ಗಮನಿಸಿದೆ. ಹೀಗಾಗಿಯೇ ಅವೂ ವಿಶಿಷ್ಟ ಬರಹಗಳಾಗಿವೆ. ‘ರಂಗಭೂಮಿಯಲ್ಲಿ ನಾವೆಲ್ಲ ಬೇರೆಯವರ ಕೈಗೊಂಬೆಗಳು, ಜೀವನದಲ್ಲಿಯೂ ಹಾಗೆಯೇ’ ಎಂದು ಯೋನ್ ಫೊಸ್ಸೆ ಹೇಳುತ್ತಾರೆ. ನಾರ್ವೇಜಿಯನ್ನರ ಮೌನವನ್ನು ಘನೀರ್ಭವಿಸಿಕೊಂಡೇ ಅವರು ಬರೆಯುತ್ತಿರುವುದನ್ನೂ ಅವರ ಸಾಹಿತ್ಯದಲ್ಲಿ ಗುರುತಿಸಬಹುದು.

ಅವರ ಕೆಲವು ನಾಟಕಗಳನ್ನು (Plays Six) ಮತ್ತು ಕೆಲವು ಕತೆಗಳನ್ನು ನಾನು ಒಂದೇ ಕಾಲಘಟ್ಟದಲ್ಲಿ ಓದಿದ್ದೆ. ಕೋವಿಡ್‌ನ ಮೊದಲ ಲಾಕ್‌ಡೌನ್ ಕಾಲದಲ್ಲಿ ಫೊಸ್ಸೆ ಅವರ ಎರಡು ಪುಸ್ತಕಗಳನ್ನು ಓದಿದೆ. ಬದುಕಿನಂತೆ ಸಾಹಿತ್ಯವೂ ಕ್ಷುಲ್ಲಕ ಎನಿಸಿದ್ದ ಆ ದಿನಗಳಲ್ಲಿ ಫೊಸ್ಸೆಯ ಬರಹಗಳು ನನಗೆ ಒಂದು ಅಸಾಮಾನ್ಯವಾದ ಅನುಭವವನ್ನು ನೀಡಿದ್ದವು.

ಅಲಂಕಾರವಿಲ್ಲದ ಹೆಜ್ಜೆಗಳೊಡನೆ ಆದಿಮ ನೃತ್ಯವೊಂದು ಸಾಗುತ್ತಿರುವಂತೆ ಅವರ ಸಾಹಿತ್ಯ ತೋರುತ್ತದೆ. ಕೆಲವೊಮ್ಮೆ ಮಹಡಿಯಲ್ಲಿ ನಿರಂತರವಾಗಿ ಕಾಣುವ ಒಬ್ಬ ವ್ಯಕ್ತಿಯ ಅಗಲುವಿಕೆಯ ನೋಟವೂ ನಮ್ಮೊಳಗೆ ಯಾವುದೋ ಹುಡುಕಾಟವನ್ನು ಮೂಡಿಸುವಂತೆ ಭಾಸವಾಗುತ್ತದೆ.

ಫೊಸ್ಸೆ ಅವರ ನಾಟಕಗಳು ಸ್ಯಾಮ್ಯುಯೆಲ್ ಬೆಕೆಟ್‌ನ ಮುಂದುವರಿಕೆ ಎಂದು ಹೇಳಲಾಗುತ್ತದೆ. ಘನೀರ್ಭವಿಸುವ ಪಾತ್ರಗಳು ಮತ್ತು ಸಣ್ಣದಾಗಿ ಮುರಿಯುವ ಸಂಭಾಷಣೆಗಳು ಬೆಕೆಟ್‌ನಲ್ಲಿರುವಂತೆ ಈ ನಾಟಕಗಳಲ್ಲಿಯೂ ಇವೆ. ಅವರ ನಾಟಕಗಳೂ ಆ ಭಾಷೆಯ ಅನುಭವವನ್ನು ನೆನಪಿಸುತ್ತವೆ. ರಂಗಭೂಮಿಯ ಬಗ್ಗೆ ಫೊಸ್ಸೆ ಹೀಗೆ ಹೇಳುತ್ತಾರೆ: Theatre is very old-fashioned art form. It existed before capitalism, before communism, before industrialism, before mass production. Perhaps because it is pre-modern, theatre feels right for our times.

ಫೊಸ್ಸೆ ಅವರ ಬರಹಗಳಲ್ಲಿ ಸಮಕಾಲೀನವಾದದ್ದು ಹರಿದುಹೋಗಿದೆ ಅಥವಾ ಸಂಪೂರ್ಣವಾಗಿ ಉಪೇಕ್ಷೆಗೆ ಒಳಗಾಗಿದೆ ಎಂದು ಇನ್ನೊಬ್ಬರು ನಾರ್ವೇಜಿಯನ್ ಬರಹಗಾರರಾದ ಕಾರ್ಲ್ ಓವ್ ಕ್ನಾಸ್‌ಗಾರ್ಡ್ (Karl Ove Knausgaard) ಹೇಳುತ್ತಾರೆ: ‘ಅವರ ರಚನೆಗಳು ಯಾವಾಗಲೂ ಸಾವನ್ನು ಸಮೀಪಿಸುತ್ತವೆ ಮತ್ತು ಒಂದು ರೀತಿಯ ಅಸ್ತಿತ್ವವಾದದ ‘ಗ್ರೌಂಡ್ ಝೀರೋ'ವನ್ನು ಕಂಡುಹಿಡಿಯುತ್ತವೆ. ಆದರೂ, ಎಂದಿಗೂ ನಿರಾಶೆಗೊಳಿಸುವುದಿಲ್ಲ, ಅವು ದುರುದ್ದೇಶಪೂರಿತವೂ ಆಗಿಲ್ಲ’.

ಫೊಸ್ಸೆ ಅವರ ಬಗೆಗೆ ಹೇಳಿದಷ್ಟೂ ಮುಗಿಯುವುದೇ ಇಲ್ಲ. ಆದರೆ ಈಗ ಒಂದು ಮುಂಜಾನೆ ಕಂಡ ಕನಸನ್ನು ಹೇಳಲು ಬಯಸುತ್ತೇನೆ. ಅದಕ್ಕೂ ಈ ಬರಹಕ್ಕೂ ಏನೇನೂ ಸಂಬಂಧವಿಲ್ಲ. ದಾರಿ ತಿಳಿಯದೆ ತಲುಪುವ ಪ್ರಯಾಣ ಅದೆಂದು ಭಾವಿಸಿದರೆ ಸಾಕು. ಇದುವೇ ಆ ಕನಸು: ‘ನಾನು ಒಂದು ಚಿಕ್ಕ ಮಗುವಿನೊಂದಿಗೆ ಮರದ ಕುರ್ಚಿಯ ಮೇಲೆ ಕುಳಿತಿದ್ದೇನೆ. ಕುರ್ಚಿ ನಿಧಾನವಾಗಿ ಹಿಂದಕ್ಕೆ ಬಾಗಲಾರಂಭಿಸುತ್ತದೆ. ನೋಡು, ನಾವಿಬ್ಬರೂ ಈಗ ಬೀಳುತ್ತೇವೆ ಎಂದು ನಾನು ಮತ್ತು ಅವಳು ಎಡೆಬಿಡದೆ ನಗುತ್ತಿದ್ದೇವೆ. ಬೀಳಬಹುದಾದ ಆಳ, ಬೀಳುವಿಕೆಯ ಪರಿ ಆವರಿಸಿ ಎರಡು ನಗೆಗಳು ಕದಡುವ ಸದ್ದು ಕೇಳಿಸುತ್ತದೆ’.

ನಾನು ಯೋನ್ ಫೊಸ್ಸೆ ಬಗ್ಗೆ ಈ ಬರಹವನ್ನು ಬರೆಯುವಾಗಲೂ, ನಮ್ಮ ಬೀಳುವಿಕೆ ನನಗೆ ನಗು ತರಿಸುತ್ತದೆ. ಪ್ರಿಯವಾದ ಏನೋ ಒಂದು, ಈಗ ಕೈಗೆ ಸಿಗುತ್ತದೆ. ಬಹುಶಃ ಈ ಪುಸ್ತಕಗಳ ನೆನಕೆಯೇ ಜೊತೆಗಿರುವ ಬೀಳುವಿಕೆಯೂ ಆಗಿರಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT